ಒಂದು ಒಳ್ಳೆಯ ನುಡಿ - 150

ಒಂದು ಒಳ್ಳೆಯ ನುಡಿ - 150

‘ಸತ್ಯವೆಂದೂ ಸುಳ್ಳಾಗದು ಆದರೆ ಸುಳ್ಳೊಂದು ಸತ್ಯವಾಗಬಹುದು’ ಇದು ಲೋಕಾರೂಢಿ ಮಾತು. ನಾವು ನಿಜವನ್ನು ಹೇಳುವುದು ಸತ್ಯ. ಒಂದು ನಿಜವನ್ನು ಕಥೆ ಕಟ್ಟಿ ತಿರುಚಿ ಹೇಳುವುದೇ ಸುಳ್ಳು. ಸತ್ಯ ಸುಳ್ಳುಗಳ ನಡುವೆ ಸಿಕ್ಕಿ ಉತ್ತಮರು ಒದ್ದಾಡುವರು, ಎಷ್ಟೋ ಜೀವಗಳು ಬದುಕಿಗೆ ಇತಿಶ್ರೀ ಹಾಡಿದ್ದೂ ಇದೆ. ಸುಳ್ಳಿನ ಪ್ರಪಂಚ ನಮ್ಮ ಸರ್ವ ನಾಶ ಮಾಡಬಹುದು. ಬೇರೆಯವರಿಗೆ ನೋವುಂಟುಮಾಡುವ, ಕಿರಿಕಿರಿ ಮಾಡುವ, ಅವರ ಬದುಕನ್ನು ಕಸಿಯುವ ಹಕ್ಕು ನಮಗಿಲ್ಲ. ನಾವು ನಮ್ಮ ಜೀವನ, ಸಾಧ್ಯವಾದರೆ ‌ಸಹಕಾರ ಅಲ್ಲವೇ? ಇದರಲ್ಲಿಯೇ ಸುಖ ಕಾಣಬೇಕು.

ಪರಮ ಸತ್ಯವೇ ಸಮಸ್ತ ಸೃಷ್ಟಿಯ ಮೂಲ. ಸಕಲ ಸೃಷ್ಟಿಯೂ ಅಂತಿಮವಾಗಿ ಸತ್ಯದೊಂದಿಗೆ ಲೀನವಾಗುವುದು. ಸತ್ಯಶೋಧನೆ ಮಾಡಿ ಜಯಶಾಲಿಗಳಾದವರು ಬಹಳಷ್ಟು ಜನ ನಮ್ಮ ನಿಮ್ಮ ನಡುವೆ ಇದ್ದಾರೆ. ಅಲ್ಲೂ ಕೆಲವು ಜನ ಯಶಸ್ಸನ್ನು ಕಂಡಿದ್ದಾರೆ. ಕೆಲವು ಜನ ಇಲ್ಲ. ‘ನಾನು ಇಂಥವ’ , ನಾನು ಹುಡುಗ ಅಥವಾ ಹುಡುಗಿ, ಅದು ಸಸ್ಯ, ಅವ ಕುಳ್ಳ,ಇವ ಎತ್ತರ, ಅವನು ಕಾಲೇಜಿಗೆ ಹೋಗುತ್ತಿದ್ದಾನೆ ಇದೆಲ್ಲ ಕಾಲ ಬಾಧಿತ ನಿತ್ಯ ಸತ್ಯ ವಿಚಾರಗಳು. ಆದರೆ ವೇದಗಳಲ್ಲಿ ನಿರೂಪಿತವಾದ ಸತ್ಯಗಳು ಶಾಶ್ವತ.

ಯಾವುದೇ ಬದಲಾವಣೆಗೆ ಒಳಗಾಗದ ಮತ್ತು ಶಾಶ್ವತವಾಗಿರುವ ನಮ್ಮ ಆತ್ಮ ದಿವ್ಯ ಸತ್ಯ, ಪರಮಸತ್ಯ, ಎಲ್ಲರೂ ಒಪ್ಪುವಂತಹ ಸತ್ಯ. ಯಾಕೆ? ಆತ್ಮಕ್ಕೆ ಬದಲಾವಣೆ ಇಲ್ಲ, ಶಾಶ್ವತ, ಆಕಾರ ವಿಕಾರಗಳಿಲ್ಲ. ದೇಹಕ್ಕೆ ಮಾತ್ರ ಬದಲಾವಣೆ. ಆತ್ಮ ಎನ್ನುವುದು ಬೇರೆ ಬೇರೆ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರಿನ ಹಾಗೆ. ಪಾತ್ರೆಯ ಆಕಾರ ಬೇರೆ ಬೇರೆ ಇರಬಹುದು. ಆದರೆ ತುಂಬಿಸಿಟ್ಟ ನೀರು ಒಂದೇ. ಹಸಿವೆ ಬಾಯಾರಿಕೆಗಳಾದಾಗ ದೇಹ ಬೇಕೆನ್ನುತ್ತದೆ .ಹಾಗೆಂದು ಚಿನ್ನವನ್ನು ತಿನ್ನಲಾದೀತೇ? ನೀರು ಆಹಾರವೇ ಬೇಕು. ಆತ್ಮತತ್ವದ ಅರಿವಾದರೆ ಮಾತ್ರ ಶಾಶ್ವತ ಸಂತೋಷ ನಮ್ಮದಾಗಬಹುದು. ದೇಹಭಾವನೆ ನಿಮಿತ್ತ ಮಾತ್ರ,ಬಂಗಾರದ ಪಾತ್ರೆಯಂತೆ.

ಕೆಲವೊಂದು ಕಡೆ ಭಗವಂತನಿಗೆ ಬಂಗಾರದ ಪಾತ್ರೆ, ಬೆಳ್ಳಿ ಪಾತ್ರೆಯಲ್ಲಿಯೇ ನೀರು, ನೈವೇದ್ಯ ಇದೆಯಂತೆ. ಯಾವ ಪಾತ್ರೆಯಾದರೇನು? ಕೊಡುವ ಮನಸ್ಸು ಶುದ್ಧವಾಗಿರಬೇಕು. ಭಗವಂತ ಯಾವತ್ತೂ ಹೇಳಿಲ್ಲ. ಅದೆಲ್ಲ ಅವರವರಿಗೆ ಬಿಟ್ಟ ವಿಚಾರ, ಅವರವರ ತಾಕತ್ತು.

ಶ್ವಾನವೊಂದು ತನ್ನ ಯಜಮಾನ ಯಾವ ವೇಷಭೂಷಣ ಧರಿಸಿದರೂ ಗುರುತಿಸುತ್ತದೆ, ಯಾಕೆಂದರೆ ತನಗೆ ಅನ್ನ ಹಾಕಿದ ಆತನನ್ನು ಸದಾ ನೆನಪಿಸ್ತದೆ, ಕೃತಜ್ಞತೆ ಇದೆ, ಅಂತರಂಗವನ್ನು ಅರಿತಿದೆ, ಬಾಹ್ಯಕ್ಕೆ ಬೆಲೆ ಕೊಡದದು. ನಾವು ಸಹ ಬಾಹ್ಯಕ್ಕೆ ಸೋಲದೆ ನಮ್ಮ ಅಂತರ್ಯದ ಮೂಲಕ ನಮ್ಮನ್ನು ಅರಿಯಲು ಪ್ರಯತ್ನಿಸಬೇಕು. ಆಗ ಬದುಕನ್ನು ಗೆದ್ದಂತೆ. ಸೃಷ್ಟಿ-ದೃಷ್ಟಿ ಎರಡೂ ಪವಿತ್ರವಾಗಿರಲಿ, ಶುದ್ಧವಾಗಿರಲಿ. ನಾನು ನನ್ನದು ತ್ಯಜಿಸೋಣ, ನಾವು ನಮ್ಮದು ತಿಳಿಯೋಣ, ಆ ಭಾವನೆ ಮನದಾಳದಿಂದ ಬರಲಿ. ಪುಟ್ಟ ಮಕ್ಕಳ ಮನವನ್ನು ತಿದ್ದಿ ಸರಿದಾರಿಗೆ ತರೋಣ. ಆತ್ಮದ ಅರಿವನ್ನು ಬಾಲ್ಯದಿಂದಲೇ ಮೂಡಿಸೋಣ. ನಚಿಕೇತ, ಧ್ರುವ, ಅಭಿಮನ್ಯು, ಪ್ರಹ್ಲಾದ, ಶ್ರವಣಕುಮಾರ ಮುಂತಾದ ಕಥೆಗಳು, ಅವರ ಬಾಲ್ಯದ ದಿನಗಳನ್ನು ಮುದ್ದುಮಕ್ಕಳಿಗೆ ಪರಿಚಯಿಸೋಣ. ಬದುಕಿನ ಸತ್ಯಗಳನ್ನು ತಿಳಿಸೋಣ. ಸತ್ಯ ಸುಳ್ಳುಗಳನ್ನು ಅರ್ಥೈಸೋಣ. ಎಲ್ಲರನ್ನೂ ಗೌರವಿಸುತ್ತಾ ಬಾಳನ್ನು ಉನ್ನತಿಯತ್ತ ಕೊಂಡೊಯ್ಯುವ ಕೈಂಕಯರ್ಯದಲ್ಲಿ ಬದುಕಿನ ಹಾದಿಯಲ್ಲಿ ಸಾಗೋಣ.

-ರತ್ನಾ ಕೆ.ಭಟ್ ತಲಂಜೇರಿ

(ಆಧಾರ: ನಿತ್ಯನೀತಿ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ