ಒಂದು ಒಳ್ಳೆಯ ನುಡಿ - 168

ಒಂದು ಒಳ್ಳೆಯ ನುಡಿ - 168

* ನಿತ್ಯಂ ಸನ್ನಿಹಿತೋ ಮೃತ್ಯು: ಎಂಬಂತೆ ಮರಣ ಹತ್ತಿರದಲ್ಲಿಯೇ ಇರುತ್ತದೆ. ಉಸಿರು ನಿಲ್ಲುವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲಾ ಭಗವಂತನ ಆಟದಂತೆ.ನಮ್ಮ ನಮ್ಮ ನಿಲ್ದಾಣ ಬರುವಾಗ ಒಂದು ಕ್ಷಣ ಸಹ ತಡ ಮಾಡುವ ಹಾಗಿಲ್ಲ. ಆದಕಾರಣ ಏನಾದರೂ ಸಾಧಿಸಬೇಕೆಂಬ ಮನಸ್ಸಿದ್ದರೆ ಸಾಧಿಸಿಬಿಡಬೇಕು. ನಾಳೆಗೆಂದು ಮುಂದೂಡಬಾರದು.

* ಆಗಸದಲ್ಲಿ ಹಾರಾಡುವ ಪಕ್ಷಿ ಸಂಕುಲಕ್ಕೆ ರಸ್ತೆ ಎಂಬುದಿಲ್ಲ. ಗೊತ್ತು ಗುರಿ ಮೊದಲೇ ಇಲ್ಲ .ಹಾರುತ್ತಾ ತನ್ನ ಆಹಾರವನ್ನು ಅರಸುತ್ತದೆ. ಅದರ ಬೆನ್ನ ಹಿಂದಿನ ಕಾಣದ ಶಕ್ತಿಯೊಂದು ಇದನ್ನೆಲ್ಲ ಮಾಡಿಸುತ್ತದೆ. ಮಾನವನ ಬದುಕು ಸಹ ಹೀಗೆ. ಗೊತ್ತುಗುರಿಯಿಲ್ಲದ, ತಾಳಮೇಳಗಳಿಲ್ಲದ ಒಂದು ಬೃಹದಾಕಾರದ ರಸ್ತೆಯಂತೆ. ಅದರಲ್ಲಿ ಸ್ಥಿರತೆಯನ್ನು ಕಂಡುಕೊಂಡು, ವಿವೇಚಿಸಿ, ತರ್ಕಿಸಿ ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವನಿಗಿದೆ.

* ಸಂಬಂಧವನ್ನು ನಂಬಿ ನಡೆದರೆ ಬದುಕೆಲ್ಲ ಸಂತಸ, ಸಂಭ್ರಮ, ಶಾಂತಿ, ನೆಮ್ಮದಿ ಸಿಗಬಹುದು. 'ಸಂಬಂಧವೇ ಇಲ್ಲ ,ಏನು ಬೇಕಾದರೂ ಮಾಡಿಕೊ ಹೋಗು'ಎಂದರೆ ಅತೃಪ್ತಿ, ಅಶಾಂತಿಯಲ್ಲಿ ಬಿದ್ದು ಹೊರಳಾಡಿ ಬಾಳು ಬರ್ಬರವಾಗಬಹುದು. ಸರಿ-ತಪ್ಪು, ಬೇಕು-ಬೇಡ ಅದೆಲ್ಲ ಒತ್ತಟ್ಟಿಗಿಟ್ಟು ಸಂಬಂಧವನ್ನು ಉಳಿಸಿಕೊಂಡು ಇರುವುದರಲ್ಲಿ ನೆಮ್ಮದಿಯ ಹುಡುಕೋಣ.

* ಆಗಿ ‌ಹೋದ ಕಾರ್ಯಕ್ಕೆ ಕೈಕೈ ಹಿಸುಕಿ ತಲೆಚಚ್ಚಿಕೊಂಡರೆ ಪ್ರಯೋಜನವಿಲ್ಲ. ಮೊದಲೇ ಯೋಚಿಸಬೇಕಲ್ಲವೇ? ಯಾವ ಕೆಲಸಕಾರ್ಯಗಳಲ್ಲೂ ದುಡುಕಿನ, ಅವಸರದ ನಿರ್ಧಾರಗಳು ಸರಿಯಲ್ಲ. ಅನಂತರ ಪಶ್ಚಾತ್ತಾಪ ಪಡದಂತೆ ಎಚ್ಚರಿಕೆ ವಹಿಸಿದರೆ ಕಷ್ಟನಷ್ಟಗಳನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದು.

* ದುರ್ಜನರಿಂದ ದೂರವಿರುವುದು ಲೇಸು*.

*ವೃಶ್ಚಿಕಸ್ಯ ವಿಷಂ ಪುಚ್ಛಂ ಮಕ್ಷಿಕಸ್ಯ ವಿಷಂ ಪದಮ್/*

*ಪನ್ನಗಸ್ಯ ವಿಷಂ ದಂತ: ಸರ್ವಾಂಗಂ ದುರ್ಜನೇ ವಿಷಮ್//* *ಎಂಬಂತೆ ಕೆಟ್ಟವರ ಸಹವಾಸದಿಂದ ನಮ್ಮ ಬದುಕೇ ಹಾಳು.*

ಚೇಳಿನ ವಿಷ ಅದರ ಬಾಲದಲ್ಲಿ ಮಾತ್ರ. ನೊಣದ ವಿಷ ಕಾಲಿನಲ್ಲಡಗಿದೆ. ಹಾವಿನ ವಿಷ ಅದರ ಬಾಯಿಯ ಹಲ್ಲುಗಳಲ್ಲಡಗಿದೆ. ಆದರೆ ಈ ಕೆಟ್ಟವರು, ದುರ್ಜನರು ಮೈಯೆಲ್ಲ ವಿಷ ತುಂಬಿಕೊಂಡಿರುತ್ತಾರಂತೆ. ಹಾಗಾಗಿ ಅವರಿಂದ  ಯಾವತ್ತೂ ನಾವು ದೂರವಿರಬೇಕು.

* ಪ್ರಕೃತಿ ಆರಾಧನೆ ನಮ್ಮ ಮಣ್ಣಿನ ಸೊಗಡು. ಎಲ್ಲಾ ಜೀವಿಗಳು ಒಂದಕ್ಕೊಂದು ಎರಕ ಹೊಯಿದಂತೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ ಎಂಬಂತೆ. ಪರಸ್ಪರ ಸಹಕಾರ, ಕೃತಜ್ಞತಾ ಸಮರ್ಪಣೆ ನಮ್ಮ ರಕ್ತದಲ್ಲಿ ಹಾಸುಹೊಕ್ಕಾಗಿದೆ. ಇಂದಿನ ದಿನ ವಿಶೇಷ ನಾಗಾರಾಧನೆ, ಶುಕ್ಲ ಪಂಚಮಿಯ ಈ ಶುಭ ದಿನ ನಾಗರಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿ ಕೃತಾರ್ಥರಾಗೋಣ. ಎಲ್ಲರಿಗೂ ಶುಭವಾಗಲಿ.

* ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿವೆ. ಗೌಜಿ ಗದ್ದಲವಲ್ಲದಿದ್ದರೂ ಸಹ, ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಮೂಲಕ, ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳನ್ನು ದಾಟಿಸುವ, ಉಳಿಸಿ, ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಬನ್ನಿ ಬಂಧುಗಳೇ ನಮ್ಮ ನೆಲ-ಜಲದ ಸೊಗಡಿನ ಮಹತ್ವವನ್ನು,ಹಿರಿಯರು ಹಾಕಿಕೊಟ್ಟ ಮೂಲಬೇರನ್ನು ಮರೆಯದೆ ನಮ್ಮ ಮಕ್ಕಳು, ನೆರೆಹೊರೆಯವರೊಂದಿಗೆ, ಬಂಧುಗಳೊಂದಿಗೆ ಸೇರಿ ಸಂಭ್ರಮಿಸೋಣ.

-ರತ್ನಾ ಕೆ.,ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ