ಒಡ್ಡೋಲಗ

ಒಡ್ಡೋಲಗ

ಕವನ

ಬನ್ನಿರಿ ನೋಡಿರಿ ಆನಂದಿಸಿರಿ

ಪ್ರಚಾರ ಧ್ವನಿವರ್ಧಕದ ವೈಖರಿ|

ಝಗಮಗಿಸುವ ವೇದಿಕೆಯ ನೋಟದೈಸಿರಿ

ಹದಿನಾಲ್ಕು ಲೋಕಗಳ ಸೃಷ್ಟಿಯ ಲಹರಿ||

 

ಚೆಂಡೆ ಮದ್ದಳೆ ತಾಳಗಳ ಮೋದ

ಭಾಗವತರ ಆಲಾಪನೆಯ ನಿನಾದ|

ಸಂಗೀತ ಪೆಟ್ಟಿಗೆಯ ಶ್ರುತಿಯ ನಾದ

ಶುದ್ಧ ಕನ್ನಡಮ್ಮನ ನುಡಿ ವಾದ||

 

ರಾಜ ಕಿರೀಟ ಪುಂಡು ವೇಷಗಳ ಪ್ರವೇಶ

ಭಲ್ಲಿರೇನಯ್ಯ ಒಡ್ಡೋಲಗ  ಗತ್ತು ಗಾಂಭೀರ್ಯ|

ಧೀಂಕಿಟ ಕಿಟತಕ ತರಿಕಿಟ ಕಿಟತಕ ಹೆಜ್ಜೆ

ಕರ್ಣಾನಂದವ ನೀಡುವ  ಗೆಜ್ಜೆ ಸುನಾದ||

 

ಚಕ್ಷುಗಳ ಸೆಳೆಯುವ ವೇಷಭೂಷಣ

ಪದಲಾಲಿತ್ಯದ ಅಪೂರ್ವ ಸಂಗಮ|

ದಪ್ಪ ಮೀಸೆಯ ಹೊತ್ತ ರಕ್ಕಸರ ಗಡಣ

ಕೊಂಬು ಕಹಳೆಯಲಿ ಮಹಿಷನ ಅಬ್ಬರ||

 

ಕುಳಿತಿರಲು ಸಿಂಹಪೀಠದಲಿ ಜೋಡಿ ವೇಷಗಳು

ಕಿವಿಗೊಟ್ಟು ಕೇಳುತಲಿ ಅರ್ಥೈಸುವರು ಹಾಡುಗಳ

ರಂಭೆ ಊರ್ವಶಿಯರ ನಾಚಿಸುವ ನರ್ತನ ಲೋಕ

ಪುಂಖಾನಪುಂಖವಾಗಿ ಆಡುವ ವಾಕ್ ಚಾತುರ್ಯ ಅನೇಕಾನೇಕ

 

ಪ್ರೇಕ್ಷಕ ಗಡಣದವರ ಕರತಾಡನ ಮುಗಿಲಿನೆತ್ತರ

ವೇಷಧಾರಿಯ ನಂಬಿದವರ ಹಸಿವ ನೀಗಿಸುವ ಕಾಯಕ

ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿ  ಸಹಕರಿಸಿ

ಯಕ್ಷಗಾನ ಪರಂಪರೆಯ ಉಳಿಸಿ ಬೆಳೆಸಿ

 

ವೈಯ್ಯಾರದ ಚೆಲುವು ಚಂದ್ರಿಕೆಯರ ನಾಟ್ಯ

ಪುರಾಣ ಇತಿಹಾಸ ಸಂಸ್ಕೃತಿಗಳ ಪ್ರತಿಬಿಂಬ|

ನಮ್ಮ ನೆಲದ ಗಂಡುಕಲೆ ಯಕ್ಷಗಾನ  ಪ್ರದರ್ಶನ

ತನು ಮನವ ಸೆಳೆವ ಬಲೆ ಉಲ್ಲಾಸದ ಸೆಲೆ||

-ರತ್ನಾ ಕೆ.ಭಟ್ ತಲಂಜೇರಿ

 

ಚಿತ್ರ್