ಒಣ ಭೂಮಿಯಲ್ಲಿ ಲಾಭದಾಯಕ ಹಣ್ಣಿನ ಬೆಳೆ - ಅಂಜೂರ
ಅಂಜೂರ ಎಂಬ ಅತ್ಯಧಿಕ ಪೋಷಕಾಂಶಗಳೊಳಗೊಂಡ ಹಣ್ಣು. ಒಣ ಭೂಮಿಯಲ್ಲಿ ಚೆನ್ನಾಗಿ ಬರುತ್ತದೆ. ಉತ್ತಮ ಬೆಲೆಯೂ ಇದೆ. ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸಾಕು ಎನ್ನಿಸುತ್ತದೆ. ಇದೊಂದು ತಾಜಾ ಅಥವಾ ಒಣಗಿಸಿ ಸಂಸ್ಕರಣೆಗೆ ಬಳಸಬಹುದಾದ ಸೂಕ್ತ ಹಣ್ಣು. ಬಹಳಷ್ಟು ಹಣ್ಣುಗಳಲ್ಲಿ ಹುಳಿ ಅಂಶ (ಆಮ್ಲತೆ) ಇದ್ದರೆ, ಇದರಲ್ಲಿ ಅದು ಇಲ್ಲವೇ ಇಲ್ಲ. ಪೌಷ್ಟಿಕಾಂಶ ಭರಿತ ಕೆಲವೇ ಕೆಲವು ಹಣ್ಣುಗಳಲ್ಲಿ ಇದು ಇದು ಒಂದು.
ಕರ್ನಾಟಕದ ಮೈಸೂರಿನ ಶ್ರೀರಂಗಪಟ್ಟಣದ ಗಂಜಾಮ್ ಎಂಬ ಊರಿನ ಅಂಜೂರದ ಹಣ್ಣು ಇತಿಹಾಸ ಪ್ರಸಿದ್ದಿಯಾಗಿದೆ. ಈಗ ಈ ಪ್ರದೇಶವಲ್ಲದೆ ಬೇರೆ ಬೇರೆ ಪ್ರದೇಶಗಳಲ್ಲೂ ಅಂಜೂರವನ್ನು ಬೆಳೆಯುತ್ತಾರೆ. ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಚಿತ್ರದುರ್ಗ, ಕೊಪ್ಪಳ ಅಲ್ಲದೆ ಬೆಂಗಳೂರು ಸುತ್ತಮುತ್ತಲೂ ಇದನ್ನು ಬೆಳೆಯಬಹುದು. ಹೆಚ್ಚು ಮಳೆಯಾಗುವ ಊರುಗಳಲ್ಲಿ ಇದನ್ನು ಬೆಳೆಯುವುದು ಯೋಗ್ಯವಲ್ಲ.
ಯಾವ ಮಣ್ಣು ಸೂಕ್ತ: ಬೆಳೆಗೆ ಒಣ ಹವೆ ಒಂದು ಪ್ರಾಮುಖ್ಯ ವಾತಾವರಣ. ಸಡಿಲವಾದ ಫಲತ್ತಾದ ಕೆಂಪು, ಕಪ್ಪು ಮಣ್ಣು ಉಳ್ಳ, ತೀರಾ ಕ್ಷಾರವಲ್ಲದ ಮಣ್ಣು ಇರುವ ಭೂಮಿಯಲ್ಲಿ ಇದನ್ನು ಬೆಳೆಸಬಹುದು. ಈ ಬೆಳೆಗೆ ಬರ ಸಹಿಷ್ಣು ಗುಣ ಇದೆ. ಭಾರೀ ಪ್ರಮಾಣದ ನೀರು ಬೇಕಾಗುವುದಿಲ್ಲ. ಸಸ್ಯಕ್ಕೆ ಸವರುವಿಕೆಯ ಅಗತ್ಯತೆ ಇರುತ್ತದೆ. ಆದ ಕಾರಣ ನೀರಾವರಿ ಕಡಿಮೆ ಸಾಕಾಗುತ್ತದೆ. ನೀರಿನಲ್ಲಿ ಮತ್ತು ಮಣ್ಣಿನಲ್ಲಿ ಕ್ಲೋರೈಡ್ ಮತ್ತು ಲವಣಾಂಶ ಇದ್ದರೂ ಸಹ ಈ ಬೆಳೆ ಸಹಿಷ್ಣು. ಯಾವುದೇ ಬೆಳೆ ಬೆಳೆಯದ ಭೂಮಿಯಿದ್ದರೆ, ಅಂತಹ ಭೂಮಿಯಲ್ಲಿ ಅಂಜೂರ ಹಾಕಬಹುದು ಎನ್ನುತ್ತಾರೆ. ಜೂನ್, ಜುಲಾಯಿ ತಿಂಗಳಲ್ಲಿ ನಾಟಿ ಮಾಡಬೇಕು. ಹಣ್ಣು ರುಚಿಕಟ್ಟಾಗಿರಬೇಕಾದರೆ ಹಗಲು ಉತ್ತಮ ಬಿಸಿಲು, ರಾತ್ರಿ ವಾತಾವರಣ ತಂಪು ಇರಬೇಕು. ಸಾಧಾರಣ ಉಷ್ಣ ಮತ್ತು ಕಡಿಮೆ ಆರ್ಧ್ರತೆ ಉಳ್ಳ ವಾತಾವರಣ ಹೆಚ್ಚು ಪ್ರಶಸ್ತ. ವರ್ಷಕ್ಕೆ ಎರಡು ಬೆಳೆ. ಎಪ್ರಿಲ್- ಮೇ ತಿಂಗಳಲ್ಲಿ ಒಂದು ಮತ್ತು ಆಗಸ್ಟ್ - ಸಪ್ಟೆಂಬರ್ ತಿಂಗಳು ಇನ್ನೊಂದು. ಎಕ್ರೆಗೆ 5-6 ಟನ್ ಇಳುವರಿ ತೆಗೆಯಬಹುದು.
ತಳಿಗಳು: ಅಂಜೂರದಲ್ಲಿ ಎರಡು ಪ್ರಮುಖ ತಳಿಗಳಿವೆ. ಒಂದು ಹಣ್ಣಾಗುವಾಗ ಕೆಂಪು ಬಣ್ಣದ್ದಾದರೆ ಮತ್ತೊಂದು ಹಣ್ಣಾಗುವಾಗ ಹಳದಿ ಬಣ್ಣ ಹೊಂದಿರುತ್ತದೆ. ತಳಿಗಳಲ್ಲಿ ಪೂನಾ ಎಂಬ ಹೆಸರಿನ ತಳಿಯಲ್ಲಿ ಗಂಟೆಯಾಕಾರದ ಹಣ್ಣುಗಳಾಗುತ್ತವೆ. ಇದು ಬಿಡುವ ಹಣ್ಣುಗಳ ಹೊರ ಮೈ ತಿಳಿ ಕಂದು ಬಣ್ಣ ಹೊಂದಿರುತ್ತದೆ. ಒಳ ತಿರುಳು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಇದರ ಹಣ್ಣಿನ ತೊಟ್ಟು ಉದ್ದವಾಗಿದ್ದು ಅಧಿಕ ಇಳುವರಿ ಕೊಡುತ್ತದೆ. ಇದು ಸಾಧಾರಣ ಉಷ್ಣ ಪ್ರದೇಶಕ್ಕೆ ಹೊಂದುವ ತಳಿ.
ಗಂಜಾಮ: ಇದು ಉಷ್ಣ ಪ್ರದೇಶಕ್ಕೆ ಹೊಂದುವ ತಳಿ. ಅಧಿಕ ಇಳುವರಿ ಕೊಡುತ್ತದೆ. ಹಣ್ಣಾಗುವಾಗ ಇದರ ಬಣ್ಣ ತಿಳಿ ಕೆಂಪಾಗಿರುತ್ತದೆ.
ಬಳ್ಳಾರಿ: ಈ ತಳಿಯೂ ಗಂಜಾಮ್ ತಳಿಯೂ ಸಾಮಾನ್ಯವಾಗಿ ಏಕ ಪ್ರಕಾರವಾಗಿರುತ್ತದೆ. ಆದರೆ ಬಳ್ಳಾರಿ ತಳಿ ಹೆಚ್ಚು ಬರ ಸಹಿಷ್ಣು. ಇಳುವರಿ ಮಾತ್ರ ಸ್ವಲ್ಪ ಕಡಿಮೆ.
ಡಿಯಾನಾ: ಇದು ಹಣ್ಣಾಗುವಾಗ ಹಳದಿ ಬಣ್ಣ ಹೊಂದುವ ತಳಿ. ಬೇಗ ಇಳುವರಿ ಕೊಡುತ್ತದೆ. ಇದು ಪರಾಗಸ್ಪರ್ಶ ಹೊಂದದೆ (ಪಾರ್ಥೆನೋಕಾರ್ಪಿಕ್) ಕಾಯಿ ಕಚ್ಚುವ ವಿಶೇಷ ಗುಣ ಹೊಂದಿದೆ. ಅಧಿಕ ಇಳುವರಿ ಕೊಡಬಲ್ಲುದು. ಕಾಯಿ ದೊಡ್ಡದು. ಸುಮಾರು ೭೦ ಗ್ರಾಂ ತನಕವೂ ತೂಗುತ್ತದೆ. ಒಣಗಿಸಲು ಸೂಕ್ತವಾದ ಹಣ್ಣು. ಒಣಗಿಸಿದ ನಂತರವೂ ಇದರ ಹಳದಿ ಬಣ್ಣ ಉಳಿಯುತ್ತದೆ. ಬೇಗ ಇಳುವರಿ ಪ್ರಾರಂಭವಾಗುತ್ತದೆ. ೨.೫ ವರ್ಷದ ಗಿಡ ೪ ಕಿಲೋ ತನಕ ಇಳುವರಿ ಕೊಡುತ್ತದೆ.
ಸಸಿಗಳು: ಅಂಜೂರದ ಸಸಿಯನ್ನು ತಯಾರಿಸಲು ಗೆಲ್ಲುಗಳಿಗೆ ಬೇರು ಬರಿಸುತ್ತಾರೆ. ಈ ಮೂಲಕ ಸಸಿ ಮಾಡಲಾಗುತ್ತದೆ. ಗೂಟಿ ಎಂಬ ಈ ವಿಧಾನದಲ್ಲಿ ಮಾಡಿದ ಸಸಿಯಲ್ಲಿ ಯಾವುದೇ ತಳಿ ವ್ಯತ್ಯಾಸ ಬಾರದು. ಕಾಂಡದ ತುಂಡುಗಳನ್ನೂ ಸಹ ಬೇರು ಬರಿಸುವ ಹಾರ್ಮೋನಿನಲ್ಲಿ ಉಪಚರಿಸಿ ಸಸಿ ಮಾಡಿಕೊಳ್ಳಬಹುದು. ಆದರೆ ಗೂಟಿ ವಿಧಾನ ಬಹುಪಾಲು ಸೂಕ್ತ. ಗೆಲ್ಲಿನ ಕಾಂಡ ಕಂದು ಬಣ್ಣಕ್ಕೆ ತಿರುಗಿದ ಗೆಲ್ಲುಗಳಲ್ಲಿ ೧ ಇಂಚು ಸಿಪ್ಪೆಯನ್ನು ತೆಗೆದು ಅದಕ್ಕೆ ಉಪಚರಿಸಿದ ತೆಂಗಿನ ನಾರಿನ ಹುಡಿ ಅಥವಾ ಪ್ಲೈಆಶ್ ಅಥವಾ ಗರಗಸದ ಹುಡಿಯನ್ನು ಒದ್ದೆ ಮಾಡಿ ಗಾಳಿಯಾಡದಂತೆ ಕಟ್ಟಿದರೆ ಸುಮಾರು ಒಂದು ತಿಂಗಳಲ್ಲಿ ಬೇರು ಬರುತ್ತದೆ. ಇದನ್ನು ಗಿಡದಿಂದ ಕತ್ತರಿಸಿ, ಸ್ವಲ್ಪ ಸಮಯ ನೆರಳಿನಲ್ಲಿ ಪಾಲನೆ ಮಾಡಿ ನಾಟಿಗೆ ಬಳಕೆ ಮಾಡಬೇಕು. ಸಸಿಗಳನ್ನು ೫ X ೩ ಮೀ. ಅಂತರದಲ್ಲಿ ನಾಟಿ ಮಾಡಬೇಕು.
ಅಂಜೂರ ಸಸ್ಯ ರಚನೆ: ಇದು ಮರವಲ್ಲ ಸಸ್ಯ. ಇದು ಎಲೆ ಕಂಕುಳಲ್ಲಿ ಹಣ್ಣು ಬಿಡುವ ಸಸ್ಯವಾಗಿದ್ದು, ಪ್ರತೀ ವರ್ಷ ಸಸ್ಯವನ್ನು ಲಘುವಾಗಿ ಸವರುತ್ತಾ ಹೊಸ ಚಿಗುರು ಬರುವಂತೆ ಮಾಡಿದರೆ ಮಾತ್ರ ಇಳುವರಿ. ಗಿಡದ ಎತ್ತರ ೯೦- ೧೨೦ ಸೆಂ ಮೀ. ಎತ್ತರಕ್ಕಿರುವಂತೆ ಆಕಾರ ಕೊಡಬೇಕು. ಪ್ರತಿ ಗಿಡಕ್ಕೆ ೩-೪ ಮುಖ್ಯ ರೆಂಬೆಗಳಿರುವಂತೆ ಮಾಡಿಕೊಂಡು, ೬-೮ ಉತ್ತಮ ಕವಲುಗಳನ್ನು ಉಳಿಸಿಕೊಳ್ಳಬೇಕು. ಬಳ್ಳಾರಿ ಸುತ್ತಮುತ್ತ ಕೆಲವರು ವರ್ಷವೂ ಬುಡ ೨ ಅಡಿ ಬಿಟ್ಟು ಸವರಿ ಹೊಸ ರೆಂಬೆ ಬರಿಸಿ ಹಣ್ಣು ಪಡೆಯುತ್ತಾರೆ. ಗೆಲ್ಲನ್ನು ಬಾಗಿಸಿ ಅಥವಾ ಗಣ್ಣುಗಳ ಹತ್ತಿರ V ಆಕಾರದಲ್ಲಿ ಸೀಳು ಹಾಕಿದರೆ ಉಪಕವಲುಗಳು ಹೆಚ್ಚುತ್ತದೆ.
ಅಂಜೂರ ಬೆಳೆಯುವವರು ಸಸ್ಯಗಳ ಮೇಲೆ ಹಕ್ಕಿಗಳು ಬಾರದಂತೆ ಬಲೆಯನ್ನು ಕಡ್ಡಾಯವಾಗಿ ಹೊದಿಸಲೇಬೇಕು. ಹಣ್ಣುಗಳು ತುಂಬಾ ಮೃದುವಾದ ಕಾರಣ ವಿಶೇಷ ಪ್ಯಾಕ್ಕಿಂಗ್ ವ್ಯವಸ್ಥೆಯಲ್ಲಿಯೇ ಮಾರುಕಟ್ಟೆಗೆ ಸಾಗಿಸಬೇಕು. ಸುಮಾರಾಗಿ ಕಿಲೋ ಹಣ್ಣಿಗೆ ೨೦೦-೩೦೦ ರೂ.ತನಕ ಬೆಲೆ ಇರುತ್ತದೆ. ಇದನ್ನು ಒಣಗಿಸಿ ಇಟ್ಟರೆ ವಿಶೇಷ ಮಾರುಕಟ್ಟೆ ಇದ್ದು, ದಾಸ್ತಾನು ಇಡಲೂ ಸಾಧ್ಯ. ಸರಳ ತಾಂತ್ರಿಕತೆಯಲ್ಲಿ ಒಣಗಿಸಿಡಲು ಸಾಧ್ಯವಾಗುವ ಪ್ರಾಮುಖ್ಯ ಹಣ್ಣು ಎಂದರೆ ಅಂಜೂರ.
ರೋಗಗಳು: ತುಕ್ಕು ರೋಗ ಒಂದು ದೊಡ್ಡ ಸಮಸ್ಯೆ. ಇದಕ್ಕೆ ಮುನ್ನೆಚ್ಚರಿಕೆಯಾಗಿ ಚಿಗುರುವ ಸಮಯದಲ್ಲಿ ಮ್ಯಾಂಕೋಜೆಬ್ ಶಿಲೀಂದ್ರ ನಾಶಕ ಸಿಂಪಡಿಸಬೇಕು. ಕಾಂಡ ಕೊರಕ, ಜೇಡರ ನುಶಿ, ಎಲೆ ತಿನ್ನುವ ಹುಳಗಳ ತೊಂದರೆ ಇದೆ. ಕ್ವಿನಾಲ್ಫೋಸ್ ಕೀಟನಾಶಕ ಸಿಂಪಡಿಸಬೇಕು. ಕೆಲವು ಕೀಟ ಸಮಸ್ಯೆಗಳೂ ಇವೆ. ಅತೀ ಕಡಿಮೆ ನೀರು ಮತ್ತು ಕಡಿಮೆ ಆರೈಕೆಯಲ್ಲಿ ಬೆಳೆಯಬಹುದಾದ ಉತ್ತಮ ಪೌಷ್ಟಿಕ ಹಣ್ಣು ಇದು. ಇದರಲ್ಲಿ ಕ್ಯಾಲ್ಸಿಯಂ, ಏ ಮತ್ತು ಸಿ ಜೀವಸತ್ವಗಳು ಹೇರಳವಾಗಿ ಇರುತ್ತದೆ. ಒಣಗಿಸಿದ ಹಣ್ಣು ಡ್ರೈ ಪ್ರುಟ್ ಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ