ಒಂದು ಒಳ್ಳೆಯ ನುಡಿ - 5

ಒಂದು ಒಳ್ಳೆಯ ನುಡಿ - 5

ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಶಿರಾ/

ಅನುಗ್ರಹಶ್ಚ ದಾನಂತ ಶೀಲವೇತದ್ವಿದುರ್ಬುದಃ//

ಯಾರಿಗೂ ನೋವಾಗದಂತೆ ಬದುಕಿರಿ ಮಕ್ಕಳೇ --ಇದು ಹೆತ್ತಮ್ಮನ ಮಾತು. ಈ ಮಾತಿನಲ್ಲಿ ಎಷ್ಟು ಶಕ್ತಿ ಅಡಕವಾಗಿದೆ ಎಂದು ಅಳೆಯಲು ಸಾಧ್ಯವಿಲ್ಲ. ಹೆತ್ತವರ ಮಾತನ್ನು ಕಡೆಗಣಿಸಿ ಉದ್ದಾರವಾದವರನ್ನು ನಾವು ಕಂಡದ್ದಿಲ್ಲ.

ಯಾವುದೇ ಜೀವಿಗಳನ್ನು ನೋಯಿಸುವ ಅಧಿಕಾರ ನಮಗಿಲ್ಲ. ಮಾತು, ಮನಸ್ಸು, ಕೃತಿ, ನಡತೆ, ವ್ಯವಹಾರಗಳಿಂದ ಇನ್ನೊಬ್ಬರನ್ನು ಬೇಸರಪಡಿಸದೆ, ನೋವುಗೊಳಿಸದೆ ಇರುವುದೇ ಶೀಲದ ಮೂಲಮಂತ್ರ.

ಓರ್ವ ತಾಯಿ ಎಳವೆಯಿಂದಲೇ ತನ್ನ ಮಗುವಿಗೆ ಇದನ್ನೇ ಹೇಳುತ್ತಾ, ಕಲಿಸುತ್ತಾ ಬರಬೇಕು. ಚುಚ್ಚಿ ಮಾತನಾಡುವುದು, ತೆಗಳಿಕೆ, ಅವಾಚ್ಯ ಪದಗಳು, ಬೈಗುಳ ಇವುಗಳನ್ನು ತಾನೂ ಬಳಸದೆ, ಮಗುವು ಬಳಸದಂತೆ ಜಾಗೃತೆ ವಹಿಸಬೇಕು. ಪ್ರೀತಿಯಿಂದ ತಪ್ಪುಮಾಡಿದಾಗ ತಿದ್ದಿ ಬುದ್ದಿ ಹೇಳುವವಳಾಗಬೇಕು. ಇದರಲ್ಲೇ ತಾಯ್ತನದ ಹಿರಿಮೆ ಗರಿಮೆಗಳನ್ನು ಆಕೆ ಅನುಭವಿಸುವಂತವಳಾಗಬೇಕು. ಸತ್ಸಂಗ ಎನ್ನವುದು ಅತ್ಯಂತ ಶ್ರೇಷ್ಠ. ಶೈಶವ್ಯದಿಂದಲೇ ಇದನ್ನೆಲ್ಲಾ ಮಗುವಲ್ಲಿ ಬಿತ್ತುವ ಮಹತ್ತರ ಹೊಣೆಗಾರಿಕೆ ತಾಯಿಯದು.

ಒಂದು ಸಣ್ಣ ಉದಾಹರಣೆ--ಮಗುವಿಗೆ ಏನಾದರೂ ತಿನ್ನಲು ಕೊಟ್ಟಾಗ ಎಡಗೈ ಚಾಚುತ್ತದೆ. ಆಗ ಒಪ್ಪ ಕೈ, ಬಲಕೈ ನೀಡು ಎನ್ನುತ್ತೇವೆ. ತಕ್ಷಣ ಮಗು ಸಣ್ಣ ಆಲೋಚನೆ ಮಾಡುತ್ತದೆ, ಯಾಕೆ ಅಮ್ಮ ಈ ಕೈ ನೀಡಲು ಹೇಳಿದರು ಎಂದು. ಅದೇ ಕುತೂಹಲ ಮುಂದೆ ಹೋದಂತೆ, ವೈಜ್ಞಾನಿಕವಾಗಿ ಯೋಚಿಸಲು ರಹದಾರಿಯಾಗಬಲ್ಲುದು. ಮುಂದೆ ಆ ಮಗು ದೊಡ್ಡ ವಿಜ್ಞಾನಿಯಾಗಲೂ ಬಹುದು. ಇದರಲ್ಲಿ ತಾಯಿಯ ಪಾತ್ರ ಹಿರಿದು.

ಪಾರ್ಥಸಾರಥಿಯ ಭಾವಚಿತ್ರ ತೋರಿಸಿ, ಬೆಳೆದು ದೊಡ್ಡವನಾದಾಗ, ಇವನಂತಹ ಟಾಂಗಾ ಡ್ರೈವರಾಗು, ಬಾಲಕ ನರೇಂದ್ರನಿಗೆ ಅವನ ತಾಯಿ ಹೇಳಿದ್ದು,ಮುಂದೆ ವಿಶ್ವಮಟ್ಟದಲ್ಲಿಯೇ, ಸ್ವಾಮಿ ವಿವೇಕಾನಂದರು ಗುರುತಿಸಲ್ಪಟ್ಟ ಮಹಾತ್ಮರಾಗಿ ಮೆರೆದರು. ಅವರ ತಾಯಿ ಮಹಾಮಾತೆ ಎನಿಸಿಕೊಂಡರು.

ನಮಗೆ ಜೀವವಿತ್ತ, ಜೀವನವಿತ್ತ ನಮ್ಮ ತಾಯಂದಿರನ್ನು ಗೌರವಿಸೋಣ, ಪ್ರಾಯ ಸಂದ ಕಾಲದಲ್ಲಿ ಬೊಗಸೆಯಷ್ಟಾದರೂ ಪ್ರೀತಿಯನ್ನು ನೀಡೋಣ. ತಾಯಿ ಆ ಭಗವಂತ ಭೂಮಿಗೆ ಕಳುಹಿಸಿದ ಎರಡನೆಯ ದೇವರು ಇಷ್ಟು ನಮ್ಮ ಮನಸ್ಸಿನಲ್ಲಿದ್ದರೆ ಸಾಕು.

-ರತ್ನಾ ಭಟ್ ತಲಂಜೇರಿ

ರೇಖಾ ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು