ಒಂದು ಒಳ್ಳೆಯ ನುಡಿ (201) - ನಮಸ್ಕಾರ
ನಾವು ನಮಗೆ ಕಲಿಸಿದ ಗುರುಗಳನ್ನು ಕಂಡಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತೇವೆ. ಅದು ಸಂಸ್ಕಾರ. ಒಂದು ಕೈಯಲ್ಲಿ ಸೆಲ್ಯೂಟ್ ಮಾಡಿದಂತೆ ನಮಸ್ಕರಿಸುವುದು ಸರಿಯಲ್ಲ. ಹಿರಿಯರಿಗೆ ನಮಸ್ಕರಿಸುವಾಗ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇವೆ, ಆಶೀರ್ವಾದ ಬೇಡುತ್ತೇವೆ. ಭಗವಂತನಿಗೆ ಪುರುಷರು ಸಾಷ್ಟಾಂಗ ನಮಸ್ಕಾರ ಮಾಡುವುದಿದೆ. ಇಲ್ಲಿ ಸಂಪೂರ್ಣ ಶರಣಾಗತಿಯನ್ನು ಕಾಣಬಹುದು. ಭಗವಂತನ ಪಾದಗಳನ್ನು ನೇರವಾಗಿ ಮುಟ್ಟಲಾಗದು. ಬಗ್ಗಿ ನಮಸ್ಕರಿಸುವಾಗ ಮೊದಲು ನೋಡುವುದೇ ದೇವರ ಪಾದಗಳನ್ನು. ಭೂಮಿಯನ್ನು ಶಿರಸ್ಸು ಸ್ಪರ್ಶಿಸಿದಾಗ, 'ನನ್ನನ್ನು ರಕ್ಷಿಸು, ನಿನಗೆ ಶರಣು ಬಂದಿದ್ದೇನೆ' ಎಂಬ ಭಾವವನ್ನು ಕಾಣಬಹುದು. ಭೂಮಿಗೆ ಗುರುತ್ವಾಕರ್ಷಣೆ ಶಕ್ತಿಯಿರುವುದು ನಮಗೆ ಗೊತ್ತೇ ಇದೆ. ನಿಂತುಕೊಂಡು ಅಥವಾ ಕುಳಿತುಕೊಂಡಿರುವ ಮಹಾತ್ಮರು, ಗುರು ಹಿರಿಯರು, ಭಗವಂತ ಭೂಸ್ಪರ್ಶ ಮಾಡಿಕೊಂಡಿರುವ ಕಾರಣ, ನಮ್ಮ ಶಿರವನ್ನು ಬಾಗಿದಾಗ, ನಮ್ಮ ದೇಹಕ್ಕೆ ದಿವ್ಯ ತೇಜಸ್ಸು, ಕಾಂತಿ, ಪ್ರಬಲವಾದ ಶಕ್ತಿ ಹಣೆಯ ಮೂಲಕ ಪ್ರವೇಶಿಸುತ್ತದೆ. ಇದು ಆರೋಗ್ಯದಾಯಕವೂ ಆಗಿದೆ. ಒಂದು ರೀತಿಯ ಚಟುವಟಿಕೆ, ವ್ಯಾಯಾಮ.
ಎರಡೂ ಕೈಗಳನ್ನು ಜೋಡಿಸುವುದರಿಂದ 'ನನ್ನದೇನಿಲ್ಲ, ಎಲ್ಲವೂ ನಿನ್ನದೇ' ಎಂಬ ಭಾವ ಮೂಡುತ್ತದೆ. ಅಂಗೈಯಲ್ಲಿರುವ ಅಗ್ನಿ ಶಕ್ತಿಯು ಆತ್ಮದ ಪ್ರಾಣವಾಯುವಿನೊಂದಿಗೆ ಬೆರೆತು ಸಾತ್ವಿಕ ಶಕ್ತಿಯ ಸತ್ವಗುಣ ಪ್ರವಹಿಸುತ್ತದೆ. ಎರಡು ಅಂಗೈಗಳನ್ನು ಉಜ್ಜಿ ಕಣ್ಣಿಗೊತ್ತಿಕೊಳ್ಳುವ ಪರಿಪಾಠವಿದೆ. ಅಲ್ಲಿ ಸೂಕ್ಷ್ಮವಾದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಮುಗಿದ ಕೈಗಳು ಹೃದಯಕ್ಕೆ ಅಭಿಮುಖವಾಗಿರುವ ಕಾರಣ ಪರಿಶುದ್ಧವಾದ ಗಾಳಿ ಹೃದಯದೊಳಗೆ ಚಲಿಸುವುದು. ಎಷ್ಟೊಂದು ವೈಜ್ಞಾನಿಕತೆಯಲ್ಲವೇ?
ಎರಡು ಕೈಗಳ ನಮಸ್ಕಾರ, ಕಾಲಿಗೆರಗುವುದು, ತಪ್ಪಾಯಿತೆಂದು ಕೇಳಿಕೊಳ್ಳುವುದು ಪರಸ್ಪರ ದ್ವೇಷ-ಜಗಳ-ಸಿಟ್ಟನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಸ್ನೇಹಿತರು ಹಸ್ತಲಾಘವ ಮಾಡುತ್ತಾರೆ. ಸತ್ಯಕ್ಕೆ ತಲೆಬಾಗುವುದು ಜಾಣತನ. ಸುಳ್ಳಿಗೆ ತಲೆತಗ್ಗಿಸಬಾರದು. ಭಾರತೀಯ ಸನಾತನ ಸಂಸ್ಕೃತಿಯೇ ನಮ್ಮ ಬದುಕಿನ ಅಡಿಪಾಯ. ನಂಬಿಕೆ-ಶ್ರದ್ಧೆ ಮುಖ್ಯ.
-ರತ್ನಾ ಕೆ ಭಟ್,ತಲಂಜೇರಿ
(ಆಕರ:ಸನಾತನ ಸಂಸ್ಕಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ