ಒಂದು ಒಳ್ಳೆಯ ನುಡಿ - 140
‘ಮಾತು ದೇವನಿತ್ತ ಅಮೂಲ್ಯ ಕೊಡುಗೆ’. ಹುಟ್ಟಿದ ಮಗುವಿನ ತೊದಲು ನುಡಿ ಹೆತ್ತವರಿಗೆ ಕರ್ಣಾನಂದ. ಮೊದಲ ನುಡಿ ‘ಅಮ್ಮ' ಕೋಟಿ ರೂಪಾಯಿಗಿಂತಲೂ ಮಿಗಿಲು. ಮಾತಿನಲ್ಲೂ ರೀತಿ-ನೀತಿಯಿದೆ. ನಮ್ಮೆದುರು ನಿಂತವನು ನಮ್ಮ ಮಾತಿಗೆ ಕಿವಿಕೊಡುತ್ತಾನೆಯೇ ಎಂದು ಗಮನಿಸಿ ಮಾತನಾಡಿದರೆ ಚಂದ. ಕೆಲವು ಜನರಿದ್ದಾರೆ, ಮಾತನಾಡುವಾಗ ಬೇರೆಲ್ಲಿಗೋ ನೋಡಿ ಮಾತು ಅವರದು, ಹಿರಿಯರು ಹೇಳುವುದು ಕೇಳಿರುವೆ ‘ಮುಖ ನೋಡಿ ಮಾತನಾಡುವವರೇ ಸಾಚಾ ಮನಸ್ಸಿನವರಂತೆ. ಅವರು ನಿರ್ಮಲ ಚಿತ್ತದವರಂತೆ’. ಎಲ್ಲೆಲ್ಲೋ ನೋಡಿ ಮಾತನಾಡಬಾರದು, ಅದರಲ್ಲಿ ಕಳ್ಳಾಟಿಕೆಯಿದೆ. ತಲೆ ಕೆಳಗೆ ಹಾಕಿ ಮಾತನಾಡುವುದು ಸರಿಯಲ್ಲ. ಕೆಲವು ಜನ ಮಾತನಾಡಿದರೆ ಬಾಯಿಯಲ್ಲಿ ಮುತ್ತು ಉದುರಬಹುದೇನೋ ಅಷ್ಟೂ ಕಡಿಮೆ ಮಾತು.
ಆಡುವ ಮಾತು ಪ್ರಿಯವಾಗಿರಲಿ, ನಾಲ್ಕು ಜನ ಒಪ್ಪುವಂತಿರಲಿ. ಸತ್ಯ ಮತ್ತು ಧರ್ಮಯುಕ್ತವಾಗಿರಲಿ. ‘ಹಿತ ಮಾತು ಆರೋಗ್ಯಕರ’. ಸಮಯ ಸಂದರ್ಭವರಿತ ಮಾತು, ಸೂಕ್ಷ್ಮಾತಿ ಸೂಕ್ಷ್ಮ ಮಾತು ಸೊಗಸು.’ನುಡಿದರೆ ಮುತ್ತಿನ ಹಾರದಂತಿರಬೇಕು’ ಶರಣರ ಅಂಬೋಣ. ಅಲ್ಪರನ್ನು ಕೆಣಕಲು ಹೋಗಬಾರದು. ‘ಅಲ್ಪರ ಸಂಗ ಅಭಿಮಾನ ಭಂಗ’ ತಿಳಿದೇ ಇದೆ. ‘ಮಾತೇ ಮೃತ್ಯು, ಮಾತೇ ಮುತ್ತು’ ಅರಿವಿರಲಿ. ಮನೆಯಲ್ಲಿ ಎಲ್ಲರೂ ಒಳ್ಳೆಯ ಮಾತನಾಡಿದರೆ ಪುಟ್ಟ ಮಕ್ಕಳು ಅದನ್ನೇ ಅನುಕರಣೆ ಮಾಡ್ತಾರೆ. ಮಾನವರಿಗೆ ಮಾತು ವರದಾನವಲ್ಲವೇ? ಎಲ್ಲರಿಗೂ ಹಿತವಾಗುವ, ಪ್ರಯೋಜನವಾಗುವ ಮಾತು ಇರಲಿ. ಮುಖ ಗಂಟಿಕ್ಕಿದ ಮಾತು ಬೇಡ. ಮುಗುಳ್ನಗು ಆರೋಗ್ಯದ ಗುಟ್ಟು. ನಗು ಮತ್ತು ಅಳು ಬದುಕಿನ ರಸಪಾಕವಂತೆ. ನಗು ಆತ್ಮವೆಂಬ ಸುವಾಸನೆಯ ಹರಡುವ ಪುಷ್ಪವಿದ್ದಂತೆ. ದು:ಖ ಅಳು ಆತ್ಮವನ್ನು ಕಡೆದು ಹೊರತೆಗೆಯುವ ಶೋಧಿಸುವ, ಮಥಿಸುವ ಮಂಥನವಿದ್ದಂತೆ (ಮೊಸರನ್ನು ಕಡೆಯುವ ಮಂತು) ವಿಚಾರವಂತರಾಗಿ ಯೋಚಿಸಿ ಮಾತುಗಳಿರಲಿ. ಮಂಕುತಿಮ್ಮನ ಕಗ್ಗದಲ್ಲಿ ಓದಿದ ಸಾಲುಗಳಿವು, ನಿತ್ಯಸತ್ಯ. ಎಲ್ಲರಿಗೂ ಪ್ರೇರಣೆ. ಮಥಿಸಿದಾಗ, ಆತ್ಮಾವಲೋಕನ ಮಾಡಿದಾಗ ಮಾತ್ರ ಉತ್ತಮ ವಿಚಾರಗಳು ಬರಬಹುದು. ಹದವರಿತು, ನೋವಾಗದಂತೆ, ಪ್ರೇರಕರಾಗಿ, ಪ್ರೋತ್ಸಾಹದಾಯಕರಾಗಿ ಮಾತನಾಡೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ