ಒಂದು ಒಳ್ಳೆಯ ನುಡಿ - 145

ಒಂದು ಒಳ್ಳೆಯ ನುಡಿ - 145

ವೈಚಾರಿಕತೆ ಅಂದರೆ ಯಾವುದೇ ಒಂದು ವಿಷಯ, ಘಟನೆ, ಸಂದರ್ಭವನ್ನು ವಿಮರ್ಶಿಸಿ, ಒಳ್ಳೆಯ, ಕೆಟ್ಟ ಅಭಿಪ್ರಾಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದೇ ಆಗಿದೆ. ಯಾವುದೋ ಮೌಢ್ಯತನಕ್ಕೋ, ಹಿರಿಯರು ಹೇಳಿದ ಸಂಗತಿಗೋ ಒಳಗಾಗಿ ಏಕಾಏಕಿ ನಿರ್ಣಯಿಸುವುದು ಅಷ್ಟು ಸಮಂಜಸವಲ್ಲ.

ದಾರಿಯಲ್ಲಿ ಹೋಗುತ್ತಿರುವಾಗ ಮಣ್ಣಿನ ಮಡಿಕೆಗಳನ್ನು ಹೊತ್ತುಕೊಂಡು ಹೋಗುವ ಒಂಟಿ ಮನುಷ್ಯ ಸಿಗುವುದು, ಬೆಕ್ಕು ಅಡ್ಡ ಹಾಯುವುದು ಇವೆಲ್ಲಾ ‘ಅಪಶಕುನ’ ಅಂತ ತಿಳಿಯುವುದು ಮೂರ್ಖತನವೇ ಸರಿ. ಎಲ್ಲಿಗಾದರೂ ಹೋಗುವಾಗ ಮನೆಯಿಂದ ಮೂವರಾಗಿ ಹೊರಡಬಾರದು ಇದು ಸಹ ಮೌಢ್ಯತೆಯೇ ಆಗಿದೆ.

ಆಧುನಿಕ ಕಾಲಘಟ್ಟದಲ್ಲಿ ವಿಜ್ಞಾನದ ಬಗ್ಗೆ ಯೋಚಿಸಬೇಕಾದ್ದು ಅತಿ ಅವಶ್ಯಕ. ಶಾಲಾ ವಾತಾವರಣದಲ್ಲಿ ‘ಏಕೆ, ಹೇಗೆ, ಎಲ್ಲಿ, ಯಾವಾಗ? ಯಾಕಾಯ್ತು?’ ಎಂಬುದರ ಬಗ್ಗೆ ಮಕ್ಕಳ ಮನದಲ್ಲಿ ಕುತೂಹಲ ಮೂಡಿಸುವ, ವಿಚಾರದ ಕುರಿತು ವಿಮರ್ಶಿಸುವ ಮನೋಭಾವ ಮೂಡಿಸುವಂತಹ ಪಠ್ಯ ಚಟುವಟಿಕೆಗಳು ಕೂಡಿರಬೇಕು.

ಮಗುವಿನ ಮನಸ್ಸು ಎನ್ನುವುದು ಮುಗ್ಧತೆಯಿಂದ ಕೂಡಿದ ಒಂದು ಆಡೊಂಬಲ. ಅಲ್ಲಿ ‘ಬಿತ್ತಿದಂತೆ ಬೆಳೆ ಬರಬಹುದು ಎಂಬ ನಿರೀಕ್ಷೆ ಇರಬೇಕು.’ ನೈತಿಕ ಮೌಲ್ಯಗಳೊಂದಿಗೆ,ಆಧುನಿಕತೆಯ ಇಟ್ಟಿಗೆಗಳನ್ನು ಪೇರಿಸಿ, ಇಂದಿನ ತಾಂತ್ರಿಕತೆಯ ಸ್ಪರ್ಶವನ್ನು ಎಳವೆಯಿಂದಲೇ ಮನದಲ್ಲಿ ಮೂಡುವಂತೆ ಮಾಡಿಸುವುದು ಹೆತ್ತವರ, ಶಿಕ್ಷಕರ, ಮನೆಯ ಹಿರಿಯರ ಆದ್ಯ ಕರ್ತವ್ಯವೇ ಆಗಿದೆ.

ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ, ಅದನ್ನು ಬಗೆಹರಿಸುವ ಚಾಕಚಕ್ಯತೆ, ವೈಚಾರಿಕ ನೆಲೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಉತ್ತಮ ನೈತಿಕ ಮೌಲ್ಯದ ಪುಸ್ತಕಗಳನ್ನು ಓದುವುದು, ಆಧುನಿಕ ವಿಚಾರಗಳ ಚರ್ಚಾಕೂಟಗಳನ್ನು ಏರ್ಪಡಿಸುವುದು, ಮಾನವತ್ವದ ಸಂದೇಶಗಳನ್ನುಮನದಲ್ಲಿ ಮೂಡಿಸುವುದು, ಭಿತ್ತಿಚಿತ್ರ, ಗೋಡೆಬರಹ, ಬೀದಿನಾಟಕಗಳು, ರೂಪಕಗಳು, ಕಥಾ ನಿರೂಪಣೆಯ ಶೈಲಿಯನ್ನು ಕಲಿಸುವುದು, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಇವೆಲ್ಲವೂ ವೈಚಾರಿಕತೆಯನ್ನು ಬೆಳೆಸುವಲ್ಲಿ ಮಕ್ಕಳನ್ನು ಸೆಳೆದೊಯ್ಯಲು ಹಮ್ಮಿಕೊಳ್ಳಬಹುದಾದ ತಂತ್ರಗಳು,ವಿಧಾನಗಳು ಆಗಿವೆ.

ಇಂದಿನ ಮಾಧ್ಯಮಗಳಲ್ಲಿ ಪ್ರಸಾರವಾಗುತಿರುವುದರಲ್ಲಿ, ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಬೇಕು. ಕೆಟ್ಟದಕ್ಕೆ  ಪ್ರೋತ್ಸಾಹ ಯಾವತ್ತೂ ಕೊಡಬಾರದು. ಮಕ್ಕಳು ತಪ್ಪು ಮಾಡಿದಾಗ, ಪ್ರೀತಿಯನ್ನು ಹೃದಯದಲ್ಲಿಟ್ಟು,ಹೊರಗೆ ತೋರ್ಪಡಿಸದೆ ತಪ್ಪಿಗೆ ಸರಿಯಾದ ದಂಡನೆಯನ್ನು ನೀಡಲೇಬೇಕು. ಮನೆಯಲ್ಲಿ ಹಿರಿಯರು ಮೊದಲು ನೈತಿಕತೆಯನ್ನು ಅಳವಡಿಸಿದರೆ, ತನ್ನಿಂತಾನೇ ಮಕ್ಕಳಿಗೂ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಬರಬಹುದು. ಸ್ವಕಲಿಕೆ, ಸ್ವವಿಮರ್ಶೆ ಸಾಮರ್ಥ್ಯ ನೋಡಿ,ಕೇಳಿ,ಅನಭವದಿಂದ ಬರುವಂತೆ ಮಾಡಬೇಕು.

‘ಯದ್ಭಾವಂ ತದ್ಭವತಿ’, ಅಲ್ಲವೇ? ಪುರಾಣಗಳಲ್ಲಿ ನಾವು ಕೇಳಿದ ಹಾಗೆ ‘ಯಥಾ ರಾಜ ತಥಾ ಪ್ರಜಾ’,ರಾಜ ಸರಿಯಿದ್ದರೆ, ಪ್ರಜೆಗಳೂ ಸರಿ ಇರುವರು, ಇಲ್ಲದಿದ್ದರೆ ಎಲ್ಲಾ ವ್ವವಸ್ಥೆಗಳೂ ಬುಡ ಮೇಲು. ಒಟ್ಟಿನಲ್ಲಿ ವೈಚಾರಿಕತೆಗೆ ಒತ್ತು ನೀಡುವಂತಹ ಮಾಹಿತಿಗಳ ಉಣಬಡಿಸಿ, ಬಿತ್ತಿ, ಒಳ್ಳೆಯ ರೀತಿಯಲ್ಲಿ ಬದುಕು ನಡೆಸುವಂತಹ ವಾತಾವರಣ ಕಲ್ಪಿಸಿ ದೇಶಕ್ಕೆ ನಮ್ಮಿಂದಾದ ‘ಅಳಿಲಸೇವೆ’ ಸಲ್ಲಿಸೋಣ. ಹತ್ತು ಹಲವು ರೀತಿಯಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಆದ್ಯತೆ ಸಹ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ