ಒಂದು ಒಳ್ಳೆಯ ನುಡಿ - 240

ಒಂದು ಒಳ್ಳೆಯ ನುಡಿ - 240

* ಇಂದಿನ ಸ್ಪರ್ಧಾ ಜಗತ್ತಿನಿಂದ ಮನುಷ್ಯ ಬದಲಾವಣೆಯಾಗುತ್ತಾನೆಯೆನ್ನುವುದು ಕಾಗೆ ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ತನ್ನ ಬುದ್ದಿವಂತಿಕೆಯಿಂದ ಕುಡಿದು ಬಾಯಾರಿಕೆ ತಣಿಸಿಕೊಂಡಿತೆನ್ನುವಷ್ಟು ಸತ್ಯ ! 

* ನನ್ನ ಹೆಜ್ಜೆಯ ಗುರುತುಗಳು ನನ್ನಲ್ಲೇ ಇರಲಿ. ಬೇರೊಬ್ಬರ ಹೆಜ್ಜೆಯ ಗುರುತುಗಳು ನನ್ನ ಹೃದಯದಾಳದಲ್ಲಿರಲಿ !

* ಸೌಜನ್ಯ, ಎಲ್ಲರಲ್ಲೂ ಇರಲಿ ; ಬೇಡ “ಅತೀ ಎನಿಸುವಷ್ಟು “ ! 

* “ಅಹಂ “ತನ್ನನ್ನು ತಾನೇ ನಾಶ ಮಾಡುತ್ತದೆ , “ವಿವೇಕ “ಸತ್ತ ಮೇಲೂ ಹೆಸರನ್ನು ಉಳಿಸುತ್ತದೆ !

* ಭಾರತದ ಈ ನೆಲದಲ್ಲಿ ಜನಸಾಮಾನ್ಯನೇ ಪರಮ ಭ್ರಷ್ಟಾಚಾರಿಯಾಗುತ್ತಿದ್ದಾನೆ. ಮತ್ತೆ ಭ್ರಷ್ಟಾಚಾರವ ಬೇರು ಸಮೇತ ಕಿತ್ತು ತೊಲಗಿಸುತ್ತೇನೆ ಎಂಬುವುದು ಕನಸಿನ ಮಾತು.

* ಭ್ರಷ್ಟಾಚಾರದಲ್ಲಿ ತೆಗೆದುಕೊಳ್ಳುವವನು ಎಷ್ಟು ಮುಖ್ಯ ಆಗುತ್ತಾನೋ ಕೊಡುವವನು ಅದಕ್ಕಿಂತ ಎರಡು ಪಟ್ಟು ಹೆಚ್ಚಿನ ತಪ್ಪಿತಸ್ಥ ಆಗಿರುತ್ತಾನೆ.

* ಈಗಿನ ಕಾಲದಲ್ಲಿ ಮನೆಯಲ್ಲಿ ಮತ್ತು ಹೊರಗೆ ಗಂಡನಾದವನು ಹೆಂಡತಿಯ ಮಾತು ಕೇಳಿಕೊಂಡಿದ್ದರೆ ಸುಖವಾಗಿ ಇರುತ್ತಾನೆ. ಇಲ್ಲದಿದ್ದರೆ ಗುಂಡು ಹಾಕಿಕೊಂಡು ಬೀದಿಯ ಬದಿಯಲ್ಲಿ ಮಲಗಿರುತ್ತಾನೆ.

* ಅನಾವಶ್ಯಕ ಸುಳ್ಳು ವಾದ ಮಾಡುವವರನ್ನು ದೂರವಿಡು. ಯಾಕೆಂದರೆ ಒಳ್ಳೆಯ ಸತ್ಯ ಯಾವತ್ತಿದ್ದರೂ ತಾನಾಗಿಯೇ ಬಂದು ಅಪ್ಪಿಕೊಳ್ಳುತ್ತದೆ.

* ಒಂದು ವಾಕ್ಯ ಪೂರ್ಣಗೊಂಡಾಗ ಪೂರ್ಣ ವಿರಾಮ ಚಿಹ್ನೆಯನ್ನು ಬಳಸುತ್ತೇವೆ. ಹಾಗೆಯೇ ಬದುಕು ಮುಗಿದಾಗ ಸಾವು ನಮ್ಮ ಬಾಳಿಗೇ ಪೂರ್ಣ ವಿರಾಮವನ್ನು ಕೊಡುತ್ತದೆ.

* ಒಳ್ಳೆಯ ಕೆಟ್ಟದರ ನಡುವಿನ ಅಂತರವನ್ನೇ ತಿಳಿಯದ ಮಂದಿಯು ಮಾತನಾಡುವಾಗ ಮೌನವಾಗಿರಬೇಕು.

* ಅಡೆತಡೆಗಳನ್ನು ದಾಟಿ ಮುಂದೆ ಹೋದವನಿಗೆ ಯಾವುದೇ ಅಡ್ಡಿ ಆತಂಕಗಳೂ ,ಮುಜುಗರವೂ ಇರುವುದಿಲ್ಲ. ಇದ್ದರೂ ಅದು ತಾತ್ಕಾಲಿಕವಾಗಿರುತ್ತದೆ.

*  ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇ ಬೇಕು ನಿಜ , ಆದರೆ ಇದರ ನಡುವೆ ಅವನು ಸಮಾಜದಲ್ಲಿ ಸತ್ತಂತೇ ಬದುಕಬಾರದು.

* ಎಲ್ಲವೂ ಶಿವಾರ್ಪಣ, ಕೃಷ್ಣಾರ್ಪಣ ಎಂದವರು ಹಣ ಕಂಡೊಡನೇ ಪಡೆದು ಲಕ್ಷ್ಮೀ ಲಕ್ಷ್ಮೀ ಎನ್ನುತ್ತಲೇ ಜೇಬಿಗಿಳಿಸುತ್ತಾರೆ.

* ಸಶಕ್ತ ಸಮಾಜದಲ್ಲಿ ಸಮಾನತೆಯನ್ನು ಬೋಧಿಸಬೇಕಾದ ಸಾಹಿತ್ಯವು ಇಂದು ಅಸಮಾನತೆಯನ್ನು ಬೋಧಿಸುತ್ತಾ ಅಡಿಗೆ ಬಿದ್ದರೂ ಮೀಸೆ ಮೇಲೆ ಎಂಬಂತೆ ಬಿದ್ದು ಒದ್ದಾಡುತ್ತಿರುವುದು ಸತ್ಯ ಮತ್ತು ದುರಂತ !

* ಹಿಂದೆ ಮಹಾತ್ಮರು ಸತ್ಯ ಬೋಧನೆಯ ಮಾಡುತ್ತಾ ಜಗತ್ತಿಗೆ ಹಿತವನ್ನು ಬಯಸುತ್ತಿದ್ದರು ಈಗ ಹಾಗಲ್ಲ ಸುಳ್ಳನ್ನೇ ಬಂಡವಾಳವನ್ನಾಗಿಸಿ ಮಹಾತ್ಮರೆನಿಸಿಕೊಳ್ಳುತ್ತಿದ್ದಾರೆ.

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ