ಒಂದು ಒಳ್ಳೆಯ ನುಡಿ - 188

ಒಂದು ಒಳ್ಳೆಯ ನುಡಿ - 188

* ಪುರಂದರ ದಾಸರು ಮೆರೆದು ಹಾಡಿ ಹೊಗಳಿದ ಕನ್ನಡವಿದು, ದಕ್ಷಿಣೋತ್ತರದಿ ಹಬ್ಬಿದ ಶ್ರೀಗಂಧದ ಘಮಲಿನ ಕನ್ನಡವಿದು. ತಾಯಿನುಡಿಯ ಒಂದೊಂದು ಅಕ್ಷರಗಳಲಿ ಕಬ್ಬಿನ ಸಿಹಿಯಿದೆ,ಜೇನಹನಿಯ ಸವಿಯಿದೆ.ಸ್ನೇಹಿತರೇ, ಓದೋಣ, ಬರೆಯೋಣ-ಕಲಿಸೋಣ-ಕಲಿಯೋಣ ನಮ್ಮಕನ್ನಡದ ಭಾಷೆಯನ್ನು.

* ‘ನಾನು ನೀನು ಎನ್ನದಿರೊ ಹೀನಮಾನವ, ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ’ ಎಂದವರು

ಕರ್ನಾಟಕದ ದಾಸ ಪರಂಪರೆಯಲ್ಲಿ ಸಮಾಜದಲ್ಲಿ ಓರ್ವ ವ್ಯಕ್ತಿಯಾಗದೆ ಬೃಹತ್ ಶಕ್ತಿಯಾಗಿ ಜನಮಾನಸದಲ್ಲಿ ಇಂದಿಗೂ ಪ್ರಸ್ತುತರಾಗಿರುವ ಕನಕದಾಸರು. ಸಮಾಜದ ಅಂಕು-ಡೊಂಕುಗಳನ್ನು ಭಕ್ತಿಪಂಥದ ಮೂಲಕ ಎತ್ತಿ ಹಿಡಿದು, ವೈಚಾರಿಕತೆಯನ್ನು ಪ್ರಚುರಪಡಿಸಿದವರು. ನಮ್ಮ ನಾಡಿನ ‘ವೀರವನಿತೆ ಓಬವ್ವಳನ್ನು’ ನೆನಪಿಸಿಕೊಳ್ಳೋಣ.

* ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು’ ಎಷ್ಟು ಸಾರವಡಗಿದ ಪದಗಳಿಂದ ಕೂಡಿದ ಸಾಲುಗಳು.ಹಿರಿಯ ಕವಿ ಸಾಹಿತಿಗಳ ಆಲೋಚನೆ, ಪದಸಂಪತ್ತು ಅಪಾರವಲ್ಲವೇ? ಒಂದೊಂದು ಪದವೂ ಹೊನ್ನುಡಿ. ಇದೇ ಕನ್ನಡ ಭಾಷೆಯ ಸೊಗಡು. ತಾಯಿ ನುಡಿಯಲಿ ಮಾತನಾಡೋಣ, ಓದೋಣ, ಬರೆಯೋಣ.

* ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ!’ ಆಹಾ!ಈ ಸಾಲುಗಳೇ ಎಷ್ಟೊಂದು ಸೊಗಸು.ಕನ್ನಡ ನಾಡು ಮತ್ತು ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳೋಣ. ಆದಷ್ಟೂ ಕನ್ನಡದಲ್ಲಿಯೇ ಮಾತನಾಡೋಣ.ತಾಯಿನಾಡಿನ ಋಣವನ್ನು ಕಿಂಚಿತ್ ತೀರಿಸೋಣ.

*ಕನ್ನಡ ಎಂದರೆ ಬರಿ ನುಡಿಯಲ್ಲ*

*ಮುತ್ತಿನ ಮಣಿ ಸಾಲು*/

*ಕನ್ನಡ ಎನ್ನಲು ನಿನ ಕೊರಳಲಿ*

*ಸಂಗೀತದ ಹೊನಲು*//

ಕನ್ನಡ ಭಾಷೆ, ಕನ್ನಡ ನುಡಿಗಳು ಮೊಗೆದಷ್ಟೂ ಅಕ್ಷಯಪಾತ್ರೆಯ ಖಾದ್ಯಗಳಂತೆ. ಕನ್ನಡ ಎಂದರೆ ಮೂರಕ್ಷರವಿರಬಹುದು. ಆದರೆ ಅದರಲ್ಲಡಗಿದ ಅರ್ಥ ಅಪರಿಮಿತ, ಬಾಳಿನ ಸತ್ವ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ