ಒಂದು ಒಳ್ಳೆಯ ನುಡಿ (16) - ನೆಮ್ಮದಿ
*ನೆಮ್ಮದಿ ಎಲ್ಲಿ ಸಿಗುತ್ತದೆ* ಅಂತ ಒಬ್ಬರು ಕೇಳಿದರು ಒಮ್ಮೆ, ಹೌದಲ್ವಾ, ಈ *ನೆಮ್ಮದಿ* ಸಂತೆಯಲ್ಲಿ ಸಿಗುವ ವಸ್ತು ಖಂಡಿತಾ ಅಲ್ಲ, ಎಲ್ಲಿಯಾದರೂ ಸಿಗುವುದಿದ್ದರೆ ತಂದು ಪೆಟ್ಟಿಗೆಯೊಳಗೆ ಇಡುತ್ತಿದ್ದರೋ ಏನೋ. ತರಗತಿ ಕೋಣೆಯೊಳಗೆ ಹೇರಿಕೆಯ ಕಲಿಕೆ, ಒತ್ತಡಗಳು, ನಾನಾ ಧೋರಣೆಗಳನ್ನು ಹೊತ್ತ ವಿದ್ಯಾಭ್ಯಾಸ ಮಗುವಿಗೆ ದೊರೆಯುತ್ತದೆ. ಇನ್ನೊಂದೆಡೆ ಟ್ಯೂಷನ್ ಹಾವಳಿ, ಹೋಗಲೇ ಬೇಕು, ಕಲಿಯಲೇ ಬೇಕು. ಇಂಥ ಒತ್ತಡಗಳಿಂದಲೇ ಆ ಮಗು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ನೆಮ್ಮದಿಯನ್ನು ಕಳೆದುಕೊಂಡ ಸ್ಥಿತಿಗೆ ತಲುಪುತ್ತಾನೆ. ಜೀವನ ನಿರ್ವಹಣೆಗೆ ಬೇಕಾದ ಕಲಿಕೆ ಬಹಳ ಅಪರೂಪವಾಗಿದೆ ಇಂದಿನ ದಿನಗಳಲ್ಲಿ. ಬೇಗ ಡಿಗ್ರಿ ಸಿಕ್ಕಿ, ಒಂದು ಕೆಲಸ (ಅದೂ ಕೈತುಂಬಾ ಸಂಬಳ) ಬರಬೇಕು, ಎಂಬ ಆಲೋಚನೆಯೇ ನೆಮ್ಮದಿ ಕೆಡಿಸುತ್ತದೆ, *ಮರದ ಹುಳ ಮರವನ್ನು ಕೊರೆಯುವ ಹಾಗೆ, ನಮ್ಮ ದೇಹ ಸಹ ಮಾನಸಿಕವಾಗಿ ಇಂಚಿಂಚು ಆರೋಗ್ಯ ಹಾಳಾಗುತ್ತಾ ಬರುತ್ತದೆ*.
ಕೆಲಸದ ಒತ್ತಡ, ದಿನ ಬೆಳಗಾದರೆ ಹಣದ ಒತ್ತಡ, ಪ್ರಾಯಕ್ಕೆ ಬಂದ ಮಗಳಿದ್ದರೆ ಅವಳಿಗೆ ಮದುವೆ ಮಾಡಿಸಬೇಕೆಂಬ ಚಿಂತೆ, ಮಗನಿಗೆ ಉತ್ತಮ ಉದ್ಯೋಗವಾಗಿಲ್ಲವೆಂಬ ಕೊರಗು, ಮನೆಯ ಹೆಣ್ಣು ಮಕ್ಕಳಿಗೆ ಅಡುಗೆ ಮನೆಯ ಕೆಲಸಗಳ ಚಿಂತೆ ಹೀಗೆ ಹಲವಾರು ರೀತಿಯಲ್ಲಿ ನಾವು ನೆಮ್ಮದಿಯನ್ನು ಕಳೆದುಕೊಂಡು ತೊಳಲಾಟದ ಜೀವನವನ್ನು ನಡೆಸುತ್ತೇವೆ. ಇದೆಲ್ಲಾ ನಮ್ಮ ನೆಮ್ಮದಿಯನ್ನು ಹಾಳು ಮಾಡಿ ನಾವು ಮಾನಸಿಕವಾಗಿ ಕುಗ್ಗಲು ಕಾರಣವಾಗಿ, ಕೃಶವಾಗುತ್ತೇವೆ.
ಕೋಪ, ತಾಪ, ರಾಗ, ದ್ವೇಷಗಳೂ ನೆಮ್ಮದಿ ಕೆಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವೇನು ಮಾಡಬಹುದು ಹಾಗಾದರೆ? ಸತ್ಸಂಗ, ಧ್ಯಾನ, ಯೋಗ, ಭಜನೆ, ಒಳ್ಳೆಯ ಪುಸ್ತಕಗಳನ್ನು ಓದುವುದು, ಸಂಗೀತ, ಸಿನಿಮಾ , ತೋಟಗಾರಿಕೆ, ಒಳ್ಳೆಯ ಬರಹಗಳನ್ನು ಬರೆಯುವುದು, ನಮ್ಮ ಸಮಕಾಲೀನರೊಡನೆ ಒಂದಷ್ಟು ಹೊತ್ತು ಸಮಯ ಕಳೆಯುವುದು ಈ ಎಲ್ಲಾ ಹವ್ಯಾಸಗಳನ್ನು ಇಟ್ಟುಕೊಂಡರೆ, ನೆಮ್ಮದಿ ಖಂಡಿತಾ ಸಿಗಬಹುದು, ನಾವೂ ಆರೋಗ್ಯವಾಗಿರಬಹುದು. ಇಲ್ಲದ ನೆಮ್ಮದಿಗಾಗಿ ಅರಸುವುದ ಬಿಟ್ಟು, ಇರುವುದರಲ್ಲೇ *ನೆಮ್ಮದಿ* ಕಂಡುಕೊಂಡು ನಮ್ಮ ಬದುಕನ್ನು ಬಂಗಾರವಾಗಿಸೋಣ.
-ರತ್ನಾಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್