ಒಂದು ಒಳ್ಳೆಯ ನುಡಿ -176
ಯಾವುದೇ ಅಹಂಕಾರ ಸಹ ವ್ಯಕ್ತಿತ್ವ ವಿಕಾಸಕ್ಕೆ ಒಳ್ಳೆಯದಲ್ಲ. ಅದರಲ್ಲೂ ಸೌಂದರ್ಯದ ಬಗ್ಗೆ ಅಹಂಕಾರ ಇದ್ಯಲ್ಲ ಬಹಳ ಅಪಾಯಕಾರಿ ಬೇರೆಯವರು ಮನುಷ್ಯರು ಎಂಬಂತೆಯೇ ಕಾಣದು ಆ ಅಹಂಕಾರದ ಕಣ್ಣಿಗೆ..
ಸೌಂದರ್ಯ ಪ್ರಜ್ಞೆ ಓಕೆ ಆದರೆ ಅದರ ಬಗ್ಗೆ ಅಹಂಕಾರ ಬೆಳೆದುಕೊಂಡು ವ್ಯಕ್ತಿಯಲ್ಲಿ ಆತನ ವ್ಯಕ್ತಿತ್ವ ವಿಕಾಸದಲ್ಲಿ ಕೊರತೆ ಕಾಣಿಸಿಕೊಳ್ಳುತ್ತದೆ. ಮನಸ್ಸು ಸದಾ ತನ್ನ ಸೌಂದರ್ಯ ಸಂರಕ್ಷಣೆಯಲ್ಲಿಯೇ ನಿರತವಾಗಿರುತ್ತೆ ತನ್ನ ದೇಹಕ್ಕೆ ಸಣ್ಣ ಗೀರಾದರೂ ಮನೋವ್ಯಾಕುಲತೆಗೆ ಒಳಗಾಗುವರು. ಈ ರೀತಿಯ ಬಹಳಷ್ಟು ಮಂದಿಯನ್ನು ಕಂಡಿರುವೆ ಅವರ ಬಾಯಲ್ಲಿ ಅವರದೇ ಸೌಂದರ್ಯ ವರ್ಣನೆ ಕಂಡಿದ್ದೇನೆ. ಇದು ಕೇವಲ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಲ್ಲಿಯೂ ಈ ಸೌಂದರ್ಯದ ಬಗ್ಗೆ ಅಹಂಕಾರ ಇರುವವರು ಇದ್ದಾರೆ. ಅಂತಹವರು ನನ್ನ ಸ್ನೇಹ ಬಳಗದಲ್ಲಿಯೇ ಇದ್ದಾರೆ ಬಹಳ ಅಹಂಕಾರ ಅವರಿಗೆ ತಾನಿನ್ನು ಚಿಕ್ಕ ಹುಡುಗನಂತೆ ಕಾಣುವೆ ಅಂತ ಇತರರಿಗೆ ಹೋಲಿಕೆ ಮಾಡಿಕೊಂಡು ಕೊಚ್ಚಿಕೊಂಡದ್ದು ಉಂಟು. ಇದರ ಅಗತ್ಯ ಇದೆಯಾ ಅನಿಸಿದಾಗ ನನಗೆ ಅನಿಸಿದ್ದು ಇವರು ಏನು ನಾನಿನ್ನು ಚಿಕ್ಕ ಹುಡುಗನಂತೆ ಇದ್ದೇನೆ ಅಂತ ಕೊಚ್ಕೊತಿದ್ದಾರೆ ಇದನ್ನು ನಮ್ಮ ಹಳ್ಳಿ ಭಾಷೆಯಲ್ಲಿ ಪೀಚು ಅಂತಾರೆ. ಪೀಚು ಕೆಟ್ಟ ಪದ ಅಲ್ಲ ಆಡು ಭಾಷೆ ಆ ವ್ಯಕ್ತಿಯ ದೇಹ ಬೆಳವಣಿಗೆ ಸಮರ್ಪಕವಾಗದೆ ಕೊರತೆ ಇದೆ ಪೀಚಾಗಿ ಕಾಣುವ ಎಂಬುದು ಇದರ ಅರ್ಥ.
ಹೆಣ್ಣಾಗಲಿ ಗಂಡಾಗಲಿ ಸೌಂದರ್ಯದ ಅಹಂಕಾರ ಒಳಿತಲ್ಲ. ಇದು ಇತರೆ ಶ್ರೇಷ್ಠ ಗುಣಗಳನ್ನು ನುಂಗಿ ಹಾಕುತ್ತವೆ ಒಂದಲ್ಲ ಒಂದು ದಿನ ಮಣ್ಣು ಸೇರುವ ಈ ದೇಹಕ್ಕೆ ಏಕೆ ಇಷ್ಟು ಅಹಂಕಾರ. ಎಂದು ಅಳಿಯದ ಜ್ಞಾನ ಮಾರ್ಗದಲ್ಲಿ ನಡೆಯೋಣ. ಅದೆಂದು ನಮ್ಮನ್ನು ಜಗತ್ತಿನಿಂದ ಮರೆಯಾಗಲಾರದು. ಕುವೆಂಪು, ಬೇಂದ್ರೆ, ಪಂಪ ಇವರಿಗೆಲ್ಲ ಸಾವಿದೆಯಾ...!? ಇಲ್ಲ ಅಲ್ವಾ. ಇವತ್ತು ನಮ್ಮಲ್ಲಿನ ಗಾದೆಗಳಿವೆ ಅವನ್ನು ಯಾರು ರಚಿಸಿದ್ದು ಗೊತ್ತಿಲ್ಲ ಆದರೆ ರಚಿಸಿದವರು ಗಾದೆಯ ರೂಪದಲ್ಲಿ ನಮ್ಮ ಜೊತೆ ಜೀವಂತವಾಗಿದ್ದಾರೆ. ನಶ್ವರ ಬದುಕಿದು ನಡೆಯೋದೇ ಆದ್ರೆ ಆ ಅವಿನಾಶನೆಡೆಗೆ ನಡೆಯೋಣ ಏನಂತೀರಾ?
-ಬಸಯ್ಯ ಜಿ.ಮಳಿಮಠ, ಹುಬ್ಬಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ