ಒಂದು ದೂರಾಲೋಚನೆ ಅಥವಾ ದುರಾಲೋಚನೆ...!

ಒಂದು ದೂರಾಲೋಚನೆ ಅಥವಾ ದುರಾಲೋಚನೆ...!

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ತುಂಬಾ ಸಂತೋಷ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಗೆಯೇ ರಾಜ್ಯದಲ್ಲಿ ಮುಂದೆ ಏನಾಗಬಹುದು ಎಂಬ ನಮ್ಮ ಒಂದು ದೂರಾಲೋಚನೆ ಅಥವಾ ದುರಾಲೋಚನೆ.!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ವಿವಿಧ ವಿಮಾನ ನಿಲ್ದಾಣಗಳಿಗೆ ಹಾಲಿ ಅಥವಾ ಮಾಜಿ ರಾಜಕಾರಣಿಗಳ ಹೆಸರನ್ನು ಇಡುತ್ತಾ ಹೋಗುವ ಚಾಳಿ ಪ್ರಾರಂಭವಾದೀತು. ಹೀಗೆ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಈ ರೀತಿಯ ಮಹಾತ್ಮರ ಹೆಸರು ಸಿಕ್ಕೇ ಸಿಗುತ್ತದೆ. ವಿಮಾನ ನಿಲ್ದಾಣ ಇಲ್ಲದಿದ್ದರೆ ರೈಲು ನಿಲ್ದಾಣ ಅಥವಾ ಬಸ್ ನಿಲ್ದಾಣ ಆದರೂ ಆಗಬಹುದು. ಇದು ಅತ್ಯಂತ ಮಹತ್ವದ ನಿರ್ಧಾರವಾಗುತ್ತದೆ. ಏಕೆಂದರೆ ನಮ್ಮ ಮುಂದಿನ ಪೀಳಿಗೆಗೆ ಇವರೇ ಆದರ್ಶವಾಗಬೇಕು ಹಾಗೂ ಜೊತೆಗೆ ಬುದ್ಧ, ಮಹಾವೀರ, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್  ಮುಂತಾದವರೆಲ್ಲಾ ಆ ಮಕ್ಕಳ ಮನಸ್ಸಿನಿಂದ ಅಳಿಸಿ ಹೋಗಬೇಕು. ಏಕೆಂದರೆ ಸಾಧಕರು ಮತ್ತು ಸಾಧನೆ ಎಂಬ ಪರಿಕಲ್ಪನೆ ಬದಲಾಗಿದೆ. ಚಿಂತಕರು ಮತ್ತು ಚಿಂತನೆಯ ಮಾನದಂಡ ಬದಲಾಗಿದೆ. ಯಶಸ್ಸಿನ ಅರ್ಥ ಮತ್ತು ಮಾರ್ಗಗಳು ತುಂಬಾ ತುಂಬಾ ಬದಲಾಗಿದೆ. ಆ ಬದಲಾವಣೆಗಳನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕಲ್ಲವೇ ? ಇಲ್ಲದಿದ್ದರೆ ನಾವು ತಪ್ಪು ಮಾಡಿದಂತೆ ಆಗುತ್ತದೆ.

ಕರ್ನಾಟಕ ಎಂಬ ರಾಜ್ಯ ಕಾಂಗ್ರೆಸ್, ಬಿಜೆಪಿ, ಜನತಾದಳ ಪಕ್ಷಗಳ ಖಾಸಗಿ ಆಸ್ತಿಯಲ್ಲವೇ, ಇಲ್ಲಿನ ಜನ ಆ ಪಕ್ಷಗಳ ನಾಯಕರ ಮನೆಯ ಆಳುಗಳಲ್ಲವೇ, ಆ ನಾಯಕರೇ ತಮ್ಮ ಸ್ವಂತ ತಾತನ ಆಸ್ತಿಗಳನ್ನು ತ್ಯಾಗ ಮಾಡಿ ಇಡೀ ಕುಟುಂಬಗಳನ್ನು ಕರ್ನಾಟಕದ ಸೇವೆ ಮಾಡಲು ತೊಡಗಿಸಿ ಇಂದು ನಮ್ಮನ್ನೆಲ್ಲಾ ಸುಖವಾಗಿ ಇರಿಸಿರುವವರು. ಇದು ಸ್ಪಷ್ಟವಾಗಿ ದೃಢಪಡಬೇಕಾದರೆ ರಾಜಕಾರಣಿಗಳ ಹೆಸರುಗಳನ್ನು ಮತ್ತು ಇನ್ನೂ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಆದಷ್ಟು ಶೀಘ್ರವಾಗಿ ನಾಮಕರಣ ಮಾಡಬೇಕು. ಇಲ್ಲದಿದ್ದರೆ ನಾವೆಲ್ಲರೂ ಇದಕ್ಕಾಗಿ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡೋಣ ಮತ್ತು ಸಾಧ್ಯವಾದರೆ ಪ್ರಾಣ ತ್ಯಾಗ ಮಾಡೋಣ. ದಯವಿಟ್ಟು ಕರ್ನಾಟಕದ ಸ್ವಾಭಿಮಾನಿ ಮತದಾರರು ಯೋಚಿಸಿ ಎಂದು ಉಚಿತ ಸಲಹೆ ಕೊಡುತ್ತಾ...

***

ಇಂದು ವಿಶ್ವ ಪುಸ್ತಕ ದಿನ

ಪುಸ್ತಕಗಳು ನಿಜವಾದ ಜ್ಞಾನದ ಕೇಂದ್ರ ಬಿಂದು. ಆದರೆ ಇಂದು ಆ ಜಾಗವನ್ನು ಇಂಟರ್ ನೆಟ್ + ಯೂಟ್ಯೂಬ್ ಚಾನಲ್ ಗಳು ಆಕ್ರಮಿಸಿವೆ.‌ ಹಿಂದಿನ ಕಾಲದಲ್ಲಿ ಪುಸ್ತಕಗಳು ಒಬ್ಬ ವ್ಯಕ್ತಿಯ ಬದುಕನ್ನೇ ಉತ್ತಮ ಪ್ರಗತಿಯ ಕಡೆ ಬದಲಾಯಿಸಿದ ಅನೇಕ ಘಟನೆಗಳು ಇವೆ. ಈಗ ಅದೇ ಯೂಟ್ಯೂಬ್ ಚಾನಲ್ ಗಳು ಒಬ್ಬ ವ್ಯಕ್ತಿಯ ಬದುಕನ್ನೇ ನಾಶದ ಕಡೆಗೆ ಕರೆದುಕೊಂಡು ಹೋಗುತ್ತಿರುವ ಉದಾಹರಣೆಗಳು ಹೆಚ್ವಾಗುತ್ತಿವೆ.

ಇಂದು ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಪುಸ್ತಕ ಓದುವ ಸಂಸ್ಕೃತಿಯನ್ನು ಮತ್ತೊಮ್ಮೆ ಬೆಳೆಸಬೇಕಾಗಿದೆ. ಅದು ಮನುಷ್ಯರಲ್ಲಿ ಕನಿಷ್ಠ ಮಟ್ಟದ ತಾಳ್ಮೆ ಪ್ರೀತಿ ಸಭ್ಯತೆ ಮಾನವೀಯತೆ ಬೆಳೆಸುತ್ತದೆ. ಅನೇಕ ಸಂಕಷ್ಟದ ಕಾಲದಲ್ಲಿ ಒಳ್ಳೆಯ ಪುಸ್ತಕಗಳು ನಮ್ಮ ಗೆಳೆಯರಂತೆ, ಹಿತೈಷಿಗಳಂತೆ, ಮಾರ್ಗದರ್ಶಕರಂತೆ ಕೆಲಸ ಮಾಡುತ್ತದೆ.

ಪುಸ್ತಕ ಕೊಳ್ಳಲು ಅನುಕೂಲ ಇರುವವರು ಕನಿಷ್ಠ ತಮ್ಮ ಸಂಪಾದನೆಯ ಸಣ್ಣ ಪ್ರಮಾಣದ ಹಣ ಮತ್ತು ತಮ್ಮ ಜೀವನದ ಸ್ವಲ್ಪ ಸಮಯವನ್ನು ಇದಕ್ಕಾಗಿ ವಿನೆಯೋಗಿಸಿದರೆ ಅದು ಈ ಸಮಾಜದ ನಿಜವಾದ ಸ್ವಾಸ್ಥ್ಯ ಕಾಪಾಡಲು ನಾವು ಕೊಡಬಹುದಾದ ಒಂದು ಸಣ್ಣ ಪರೋಕ್ಷ ಕೊಡುಗೆಯಾಗುತ್ತದೆ ಎಂದು ಭಾವಿಸುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಸಾಂದರ್ಬಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ