ಒಂದು ಒಳ್ಳೆಯ ನುಡಿ (223) - ಬೇಸಿಗೆ ರಜೆ

ಒಂದು ಒಳ್ಳೆಯ ನುಡಿ (223) - ಬೇಸಿಗೆ ರಜೆ

ಬೇಸಿಗೆ ರಜೆ ಸಿಕ್ಕರೆ ಸಾಕು, ಬೇಸಿಗೆ ಶಿಬಿರ, ಪ್ರವಾಸ, ಅಜ್ಜಿಮನೆ, ನೆಂಟರ ಮನೆ, ಮದುವೆ. ಹೋದಲ್ಲೆಲ್ಲಾ ಒಂದಷ್ಟು ಹೊಸ ಮುಖಗಳ ಪರಿಚಯ, ಹಳೆಯ ಸ್ನೇಹಿತರ ಪಟ್ಟಿಗೆ ಹೊಸ ಸ್ನೇಹಿತರ ಸೇರ್ಪಡೆ. ನಾವು ಸಣ್ಣವರಿರುವಾಗ ಎಲ್ಲರಿಗೂ ಅಜ್ಜಿ ಮನೆ ಇತ್ತು. ಈಗ ಯಾರಿಗೂ ಅಜ್ಜಿ ಮನೆ ಇಲ್ಲ. ತೋಟ, ಗದ್ದೆ ಯಾವುದೂ ಇಲ್ಲ. ಬೆಂಕಿ ಪೆಟ್ಟಿಗೆಗಳನ್ನು ಪೇರಿಸಿಟ್ಟಂತೆ ಕಾಣುವ ಫ್ಲಾಟ್ ಗಳಲ್ಲಿ ವಾಸ. ನೆರೆಮನೆಯವರ ಪರಿಚಯ ಸಹಾ ಇರುವುದಿಲ್ಲ. 

ಯಾವುದೂ ಇಲ್ಲವಾದರೆ ದಿನಾ ಆಡಲು ಹೋಗುತ್ತಿದ್ದ ಅದೇ ಮೈದಾನ, ಅಮ್ಮನ ಅದೇ ಬೈಗುಳ, ಅಪ್ಪನ ಅದೇ ಕೋಪ. ಬೇಸಿಗೆಯ ಮಧ್ಯದಲ್ಲಿ ಗುಡುಗು ಮಿಂಚು ಸಮೇತ ಮಳೆ, ಒಮ್ಮೊಮ್ಮೆ ಆಲೀಕಲ್ಲಿನ ಮಳೆ. ಹಾಗೋ ಹೀಗೋ ರಜೆ ಮುಗಿದದ್ದೇ ಗೊತ್ತಾಗುತ್ತಿರಲಿಲ್ಲ. ಯಾವುದು ಮರೆಯುವಂತಹ ದಿನಗಳಲ್ಲ. ಘಣ ಘಣ ಗಂಟೆಯ ಐಸ್ ಕ್ರೀಂ ಗಾಡಿ ಕಂಡ ಕೂಡಲೇ ಅಮ್ಮನ ಡಬ್ಬಿಯಲ್ಲಿದ್ದ ಚಿಲ್ಲರೆ ಎಗರಿಸಿಕೊಂಡು ಹಾಲಿನ ಐಸ್ ಕ್ರೀಂ ತಿಂದದ್ದು, ಅಂಗಡಿಯಲ್ಲಿ ನಾಲ್ಕು ರೂಪಾಯಿ ಕೊಟ್ಟು ಐದು ರೂಪಾಯಿಯ ಚಾಕೋಲೇಟ್ ತಂದದ್ದು, ಬಸ್ ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದು, ಪಕ್ಕದ ಮನೆಯ ಮಾವಿನ ಹಣ್ಣುಗಳನ್ನು ಕದ್ದು ತಿಂದದ್ದು, ಕಾಲು ಎಟುಕದಿದ್ದರೂ ಸೈಕಲ್ ಬಿಡುವ ಸಾಹಸ ಮಾಡಿದ್ದು, ಮನೆಯಲ್ಲಿ ಇಡೀ ದಿನ ಗಲಾಟೆ ಮಾಡುತ್ತಾ ಮನೆ ಓನರ್ ಬೈಗುಳಗಳೆಲ್ಲಾ ತುಂಬಾ ನೆನಪಲ್ಲಿ ಉಳಿದುಕೊಂಡಿದೆ. ಬರೀ ಚೇಷ್ಟೆಗಳಷ್ಟೇ ನೆನಪಿದೆಯಾ ಅಂತ ಕೇಳ್ಬೇಡಿ. ನಮಗೆ ಅದೇ ನೆನಪಿರುವುದು. 

-ಮಿತ್ರಲೇಖಾ

ಚಿತ್ರ ಕೃಪೆ: ಇಂಟರ್ನೆಟ್ ತಾಣ