ಒಂದು ಒಳ್ಳೆಯ ನುಡಿ - 210

* 'ಹೆಣ್ಣಿನ ಮನಸ್ಸನ್ನು ಅರಿಯಲಾಗದು' ಸಾಮಾನ್ಯವಾಗಿ ಹೇಳುವ ಮಾತು. ಆಕೆಯ ಅಂತರಂಗವನ್ನು ಅರ್ಥೈಸಿಕೊಳ್ಳುವವರು ಬೆರಳೆಣಿಕೆಯ ಮಂದಿ ಮಾತ್ರ. ಆಕೆ ಎಲ್ಲವನ್ನೂ, ಎಲ್ಲರಲ್ಲಿಯೂ ಹೇಳಿಕೊಳ್ಳಲಾರಳು. ಅದು ಸಾಧುವೂ ಅಲ್ಲ. ಮನೆಯ ಗೌಪ್ಯತೆಯನ್ನು ಬೀದಿರಂಪ ಮಾಡಬಾರದು. ಕ್ಷಮಯಾಧರಿತ್ರಿಯಾಗಿ, ಸಹನೆಯಿಂದ ವರ್ತಿಸುವುದು ಆಕೆಗೂ, ಮನೆತನಕ್ಕೂ ಕ್ಷೇಮ. ಮನೆಯ ಸದಸ್ಯರು ಜೊತೆಗೂಡಿ ಸಹಕರಿಸಿದರೆ ಬಾಳು ನಂದನ.
* ಮನೆಯಂಗಳದಿ ಹೆಣ್ಣು ಮಗು ಓಡಾಡುತ್ತಿದ್ದರೆ ಹೆತ್ತವರಿಗೆ ಸಂತೋಷ, ಆನಂದ, ಬದುಕು ಸುಂದರ. ಹೆಣ್ಣು ದೇವತಾ ಸ್ವರೂಪಿ. ಎರಡು ಮನೆಗಳ ಬೆಳಗುವ ನಂದಾದೀಪ. ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮೌಲ್ಯಗಳ ನೀಡಿ, ಆರೋಗ್ಯವಾದ ಬೆಳವಣಿಗೆಗೆ ಕಾರಣರಾಗೋಣ. ಆಕೆಯ ರಕ್ಷಣೆ ಎಲ್ಲರ ಹೊಣೆ.
* ಹೆಣ್ಣು ಮಗಳ ಸ್ವಾಭಿಮಾನವನ್ನು ಕೆಣಕುವುದು ಎಂದರೆ ಕಷ್ಟಗಳನ್ನು ಮೈಮೇಲೆ ಎಳೆದು ಹಾಕಿಕೊಂಡಂತೆ. ಸ್ವಾಭಿಮಾನ ಆಕೆಗೆ ಕೋಟಿ ಹೊನ್ನಿಗಿಂತಲೂ ಮಿಗಿಲು. ಆತ್ಮಾಭಿಮಾನ ಮತ್ತು ಶೀಲವನ್ನು ಕಾಪಿಡುವುದು ಪ್ರತಿಯೋರ್ವ ಹೆಣ್ಣು ಮಗಳ ಆದ್ಯ ಕರ್ತವ್ಯ. ಮನೆ, ಸಮಾಜ, ಪರಿಸರ ಇದಕ್ಕೆ ಪೂರಕ ವಾತಾವರಣ ಕಲ್ಪಿಸಿ ಸಹಕರಿಸಬೇಕು. ಅದೇ ಆಕೆಗೆ ರಕ್ಷಣಾಬೇಲಿ.
* 'ಮಹಿಳೆಯರ ದಿನ' ಒಂದು ದಿನ ಸಾಕೇ? ಮಹಿಳೆ ಪುರುಷ ಇಬ್ಬರಿದ್ದರೆ ಮಾತ್ರ ಸಂಸಾರ, ಕುಟುಂಬ, ನೆಮ್ಮದಿ. ಗಾಡಿಯ ಎರಡು ಚಕ್ರಗಳಿದ್ದಂತೆ, ಒಂದು ಚಕ್ರದ ಕೀಲಿ ತಪ್ಪಿದರೂ ಗಾಡಿ ವಾಲಬಹುದು. ರಸ್ತೆಯ ಮೇಲೆ ಚಲಿಸದು. ಮನೆಯ ಮಹಿಳೆಯರಿಗೆ ಪ್ರೀತಿ, ಗೌರವ, ರಕ್ಷಣೆ ಕೊಡಬೇಕಾದ್ದು ನಮ್ಮ ಧರ್ಮ. ಮನೆಯ ಚಕ್ರಗಳು ಓರೆಯಾಗದಂತೆ ಸಮಸ್ಥಿತಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಇಬ್ಬರ ಕೈಯಲ್ಲೂ ಇದೆ. ಮಹಿಳೆಯ ಅವಶ್ಯಕತೆ ಮತ್ತು ಮಾನವನ್ನು ಅರ್ಥೈಸಿ, ಘಾಸಿಯಾಗದಂತೆ ವ್ಯವಹರಿಸೋಣ. ಇಲ್ಲಿ ಯಾರು ಯಾರನ್ನೂ ದೂರುವುದು ಸರಿಯಲ್ಲ. ಹೊಂದಾಣಿಕೆಯ ಪಾಯ ಗಟ್ಟಿಯಾಗಿರಬೇಕು. ಅದರ ಮೇಲೆ ಬದುಕು ನಿಂತಿರಬೇಕು.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ