ಒಂದು ಒಳ್ಳೆಯ ನುಡಿ - 52
‘ಮಾತು ಆಡಿದರೆ ಹೋಯಿತು ; ಮುತ್ತು ಒಡೆದರೆ ಹೋಯಿತು' ಎಂಬುವುದು ಹಳೆಯ ಗಾದೆ ಮಾತು. ಯಾವುದೇ ಸಮಯಕ್ಕೂ ಪ್ರಸ್ತುತವೆನಿಸುವ ಈ ಮಾತು ನಮಗೆ ನಮ್ಮ ಮಾತುಗಳು ಹೇಗೆ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ. ಒಬ್ಬರ ಬಗ್ಗೆ ಮಾತನಾಡುವಾಗ ತುಂಬಾ ಜಾಗೃತೆ ಬೇಕು. ಒಂದು ಮಾತನಾಡಲು ಹತ್ತು ಸಲ ಯೋಚಿಸು ಎನ್ನುತ್ತಿದ್ದರು ನಮ್ಮ ಹಿರಿಯರು. ಮನಸ್ಥಿತಿ, ವಯಸ್ಸು, ತಿಳುವಳಿಕೆ, ಜೀವನಾನುಭವ ಇವುಗಳನ್ನೆಲ್ಲ ಯೋಚಿಸಿ ಮಾತನಾಡುವವರು ಈ ಪ್ರಸಕ್ತ ಕಾಲಘಟ್ಟದಲ್ಲಿ ಬಹಳ ವಿರಳ.
ತಮಗನಿಸಿದ್ದನ್ನು ೧೦೦% ಸರಿ ಅನಿಸಿದ ಮೇಲೆ, ಸತ್ಯವೋ , ಮಿಥ್ಯವೋ ಎಂದು ಆಲೋಚಿಸಿ ಮತ್ತೆ ಹೇಳಿದರೆ ಆ ಹೇಳಿಕೆಗೆ ಒಂದು ನೆಲೆ-ಬೆಲೆ ಇದೆ. ಇಲ್ಲವಾದರೆ ಅಸ್ಥಿರತೆ ಕಾಡಿ, ಗೊಂದಲಕ್ಕೆ ನಾವೇ ದಾರಿ ಮಾಡಿಕೊಟ್ಟ ಹಾಗೆ ಅಲ್ಲವೇ? *ಮೂಲೆಯಲ್ಲಿದ್ದ ಹಾರೆಗುದ್ದಲಿಗಳನ್ನು ತಂದು ಕಾಲಿಗೆ ತೊಡರುವ ಹಾಗೆ ಇಟ್ಟರೆ, ಅದು ತಾಗದೇ ಇರುವುದೇ?
ಮತ್ತೆ ಬಂದದ್ದನ್ನು ಅನುಭವಿಸಬೇಕು, ಆ ತಾಕತ್ತು ಇದ್ದರೆ ಮಾತ್ರ ಹೇಳಿಕೆಗಳನ್ನು ಕೊಡಬಹುದು. ಒಂದೊಂದು ಮಾತೂ ಒಂದೊಂದು ಮುತ್ತಾಗಿ ಹೊರಹೊಮ್ಮಲೆಂಬ ಹಾರೈಕೆ.
ಕೆಲವು ಸಂದರ್ಭಗಳಲ್ಲಿ ಈ ಮಾತಿಗಿಂತ ಮೌನವೇ ಲೇಸು ಅನ್ನಿಸ್ತದೆ. ಅದಕ್ಕೇ ಅಲ್ವಾ ಹಿರಿಯರು ಹೇಳೋದು ‘ಮಾತು ಬೆಳ್ಳಿ ಮೌನ ಬಂಗಾರ' ಎಂದು. ಆದರೆ ಹೇಳಿಕೆ ಕೊಟ್ಟವ ತಾನೇ ಸರಿ ಎಂದು ಬೀಗಿದರೆ ಮತ್ತೆ ಮತ್ತೆ ಅದೇ ತಪ್ಪು ಮಾಡುವ ಸಾಧ್ಯತೆ ಇರಬಹುದು. ಎಲ್ಲಿ ತಪ್ಪು ಹೆಜ್ಜೆ ಇಡ್ತಾರೋ ಅಲ್ಲಿ ಇಡುವಾಗಲೇ ಅದನ್ನು ಖಂಡಿಸದಿದ್ದರೆ, ಅನಾಹುತಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. *ಆಡುವ ಮಾತು ಎಲ್ಲರೂ ಒಪ್ಪುವಂತಿರಲಿ* ಎಂಬ ಆಶಯ .
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ