ಒಂದು ಒಳ್ಳೆಯ ನುಡಿ - 74

ಒಂದು ಒಳ್ಳೆಯ ನುಡಿ - 74

ಸಾಮಾನ್ಯವಾಗಿ ಘಂಟಾನಾದ ಎನ್ನುವುದು ಕಿವಿಗೆ ಕೇಳಿಸಿದಾಗ ನಮಗೆ ಏನೋ ಒಂದು ಅವ್ಯಕ್ತ ಭಾವ ಮೂಡುವುದು ಸಹಜ. ಆ ತರಂಗಗಳ ಲಹರಿಯೇ ಹಾಗಿದೆ. ಅದೇ ರೀತಿ ಓಂಕಾರವು ಸೃಷ್ಟಿ, ಲಯದ ಹಿಂದಿರುವ ಮೂಲಶಕ್ತಿಯಾಗಿದೆ. ಓಂಕಾರವು ಶಕ್ತಿ-ಚೈತನ್ಯ ಮತ್ತು ಸೃಷ್ಟಿಯ ದ್ವಂದ್ವಗಳನ್ನೊಳಗೊಂಡಿದೆ. ಓಂಕಾರದಲ್ಲಿ ಅಚಲ, ಪರಿಪೂರ್ಣ, ನಿರಾಕಾರ, ನಿಶ್ಯಬ್ದ, ಶಾಶ್ವತವಾದ ಶುದ್ಧ ಚೈತನ್ಯ ಆಕಾರ ರಹಿತವಾಗಿ ಅಡಗಿದೆ. ಇದು ಪರಮಾತ್ಮನ ಸ್ವರೂಪವಾದ ಮಾಯೆ ಮತ್ತು ಕರ್ಮ.

ಓಂಕಾರನಾದವೆಂಬ ತರಂಗಗಳು ಒಟ್ಟಾಗಿ ಸ್ಥೂಲ ಸೃಷ್ಟಿಗೆ ಮೂಲವಾಗಿದೆ. ಓಂಕಾರ ಮೂಲದ ಸೃಷ್ಟಿಯಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ, ಸ್ಥೂಲ ಎಂಬ ಮೂರು ಗುಣಗಳಿದ್ದು, ಜೀವ ಜಡ ಜಗತ್ತೆಲ್ಲವೂ ಮೂರು ವಿಶೇಷಗುಣಗಳಿಂದ ಆವೃತ್ತವಾಗಿದೆ.

ಓಂಕಾರ ಎಂಬ ಮಹಾಮಾಯೆಯನ್ನು ಪರಮಾತ್ಮನ ಅನುಗ್ರಹವಿಲ್ಲದೆ ಯಾವ ಆತ್ಮವೂ ದಾಟಿ ಪರಮಪದವನ್ನು ಪಡೆಯಲು ಸಾಧ್ಯವಿಲ್ಲ. ದೇವಮಾಯೆ, ರಾಜಸಿಕ ಮಾಯೆ, ರಾಕ್ಷಸ ಮಾಯೆ ಎಂಬ ಮೂರು ಗುಣಗಳೇ ಸೃಷ್ಟಿಯಲ್ಲಡಗಿದೆ.

ಒಂದು ಭಾರವಾದ ಕಲ್ಲು ಹೇಗೆ ನೀರಿನಲ್ಲಿ ಮುಳುಗುವುದೋ, ಅದೇ ರೀತಿ ರಾಕ್ಷಸೀ ಸ್ವಭಾವದವರು ತಮ್ಮ ಪಾಪಕರ್ಮಗಳಿಂದಾಗಿ ರಾಕ್ಷಸೀಮಾಯೆಗೆ ಒಳಗಾಗುತ್ತಾರೆ. ಒಳ್ಳೆಯ ಕರ್ಮಗಳೊಂದಿಗೆ ಕೆಟ್ಟದನ್ನೂ ಸಹ ಮಾಡುವವರು ರಾಜಸಿಕ ಮಾಯೆಯ ಒಳಗೆ ಬಂಧಿಯಾಗುವರು. ಸಾತ್ವಿಕ ಗುಣದವರು ಧರ್ಮಾನುಸಾರವಾಗಿ ಜೀವನ ನಡೆಸುವರು.

(ಆಕರ ಗ್ರಂಥ: ಧರ್ಮ ಮತ್ತು ಆಚರಣೆ)

ಸಂಗ್ರಹ:ರತ್ನಾ ಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ತಾಣ