ಒಂದು ಒಳ್ಳೆಯ ನುಡಿ - 23

ಒಂದು ಒಳ್ಳೆಯ ನುಡಿ - 23

ಸುಭಾಷಿತ

ಬ್ರಹ್ಮಚರ್ಯಬಲೋಪೇತಂ ಬ್ರಹ್ಮ ವಿದ್ಯಾಬಲಾನ್ವಿತಮ್/

ಸರ್ವದೋಷವಿನಿರ್ಮುಕ್ತಂ ವಂದೇ ತಂ ಬಾಲಶಂಕರಮ್//

ಬಾಲ ಹೇಳಿರೆ ಹುಡುಗ ನೂ, ಬಲದಿಂದ ಕೂಡಿದ ಧೀರವಂತನೂ ಹೇಳುವ ತಾತ್ಪರ್ಯಲ್ಲಿ ಶ್ರೀ ಶಂಕರರು ಇತ್ತಿದ್ದವು. ಬೃಹದಾರಣ್ಯಕೋಪನಿಷತ್ತಿಲಿ *ಪಾಂಡಿತ್ಯಂ ನಿರ್ವಿದ್ಯ ಬಾಲ್ಯೇನ ತಿಷ್ಯಾಸೇತ್*ಎಂದು ಹೇಳಿದ್ದೇ ಶಂಕರರ ಬಾಲ್ಯಾವಸ್ಥೆಯ. ಎರಡೂ ಲೆಕ್ಕಲ್ಲಿ ನೋಡಿರೂ ಅವು ಬಾಲರೇ. ಉಪನೀತರಾದಾಗ ಐದು ವರುಷ, ಯತಿಗಳಪ್ಪಗ ಎಂಟು ವರ್ಷ. ಭಾಷ್ಯಂಗಳ ಬರವಾಗ ಹದಿನಾರು ವರುಷಡ. ಹೀಂಗಾಗಿ ಬಾಲಶಂಕರ ಎನಿಸಿಗೊಂಡವು.

ಬ್ರಹ್ಮಚರ್ಯ ಬಲಂದಲೂ ಅವು ಶ್ರೇಷ್ಠರು ಎನಿಸಿಗೊಂಡವು. ಮಹಾಯೋಗಿಯೂ, ಸಕಲವನ್ನು ಸಿದ್ಧಿಸಿಗೊಂಡ, ಮಹಾತ್ಯಾಗಿಯೂ ಆಗಿತ್ತವು.

ಬ್ರಹ್ಮವಿದ್ಯಾಬಲ ಅತ್ಯಂತ ಕಠಿಣವಾದ್ದು ಮತ್ತು ಅದ್ಭುತವಾದ್ದು. ಆತ್ಮಬಲ ಹೇಳುವದು ಅವರ ಹತ್ರೆ ಪರಿಪೂರ್ಣವಾಗಿತ್ತು. ಧರ್ಮಾಧರ್ಮಂಗಳ ಮೀರಿದ್ದ ಓರ್ವ ಧೀಮಂತರಾಗಿತ್ತಿದ್ದವು. ರಾಗ, ದ್ವೇಷ, ಅಹಂಕಾರ, ಮಮಕಾರ, ಅನೃತ, ಹಿಂಸಾ, ಅನಾಚಾರ, ದುರಾಚಾರ, ಇನ್ನೊಬ್ಬಂಗೆ ಕೇಡು ಬಗವದು, ಬೇರೆಯವರ ಅಪಹಾಸ್ಯ ಮಾಡುವದು, ಆನೇ ಎಲ್ಲಾ ಗೊಂತಿದ್ದವ ಹೇಳುವದು ಯಾವುದೂ ಅವರ ಹತ್ರೆ ಇತ್ತಿದ್ದಿಲ್ಲೆ. ನಿರಾಳ, ನಿರಾಡಂಬರದವು ಆಗಿತ್ತವು. ಶ್ರೀಶಂಕರಾಚಾರ್ಯರು ಶುದ್ಧಾಂತಕರಣದ ಓರ್ವ ಬಾಲಕರೇ ಆಗಿತ್ತವಡ ,ಆ ವಯಸ್ಸಿನಲಿ.

ವಂದೇ ತಂ ಬಾಲಶಂಕರಮ್.

(ವಂದೇ ಶಂಕರ ಸದ್ಗುರುಮ್)

***

ನಮಗೆ  ನಮ್ಮ ಬದುಕಿನ ಹಾದಿಯುದ್ದಕ್ಕೂ ಅನೇಕ ಜನರ ಒಡನಾಟವಾಗುತ್ತದೆ. ಬಹಳಷ್ಟು ಮಂದಿ ಕಣ್ಣೆದುರು ಹಾದು ಹೋಗುವವರು. ಒಂದಷ್ಟು ಮಂದಿ ಸದಾ ನೆನಪಿನಲ್ಲಿ ಉಳಿಯುವವರು. ಇನ್ನಷ್ಟು ಮಂದಿ ಏನೋ ಒಳ್ಳೆಯ ಕೆಲಸಗಳನ್ನು ಮಾಡಿ ನಮ್ಮ ಮನಸ್ಸಿನಲ್ಲಿ ಸ್ಥಾನ ಪಡೆದವರು. ಆದರೆ ಮೋಸವೇ ಮಾಡುವ ಒಂದಷ್ಟು ಜನರಿರುತ್ತಾರೆ. ಅವರಿಗೆ ಸುಳ್ಳು, ಮೋಸ, ವಂಚನೆ ಮಾಡುವುದೆಂದರೆ ನೀರು ಕುಡಿದಷ್ಟು ಸುಲಭ. ನಾವು ಅವರು ಹೇಳುವ ಮಾತುಗಳನ್ನು ಸತ್ಯ ಎಂದು ಬಹಳ ಬೇಗ ನಂಬಿ ಬಿಡುತ್ತೇವೆ. ಆತ ಒಂದು ದಿನ ಸಿಕ್ಕಿ ಬಿದ್ದಾಗ ನಮ್ಮ ಮನಸ್ಸಿಗಾಗುವ ನೋವನ್ನು ನಮಗೆ ತಡೆಯಲಾಗದು. ಇಂಥ ಸುಳ್ಳಿನ,ಮೋಸದ ಬಲೆಯಲ್ಲಿ ಸಿಲುಕಿದೆನಲ್ಲಾ ಅಂಥ ಒದ್ದಾಡುವುದು ನಾವುಗಳು. ಹೇಳಿದವ ರಾಜರೋಷವಾಗಿ ನಮ್ಮ  ಕಣ್ಣೆದುರೇ ಓಡಾಡುತ್ತಿರುತ್ತಾನೆ.ಇವರೇ*ನಯ ವಂಚಕರು*.ಇವರ ಬಲೆಗೆ ಬೀಳುವ ಮೊದಲು ಹತ್ತು ಸಲ ಯೋಚಿಸೋಣ.

ನಮ್ಮಲ್ಲಿರುವ ಎಲ್ಲವನ್ನೂ ದೋಚುವಲ್ಲಿವರೆಗೆ ನಾವು ಕೈಕಟ್ಟಿ ಕುಳಿತರೆ ಮುಂದೆ  ನಮಗೆ ಬದುಕೇ ಬೇಡವೆನಿಸಿ ಅನಾಹುತಕ್ಕೆ ಎಡೆಯಾದೀತು. ಆದಷ್ಟೂ ಇಂಥ ಬಣ್ಣ ಬದಲಿಸುವ ಗೋಸುಂಬೆಗಳಿಂದ ದೂರವಿರೋಣ.

-ರತ್ನಾ ಭಟ್ ತಲಂಜೇರಿ

(ಸಂಗ್ರಹ)

ಚಿತ್ರ: ಅಂತರ್ಜಾಲದಿಂದ ಸಂಗ್ರಹಿತ