ಒಂದೇ ಗಿಡದಲ್ಲಿ ಅರಳಿದ ವಿಭಿನ್ನ ದಾಸವಾಳಗಳು
ಒಂದೇ ತಾಯಿಯ ಮಕ್ಕಳಾದರೂ ವರ್ಣ, ಗುಣದಲ್ಲಿ ಭೇಧಗಳು ಇರುವುದನ್ನು ನಾವು ಸಮಾಜದಲ್ಲಿ ನೋಡಿರುತ್ತೇವೆ. ಆದರೆ ಹೂವಿನ ಗಿಡಗಳಲ್ಲಿ ಈ ವೈರುಧ್ಯತೆ ಬಹಳ ಕಡಿಮೆ. ಕೆಂಪು ವರ್ಣದ ಐದು ಎಸಳಿನ ದಾಸವಾಳದ ಗಿಡದಲ್ಲಿ ಅದೇ ರೀತಿಯ ಹೂವು ಯಾವಾಗಲೂ ಬಿಡುತ್ತದೆ. ಆದರೆ ಅಪರೂಪದಲ್ಲಿ ಎಸಳಿನ ಬಣ್ಣದಲ್ಲಿ ವ್ಯತ್ಯಾಸಗಳಾಗುವುದಿದೆ. ಕೆಲವು ಗಿಡಗಳಲ್ಲಿ ಹೂವುಗಳ ಆಕಾರ ವಿಭಿನ್ನವಾಗಿದ್ದರೂ ಬಣ್ಣ ಒಂದೇ ಇರುತ್ತದೆ. ಇದೆಲ್ಲವನ್ನು ನೀವು ಗಮನಿಸಬಹುದು.
ಕಳೆದ ಒಂದೆರಡು ವಾರದ ಹಿಂದೆ ನಮ್ಮ ಮನೆಯ ಆವರಣದಲ್ಲಿ ಬೆಳೆದ ದಾಸವಾಳದ ಗಿಡದಲ್ಲಿ ಎರಡು ವಿಭಿನ್ನ ಬಗೆಯ ಹೂವು ಬಿಟ್ಟಿತ್ತು. ಅದು ಬಹು ಎಸಳಿನ (ಡಬಲ್) ತಿಳಿ ಗುಲಾಬಿ ಬಣ್ಣದ ದಾಸವಾಳದ ಹೂವು ಬಿಡುವ ಗಿಡ. ಆದರೆ ಆ ದಿನ ಅದರಲ್ಲಿ ಕೆಂಪು ವರ್ಣದ ಐದು ದಳದ ಹೂವು ಅರಳಿತ್ತು. ಆ ದಿನ ಕೆಂಪು ಬಣ್ಣದ ಐದು ಎಸಳಿನ ಹೂವು ಅರಳಿದ್ದರೆ. ಬಹು ಎಸಳಿನ ತಿಳಿ ಗುಲಾಬಿ ಬಣ್ಣದ ಹೂವು ಅರಳಿರಲಿಲ್ಲ. ಆದರೆ ಬಣ್ಣಗಳನ್ನು ಗಮನವಿಟ್ಟು (ಚಿತ್ರದಲ್ಲಿ) ನೋಡಿದರೆ ನಿಮಗೆ ಅರಳಿದ ಕೆಂಪು ಹೂವು ಮತ್ತು ತಿಳಿ ಗುಲಾಬಿ ಬಣ್ಣದ ಮೊಗ್ಗುಗಳ ನಡುವಿನ ವ್ಯತ್ಯಾಸದ ಅರಿವಾಗುತ್ತದೆ. ಇಂತಹ ಒಂದು ಪ್ರಕೃತಿಯ ಸೋಜಿಗ ಕಾಣ ಸಿಗುವುದು ಬಹಳ ಅಪರೂಪ.