ಒಂದು ಒಳ್ಳೆಯ ನುಡಿ - 45

ಒಂದು ಒಳ್ಳೆಯ ನುಡಿ - 45

*ಈ ಜಗತ್ತಿನಲ್ಲಿ ಜನರ ಜಡತನ ಹೆಚ್ಚಾಗಿದೆ, ಜಡತನವ ಚಲಿಸುವಂತೆ ಮಾಡಬೇಕು* ಹೇಳುವವರೇ ಹೆಚ್ಚು. ಮೊದಲು ಹೇಳುವವರು ಎಷ್ಟು ಚಲಿಸುತ್ತಾರೆಂದು ನೋಡಬೇಕು. ತಾವು ಸ್ವತಃ ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಪ್ರಪಂಚ ಮುಖಕ್ಕೆ ತೋರಿಸಲಿ. ನಾವು ಸ್ವತಃ ಇಲ್ಲದೆ ಇನ್ನೊಬ್ಬರಿಗೆ ಹೇಳುವ ಯೋಗ್ಯತೆ, ಅರ್ಹತೆ ನಮಗೆಲ್ಲಿದೆ?

ನಮ್ಮನ್ನು ಸದಾ ಒಳ್ಳೆಯ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು, ಇತರರಿಗೂ ದಾರಿದೀಪವಾಗೋಣ. ಅವರ ಬದುಕಿನ ಆಶಾಕಿರಣವಾಗೋಣ. ನಮ್ಮೊಂದಿಗೆ ಇತರರನ್ನು ಬೆಳೆಸಲು, ಬೆಳೆಯಲು ಸಹಕರಿಸೋಣ. ನಾನು ಮಾತ್ರ ಬೆಳೆದರೆ ಸಾಕೆಂಬ ಸಂಕುಚಿತ ಬುದ್ಧಿ ಖಂಡಿತಾ ಬೇಡ.

ನಮಗೆ ಬದುಕಿನಲಿ ಪರಿಪೂರ್ಣರು ಎಂದು ಯಾರೂ ಸಿಗರು. ಒಂದಿಲ್ಲೊಂದು ಕೊರತೆ ಇದ್ದೇ ಇರುತ್ತದೆ. ಒಳ್ಳೆಯವರೇ ಸಿಗಲೆಂದು ಹುಡುಕಾಟ ನಡೆಸುತ್ತಾ ಕುಳಿತರೆ ಕಾಲಹರಣ ಆದೀತು. ಸಿಕ್ಕವರನ್ನೇ ಒಳ್ಳೆಯವರನ್ನಾಗಿ ಪರಿವರ್ತಿಸೋಣ. ಮತ್ತೆ ಎಲ್ಲರೂ ಉತ್ತಮರೇ ಎಂಬುದು ಭ್ರಮೆ, ಕಾಲ್ಪನಿಕ. ಸತ್ಯದ ಹುಡುಕಾಟ ಮಾಡೋಣ.ಎಲ್ಲಿ ಸತ್ಯ ಇದೆಯೋ ಅಲ್ಲಿ ಉಳಿದದ್ದು ನಗಣ್ಯ.

ಸತ್ಯ ಎನ್ನುವುದು ವಾಸ್ತವತೆಯ ದರುಶನ. ಅರಸಬೇಕಷ್ಟೆ. ಪರಿಶ್ರಮ ಪಡಬೇಕು. ನಾವಿದ್ದಲ್ಲಿಗೆ ಸತ್ಯ ಬರಲಾರದು. *ಬೆಳ್ಳಗಿರುವುದೆಲ್ಲ ಹಾಲಲ್ಲ, ಅಲ್ಲಿ ಸುಣ್ಣದ ತಿಳಿನೀರು ಇರಲೂ ಬಹುದು* ಗಾದೆ ಮಾತು. ಇದು ವಾಸ್ತವ ಸಹ. ಎಷ್ಟೋ ಸಲ ನಂಬಿ ಕೆಡುವುದಿದೆ. ಒಬ್ಬರನ್ನೊಬ್ಬರು ಅರಿಯಲು ಬಹಳ ಸಮಯ ಬೇಕು. ಒಂದೆರಡು ದಿನಗಳಲ್ಲಿ ಆಗದು. ಎಷ್ಟು ನಂಬಿಕೆ ಇದ್ದವನಿಂದಲೂ ಮೋಸ ಹೋಗ್ತೇವೆ. *ಮೋಸಮಾಡುವವರು ಇರುವಷ್ಟು ದಿನ ಮೋಸ ಹೋಗ್ತಾನೆ ಇರ್ತೇವೆ* ಇದೇ ಪ್ರಪಂಚ. ಒಬ್ಬರನ್ನು ತುಳಿದೇ ಮೇಲೆ ಬರುವುದು ಅವರ ಜಾಯಮಾನ. ಏನೂ ಮಾಡಲಾಗದು.ನಾವೇ ಜಾಗೃತೆ ಮಾಡಬೇಕು. ಆಯ್ಕೆ ಮಾಡುವಾಗಲೇ ಜಾಗೃತೆ ವಹಿಸಬೇಕು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ