ಒಂದು ಒಳ್ಳೆಯ ನುಡಿ - 160

'ಕೃತಘ್ನರು, ಹಣದ ಲೋಭವನ್ನೇ ಬಂಡವಾಳ ಮಾಡಿಕೊಂಡವರು ಉಪಕಾರಕ್ಕೆ ಆಗದವರು' ಮಹಾಭಾರತ ಮಹಾಕಾವ್ಯದಲ್ಲಿ ಓದಿದ ನೆನಪು. ಇದು ಸಾರ್ವಕಾಲಿಕ ಸತ್ಯ ಸಹ. ಕಣ್ಣಿನಲ್ಲಿ ನೆತ್ತರಿ(ರಕ್ತ)ಲ್ಲದವರೆಂದೇ ಅಂಥವರಿಗೆ ಹಳ್ಳಿಗಳಲ್ಲಿ ಹೇಳುವ ಮಾತು. ಯಾರು ಏನೇ ಹೇಳಿದರೂ ಅವರ ಮೇಲೆ ಯಾವುದೇ ಪರಿಣಾಮ ಬೀರದು. ಅವರ ಚರ್ಮ ದಪ್ಪವಂತೆ. 'ಕೋಣನ ಮುಂದೆ ಕಿನ್ನರಿ ನುಡಿಸಿದಂತೆ' ಆದೀತು.
ನಮ್ಮ ಪರಿಚಯದವರೊಬ್ಬರು ಇದೇ ಗುಣದವರಿದ್ದರು. ಅವರ ಮನಸ್ಸನ್ನು ಪರಿವರ್ತನೆ ಮಾಡಲು ಹೋಗಿ ಕೈಸುಟ್ಟುಕೊಂಡವರು ಬಹಳ ಜನ. ನಾನೂ ಅವರಲ್ಲಿ ಓರ್ವಳು. ಅಬ್ಬಾ! ಯಾರ ಮಾತಿಗೂ ಕಿವಿಗೊಡದ ಗಟ್ಟಿತಲೆಯವರು. ನಾಳೆ ಅವರು ಕಷ್ಟ ಎಂದಾಗ ಯಾರೂ ಬರಲಾರರು. ಅದನ್ನೂ ಹೇಳಿ ತೋರಿಸಿಯಾಯಿತು. 'ಬೇಡ, ನಾನು ಬೇಕಾದಷ್ಟು ಸಂಪಾದಿಸಿ ಇಟ್ಟಿದ್ದೇನೆ, ಆ ಆಸೆಗೆ ಮುಂದೆ ಬರಬಹುದು' ಹೇಳ್ತಾರಲ್ಲ? ಏನು ಹೇಳ್ಬೇಕು ಇವರ ದೂರ ದೃಷ್ಟಿಗೆ. ಹಾಗಾದರೆ ತಲೆ ಇಲ್ಲದವ ಅಲ್ಲ ಈತ, 'ಮಹಾಜಿಪುಣ' ಅಷ್ಟೆ ಎಂದರಿತೆ.
ಒಂದು ಗಾದೆ ಮಾತಿದೆ 'ನಂದನ ಬದುಕು ನರಿನಾಯಿ ತಿಂದುಹೋಯಿತು' ಎಂಬುದಾಗಿ. ಯಾರಿಗೂ ಕೊಡದೆ, ಯಾವುದೇ ಸಮಾಜಮುಖಿ ಕಾರ್ಯಗಳನ್ನು ಮಾಡದೆ, ಇತರರ ಶ್ರಮದ ಫಲವನ್ನು ತಿಂದು ತೇಗಿ, ಬೇನಾಮಿ ಸಂಪಾದಿಸಿದವರ ಹಣೆಬರಹ ನೋಡಿದಾಗ, ನಾಳೆ ಯಾರು ಯಾರೋ ತಿನ್ನುವುದು ಸತ್ಯ ಅನಿಸ್ತದೆ .ದಾನಧರ್ಮ ಆದರೂ ಮಾಡಿ ಪುಣ್ಯಕಟ್ಟಿಕೊಳ್ಳಬಾರದೇ? ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿದರೆ ಅದರಿಂದ ದೊಡ್ಡ ಯಶಸ್ಸು ಯಾವುದಿದೆ?ಇವರಿಗೆಲ್ಲ ಯಾವಾಗ ಬುದ್ಧಿ ಬರುವುದೋ ಏನೋ.ನ್ಯಾಯನೀತಿಧರ್ಮವಿಲ್ಲದ ಈ ಗಳಿಕೆಗೆ ಕೊನೆಯೆಂದು? ನಾವ್ಯಾಕೆ ದಡ್ಡರಾಗ್ತೇವೆ. ಅಂಥವರ ಮಾತಿಗೆ ಮರುಳಾಗಿ ನಮ್ಮನ್ನೇ ನಂಬಿದವರಿಗೂ, ನಮ್ಮ ಹೊಟ್ಟೆಗೂ ತಣ್ಣೀರು ಬಟ್ಟೆ ಹಾಕುವ ಹಾಗೆ ಮಾಡಿಕೊಳ್ತೇವಲ್ಲ? ಇದು ಮರುಳುತನವಲ್ಲದೆ ಮತ್ತೇನು ಹೇಳಬೇಕು. ಮೋಸ ಹೋಗುವವರು ಇರುವಲ್ಲಿವರೆಗೆ ಮೋಸ ಮಾಡುವವರೂ ಇರ್ತಾರೆ. ಅವರಿಗೆ ಅದೇ ಉದ್ಯೋಗ .ನಾವು ಕಷ್ಟಪಟ್ಟು ಸಂಪಾದಿಸಿದ್ದನ್ನು ನಾವೇ ಅನುಭವಿಸೋಣ. ಈ ಲೋಭಿಗಳ ಕೈಗೆ ನೀಡುವುದು ಬೇಡ ಅಲ್ಲವೇ? ಬೇರೆಯವರನ್ನು ಎಷ್ಟು ನಂಬಬೇಕೋ ಅಷ್ಟೇ ನಂಬಿದರೆ ಸಾಕು.ಪೂರ್ತಿ ನಂಬಿ ನಮ್ಮ ಸಂಸಾರ ಬೀದಿಗೆ ಬರುವುದು ಬೇಡ.ಮನೆಯ ಗಂಡಹೆಂಡತಿ ಇಬ್ಬರು ದುಡಿದರೂ ಒಂದು ಸಣ್ಣ ಕೋಣೆ ಕಟ್ಟಿಸಲೂ ಪರದಾಟ ಮಾಡುವುದು ಕಂಡಿದ್ದೇನೆ. ಇವರೆಲ್ಲ ದೊಡ್ಡ ದೊಡ್ಡ ಬಂಗ್ಲೆ ಕಟ್ಟಿಸ್ತಾರೆ. ಹಾಗಾದರೆ ಹಣ ಎಲ್ಲಿಂದ ನೋಡಿದರೆ ಮಾತೆಂಬ ಸುಳ್ಳಿನ ಬಂಡವಾಳದಿಂದ, ಜಿಪುಣತನದಿಂದ ಎಂಬುದು ಸುಸ್ಪಷ್ಟ. ನಾವು ಮಾಡುವ ಕೆಲಸಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾ, ಮೇಲೊಂದು ಅಗೋಚರ ಶಕ್ತಿ ಬೆನ್ನಹಿಂದೆ ಇದೆಯೆಂಬ ನಂಬುಗೆಯಲ್ಲಿ ಜೀವನ ಸಾಗಿಸೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ