ಒಂದು ಒಳ್ಳೆಯ ನುಡಿ - 141
‘ನೀರು’ ಇಲ್ಲದೆ ಬದುಕಲು ಸಾಧ್ಯವೇ? ಎಂದು ಯೋಚಿಸಿದರೆ ಕ್ಷಣ ಹೊತ್ತು ಎನ್ನಬಹುದು. ಗಾಳಿಯಿಲ್ಲದೆ ಕ್ಷಣ ಹೊತ್ತು ಸಹ ಆಗದ ಮಾತು. ಆದರೆ ಇಂತಹ ಅಮೂಲ್ಯವಾದ ನೀರು, ಗಾಳಿ ಎಲ್ಲದರ ಬೆಲೆಯೇ ಗೊತ್ತಿಲ್ಲದ ಹಾಗೆ ನಾವಿದ್ದೇವೆ. ನಮ್ಮ ಮಕ್ಕಳಿಗೂ ನಾವು ನೀರಿನ ಮಹತ್ವ ತಿಳಿಸಿಕೊಡುತ್ತಿಲ್ಲ. ಇದೆಲ್ಲಿಗೆ ಹೋಗಿ ತಲುಪಬಹುದೆಂಬ ಯೋಚನೆ ಬಂದಾಗ, ಬಹಳ ಶೋಚನೀಯ ಅನ್ನಿಸ್ತದೆ.
ಜಲಮೂಲಗಳೆಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಪಾಠ ಈಗಲೂ ನೆನಪಿದೆ. ಆಗ ‘ಸುರಂಗದ ನೀರು’ ಎತ್ತರದ ಗುಡ್ಡ ಇದ್ದವರ ಮನೆಯಲ್ಲಿತ್ತು ನಾವೆಲ್ಲ ಅದೇ ನೀರು ಕುಡಿದವರು, ಬಳಸಿದವರು. ಸಿಹಿಯಾದ ನೀರು, ಅದರ ರುಚಿ ಅದ್ಭುತ. ಯಾವಾಗ ಜೆ.ಸಿ.ಬಿ.ಹಲ್ಲುಗಳು ಮಣ್ಣು ಅಗೆಯಲು ಆರಂಭಿಸಿತೋ ಸುರಂಗ ನೆಲಸಮವಾಯಿತು, ಬೋರ್ ವೆಲ್ ಹೆಸರು ಪ್ರಚಲಿತವಾಯಿತು. ಹೆಚ್ಚಿನ ಮನೆಗಳಲ್ಲಿ ‘ಬಾವಿ’ ಇದ್ದೇ ಇದೆ. ಬಾವಿಯಿಂದ ನೀರು ಕೊಡದಲ್ಲಿ ಎಳೆಯುವ ಆನಂದವೇ ಬೇರೆ. ಉತ್ತಮ ವ್ಯಾಯಾಮ ಸಹ.(ಈಗೆಲ್ಲ ಪಂಪು, ನೀರೆಳೆಯುವ ದೃಶ್ಯವೇ ಇಲ್ಲ).
‘ಕೆರೆ’ ಯ ನೀರು ತೋಟದ ಕೃಷಿ ಕಾರ್ಯಗಳಿಗೆ, ಕೆಲವೆಡೆ ಕುಡಿಯಲು ಬಳಸುತ್ತಿದ್ದರು. ‘ಹೊಳೆ, ಹಳ್ಳ, ತೋಡು, ನದಿ, ಸಮುದ್ರ’ ನೀರನ್ನು ಕಾಣಬಹುದು. ಬೋರ್ ವೆಲ್ ಗಳು ಒಂದೊಂದು ಮನೆಯಲ್ಲೂ ಆದ ಮೇಲೆ ಅಂತರ್ಜಲಮಟ್ಟ ಕುಸಿಯಿತು. ನೀರು ಮತ್ತೂ ಭೂಮಿಯ ಆಳಕ್ಕಿಳಿಯಿತು. ಮರಗಿಡ ಹಸಿರು ಸಸ್ಯಗಳ ನಾಶ ಮತ್ತಷ್ಟೂ ಕಾರಣವಾಯಿತು. ನಮಗೆ ನಾವೇ ತೋಡಿಕೊಂಡ ಹಳ್ಳದೊಳಗೆ ಬಿದ್ದೆವು. ಕಾಂಕ್ರೀಟ್ ಆಸೆ ಹೆಚ್ಚಾದಂತೆ ಬಿಸಿಲ ಬೇಗೆ ಏರಿತು. ಒಟ್ಟಾರೆಯಾಗಿ ಹೇಳುವುದಿದ್ದರೆ ಮನುಜನ ಸ್ವಾರ್ಥ ಎಲ್ಲದಕ್ಕೂ ಕಾರಣವಾಯಿತು. ಮೊನ್ನೆ ಓರ್ವ ತುಂಬಾ ತೋಟ, ಆಸ್ತಿ ಇದ್ದವರು ಹೇಳುವುದು ಕೇಳಿದೆ ‘ಅವರ ಮನೆ ಜಾಗ ಎಲ್ಲಾ ಸೇರಿ ಎಂಟು ಬೋರ್ ವೆಲ್ ತೆಗೆಸಿದ್ದಾರಂತೆ’. ಇದಕ್ಕೆ ಏನೆನ್ನಬೇಕು ಹೇಳಿ? ಸುತ್ತಮುತ್ತಲಿನ ನೀರು ಇಂಗುವುದಕ್ಕೆ ದಾರಿಮಾಡಿದ ಹಾಗಾಯಿತು.
ಹಸಿರು ಸಸ್ಯಗಳನ್ನು ಹೆಚ್ಚು ಹೆಚ್ಚು ನೆಡೋಣ, ಸಾಕೋಣ, ಬೆಳೆಸೋಣ. ಮುಂದಿನ ಪೀಳಿಗೆಗೆ ನೀರನ್ನು ಉಳಿಸೋಣ. ನೀರಿನ ಸಂರಕ್ಷಣೆ ಬಗ್ಗೆ ತಿಳಿಸೋಣ. ‘ಹನಿ ಹನಿ ಗೂಡಿದರೆ ಹಳ್ಳ’ ಮಹತ್ವ ಅರಿಯೋಣ. ತಲೆಗೊಂದು ಸಸಿ, ಮನೆಯ ಸುತ್ತಮುತ್ತ ಗಿಡಗಳು ಇರಲಿ. ಯಾವುದೋ ಹಣ್ಣನ್ನು ತಿಂದರೂ ಬೀಜವನ್ನು ಗುಡ್ಡೆಯಲ್ಲಿ, ದಾರಿಯಲ್ಲಿ ಸಿಕ್ಕಿದ ಜಾಗದಲ್ಲಿ ಎಸೆಯೋಣ. ಬೆಳೆದು ಹೆಮ್ಮರವಾಗಿ ಫಲ ನೆರಳು ಕೊಡಲಿ. ಜೀವಿಗಳಿಗೆ ಬೇಕಾದ ಅತ್ಯಮೂಲ್ಯವಾದ ನೀರನ್ನು ಕಾಪಾಡೋಣ.
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ