ಒಂದು ಸಿನಿಮಾ ನಟಿಯ ಕಥೆ

ಒಂದು ಸಿನಿಮಾ ನಟಿಯ ಕಥೆ

ಈ ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಬರೆದಿದ್ದಲ್ಲ

 

ನಟ ನಿರ್ಮಾಪಕ ನಿರ್ದೇಶಕ ರೋಹನ್ ಕುಮಾರ್ ಟಿ,ವಿ,ಯ ಮುಂದೆ ಕುಳಿತು ನ್ಯೂಸ್ ಚಾನಲ್ ನಲ್ಲಿ ಬರುತ್ತಿದ್ದ ಸುದ್ದಿಯ ನೋಡುತ್ತಾ ಒಂದು ಕೈಯಲ್ಲಿ ವಿಸ್ಕಿ ತುಂಬಿದ ಗ್ಲಾಸು, ಮತ್ತೊಂದು ಕೈಯಲ್ಲಿ ಸಿಗರೇಟ್ ಇಟ್ಟುಕೊಂಡು ವಿಕೃತ ನಗೆಯ ಬೀರುತ್ತ ಕುಳಿತಿದ್ದಾನೆ. ಚಾನಲ್ ನಲ್ಲಿ ಬರುತ್ತಿದ್ದ ನ್ಯೂಸ್ ನ ಮತ್ತ್ತೊಮ್ಮೆ ನೋಡಿ ವಿಸ್ಕಿಯ ಗುಟುಕೇರಿಸಿ ಮತ್ತೊಮ್ಮೆ ಜೋರಾಗಿ ನಗುತ್ತಿದ್ದಾನೆ. ಅದರಲ್ಲಿ ಬರುತ್ತಿದ್ದ ಸುದ್ದಿ ಹೀಗಿತ್ತು. "ಪ್ರಖ್ಯಾತ ನಟಿ ನೀಲಿಮ ತನ್ನ ಅಪಾರ್ಟ್ಮೆಂಟಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ, ಆತ್ಮಹತ್ಯೆ ಪತ್ರದಲ್ಲಿ ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ" ಚಿತ್ರರಂಗಕ್ಕೆ ತುಂಬಲಾರದ ನಷ್ಟ, ಆಕೆ ನಟಿಸಿದ ಚಿತ್ರಗಳ ತುಣುಕುಗಳು, ಚಿತ್ರರಂಗದ ಅನೇಕರ ಸಂದರ್ಶನ ಇನ್ನು ಏನೇನೋ ಬರುತ್ತಿತ್ತು. ರೋಹನ್ ಕುಮಾರ್ ಇನ್ನೊಂದು ಸಿಪ್ ವಿಸ್ಕಿ ಕುಡಿದು ಟಿ.ವಿ ಆಫ ಮಾಡಿ ಸೋಫಾ ಮೇಲೆ ಮಲಗಿದ..

ನೀಲಿಮಾ ಒಂದು ಮಧ್ಯಮ ವರ್ಗ ಕುಟುಂಬದ ಹುಡುಗಿ. ಬುದ್ಧಿವಂತೆ, ಆಕೆಯ ರೂಪಿಸುವಾಗ ದೇವರು ವಿಶೇಷ ಕಾಳಜಿ ತೆಗೆದುಕೊಂಡು ಸೃಷ್ಟಿಸಿದಂತಿದ್ದಳು. ಆಕೆಯನ್ನು ಕಂಡರೆ ಹೆಣ್ಣೇ ನಾಚುವಂತ ಸೌಂದರ್ಯ. ಮನೆಯ ಆರ್ಥಿಕ ಸಮಸ್ಯೆಯಿಂದ ಹೆಚ್ಚು ಓದಲಾಗದೆ ಬಿ.ಕಾಂ ತನಕ ಓದಿಕೊಂದಿದ್ದಳು. ನೀಲಿಮಾಗೆ ಚಿಕ್ಕಂದಿನಿಂದಲೂ ಸಿನಿಮಾ, ಕಿರುತೆರೆ ಎಂದರೆ ವಿಪರೀತ ಆಸಕ್ತಿ. ಯಾವ ಸಿನಿಮಾ ನೋಡಿದರೂ ಆ ಸಿನೆಮಾದ ನಾಯಕಿಯಲ್ಲಿ ತನ್ನನ್ನು ಊಹೆ ಮಾಡಿಕೊಂಡು ಖುಷಿ ಪಡುತ್ತಿದ್ದಳು. ಬೆಳೆಯುತ್ತ ಬೆಳೆಯುತ್ತ ಆ ಆಸೆ ಇಮ್ಮಡಿಯಾಗಿ ತಾನು ಕೂಡ ಕಿರುತೆರೆ, ಸಿನೆಮ ಗಳಲ್ಲಿ ನಟಿಸಬೇಕೆಂಬ ಆಸೆ ಉಂಟಾಯಿತು. ಮನೆಯಲ್ಲಿ ಒಮ್ಮೆ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ತಾಯಿ ತಂದೆ ಇಬ್ಬರಿಂದಲೂ ಬೈಸಿಕೊಂಡಿದ್ದಳು. ನೀಲಿಮ ತಂದೆಗಂತೂ ಸಿನೆಮಾ ಕಂಡರೆ ಆಗುತ್ತಿರಲಿಲ್ಲ. ನಮ್ಮ ಮನೆ, ಗೌರವ ಸಂಪ್ರದಾಯಗಳನ್ನು ಹಾಳು ಮಾಡಬೇಕೆಂದುಕೊಂಡಿದ್ದೀಯ ನೀನು. ಸಿನೆಮಾನು ಬೇಡ ಏನೂ ಬೇಡ ಸುಮ್ಮನೆ ಮನೆಯಲ್ಲಿ ಬಿದ್ದಿರು, ಓದು ಮುಗಿದ ಕೂಡಲೇ ಮದುವೆ ಮಾಡಿಬಿಡುತ್ತೇವೆ ಎಂದಿದ್ದರು. ನೀಲಿಮಾ ಬಹಳ ನೊಂದಿದ್ದಳು.ಅತ್ತಿದ್ದಳು ಆದರೆ ತಂದೆ ತಾಯಿಯ ಮನ ಕರಗಲಿಲ್ಲ.

ಇನ್ನೇನು ಆಗಷ್ಟೇ ನೀಲಿಮ ಓದು ಮುಗಿದಿತ್ತು. ಅವರ ತಂದೆ ವರನ ಹುಡುಕಾಟದಲ್ಲಿದ್ದರು. ನೀಲಿಮಾಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಒಂದು ದಿನ ಹೀಗೆ ಮನೆಯಲ್ಲಿ ಕುಳಿತು ಪೇಪರ್ ಓದುತ್ತಿರುವಾಗ ಅಲ್ಲಿದ್ದ ಒಂದು ಜಾಹೀರಾತು ಇವಳನ್ನು ಆಕರ್ಷಿಸಿತು. ಅದು ಒಂದು ಸಿನೆಮಾಗೆ ಸಂಬಂಧಿಸಿದ ಜಾಹೀರಾತಾಗಿತ್ತು. ಪ್ರಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ರೋಹನ್ ಕುಮಾರ್ ಅವರ ಮುಂದಿನ ಚಿತ್ರ "ನೀನೆ ಬೇಕು" ಗೆ ಹೊಸ ನಾಯಕ, ನಾಯಕಿಯರು ಬೇಕಾಗಿದ್ದರೆ. ತಮ್ಮ ಫೋಟೋದೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರವಾಗಿ ಭೇಟಿ ನೀಡಬಹುದು ಎಂದಿತ್ತು. ಅದನ್ನು ಓದಿದ ನೀಲಿಮಾಗೆ ಒಂದು ಕ್ಷಣ ಆಸೆಯಾದರೂ ಮರುಕ್ಷಣದಲ್ಲೇ ಅವರ ಅಪ್ಪನ ನೆನಪಾಗಿ ಸುಮ್ಮನಾಗಿಬಿಟ್ಟಲು. ಆದರೆ ರಾತ್ರಿ ಪೂರ ನಿದ್ರೆ ಬರಲಿಲ್ಲ. ಇದೆ ಆಲೋಚನೆಯಲ್ಲಿ ಆ ರಾತ್ರಿ ಕಳೆದಳು. ಬೆಳಿಗ್ಗೆ ಎದ್ದು ಸ್ನಾನ ಮಾಡಿ ತನ್ನ ಬಳಿ ಇದ್ದ ಬಟ್ಟೆಗಳಲ್ಲೇ ಉತ್ತಮವಾದುದನ್ನು ಧರಿಸಿ ವ್ಯಾನಿಟಿ ಬ್ಯಾಗಿನಲ್ಲಿ ತನ್ನ ಫೋಟೋ ಒಂದನ್ನು ಇಟ್ಟುಕೊಂಡು ಹೊರಡಲು ಅನುವಾದಳು. ಅಷ್ಟರಲ್ಲಿ ಅವರ ತಾಯಿ ಬಂದು ಏನೇ ಹೀಗೆ ಸಿದ್ಧವಾಗಿ ಎಲ್ಲಿಗೆ ಹೊರಟಿದ್ದಿ ಎಂದರು. ಇಲ್ಲೇ ಸ್ನೇಹಿತರ ಮನೆಯಲ್ಲಿ ಪೂಜೆ ಇದೆ ಅಲ್ಲಿಗೆ ಹೋಗಿ ಬರುತ್ತೀನಿ ಎಂದು ತಾಯಿಯ ಉತ್ತರಕ್ಕೂ ಕಾಯದೆ ಹೊರಟುಬಿಟ್ಟಳು.

ಅಲ್ಲಿಂದ ನೇರ ರೋಹನ್ ಕುಮಾರ್ ಆಫೀಸಿಗೆ ಬಂದಳು. ಅಲ್ಲಿ ಬಹಳಷ್ಟು ಜನ ಜಮಾಯಿಸಿದ್ದರು. ಇವಳ ಸರದಿ ಬರುವ ಹೊತ್ತಿಗೆ ೨ ಗಂಟೆ ಆಗಿತ್ತು. ಖುದ್ದಾಗಿ ರೋಹನ್ ಕುಮಾರ್ ನೆ ಸಂದರ್ಶನ ಮಾಡುತ್ತಿದ್ದನು. ನೀಲಿಮಾ ಒಳಗಡೆ ಬಂದ ತಕ್ಷಣ ರೋಹನ್ ಕುಮಾರ್ ಮೈಯಲ್ಲಿ ಮಿಂಚೊಂದು ಸಂಚರಿಸಿದ ಅನುಭವವಾಯಿತು. ಅವಳ ಸೌಂದರ್ಯ ಕಂಡು ಮೂಕವಿಸ್ಮಿತನಾಗಿಬಿಟ್ಟನು. ಏನೊಂದು ಮಾತನಾಡದೆ ನೀವೇ ನನ್ನ ಸಿನೆಮಾದ ನಾಯಕಿ ಮುಂದಿನ ವಾರದಿಂದಲೇ ಶೂಟಿಂಗ್ ಶುರು ಎಂದು ಹೇಳಿದನು. ಮುಂದಿನ ಶನಿವಾರ ನನಗೊಮ್ಮೆ ಕರೆ ಮಾಡಿ ನಾನು ವಿವರ ತಿಳಿಸುತ್ತೇನೆ ಎಂದ. ನೀಲಿಮಾಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿಯಾಗಿತ್ತು. ಆ ಕ್ಷಣಕ್ಕೆ ತನ್ನ ಮನೆಯ ವಿರೋಧವನ್ನು ಮರೆತೇಬಿಟ್ಟಿದ್ದಳು. ಮನೆಗೆ ಬಂದ ಮೇಲೆ ಅದರ ಅರಿವಾಗಿದ್ದು. ರಾತ್ರಿ ಎಲ್ಲರೂ ಊಟಕ್ಕೆ ಕುಳಿತಿರುವ ವೇಳೆಯಲ್ಲಿ ನಿಧಾನವಾಗಿ ಅಪ್ಪ ನಿಮ್ಮೊಡನೆ ಒಂದು ವಿಷಯ ಹೇಳಬೇಕು. ನಾನು ಒಂದು ಸಿನೆಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದೇನೆ. ಮರುಕ್ಷಣದಲ್ಲಿ ಅವರ ಅಪ್ಪನ ಎಂಜಲು ಕೈ ನೀಲಿಮಾ ಕೆನ್ನೆ ಸವರಿತ್ತು. ನೀಲಿಮಾ ಅಳುತ್ತಾ ಹೋಗಿ ರೂಮಿನ ಬಾಗಿಲು ಹಾಕಿಕೊಂಡು ಬಿಟ್ಟಳು. ಬೆಳಿಗ್ಗೆ ಅವಳನ್ನು ಎಬ್ಬಿಸಲು ಬಂದ ಅವಳ ಅಮ್ಮನಿಗೆ ಅಲ್ಲಿ ಕಂಡಿದ್ದು ಖಾಲಿ ಮಂಚ ಹಾಗೂ ಒಂದು ಪತ್ರ, "ಪ್ರೀತಿಯ ಅಪ್ಪ, ಅಮ್ಮ, ನನ್ನ ಆಸೆಯ ಕೊಲ್ಲಲು ನನಗೆ ಇಷ್ಟವಿಲ್ಲ, ಆದ್ದರಿಂದ ಮನೆ ಬಿಟ್ಟು ಹೋಗುತ್ತಿದ್ದೇನೆ, ನನ್ನ ಹುಡುಕುವ ಪ್ರಯತ್ನ ಮಾಡಬೇಡಿ, ಒಂದು ವೇಳೆ ಹಾಗೇನಾದರೂ ನನ್ನ ಹುಡುಕಿ ಮತ್ತೆ ಮನೆಗೆ ಎಳೆದುಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇಂತಿ ನಿಮ್ಮ ನೀಲಿಮ. ಅಷ್ಟು ಓದುವ ಹೊತ್ತಿಗೆ ನೀಲಿಮಾ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿತ್ತು.

ಅಲ್ಲಿಂದ ಹೊರಟ ನೀಲಿಮಾ ಸೀದಾ ರೋಹನ್ ಕುಮಾರ್ ಗೆ ಫೋನ್ ಮಾಡಿ ನಡೆದ ವಿಷಯವನ್ನೆಲ್ಲ ತಿಳಿಸಿದಳು. ಕೂಡಲೇ ರೋಹನ್ ಕುಮಾರ್ ತಾನು ಉಳಿದುಕೊಂಡಿದ್ದ ಹೋಟೆಲ್ ನ ಅಡ್ರೆಸ್ಸ್ ನೀಡಿ ಅಲ್ಲಿಗೆ ಬರಲು ಹೇಳಿದ. ಅಲ್ಲಿಗೆ ಹೋದ ನೀಲಿಮ ರೋಹನ್ ನನ್ನು ಕಂಡ ಕೂಡಲೇ ಜೋರಾಗಿ ಅಳಲು ಶುರು ಮಾಡಿದಳು. ರೋಹನ್ ಅವಳನ್ನು ಸಮಾಧಾನ ಪಡಿಸಿ ನೋಡಿ ನೀಲಿಮಾ ಜೀವನದಲ್ಲಿ ಮುಂದೆ ಬರಬೇಕಾದರೆ ಇವೆಲ್ಲ ಸಹಜ ಮುಂದೆ ನೀವು ದೊಡ್ಡ ನಟಿಯಾದ ಮೇಲೆ ಅವರೇ ಮತ್ತೆ ನಿಮ್ಮನ್ನು ಕರೆಯುತ್ತಾರೆ ಏನು ಯೋಚನೆ ಮಾಡಬೇಡಿ ಎಂದ. ಆ ಕ್ಷಣಕ್ಕೆ ರೋಹನ್ ಬಗ್ಗೆ ನೀಲಿಮಾಗೆ ಒಂದು ಆತ್ಮೀಯತೆ ಸೃಷ್ಟಿಯಾಗಿಬಿಟ್ಟಿತ್ತು. ಎರಡು ಮೂರು ದಿನ ಕಳೆಯಿತು. ಇನ್ನೇನು ನಾಳೆಯಿಂದ ಶೂಟಿಂಗ್ ನೀಲಿಮಾ ಮಾನಸಿಕವಾಗಿ ಸಿದ್ಧಳಾಗುತ್ತಿದ್ದಾಳೆ. ಅಷ್ಟರಲ್ಲಿ ರೂಮಿನ ಕರೆಗಂಟೆ ಬಾರಿಸಿತು. ಆಚೆ ಹೋಗಿದ್ದ ರೋಹನ್ ಬಂದಿದ್ದ. ಬರುವಾಗಲೇ ಕಂಠ ಪೂರ್ತಿ ಕುಡಿದು ಬಂದಿದ್ದ. ಸೀದಾ ನೀಲಿಮಾಳ ಬಳಿ ಬಂದವನೇ 'ನೀಲಿಮಾ ನಾನು ನಿಮ್ಮನ್ನು ಈ ಸಿನೆಮಾಗೆ ಯಾಕೆ ಆರಿಸಿದೆ ಗೊತ್ತ? ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ, ನಿಮ್ಮನ್ನು ಮದುವೆ ಆಗಬೇಕೆಂದಿದ್ದೇನೆ,ನೀವು ಇಲ್ಲ ಎಂದರೆ ನಾನು ಬದುಕುವುದಿಲ್ಲ ಎಂದು ಏನೇನೋ ಬಡಬಡಿಸುತ್ತಿದ್ದ. ನೀಲಿಮಾ ಗೆ ಆಶ್ಚರ್ಯ ಸಂತೋಷ ಎರಡೂ ಒಟ್ಟಿಗೆ ಆಯಿತು. ಇಷ್ಟು ದೊಡ್ಡ ನಿರ್ಮಾಪಕ,ನಟ, ನಿರ್ದೇಶಕ ನನ್ನನ್ನು ಮದುವೆ ಆಗುವುದು ಎಂದರೆ ಎಂದು ಕೂಡಲೇ ಒಪ್ಪಿಗೆ ಸೂಚಿಸಿಬಿಟ್ಟಲು. ಕುಡಿದ ಅಮಲಿನಲ್ಲಿದ್ದ ರೋಹನ್ ಗೆ ಆ ರಾತ್ರಿ ತನ್ನ ದೇಹವನ್ನೂ ಅರ್ಪಿಸಿಬಿಟ್ಟಳು.

ಮರುದಿನದಿಂದ ಶೂಟಿಂಗ್ ಶುರುವಾಯಿತು, ಕೆಲವು ತಿಂಗಳುಗಳಲ್ಲಿ ಶೂಟಿಂಗ್ ಮುಗಿದು ಸಿನೆಮಾ ತೆರೆಕಂಡು ಅದ್ಭುತ ಯಶಸ್ಸು ಕಂಡಿತು. ದಿನಕಳೆಯುವುದರಲ್ಲಿ ನೀಲಿಮ ಸ್ಟಾರ್ ಆಗಿಬಿಟ್ಟಿದ್ದಳು, ಆ ಖುಷಿಯಲ್ಲಿ ರೋಹನ್ ನೀಲಿಮಾಗೆ ಒಂದು ಐಶಾರಾಮಿ ಅಪಾರ್ಟ್ಮೆಂಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದನು. ಒಂದರ ಮೇಲೊಂದು ಸಿನೆಮಾಗಳು, ದೊಡ್ಡ ದೊಡ್ಡ ನಿರ್ಮಾಪಕರು, ಕೆಲವೇ ದಿನಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯಳಾಗಿಬಿಟ್ಟಲು. ಬಹುಪಾಲು ಸಿನೆಮಾಗಳಲ್ಲಿ ರೋಹನ್ ನೆ ನಾಯಕ, ನಿರ್ದೇಶಕ. ರೋಹನ್ ನೀಲಿಮಾ ಅಪಾರ್ಟ್ಮೆಂಟ್ ನಲ್ಲಿ ಅವಾಗವಾಗ ಒಂದಾಗುತ್ತಿದ್ದರು. ದಿನ ಕಳೆದಂತೆ ಬೇರೆ ಬೇರೆ ನಾಯಕರ ಜೊತೆ ನಟಿಸುವ ಅವಕಾಶಗಳು ಬರುತ್ತಿತ್ತು. ಅವಳು ಪ್ರತಿ ಸಿನೆಮಾ ಮಾಡಬೇಕಾದರೆ ರೋಹನ್ ನ ಅಭಿಪ್ರಾಯ ಕೇಳುತ್ತಿದ್ದಳು.

ಮೊದ ಮೊದಲು ಬೇರೆ ನಾಯಕರ ಜೊತೆ ನಟಿಸಲು ಒಪ್ಪುತ್ತಿದ್ದ ರೋಹನ್ ನಂತರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದ. ತಾನು ಸಹ ನೀಲಿಮಾ ಳನ್ನು ಬಿಟ್ಟು ತನ್ನ ಸಿನೆಮಾದಲ್ಲಿ ಬೇರೆ ನಾಯಕಿಯರಿಗೆ ಅವಕಾಶ ಕೊಡುತ್ತಿದ್ದ. ಕಾರಣ ಕೇಳಿದ ನೀಲಿಮಾ ಮೇಲೆ ಕೋಪಗೊಳ್ಳುತ್ತಿದ್ದ . ಇತ್ತೀಚಿಗೆ ನೀಲಿಮಾ ಅಪಾರ್ಟ್ಮೆಂಟಿನಲ್ಲಿ ಒಬ್ಬಳೇ ಇರುತ್ತಿದ್ದಳು. ರೋಹನ್ ಗೆ ನೀಲಿಮಾಳ ಮೇಲೆ ಮೋಹ ಕಮ್ಮಿಯಾಗಿತ್ತು. ಈ ಮಧ್ಯದಲ್ಲಿ ನೀಲಿಮ ಒಮ್ಮೆ ಮನೆಗೆ ಕರೆ ಮಾಡಿದಾಗ ಅವರ ತಂದೆ ಕರೆ ಸ್ವೀಕರಿಸಿ ನೀನು ನಮ್ಮ ಪಾಲಿಗೆ ಸತ್ತು ಹೋಗಿದ್ದೀಯ ಇನ್ನೆಂದೂ ಕರೆ ಮಾಡಬೇಡ. ನಾವು ಈಗ ನೆಮ್ಮದಿ ಇಂದ ಇದ್ದೇವೆ ಎಂದರು. ಇದರಿಂದ ಮತ್ತಷ್ಟು ಜರ್ಜರಿತ ಳಾಗಿಬಿಟ್ಟಳು. 

ಒಂದು ದಿನ ರಾತ್ರಿ ಶೂಟಿಂಗ್ ಮುಗಿಸಿ ಬಂದ ನೀಲಿಮಾ ನೇರ ರೋಹನ್ ಕುಮಾರ್ ಇದ್ದ ಹೋಟೆಲ್ ಗೆ ಬಂದಳು. ರೋಹನ್ ಅದಾಗಲೇ ಕಂಠ ಪೂರ್ತಿ ಕುಡಿದಿದ್ದ. ನೀಲಿಮಾ ಮಾತು ಶುರು ಮಾಡಿದಳು. ರೋಹನ್ ನನಗೆ ನಿನ್ನ ಬಿಟ್ಟರೆ ಬೇರೆ ಯಾರೂ ಇಲ್ಲ. ನೀನು ನನಗೆ ಹೊಡೆದರೂ ಬೈದರೂ ನೀನು ಬೇಕು. ನಿನ್ನ ಪ್ರೀತಿ ಬೇಕು. ನಿನಗೋಸ್ಕರ ನಾನು ಇನ್ನು ಮುಂದೆ ಸಿನೆಮಾಗಳಲ್ಲಿ ನಟಿಸುವುದನ್ನೇ ಬಿಟ್ಟು ಬಿಡುತ್ತೇನೆ. ದಯವಿಟ್ಟು ನನ್ನ ಕೈ ಬಿಡಬೇಡ. ನನ್ನನ್ನು ಮದುವೆ ಆಗು ಎಂದು ಅಳಲು ಶುರು ಮಾಡಿದಳು. ರೋಹನ್ ಎಲ್ಲ ಕೇಳಿಸಿಕೊಂಡು ಮತ್ತೊಂದು ಪೆಗ್ ಏರಿಸಿಕೊಂಡು ನೋಡು ನೀಲಿಮಾ ನನಗೆ ನಿನ್ನ ಮೇಲಿದ್ದ ಮೋಜು ತೀರಿ ಹೋಯಿತು. ನಿನಗೂ ಅಷ್ಟೇ ನನ್ನ ಮೇಲಿದ್ದ ಪ್ರೀತಿ ಕಮ್ಮಿ ಆಗಿದೆ. ಅದಕ್ಕೆ ಬೇರೆ ಬೇರೆ ನಾಯಕರ ಜೊತೆ ನಟಿಸುತ್ತಿದ್ದೀಯ. ನನ್ನ ಜೊತೆ ಸೇರಿದಂತೆ ಇನ್ನು ಯಾರ್ಯಾರ ಜೊತೆ ಸೇರಿದ್ದೀಯೋ ಯಾರಿಗೆ ಗೊತ್ತು. ಈ ಮಾತು ಕೇಳಿದ ತಕ್ಷಣ ನೀಲಿಮಾಗೆ ಕೋಪ ಉಕ್ಕಿಬಂದು ರೋಹನ್ ಕೆನ್ನೆಗೆ ಎರಡು ಹೊಡೆದು ಅಳುತ್ತ ರೂಮಿನಿಂದ ಹೊರಗೆ ಬಂದು ಬಿಟ್ಟಳು.

ಅಲ್ಲಿಂದ ನೇರ ತನ್ನ ಅಪಾರ್ಟ್ಮೆಂಟ್ ಗೆ ಬಂದ ನೀಲಿಮಗೆ ದಿಕ್ಕೇ ತೋಚದೆ ತನಗೆ ಆದ ಅವಮಾನಕ್ಕೆ ಸಾವೇ ಸರಿಯೆಂದು ನಿರ್ಧರಿಸಿ ಅಲ್ಲಿದ್ದ ಫ್ಯಾನಿಗೆ ತನ್ನ ಸೀರೆಯನ್ನು ಬಿಗಿದು ಪತ್ರವನ್ನು ಬರೆದಿತ್ತು ನೇಣು ಬಿಗಿದುಕೊಂದುಬಿಟ್ಟಲು. ಈ ವಿಷಯ ಮಾಧ್ಯಮದಲ್ಲಿ ಬಂದ ಕೂಡಲೇ ನೀಲಿಮ ಅಪ್ಪ ಅಮ್ಮ ಸ್ಥಳಕ್ಕೆ ಬಂದು ಅವಳ ದೇಹದ ಬಳಿ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಇತ್ತ ರೋಹನ್ ಕುಮಾರ್ ಆ ಸುದ್ದಿ ನೋಡುತ್ತಾ ಮಲಗಿದ್ದಾಗ ಅವನ ಕೋಣೆಯ ಕರೆಗಂಟೆ ಸದ್ದಾಯಿತು. ಬಾಗಿಲು ತೆರೆದು ಒಳಬಂದ ಹುಡುಗಿ ಸರ್ ನಿಮ್ಮ ಜಾಹಿರಾತು ನೋಡಿ ನಾಯಕಿಯಾಗಲು ಬಂದಿದ್ದೇನೆ ನನಗೊಂದು ಅವಕಾಶ ಕೊಡುವಿರಾ ಎಂದಳು...ಮನದಲ್ಲೇ ಇನ್ನೊಬ್ಬ ನೀಲಿಮಾ ಬಂದಳು ಎಂದುಕೊಂಡ ರೋಹನ್ ಕುಮಾರ್