ಒಂದೊಮ್ಮೆ ಚಂದ್ರನು ಮಾಯವಾಗಿಬಿಟ್ಟರೆ...?!

ಒಂದೊಮ್ಮೆ ಚಂದ್ರನು ಮಾಯವಾಗಿಬಿಟ್ಟರೆ...?!

ನೀವೆಂದಾದರೂ ಈ ಬಗ್ಗೆ ಆಲೋಚನೆ ಮಾಡಿರುವಿರಾ? ಭೂಮಿಯ ಏಕೈಕ ಉಪಗ್ರಹ ಚಂದ್ರನು ಕಾಣೆಯಾಗಿಬಿಟ್ಟರೆ ಏನಾಗಬಹುದು? ಸಣ್ಣ ಮಕ್ಕಳಿಗೆ ‘ಚಂದ ಮಾಮ' ನನ್ನು ತೋರಿಸುವುದು ಹೇಗೆ? ಸಂಕಷ್ಟಿ ವೃತ ಮಾಡಿದ ಬಳಿಕ ರಾತ್ರಿ ಚಂದ್ರನನ್ನು ನೋಡದೇ ಭೋಜನ ಮಾಡುವುದು ಹೇಗೆ? ಗ್ರಹಣಗಳೇ ಇಲ್ಲದ ಬಳಿಕ ಭವಿಷ್ಯ ಹೇಳುವವರ ಕಥೆ ಏನು? ಚಂದ್ರನನ್ನೇ ನಂಬಿ ಆಹಾರ ಹುಡುಕುವ ಜೀವಿಗಳ ಕಥೆ ಏನಾದೀತು? ಹೀಗೇ ಸುಮ್ಮನೇ ಒಂದು ಅನಿಸಿಕೆ ಅಷ್ಟೇ…

ಚಂದ್ರನಿಗೂ ಭೂಮಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದ್ದೇ ಇದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿ ಚಂದ್ರನನ್ನು ಹೊಂದಿಕೊಂಡೇ ಇದೆ ಎಂದು ಐಸಾಕ್ ನ್ಯೂಟನ್ ಈ ಮೊದಲೇ ಹೇಳಿದ್ದಾನೆ. ಈ ಕಾರಣದಿಂದ ಚಂದ್ರನು ಮಾಯವಾದರೆ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿಯಲ್ಲಿ ಅಲ್ಲೋಲ ಕಲ್ಲೋಲವಾಗಿ ಗಿರ ಗಿರನೇ ತಿರುಗುವ ಸಾಧ್ಯತೆ ಇದೆ. ದಿನದ ಅವಧಿ ೨೪ ಗಂಟೆಗಳ ಬದಲು ೬ರಿಂದ ೮ ಗಂಟೆಗೆ ಇಳಿಯುವ ಸಾಧ್ಯತೆ ಇದೆ. ಸಮುದ್ರದ ಉಬ್ಬರ-ಇಳಿತಗಳಲ್ಲಿ ಖಂಡಿತವಾಗಿಯೂ ವ್ಯತ್ಯಾಸಗಳಾಗುತ್ತವೆ. ವರ್ಷಕ್ಕೆ ಸಾವಿರಾರು ದಿನಗಳಾಗುತ್ತವೆ. ಸಾಗರಗಳಲ್ಲಿ ಸುಮಾರು ೩ ಲಕ್ಷ ಘನ ಕಿಲೋಮೀಟರ್ ನೀರು ಅಲೆಗಳಾಗಿ ಹಾರಿ ದಡಕ್ಕೆ ಗಬಕ್ಕನೇ ಬಡಿದು ಭೂಭಾಗವನ್ನು ಮುಳುಗಿಸಿ, ಈಗಿನ ಜನಸಂಖ್ಯೆಯ ಸುಮಾರು ೧೪-೧೫ ಕೋಟಿ ಮಂದಿ ಮರಣವನ್ನಪ್ಪುವರು.

ವರ್ಷದಲ್ಲಿ ಕಾಲಕಾಲಕ್ಕೆ ಬದಲಾಗುವ ಋತುಮಾನಗಳು ಅಸ್ತವ್ಯಸ್ತವಾಗುತ್ತವೆ. ಭೂಮಿಯು ತನ್ನ ಅಕ್ಷದಲ್ಲಿ ಸ್ವಲ್ಪ ಮಟ್ಟಿಗೆ ವಾಲಿರುವುದು ನಿಮಗೆ ತಿಳಿದೇ ಇದೆ. ಈ ವಾಲುವಿಕೆಯ ಮೇಲೆ ಚಂದ್ರನ ಆಕರ್ಷಣೆಯ ಶಕ್ತಿಯ ಪ್ರಭಾವವಿದೆ. ಚಂದ್ರನು ಇಲ್ಲದೇ ಹೋದರೆ ಈ ಭೂಮಿಯ ಬಾಗುವಿಕೆಯಲ್ಲಿ ಖಂಡಿತವಾಗಿಯೂ ವ್ಯತ್ಯಾಸವಾಗುತ್ತದೆ. ಅಕ್ಷದ ಬಾಗುವಿಕೆ ೧೦ ಡಿಗ್ರಿ ಇತ್ತ ಅಥವಾ ೪೦ ಡಿಗ್ರಿ ಅತ್ತ ಆಗುವ ಸಾಧ್ಯತೆ ಇದೆ. ಹೀಗಾದಾಗ ಈಗಿರುವ ಋತುಮಾನಗಳು ನಡೆಯುವುದು ಸಾಧ್ಯವಿಲ್ಲ. ಒಂದೋ ಭೀಕರ ಚಳಿ ಅಥವಾ ಬೆಂಕಿಯುಂಡೆಯಂತಿರುವ ಸೆಖೆಯ ವಾತಾವರಣ ಕಂಡು ಬರಬಹುದು. ಈ ಕಾರಣದಿಂದ ಹಕ್ಕಿಗಳ ವಲಸೆ, ಮನುಷ್ಯನ ಪ್ರಯಾಣ ಎಲ್ಲವೂ ನಿಂತು ಹೋಗಬಹುದು.

ಚಂದ್ರನೇ ಇಲ್ಲದ ಮೇಲೆ ಚಂದ್ರಮಾನ ಯುಗಾದಿ ಇರಲಾರದು. ಸೂರ್ಯಗ್ರಹಣ, ಚಂದ್ರಗ್ರಹಣಗಳೆರಡಕ್ಕೂ ಚಂದ್ರನ ಅಗತ್ಯ ಇದ್ದೇ ಇದೆ. ಈ ಕಾರಣದಿಂದ ಇವೆರಡೂ ನಿಂತೇ ಹೋಗಬಹುದು. ಚಂದ್ರ ಲೋಕಕ್ಕೆ ಕಳಿಸಲು ಪ್ರಪಂಚದ ವಿವಿಧ ದೇಶಗಳ ರಾಕೆಟ್ ಆರ್ಭಟ ಇರುವುದಿಲ್ಲ. ಉಪಗ್ರಹಗಳನ್ನು ಉಡ್ದಯಿಸುವ ಪ್ರಮೇಯವೇ ಇರುವುದಿಲ್ಲ. ಚಂದ್ರನೇ ಇರದ ಮೇಲೆ ನಮಗೆ ರಾತ್ರಿ ಬೆಳಕು ಇರುವುದಿಲ್ಲ, ಆಗ ಭೂಮಿಗೆ ಶುಕ್ರ ಗ್ರಹವೇ ಅತ್ಯಂತ ಪ್ರಕಾಶಮಯವಾದ ಆಕಾಶಕಾಯವಾಗಿರುತ್ತಿತ್ತು. 

ಇವೆಲ್ಲಾ ಇಲ್ಲ ಎಂದ ಬಳಿಕ ಸಣ್ಣ ಮಕ್ಕಳಿಗೆ ಊಟ ಮಾಡಿಸಲು ‘ಚಂದಮಾಮ' ತೋರಿಸಲೂ ಸಾಧ್ಯವಿರುತ್ತಿರಲಿಲ್ಲ. (ಈಗಾಗಲೇ ಮೊಬೈಲ್ ಕಾರಣದಿಂದ ಈ ಕ್ರಮ ಬಹುತೇಕ ನಿಂತೇ ಹೋಗಿದೆ). ‘ಚಂದಮಾಮ’ ಎಂಬ ಮಕ್ಕಳ ಪತ್ರಿಕೆಯೂ ಆರಂಭವಾಗುತ್ತಿರಲಿಲ್ಲ. ಭೂಮಿಯಲ್ಲಿ ಏನೂ ಇಲ್ಲ ಎಂದ ಬಳಿಕ ಮಾನವನಾದರೂ ಹೇಗೆ ಬದುಕುತ್ತಿದ್ದ...? ಯೋಚಿಸಬೇಕಾದ ವಿಷಯ. ಹಾಗೆಂದು ತುಂಬಾ ಯೋಚಿಸಿ ತಲೆ ಕೆಡಿಸಿಕೊಳ್ಳಬೇಡಿ. ಚಂದ್ರ ಮಾಯವಾಗುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಆರಾಮದಿಂದಿರಿ !

(ಮಾಹಿತಿ: ಪ್ರೊ.ಕೆ ಎಸ್ ನಟರಾಜ್, ವಿಜ್ಞಾನಿಗಳು)

ಚಿತ್ರ ಕೃಪೆ: ಅಂತರ್ಜಾಲ ತಾಣ