ಒಂದು ಕಾಗದದ ಕ್ರಾಂತಿ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೪

ಒಂದು ಕಾಗದದ ಕ್ರಾಂತಿ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೪

ಬರಹ

(೪೩)

"ಅಮಿ ಟಾಕಾ ಇಕಾನೆ ನೆಬೆನ" ಎಂದ ಕೌಂಟರಿನವ. "ಮತ್ತೆಲ್ಲಿ ಹಣ ಸಂದಾಯ ಮಾಡುವುದು?" ಎಂದು ಇಂಗ್ಲೀಷಿನಲ್ಲಿ ವಿಚಾರಿಸಿದೆ.

"ಯೊನಿವರ್ಸಿಟಿ ಆಫೀಸಿನಲ್ಲಿ ಸಂದಾಯ ಮಾಡಿ ಆ ರಸೀತಿಯನ್ನಿಲ್ಲಿ ಸಂದಾಯ ಮಾಡಿದರೆ ಹಪ್ಪಳದಂತಹ ಪುಸ್ತಕ ನಿಮ್ಮದು" ಎಂದನಾತ ಬೆಂಗಾಲಿಯಲ್ಲಿ.

ಹತ್ತು ರೂಪಾಯಿ ಹಣ ಪಾವತಿಸಲು ಇಪ್ಪತ್ತು ರೂಪಾಯಿ ’ಸೈಕಲ್‍ರಿಕ್ಷಾ ಇಯರ್’ ವ್ಯಯ ಮಾಡಬೇಕಾಯಿತು, ಖಗೋಳತಜ್ಞರ ’ಲೈಟ್ ಇಯರಿನಂತೆ’. ಅಂದರೆ ಶಾಂತಿನಿಕೇತನದಲ್ಲಿ ಏನನ್ನಾದರೂ ವ್ಯಾಪಾರ ಮಾಡಲು ಎಷ್ಟು ದೂರ ಹೋಗಬೇಕೆಂದರೆ, ಅದಕ್ಕೆ ಉತ್ತರ ’ಸೈಕಲ್‍ರಿಕ್ಷಾ ಇಯರ್’. ಅಲ್ಲಿ ಕಾರು, ಬಸ್ಸು, ಸ್ಕೂಟರ‍್ಗಳಿಗೆ ಕ್ಯಾಂಪಸ್ಸಿನಲ್ಲಿ ಆಗ ಪ್ರವೇಶವಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೇ ಒಂದು ಲಡಾಸ್ ಬೈಕ್ ತರುತ್ತಿದ್ದ ಕಲಾವಿದ ಸುಹಾಸ್ ರಾಯ್‍ರ ಮಗ ಸಮಿತ್ ರಾಯ್. ಆತ ಆಗ (೧೯೯೦) ಅಲ್ಲಿನ ಪ್ರೇಮಲೋಕದ ರವಿಚಂದ್ರನ್!

ಕೊನೆಗೂ ಅಲ್ಲಿ ಹೋಗಿ, ಸಾಲಿನಲ್ಲಿ ನಿಂತು, ಬಂದು, ರಸೀತಿ ಸಂದಾಯ ಮಾಡಿ, ಕೇವಲ ಹತ್ತು ರೂಗಳ ಪುಸ್ತಕಗಳ ಹೊರೆಯನ್ನು ಸೈಕಲ್ಲಿಗೇರಿಸಿ, ಸೂಕ್ಷ್ಮವಾಗಿ ನನ್ನ ರೂಮಿಗೆ ಹೊತ್ತುತರುವಾಗ, ಬೆಂಗಳೂರಿನ ಗಣೇಶ ವಿಸರ್ಜನೆಯ ನೆನಪಾಯಿತು. ಸ್ವಲ್ಪ ಅಲುಗಿದರೂ, ನನ್ನ ತಾತನಿಗಿಂತಲೂ ಹಿರಿದಾದ ಹಪ್ಪಳವೆಂಬ ಪುಸ್ತಕಗಳು ಲಟಲಟನೆ ಮುರಿದುಬೀಳುತ್ತಿದ್ದವು. ಕೊನೆಗೆ ಮನೆಗೆ ತಂದ ಇಪ್ಪತ್ತು ವರ್ಷದ ನಂತರವೂ ಪುಸ್ತಕಗಳನ್ನು ತೆರೆಯದೆ ಹಾಗೇ ಇಟ್ಟುಕೊಂಡಿದ್ದೇನೆ--ಶೋಕೇಸಿನಲ್ಲಿ. ಅವು ನನಗೆ ಪುಸ್ತಕಗಳಲ್ಲ, ಆಂಟಿಕ್ ವಸ್ತುಗಳು!

(೪೪)

ಕಾಗದಕ್ಕೂ ಶಾಂತಿನಿಕೇತನಕ್ಕೂ ಅವಿನಾಭಾವ ಸಂಬಂಧವಿದೆ, ಎಂದೆ. ಈ ಹಿಂದೆಯೇ ಹೇಳದಿದ್ದಲ್ಲಿ, ಈಗಿನ ಈ ಹೇಳಿಕೆಯನ್ನೇ ಆಗ ಹೇಳಿದ್ದು ಎಂದುಕೊಂಡುಬಿಡಿ. ದೇವೆಂದ್ರನಾಥ್ ಮತ್ತು ಅವರ ಪುತ್ರ ರವೀಂದ್ರನಾಥ್ ಟಾಗೂರ್ ಬಿರ‍್ಭ್ಹುಮ್ ಎಂಬ ತಾಲ್ಲೂಕಿನಲ್ಲಿ ಶಾಂತಿನಿಕೇತನದ ಚೌಕಟ್ಟು ಹಾಕಿದ್ದು ಸಾವಿರಾರು ಮರಗಳನ್ನು ನೆಡುವುದರ ಮೊಲಕ. ಈಗ ನೂರು ವರ್ಷಗಳ ಆಯಸ್ಸು ತುಂಬಿರುವ, ಅಥವ ತುಂಬಿದ ಆಯಸ್ಸಿನ ಆ ಮರಗಳ ಹಾಗೆಯೇ ಎದೆ ಸೆಟೆದುಕೊಂಡು ನಿಂತಿವೆ. ಅವುಗಳಿಗಿಂತಲೂ ವಯಸ್ಸಿನಲ್ಲಿ ಕಿರಿದಾದ ಬೆಂಗಳೂರಿನ ಮರಗಳ ಬುಡಕ್ಕೆ ಅಕ್ಷರಶಃ ಕೊಡಲಿ ಏಟು ಬಿದ್ದುದ್ದರಿಂದ, ಈ ಮರಗಳು ಸೇಡು ತೀರಿಸಿಕೊಳ್ಳಲೋ ಎಂಬಂತೆ ಬಿರುಗಾಳಿಗೆ ತರಗೆಲೆಗಳಂತೆ ಉದುರುತ್ತಿವೆ. ಆದರೂ ನಿಸರ್ಗದ ಮೇಧಾವಿತನ ಮೆಚ್ಚಲೇಬೇಕು. ಬೀಳುವಾಗಲೂ ಸಹ ಗುರಿಯಿಟ್ಟು ಜನರ, ಜನರಿರುವ ವಾಹನಗಳ ಮೇಲೆ ಬೀಳುತ್ತಿರುವ ಬೆಂಗಳೂರಿನ ಮರಗಳು ಮನುಷ್ಯನ ಸ್ವಾರ್ಥಕ್ಕೆ ನಿಸರ್ಗ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಉಪಾಯ.

ಶಾಂತಿನಿಕೇತನದ ಮರಗಳ ಸ್ಮೃತಿ ಅಚ್ಚಳಿಯದಂತಹದ್ದು. ಅವುಗಳನ್ನು ನೋಡುತ್ತಿದ್ದರು, ಅವುಗಳು ಎನೇನೆಲ್ಲ ನೋಡಿರಬೇಕು ಎಂಬ ಬಗ್ಗೆ ಆಶ್ಚರ್ಯವಾಗುತ್ತದೆಃ

ಗಾಂಧಿ-ಟಾಗೂರರ ವಾಗ್ವಾದ, ಸಂತಾಲಿಗಳ ನಗರೀಕರಣ, ಟಾಗೂರರ ರಬೀಂದರ್ ಸಂಗೀತದ ಕಾರ್ಯಕ್ರಮಗಳ ಮೊಲಕ ವಿಶ್ವಮಾನವ ಕಲ್ಪನೆ, ನಂದಲಾಲ್ ಬೋಸರು ವಿದ್ಯಾರ್ಥಿಗಳಿಗೆ ನಿಸರ್ಗದಲ್ಲೇ ಅದನ್ನು ರಚಿಸುವ ಪಾಠ ಹೇಳಿದ್ದು, ಇಂದಿರಾಗಾಂಧಿ-ಸತ್ಯಜಿತ್ ರೇ-ಕೆ.ಜಿ.ಎಸ್ ಮುಂತಾದವರು ಅಲ್ಲಿ ತಮ್ಮ ಯೌವನಕ ಕಾಲಕ್ಕೆ ವಿದ್ಯಾರ್ಥಿಗಳಾಗಿದ್ದದ್ದು, ಬಿನೋದ್ ಬಿಹಾರಿ ಮುಖರ್ಜಿ ಕುರುಡಾಗಿದ್ದರು ಹೊರಾಂಗಣದಲ್ಲಿ ಭಿತ್ತಿಚಿತ್ರಗಳನ್ನು ರಚಿಸಿದ್ದು, ರಾಮ್‍ಕಿಂಕರ್ ಬೈಜ್ ಉತ್ತರ-ಪೂರ್ವ ಭಾರತದ ರಾಜಕುಮಾರಿಯನ್ನು ಪ್ರೀತಿಸಿ ಆಕೆಯ ಮನೆಯವರು ಆಕೆಯನ್ನು ಕಲಾಭವನದಿಂದ ಹಿಂದಕ್ಕೆ ಕರೆಸಿಕೊಂಡದ್ದು, ’ತೆಭಾಗ’ ಚಳುವಳಿಯ ಕಾಲಕ್ಕೆ ನಕ್ಸಲರು ವಿದ್ಯಾರ್ಥಿಗಳಂತೆ ಇಲ್ಲಿ ಅವಿತುಕೊಂಡದ್ದು, ಇಲ್ಲಿ ವಿದ್ಯಾರ್ಥಿಗಳಾಗಿದ್ದವರು ಅಸ್ಸಾಮಿನ ಉಗ್ರರಾಗಿ ಎಂದೂ ಕಾಣದಂತೆ ಮಾಯವಾದದ್ದು -- ಇವೆಲ್ಲಕ್ಕೂ ಸಾಕ್ಷಿಯಂತೆ ಎದೆಯುಬ್ಬಿಸಿ ನಿಂತಿವೆ ಕಾಗದಗಳನ್ನು ತಯಾರಿಸಲು ಯೋಗ್ಯವಾಗಿರುವ ಆ ಮರಗಳು!

(೪೫)

ಕಲಾಭವನವು ಒಂದು ಕಲಾಶಾಲೆ ಎಂದು ಇಂದು ಪ್ರತೀತಿ. ಆದರೆ ಅದಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ ಅದಕ್ಕೆ. ಮೊಲತಃ ಅದೊಂದು ಐತಿಹಾಸಿಕ ಕಲಾಶಾಲೆ. ಇಂದಿಗೂ ಅದು ಕಲಾಶಾಲೆ-ಸಂಗ್ರಹಾಲಯದ ಚೌಚೌಬಾತ್. ಅಲ್ಲಿ ಪಾಠ ಕೇಳುತ್ತಲೇ, ಯಾವ ಪಾಠದ ಬಗ್ಗೆ ಓದುತ್ತಿದ್ದೇವೋ ಆ ಅಸಲಿ ಕಲಾಕೃತಿಯನ್ನು ತರಗತಿಯ ಹೊರಗೆ ಬಂದ ಕೂಡಲೆ ಅಸಲಿಯಾಗಿ ನೋಡಬಹುದು. ರಾಮನಗರದಲ್ಲಿ ’ಶೋಲೆ’ ಸಿನೆಮವನ್ನು ಕುರಿತು ಪಾಠ ಕೇಳಿದಂತೆ ಇದು!

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಶಾಂತಿನಿಕೇತನ ಪ್ರಾರಂಭವಾದಾಗ, ಭಾರತದಾದ್ಯಂತ ಸ್ವಾತಂತ್ರ್ಯದ ಚಳುವಳಿ ತೀವ್ರವಾಗಿತ್ತು. ಸ್ವದೇಶಿ ಕಲ್ಪನೆಯು ಒಡಮೊಡುತ್ತಿದ್ದ ಕಾಲವದು. ಪರಕೀಯವಾದುದನ್ನು ತ್ಯಜಿಸುವ ಉಮೇದು ಎಲ್ಲರಲ್ಲೂ. ಇಂದು ಕಲ್ಪಿಸಲೂ ಆಗದಂತಹ ನಿಲುವು ಅದುಃ ನೋಕಿಯ ಮೊಬೈಲು ಫಿನ್‍ಲ್ಯಾಂಡಿನದ್ದು, ಎರಿಕ್‍ಸನ್ ಸ್ವೀಡನ್ನಿನದು, ಅವುಗಳನ್ನು ತ್ಯಜಿಸಿ ಎಂದು ಇಂದಿನ ಯುವಕರಿಗೆ ಹೇಳಿನೋಡಿ. ಆ ಮೊಬೈಲುಗಳ ಚಾರ್ಜರುಗಳಿಂದಲೇ ನೇಣುಹಾಕಿಕೊಂಡೇವೆ ಹೊರತು ಮೊಬೈಲನ್ನು ಪರಕೀಯವೆಂಬ ಕಾರಣಕ್ಕೆ ತ್ಯಜಿಸಿಬಿಡುವುದೆ? ಎಂದು ನಿಮಗೆ ಅವರುಗಳು ಎಸ್.ಎಂ.ಎಸ್ ಕಳಿಸುತ್ತಾರೆ, ಫೇಸ್‍ಬುಕ್ಕಿನಲ್ಲಿ ನಿಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಾರೆ.

ಭಾರತದ ವಾಗ್ವಾದಗಳ ತೊಡರು ಇರುವುದು ಇಲ್ಲಿಯೇ. ಪಾಶ್ಚಾತ್ಯವಾದುದನ್ನು ವಿರೋಧಿಸುವವರು, ಅದರಲ್ಲಿಯೊ ಭಿನ್ನ ಎಣಿಸುತ್ತಾರೆಃ ಅಲ್ಲಿನ ಸಂಸ್ಕೃತಿ ನಮಗೆ ಬೇಡ. ಅವರ ತಂತ್ರಜ್ಞಾನ ಇರಲಿ ಎಂದು!

 (೪೬)

ಸ್ವದೇಶಿ ಚಳುವಳಿಗೆ ಕಲಾಭವನದ ಕಲಾವಿದರು ತಮ್ಮದೇ ಕೊಡುಗೆ ನೀಡಬೇಕೆಂದು ಹಠ ತೊಟ್ಟಿದ್ದರು. ಗಾಂಧಿವಾದದ ಪ್ರಭಾವವು ಆಗ ದಟ್ಟವಾಗಿತ್ತು. ಗಾಂಧಿಯ ಸ್ವದೇಶಿವಾದ ಹಾಗೂ ಟಾಗೂರರ ವಿಶ್ವಮಾನವ ಕಲ್ಪನೆಯ ನಡುವೆ ಕೆಲವು ಭಿನ್ನತೆ, ವ್ಯತ್ಯಾಸಗಳಿದ್ದು, ಇವು ಕಲಾವಿದರನ್ನು ಗಾಭರಿಗೊಳಿಸಿದ್ದೂ ಇತ್ತು.

ತೈಲವರ್ಣವೆನ್ನುವುದು ಚಿತ್ರಕಲೆಗೆ ಅನಿವಾರ್ಯ ಎಂಬುದು ಜನಜನಿತವಾದ ನಂಬಿಕೆ. ರವಿವರ್ಮನ ಕಲಾಕೃತಿಗಳು ತೈಲವರ್ಣದ್ದು. ಟಾಗೂರರು ಮೊದಲಿಗೆ ರವಿವರ್ಮನ ಕೃತಿಗಳನ್ನು ಬಹಳ ಮೆಚ್ಚಿಕೊಂಡಿದ್ದರು--ಭಾರತೀಯವಾದ, ಪೌರಾಣಿಕ ವಸ್ತುಗಳನ್ನು ಆತ ಚಿತ್ರಿಸಿದ್ದಾನೆಂದು.

"ಇದೊಂದು ವಿರೋಧಾಭಾಸ ಪ್ರಕ್ಷುಬ್ ದ. ಮೊದಲು ಮೆಚ್ಚಿಕೊಂಡ ಟಾಗೂರ್ ನಂತರ ವರ್ಮನನ್ನು ತೆಗಳಬಾರದಿತ್ತು," ಎಂದೆ.

"ಸ್ವದೇಶೀ ಚಳುವಳಿಯ ಭಾವವು ಅನೇಕರ ವ್ಯಕ್ತಿತ್ವಗಳನ್ನು ಬದಲಿಸಿದ್ದಿದೆ. ವರ್ಮ ತನ್ನ ಚಿತ್ರದ ವಸ್ತುಗಳನ್ನು ಭಾರತೀಯವನ್ನಾಗಿಸಿದರೂ, ಆತ ಬಳಸಿದ ತೈಲವರ್ಣ ಪಾಶ್ಚಾತ್ಯರಿಂದ ಬಂದದ್ದು. ತೈಲವರ್ಣವನ್ನು ನೈಜಚಿತ್ರ ರಚನೆಗೆ ಬಳಸಿದ್ದು ಹದಿಮೊರು-ಹದಿನಾಲ್ಕನೇ ಶತಮಾನದ ವ್ಯಾನ್ ದರ್ ವೈದನ್ ಎಂಬ ಉತ್ತರ ಯುರೋಪಿನ ಕಲಾವಿದ. ಅದಕ್ಕೆ ಮುಂಚೆ ತೈಲವರ್ಣವನ್ನು ಕಲೆಗೆ ಬಳಸುತ್ತಿರಲಿಲ್ಲ! ಮತ್ತು ತೈಲವರ್ಣದಲ್ಲಿ ಇಲ್ಲಿಯವರೆಗೂ ಚಿತ್ರಿತವಾದ ನೈಜ ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದುದು ಕ್ರೈಸ್ತ ಧರ್ಮ, ಬೈಬಲ್ ಹಾಗೂ ಒಡಂಬಡಿಕೆಗಳನ್ನು ಕುರಿತದ್ದು. ಜೊತೆಗೆ ತೈಲವರ್ಣವನ್ನು ಕಲೆಗೆ ಬಳಸುವ ಕಾಲಕ್ಕೂ, ವಸಾಹತೀಕರಣದ ಪ್ರಕ್ರಿಯೆ ಪ್ರಾರಂಭವಾಗುವುದಕ್ಕೂ ಅವಿನಾಭಾವ ಸಂಬಂಧವಿದೆ" ಎಂದು ಉದ್ದುದ್ದ ಭಾಷಣ ಶುರುಮಾಡಿದ ಪ್ರಕ್ಷು.

"ಹೋಲ್ಡ್ ಆನ್ ಮಿಸ್ಟರ್ ಮೋಕ್ಷ. ಕಾಲಿಗೆ ಗಾಯವಾಗಿದೆಯೆಂದು ಕಾಲನ್ನೇ ಕತ್ತರಿಸಿದ್ದಾಯಿತಿದು. ವಸಾಹತು ಹಾಗೂ ಕ್ರೈಸ್ತ ಧರ್ಮಯುದ್ಧದ ಸ್ಮೃತಿಯನ್ನು ಒಳಗೊಂಡಿದೆ ಎಂಬ ಒಂದೇ ಕಾರಣಕ್ಕೆ ತೈಲವರ್ಣವನ್ನು ಕಲಾಭವನವು ತ್ಯಜಿಸಿದ್ದು ಸರಿಯೆ. ಭಾರತೀಯ ಭಿತ್ತಿಚಿತ್ರ ಮಾಧ್ಯಮವನ್ನು ಬಳಸಿ, ಪಾಶ್ಚಾತ್ಯ ಬಿಬ್ಲಿಕಲ್ ವಿಷಯಗಳನ್ನು ರವಿವರ್ಮ ಮೊಡಿಸಿದ್ದರೆ ಆಗ ಅದು ವಸಾಹತುಶಾಹಿಗಳಿಗೆ ವಸಾಹತೀಕೃತರ ತಿರುಗೇಟು ಆಗುತ್ತಿತ್ತೆ?" ಎಂದು ವಾದಕ್ಕಿಳಿದೆ.

ವಾದ ಮುಂದುವರೆಯುತ್ತಲೇ ಇತ್ತು. ಕಾರಣ, ಕಲಾಕೃತಿಯಲ್ಲಿ ಅವರವರ ಭಾವಕ್ಕೆ ತಕ್ಕಂತೆ ’ಅರ್ಥ’ ಹೊರಡಿಸಬಹುದು. ’ಅನುಭವ’ ಮಾತ್ರ ಅಮೊರ್ತವಾಗಿ, ನಗುತ್ತ ದೂರವುಳಿಯುತ್ತದೆ.

ಶಾಂತಿನಿಕೇತನವು ಈ ಮೇಲಿನ ವಾದದಂತೆ, ತೈಲವರ್ಣವನ್ನು ಸಂಪೂರ್ಣ ತ್ಯಜಿಸಿ, ಹೊಸದಾದ, ಏಷ್ಯನ್ ಎನ್ನಿಸಿದ್ದ ಕಲಾಮಾಧ್ಯಮವೊಂದನ್ನು ಹುಡುಕಾಡತೊಡಗಿತ್ತು. ಆಗ ದೊರೆತದ್ದೇ ನೇಪಾಳಿ ಕಾಗದ ಅಥವ ರೈಸ್ ಪೇಪರ್. ಉತ್ತರ ಭಾರತದ ಅಂಚಿನಲ್ಲಿ ಹಣ್ಣುಗಳನ್ನು ಸುತ್ತಲು ಬಳಸುತ್ತಿದ್ದ ಈ ಕಾದ ಅತಿ ತೆಳು, ಆದರೆ ಗಟ್ಟಿ. ಅದರ ಎಳೆ, ಫೈಬರ್ ಅಷ್ಟು ಗಟ್ಟಿ. ಶತಮಾನಗಳ ಕಾಲ ಭಾರತೀಯ ಮಿನಿಯೇಚರ್ ಜಿಕಣಿ ಚಿತ್ರಗಳು ಬಳಸುತ್ತಿದ್ದ ವಾಷ್ ತಂತ್ರವನ್ನು ರೈಸ್ ಕಾಗದದ ಮೇಲೆ ಬಳಸಲಾಗುತ್ತಿತ್ತು.

ರೈಸ್ ಪೇಪರ್ ಎಂಬ ತೆಳು ಹಂದರವನ್ನು ಗಟ್ಟಿ ಕಾಗದದ ಮೇಲೆಯೊ ಅಥವ ರಟ್ಟಿನ ಮೇಲೆಯೋ ಅಂಟಿಸಿ, ಜಲವರ್ಣವನ್ನು ಹಂದರ ಹಂದರವಾಗಿ ಹರಡುವುದು. ಹಲವು ದಿನಗಳ ಕಾಲ ಚಿತ್ರಿಸಿದ ಮೇಲೆ ಅದನ್ನು ಹರಿವ ನೀರಿನಡಿ ಹಿಡಿಯುವುದು! ಮೇಲ್ಪದರದಲ್ಲಿರುವ ವರ್ಣವೆಲ್ಲ ಹರಿದುಹೋದ ಮೇಲೆ, ಉಳಿದ ವರ್ಣ-ಚಿತ್ರವೇ ಗಟ್ಟಿ. ಕಾಳು-ಜೊಳ್ಳನ್ನು ಬೇರ್ಪಡಿಸುವ ಕ್ರಮವಿದು. ಚಿತ್ರ ತಯಾರಾದಾಗ ಬೆಳಕು ಚಿತ್ರದ ಒಳಗಿನಿಂದ ಹೊಮ್ಮಿದಂತಿರುತ್ತದೆಯೇ ಹೊರತು ಛಾಯಾಚಿತ್ರಗಳಲ್ಲಿ ಕಂಡುಬರುವಂತೆ ಸೂರ್ಯನ ಬೆಳಕು ಚೆಲ್ಲುವಂತಹ ದೃಶ್ಯಗಳು ಇಲ್ಲಿಲ್ಲ.

ಕೇವಲ ರೈಸ್ ಕಾಗದದ ಬಳಕೆಯ ಮೊಲಕ, ತೈಲವರ್ಣವೆಂಬ ವಸಾಹತೀಕರಣಕ್ಕೆ ನೂರು ವರ್ಷದ ಹಿಂದೆ ಪ್ರತಿರೋಧ ಒಡ್ಡಿದ್ದು ’ಬೆಂಗಾಲ ಪುನರುಜ್ಜೀವನ ಕಲೆ’ ಎಂಬ ಕಲಾಭವನದ ಕಲಾಚಟುವಟಿಕೆ!