ಒಂದು ಒಳ್ಳೆಯ ನುಡಿ - 202

ಒಂದು ಒಳ್ಳೆಯ ನುಡಿ - 202

* ನಮ್ಮೊಂದಿಗೆ ಬದುಕಿನ ಹಾದಿಯಲ್ಲಿ ಬಹಳ ಜನರಿರಬಹುದು. ಆದರೆ ಎಲ್ಲರೂ ಕೊನೆಯತನಕ ಉಳಿಯಲಾರರು. ಮೈತ್ರಿ, ಗೆಳೆತನ ಎನ್ನುವುದು ನೆರಳು-ಬೆಳಕಿನ ಆಟದಂತೆ. ನಾವು ಆ ಆಟದ ದಾಳಗಳಾಗಬಾರದು, ಪುಟಿಯುವ ಚೆಂಡುಗಳಾಗಬೇಕು.

* ನಮಗೆ ತಿಳಿದಿರುವ ವಿದ್ಯೆಯನ್ನು ನಾಲ್ಕು ಜನರಿಗೆ ಹೇಳಿಕೊಡುವ, ಕಲಿಸುವ, ತಿದ್ದಿ ಹೇಳುವ ಮನೋಭಾವ ನಮ್ಮದಾಗಿರಬೇಕು. ಸಂಕುಚಿತ ಮನಸ್ಸು ಇರಬಾರದು. ನನಗೆ ಮಾತ್ರ ತಿಳಿದಿರಬೇಕು, ಇತರರಿಗೆ ತಿಳಿಯಬಾರದೆಂಬ ಅಹಂ ಆಗಲಿ, ಸಣ್ಣ ಮನಸ್ಸಾಗಲಿ ಇರಬಾರದು.

* ಭಗವದ್ಗೀತೆ, ವಚನಗಳು, ನುಡಿಮುತ್ತುಗಳು, ಹಿರಿಯರ ಮಾತುಗಳು, ಸುಭಾಷಿತಗಳು, ಗಾದೆಗಳು, ವೇದ, ಉಪನಿಷತ್ತು, ಪುರಾಣ ಮಹಾಕಾವ್ಯಗಳು, ಕಥೆಗಳು, ಉಪಕಥೆಗಳು, ಮಹಾ ನಾಯಕರ, ಸಾಹಿತಿಗಳ ಜೀವನ ಚರಿತ್ರೆಗಳು, ಸ್ವಾತಂತ್ರ್ಯವೀರರ, ದೇಶಕ್ಕಾಗಿ ಹೋರಾಡಿದವರ ಚರಿತ್ರೆಗಳು ಎಲ್ಲದರಲ್ಲಿರುವ ಸಾರ ನಮ್ಮ ಬದುಕಿಗೆ ಉತ್ತಮ ಮತ್ತು ಆರೋಗ್ಯಕರವಾದ ಪೋಷಕಾಂಶಗಳನ್ನು ನೀಡುವ ಜ್ಞಾನವೇ ಆಗಿದೆ. ಪ್ರತಿ ಮನೆಯಲ್ಲಿರಬೇಕಾದ ಪುಸ್ತಕಗಳಾಗಿವೆ. ಓದೋಣ, ಅರ್ಥೈಸಿಕೊಳ್ಳೋಣ, ಮಕ್ಕಳಿಗೂ ಮನನ ಮಾಡಿಸೋಣ.

* ಮಳೆನೀರಿನ ಹನಿಗಳು ಒಂದೊಂದೇ ಬಿಂದುಗಳುದುರಿ ಜಲಸಂಪತ್ತು ಶೇಖರಣೆಯಾಗುತ್ತದೆ. ಧೋ ಎಂದು ಒಮ್ಮೆಯೇ ಸುರಿದರೆ ಪ್ರಳಯ, ಅನಾಹುತ ಉಂಟಾಗಬಹುದು. ವಿದ್ಯೆ, ಸಂಪತ್ತು ಸಹ ಹೀಗೆಯೇ. ಹಂತ ಹಂತವಾಗಿ ಕಲಿತು ಆರ್ಜಿಸಿಕೊಳ್ಳಬೇಕು. ಒಮ್ಮೆಯೇ ಕಲಿಯುವೆ, ಗಳಿಸುವೆ ಎಂದು ಹೋದರೆ ಪ್ರಪಾತಕ್ಕೆ ಬೀಳಬಹುದು.

* ನಮಗಿಂತ ಮುಂದೆ ಇದ್ದವರ, ನಮಗಿಂತ ಹಿಂದೆ ಇದ್ದವರ ಕುರಿತಾಗಿ ಆಲೋಚಿಸುವುದನ್ನು ಬಿಡಬೇಕು. ಕಷ್ಟ-ಸುಖ ಎರಡರಲ್ಲೂ ನಮ್ಮ ಜೊತೆಗಿರುವವರು, 'ನಾನಿದ್ದೇನೆ ಹೆದರದಿರಿ' ಎಂದು ದು:ಖದ ಸಮಯದಲ್ಲಿ ಬಂದು ನಾಲ್ಕು ಸಾಂತ್ವನದ ಮಾತುಗಳನ್ನು ಹೇಳುವವರ ಬಗ್ಗೆ ಮಾತ್ರ ಆಲೋಚಿಸಬೇಕು.

* ಒಂದು ಹಂತಕ್ಕೆ ತಲುಪಿದ ಮೇಲೆ ನಮ್ಮಅನ್ನವನ್ನು ನಾವೇ ಸಂಪಾದಿಸಬೇಕು. ಇತರರ ಹಂಗಿಗೊಳಪಡಬಾರದು. ಸ್ವಯಂ ದುಡಿಮೆಯಿಂದ ಸಂತಸ, ಚೈತನ್ಯ, ಆರೋಗ್ಯ, ನೆಮ್ಮದಿ ಲಭಿಸುವುದು. ನಾವು ಕೈಗೊಳ್ಳುವ ಪ್ರತಿಯೊಂದು ಕೆಲಸಕಾರ್ಯಗಳೂ ವ್ರತಕ್ಕೆ ಸಮ. ಅಂದರೆ ಶ್ರದ್ಧೆ, ಏಕಾಗ್ರತೆ, ನಂಬಿಕೆ, ವಿಶ್ವಾಸ ಮುಖ್ಯ.

* ಮಲ್ಲಿಗೆ ಹೂವೆಂದರೆ ಹೆಂಗಳೆಯರಿಗೆ ತುಂಬಾ ಇಷ್ಟ. ದೇವರ ಮುಡಿಗೇರಿದರೆ ನೋಡುವವರ ಕಣ್ಣಿಗೆ ಹಬ್ಬ, ಧನ್ಯತಾಭಾವ. ಮದುವೆ, ಪೂಜೆ ಶುಭಸಮಾರಂಭಗಳಿಗೆ ಮಲ್ಲಿಗೆ ಬೇಕೇ ಬೇಕು. ನಯ ನಾಜೂಕಿನ ಮನಸ್ಸಿನ ಹೃದಯವಂತರನ್ನು ಮಲ್ಲಿಗೆಯ ದಳಗಳಿಗೆ ಹೋಲಿಸುವುದಿದೆ. 

ಕೋನಾಮ "ಉಷ್ಣೋದಕೇನ ನವಮಾಲಿಕಾಂ ಸಿಂಚತಿ" ಬಹಳ ಅಂದ ಚಂದದಿಂದ, ಸುವಾಸನಾಯುಕ್ತ ಮಲ್ಲಿಗೆಯ ಬಳ್ಳಿಯ ಮೇಲೆ ಯಾರಾದರೂ ಬಿಸಿನೀರನ್ನು ಸಿಂಪಡಿಸುತ್ತಾರೆಯೇ? ಇಲ್ಲವಲ್ಲ.ಅದೇ ರೀತಿ ನಯನಾಜೂಕಿನ ಮನಸ್ಸಿನವರಿಗೆ ಯಾವತ್ತೂ ನೋವು, ಹಿಂಸೆ, ಕಷ್ಟ ಕೊಡಬಾರದು. ಅವರ ಮನದ ಭಾವನೆಗಳನರಿತು ವ್ಯವಹರಿಸಬೇಕು. ಇದು ಮನುಷ್ಯಧರ್ಮ ಸಹ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ