ಒಂದು ಒಳ್ಳೆಯ ನುಡಿ - 76
ಉದರ ಪೋಷಣೆಗಾಗಿ ಬೆವರಿಳಿಸಿ ದುಡಿಯೋಣ. ಉದರ ತುಂಬಿದ ಮೇಲೂ ಕಾಲುಚಾಚಿ ಮಲಗದೆ ಕಷ್ಟಪಟ್ಟು ದುಡಿಯುವುದನ್ನು ನಿಲ್ಲಿಸಬಾರದು. ವಿಶ್ರಾಂತಿ ಎಷ್ಟು ಬೇಕೋ ಅಷ್ಟೇ ಪಡೆಯಬೇಕು. ಅತ್ಯಾಸೆ ಬೇಡ. ಗಳಿಸೋಣ-ಸ್ವಲ್ಪ ದಾನ ಮಾಡೋಣ. ನಾಳೆಗಾಗಿ ಕಟ್ಟಿಡುವ ಬದಲು ಮಕ್ಕಳನ್ನು ಗಳಿಸುವ ಹಾಗೆ ತಯಾರು ಮಾಡೋಣ. ಇದು ಹೆತ್ತವರ ಕರ್ತವ್ಯ ಸಹ ಹೌದು. ನಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಜೀವನ ಶಿಕ್ಷಣ ಕಲಿಸಿ, ಸಮಾಜದಲ್ಲಿ ನಾಲ್ಕು ಜನರೊಂದಿಗೆ ಬದುಕಿ ಬಾಳುವುದನ್ನು ಹೇಳಿಕೊಡದಿದ್ದರೆ, ಅವರು ಸಮಾಜ ಕಂಟಕರಾಗಬಹುದು.
ನನ್ನ ಗೆಳತಿಯ ಕಣ್ಣೆದುರು ನಡೆದ ಒಂದು ಘಟನೆಯನ್ನು ನೆನಪಿಸಲೇ ಬೇಕು. ಓರ್ವ ತಾಯಿ ತನ್ನ ಮಗನನ್ನು ನಿತ್ಯವೂ ಶಾಲೆಗೆ ಕರೆತರುತ್ತಿದ್ದರು. ತರಲಿ ಬಿಡಿ, ಇದು ಮಾಮೂಲು. ಆದರೆ ೫ನೇ ತರಗತಿಗೆ ಬಂದ ಮೇಲೂ ಎತ್ತಿಕೊಂಡು ಬರುವುದು, ಅವನ ಕೊಡೆ,ಚೀಲವನ್ನು ತಾನೇ ತೆಗೆದುಕೊಂಡು ಬರುವುದು. ಗೆಳತಿಗೆ ಹೇಳಿ ಹೇಳಿ ಸಾಕಾಯಿತಂತೆ. ಎಷ್ಟೋ ಸಲ ಹೇಳಿದರಂತೆ 'ನಡೆಸಿಕೊಂಡು ಬನ್ನಿ, ಮಗನಿಗೆ ಸ್ವಂತಿಕೆ ಕಲಿಸಿ' ಆ ತಾಯಿ ನನಗೆ ಒಬ್ಬನೇ ಮಗ ಇರುವುದು, ನಾನು ಏನು ಬೇಕಾದರೂ ಮಾಡ್ತೇನೆ, ನಿಮಗೆ ಪಾಠ ಮಾತ್ರ ಮಾಡುವ ಕೆಲಸ ಅಂಥ ಶಿಕ್ಷಕಿಯವರನ್ನು ದಬಾಯಿಸುತ್ತಿದ್ದರಂತೆ. ಅಕಸ್ಮಾತ್ ಒಂದು ಸಲ ನನಗೂ ಆ ತಾಯಿ ಮಗುವಿನ ಭೇಟಿಯಾಯಿತು. ಮಗನಿಗೆ ೧೮ ವರ್ಷ ಆದಾಗ ಈ ತಾಯಿ ಪರಿಸ್ಥಿತಿ ಕಷ್ಟ ಉಂಟು ಎಂದು ಗೆಳತಿಯ ಹತ್ತಿರ ಹೇಳಿದೆ. ಯಾರು ಹೇಳಿದರೂ ಆ ತಾಯಿ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ.
ಒಂದು ದಿನ ಗೆಳತಿಯ ಫೋನ್ ಬಂತು. ನೀವು ಆವತ್ತು ಹೇಳಿದ ಹಾಗೆ ಆಯಿತು. ಆ ಹುಡುಗ ಶಾಲೆಗೂ ಸರಿಯಾಗಿ ಹೋಗುವುದಿಲ್ಲ. ತಾಯಿಯನ್ನು ಕಡೆಗಣಿಸ್ತಾನೆ. ಮೊನ್ನೆ ಒಂದು ದಿನ ಹೆತ್ತತಾಯಿಗೆ ಹೊಡೆದಿದ್ದಾನಂತೆ. ಮುದ್ದಿನ ಫಲ ಅಲ್ಲವೇ?
ಮುದ್ದು ಮಾಡೋಣ, ನಮ್ಮ ಮಕ್ಕಳು, ಆದರೆ ಆ ಮುದ್ದೇ ಮುಂದೆ ಮೃತ್ಯುವಾಗಬಾರದಲ್ಲವೇ? ಸಂಸ್ಕಾರ ಮತ್ತು ಉದರ ಪೋಷಣೆಯ ದಾರಿ ಕಲಿಸಲೇ ಬೇಕಲ್ಲವೇ? ನಾವು ಹೆತ್ತ ಮಕ್ಕಳಿಗೆ ಹಣ ಮಾಡಿ ಪೇರಿಸಲು ಕಲಿಸದೆ, ಹಣ ಸಂಪಾದನೆಗಿರುವ ದಾರಿ, ಕುಟುಂಬವನ್ನು ಸಲಹುವ ಜವಾಬ್ದಾರಿ, ಸಹನೆ, ಗೌರವ, ಸ್ನೇಹ, ಪ್ರೀತಿ, ಸಮಾಜದಲ್ಲಿ ತನ್ನ ಸ್ಥಾನಮಾನಗಳ ಪರಿಧಿ, ಹೊಣೆಗಾರಿಕೆ ಅರಿತು ಜೀವನ,ವ್ಯವಹಾರ ಕಲಿಸೋಣ.
-ರತ್ನಾಭಟ್ ತಲಂಜೇರಿ
ಚಿತ್ರ ಕೃಪೆ; ಇಂಟರ್ನೆಟ್ ತಾಣ