ಒಂದು ಚಿತ್ರ- ಎರಡು ಕವನಗಳು
ಎಮ್ಮೆಯ ಮಜ (ಭಾ.ಷ)
ಚೂಪು ಕಣ್ಣಿನ ಮಹಿಷ ನೋಡಿರಿ
ಕೋಪವಿಲ್ಲದೆ ಕೆಸರು ಕೆಂಪಲಿ
ತಾಪ ಪಡೆಯಲು ಹಾದಿ ಮದ್ಯೆದಿ ಹೊಂಡ ನೀರಿನಲಿ
ಚಾಪು ಮೂಡಿಸಿ ನೋಟ ಬೀರುತ
ಸಾಪು ಹೊಂದುತ ನಗುವ ತೋರುತ
ಕಾಪು ಕುಳಿತಿದೆ ಜನರ ನಡುವಲಿ ಬೆರಗು ಹೆಚ್ಚಿಸುತ||
ತೇಪೆ ಹಾಕುವ ಕೆಲಸ ಕಾಣಿರಿ
ಕೂಪ ಕಂಡಿವೆ ರಸ್ತೆ ನಡುವಲಿ
ಪಾಪಿ ಜನರದು ಕಾಮಗಾರಿಕೆ ಕಳಪೆ ಮಟ್ಟದಿದೆ
ದೀಪ ಬೆಳಗುವ ನಾಡಲಿ ಕೊಳ್ಳಿಯು
ನೀಪ ಹೂವಿನ ಗಂಧ ಹೀರುತ
ಪಾಪ ಮಲಗಿದೆ ಮಹಿಷಿ ಚಂದದಿ ಸಲಿಲ ತಂಪಿನಲಿ||
ಬಿಸಿಲ ಝಳಪಿಗೆ ಕಾವು ಹೆಚ್ಚಿದೆ
ಟಿಸಿಲು ಹೊಡೆಯದ ಮರದ ಕೊಂಬೆಯು
ನಶಿಸಿ ಹೋಗುತ ಮಳೆಯ ಕಾಣದೆ ಬೆಂದು ನರಳುತಿವೆ
ಖುಷಿಯ ವರ್ಷವು ಬಂದು ತಣಿಸುತ
ಫಸಲು ಸಿರಿಯ ಸೊಬಗ ಚೆಲ್ಲಿದೆ
ಬೆಸೆದು ಮಂದಿಯ ಬೆರತು ನಾಡಲಿ ದಣಿವ ನೀಗಿಸಿದೆ|
ಕಾಡು ನಾಶದಿ ಮಳೆಯು ಮಾಯವು
ನಾಡು ಮುಳುಗಿದೆ ವರ್ಷನಿಲ್ಲದೆ
ಕೇಡು ಬಯಸೀ ಸ್ವಾರ್ಥ ಮೆರೆಯುತ ಮನುಜ ನಿಂತಿಹನು
ಮಾಡಿ ಕೃತ್ಯವ ಜೀವ ಬಳಲಿದೆ
ಜಾಡು ಹುಡುಕುತ ಬಂದು ಮಲಗಿದೆ
ಪಾಡು ಹೇಗಿದೆ ದಾರಿಹೋಕರೆ ಕೋಣ ಜಳಕದಲಿ||
ಎಮ್ಮೆ ಮಜವದು ರಾಡಿ ಹೊಂಡವು
ನಮ್ಮ ನೋಡುತ ಸುಖದಿ ಮಲಗಿದೆ
ಘಮ್ಮನೆನುತಲಿ ಪಗಿನ ಗಂಧವ ಹೀರಿ ಕೊಳ್ಳುತಲಿ
ಸುಮ್ಮನಿರದೆಯೆ ಪಥಿಕ ದಾರಿಲಿ
ದಮ್ಮುಹತ್ತುತ ನೀರ ಕುಡಿಯುತ
ಜುಮ್ಮನೆನದೆಯೆ ಜಳಕ ಮಾಡುತ ಬೆಳಕ ಕಾಣುತಲಿ||
-ಅಭಿಜ್ಞಾ ಪಿ ಎಮ್ ಗೌಡ
********
*ಕಳಪೆ ಡಾಮರೀಕರಣ* (ಭಾಮಿನಿ ಷಟ್ಪದಿ)
ಚೂರು ಕಲ್ಲುಗಳೆಲ್ಲವೇಳುತ
ಭಾರಿ ಹೊಂಡವದಾಗಿ ಹೋಗಿದೆ
ನೀರು ತುಂಬಿದ ಗುಂಡಿಯೊಳಗಡೆ ಕೋಣ ಕುಳಿತಿಹುದು
ನೂರು ಮಂದಿಯ ಗಮನ ಸೆಳೆಯುತ
ನೇರ ಮಲಗಿದೆ ನೋಡಿರೆಲ್ಲರು
ತೂರಿ ಬರುತಿದೆ ಸೂರ್ಯ ಕಿರಣವು ನೆತ್ತಿ ಮೇಲಕ್ಕೆ
ಬಂದ ವಾಹನವೆಲ್ಲ ಕೆಸರನು
ಮುಂದೆ ರಾಚಿಸುತೋಡುತಿರುವುದು
ಮಂದಿಯೆಲ್ಲರ ನಿತ್ಯ ಬೈಗುಳ ಕೇಳಿ ಹೋಗುವರು
ಗೊಂದಲದ ಗೂಡಾದ ಮಾರ್ಗದಿ
ಬಂಧಿಯಾಗುವುದೆಷ್ಟೋ ಜೀವಿಯು
ಚಂದದಿಂದಲಿ ನೀರ ಕುಡಿಯಲು ಬಂದು ಬೀಳುವುದು
ನಗರ ಮಧ್ಯದ ರಸ್ತೆಯಿದು ನಿಜ
ಹಗಲು ರಾತ್ರಿಯು ತೆರೆದೆಯಿರುವುದು
ನಗುವುದಳುವುದೊ ಜನರಿಗರಿಯದೆ ಮೂಕರಾಗಿಹರು
ಮೃಗಗಳೆಲ್ಲವು ಬಂದು ಬಿಡುವುದು
ಜಗಳವಾಡದೆ ಜೊತೆಗೆಯಿರುವುದು
ಸಿಗದು ಭರವಸೆಯಿಂದ ಮನುಜರು ದಿನವ ಕಳೆಯುವರು
✍️ಲತಾ ಬನಾರಿ