ಒಂದು ಸಂಜೆ ಹಳ್ಳಿಯಲ್ಲಿ

ಒಂದು ಸಂಜೆ ಹಳ್ಳಿಯಲ್ಲಿ

ಬರಹ

ಮೋಡ ಮುಸುಕಿದ ಸಂಜೆ
ತಂಗಾಳಿಯಾಡುತಿರಲು,
ತಲೆ ಹಾಕುತಿಹವು ತೆಂಗು, ಕಂಗು,
ಮಧ್ಯ ಕುಡಿದ ಮನುಜನಂತೆ
ತೂರಾಡುತಿಹವು.

ದನಗಳೋಡುತಿಹವು ಮನೆಯಡೆಗೆ,
ಕುರಿ ಹಿಂಡು ಹಟ್ಟಿಯಡೆಗೆ,
ದಾರಿಯಲ್ಲೆಲ್ಲ ಧೂಳನ್ನು ತೂರಿ,
ಎಳೆಗರು, ಮರಿಗಳನು ನೆನೆದು
ಒಂದರ ಹಿಂದೊಂದು
ಓಡುತಿಹವು ಹಾರಿ.

ಕಾಳಿಗೋಗಿದ್ದ ಹಕ್ಕಿಗಳು
ಕಾಳನುಂಗಿಕೊಂಡು
ಸಂಜೆ ಮುಗಿಲಿನಮೇಲೆ
ಚಿತ್ತಾರ ಬರೆಯುತ್ತಾ
ಸಂಗೀತವನುಲಿಯುತ್ತಾ
ಮರಳುತಿಹವು ಗೂಡಿಗೆ
ಗುಟುಕನುಣಿಸಿ ಮರಿಗಳಿಗೆ
ತಾವೂ ಮಲಗಲು ಸಂತಸದಿ ಉಂಡು.

ಹೊಲಕೋದ ಮಂದಿ ಹಿಂದಿರುಗುತಿಹರು
ಬಾಳಿನ ಮತ್ತೊಂದು ಹಗಲ ಸವೆಸಿ
ಹೊಸತೇನು ಸಿಗಲಿಲ್ಲ
ಉತ್ಸಾಹಕೆ ಕೊರತೆ ಇವರಲಿಲ್ಲ
ದೇಹದ ದಣಿವನಾರಿಸಿ
ಕೊಳ್ಳಲು, ಹಾಡುನೆಣೆಯುತ್ತ
ನಡೆವರವಸರದಿ ಮಕ್ಕಳನು ಕಾಣಲು
ದಾರಿಯನು ಸವೆಸಿ.

ಕತ್ತಲಾಯಿತು, ದೀಪ ಬೆಳಗಿದವು
ಮನೆ-ಮನೆಗಳಲ್ಲಿ;
ಆಡುತ್ತಿದ್ದವು ಹಸುಮಕ್ಕಳು
ಮನೆಯಂಗಳದಲ್ಲಿ;
ನೋಡುತ್ತ, ಆಗಲೇ ಬಂದಿದ್ದ ಚೆಂದಿರನ
ಬಾನ ಅಂಗಳದಲ್ಲಿ.

ಅಡುಗೆ ಮನೆಯಲ್ಲಿ, ಅಕ್ಕಿ ಬೇಸುತ್ತಿದ್ದಳು
ಅದುವರೆಗೂ ತಾಯಿ.
ಏನೋ ನೆನಪಾಯ್ತು, ಮೇಲೆದ್ದು
ಹೊರನಡೆದು;
ಕೂಗಿ ಕರೆದಳು ಮಕ್ಕಳನು
ಕೊಡಲು ತಾ, ತಂದ ಬಾರೆ ಕಾಯಿ.

ಊರ ಮುಂದಿನ ಜಗುಲಿಯ ಮೇಲೆ
ಹರಟುತ್ತ ಕೂತಿದ್ದರು, ಹಿರಿಯರಾದವರು;
ಮಾತ ಮಧ್ಯದಲಿ ಹೊಗೆ ಸಪ್ಪು ಕುಡಿಯುತ್ತ,
ಆಕಳಿಸುತ್ತ, ಇಲ್ಲ ಕಣ್ ಪಿಳಿಕಿಸುತ್ತ;
ಹರಟೆ ಸಾಗಿತ್ತು, ಮಳೆ ನೀರು
ತಗ್ಗು ಕಂಡಡೆಗೆಲ್ಲ ಹರಿದಹಾಗೆ
ಹರಟೆ ಕೊಚ್ಚುತ್ತ,
ಉಣುವ ಸಮಯವಾದದ್ದೆ ಮರೆತರವರು.

ಉಣಲು ಕರೆ ಬಂತು, ಅವರವರ ಮನೆಯಿಂದ
ಮೇಲದ್ದು, ಅಡಿಯನ್ನು ಕೊಡವಿಕೊಂಡು
ನಡೆದರು ಮನೆಗೆ
ಉಣಲು ತಾವು ಕೊನೆಗೆ.

ಮಕ್ಕಳೊರಗಿದ್ದರು
ಮೂಲೆಗೊಬ್ಬೊಬ್ಬರ ಹಾಗೆ
ಮೂಲೆಯಲಿ ಕಳೆದ ಕಾಲುಮರಿಗಳಹಾಗೆ.

ಊಟವಾಯ್ತು.
ತುಸು ಹೊತ್ತು ನಿನ್ನೆ, ಇಂದು ನಾಳೆಗಳ ನೆನೆದು
ಮಲಗಿದರು ತಾವೂ
ತಾರೆ ತುಂಬಿದ ಹಚ್ಚಡವ ಮೇಲೆಳೆದು.

ಸದ್ದು-ಗದ್ದಲವಿಲ್ಲ
ನಿದ್ದೆ ಹರಡಿತ್ತು
ಊರತುಂಬೆಲ್ಲಾ
ತಿಂಗಳನು, ತಾರೆಯರನು
ನೋಡುವರಾರಿಲ್ಲ
ನೀರವತೆಯು ತುಂಬಿತ್ತು ಅಲ್ಲಲ್ಲಾ
ಬೆಳ್ಲಿ ಚುಕ್ಕಿಯುದಯಿಸುವ
ಮುಂಬೆಳಗಿನಾ ವರೆಗೆ.

ಜಯಪ್ರಕಾಶ ನೇ ಶಿವಕವಿ.