ಒತ್ತಡ
ಮಾನವನಿಗೆ ಒತ್ತಡಗಳು ಸಹಜ. ಒತ್ತಡಗಳಿರದ ಬದುಕು ನಿಜವಾಗಿಯೂ ಅರ್ಥಪೂರ್ಣವಾಗದು. ಆದರೆ ಒತ್ತಡದ ಪ್ರಮಾಣವು ಎಷ್ಟಿದೆಯೆಂಬುದು ಮುಖ್ಯವಾಗುತ್ತದೆ. ಒಂದು ಕಾರ್ಯವನ್ನು ನಿಭಾಯಿಸಲು ಆಗದ ಸ್ಥಿತಿಯ ಒತ್ತಡವಿದ್ದರೆ ಮನುಷ್ಯ ಭಾವನಾತ್ಮಕವಾಗಿ ಕುಗ್ಗುತ್ತಾನೆ. ನಿಭಾಯಿಸಲು ಸಾಧ್ಯವಾಗಿ ವಿಜಯ ಪತಾಕೆ ಹಾರಿಸುವಂತಾದರೆ ಅದೇ ಮನುಷ್ಯ ಭಾವನಾತ್ಮಕವಾಗಿ ಹಿಗ್ಗುತ್ತಾನೆ. ಒತ್ತಡದಿಂದ ಮನಸ್ಸು ಹಿಗ್ಗುವಂತಾದರೆ ಅದನ್ನು ಧನಾತ್ಮಕ ಒತ್ತಡವೆಂದೂ, ಕುಗ್ಗುವಂತಾದರೆ ಋಣಾತ್ಮಕ ಒತ್ತಡವೆಂದೂ ಹೇಳುತ್ತೇವೆ. ಧನಾತ್ಮಕ ಒತ್ತಡ ಮನುಷ್ಯನ ವ್ಯಕ್ತಿತ್ವದ ವಿಕಾಸಕ್ಕೆ ಬುನಾದಿಯಾಗುತ್ತದೆ.
“ಸೋಮಾರಿಯ ಮನಸ್ಸು ದೆವ್ವದ ಗುಡಾರ” ಎನ್ನುವರು. ಕೆಲಸವಿಲ್ಲದೆ ವಿಶ್ರಾಂತಿ ಯಿಂದಿರುವುದು ಮತ್ತು ಕೆಲಸವಿದ್ದರೂ ಮಾಡದೇ ಆಲಸಿಯಾಗಿರುವುದು ವಿಭಿನ್ನ ಪ್ರಕರಣಗಳು. ವಿದ್ಯಾರ್ಥಿಗಳಿಗೆ ಪರೀಕ್ಷೆಯಿದೆ ಎಂಬುದು ಪೂರ್ವ ನಿರ್ಧರಿತ ಸಂಗತಿ. ಅಂದಂದಿನ ಪಾಠ ವಿಷಯಗಳನ್ನು ನಿತ್ಯವೂ ಓದುತ್ತಾ ಅದಕ್ಕೆ ಪೂರಕ ಪುಸ್ತಕಗಳ ಅಧ್ಯಯನ ಮಾಡುತ್ತಾ, ಬಲ್ಲವರಿಂದ ಮಾಹಿತಿ ಪಡೆಯುತ್ತಾ ಇರಬೇಕಾದುದು ವಿದ್ಯಾರ್ಥಿಯ ಧರ್ಮ. ವಿದ್ಯಾರ್ಥಿಗೆ ಇಲ್ಲಿ ಕೆಲಸವಿದೆ, ಆದರೆ ಒತ್ತಡವಿರುವುದಿಲ್ಲ. ಇಂತಹ ಶ್ರಮಿಕ ವಿದ್ಯಾರ್ಥಿ ದಿನಾ ಪಾಠವನ್ನು ಓದಿ ವಿಷಯವನ್ನು ಮನಸ್ಸಿನಲ್ಲಿ ಅರಗಿಸಿ ಕೊಂಡಿರುರುವುದರಿಂದ ಪರೀಕ್ಷೆಯನ್ನು ಸಲೀಸಾಗಿ ಎದುರಿಸುತ್ತಾನೆ. ಕೆಲವೊಮ್ಮೆ ಪರೀಕ್ಷೆಯು ಹತ್ತಿರವಾಗುತ್ತಿದ್ದಂತೆ ಕಲಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ಒತ್ತಡ ಬಂದರೂ, ಓದುತ್ತಿದ್ದಂತೆ ವಿದ್ಯಾರ್ಥಿಯ ಧೈರ್ಯ ವರ್ಧಿಸುತ್ತಾ ಹೋಗುವುದು ಮತ್ತು ಆತನಿಗೆ ಓದಿನ ಒತ್ತಡವೂ ಸಂತಸವನ್ನೇ ಒದಗಿಸುತ್ತದೆ.
ಧರ್ಮವನ್ನು ಪಾಲಿಸದೆ ಸೋಮಾರಿತನವನ್ನು ಬೆಳೆಸಿಕೊಂಡ ವಿದ್ಯಾರ್ಥಿಯು, ತನ್ನ ಕೆಲಸವನ್ನು “ನಾಳೆ” ಗೆ ಮುಂದೂಡುತ್ತಿರುತ್ತಾನೆ. ಹೀಗೆಯೇ ಹಲವು ನಾಳೆಗಳು ಮುಗಿದಂತೆ ಪರೀಕ್ಷೆ ಸನಿಹವಾಗಿಯೇ ಬಿಡುತ್ತದೆ. ಪಠ್ಯ ಪೂರಕವನ್ನಾಗಲೀ, ಬಲ್ಲವರನ್ನು ಕೇಳಿ ಅರಿಯುವುದಾಗಲೀ ಈಗ ಆಗದ ಮಾತು. ಗಬಗಬನೆ ಓದಲಾರಂಭಿಸುವನು. ಎಷ್ಟು ಓದಿದರೂ ಓದಿದ್ದು ನೆನಪುಳಿಯದೆ, ಪರೀಕ್ಷಾ ಭಯ ಅಥವಾ ಒತ್ತಡವು ಏರುತ್ತಲೇ ಹೋಗುತ್ತದೆ. ಒತ್ತಡವು ಆತನ ಮಾನಸಿಕಸ್ಥಿತಿಯನ್ನು ಖಿನ್ನಗೊಳಿಸುತ್ತದೆ, ಅನಾರೋಗ್ಯ ತರುತ್ತದೆ. ಪರೀಕ್ಷೆಗೆ ಬರೆಯುವಾಗಲೂ ಅವನಲ್ಲಿ ಒತ್ತಡವೇ ಇರುತ್ತದೆ. ಅಲ್ಪ ಸ್ವಲ್ಪ ಓದಿದ್ದೂ ಸ್ಮರಣೆಗೆ ಬಾರದೆ ಒದ್ದಾಡುತ್ತಾನೆ. ಒತ್ತಡವು ಆತನ ನಾಶಕ್ಕೆ ಕಾರಣವಾಗುತ್ತದೆ. ಮಾಡಲೇ ಬೇಕಾದ ಕೆಲಸವನ್ನು ನಾಳೆಗೆ ಮುಂದೂಡಿ ತಾಳಲಾಗದ ಒತ್ತಡವನ್ನು ಅನುಭವಿಸುವುದು ಸ್ವಯಂಕೃತ ಅಪರಾಧವೇ ಆಗಿದೆ.
ವಿದ್ಯಾರ್ಥಿಗಳು ಮಾತ್ರವಲ್ಲ, ಸ್ವಯಂಕೃತ ಅಪರಾಧದಿಂದ ಒತ್ತಡ ತಂದುಕೊಳ್ಳುವವರು ಎಲ್ಲ ವಿಭಾಗದಲ್ಲೂ ಇದ್ದಾರೆ. ಕುಡಿತ, ಜೂಜು, ಮೋಜುಗಳಿಗೆ ಹಣ ವ್ಯಯಮಾಡಿ ಸಾಲ ಮಾಡಿ, ಸಾಲ ತೀರಿಸಲಾಗದೆ ಒತ್ತಡಗಳನ್ನನುಭವಿಸುವವರೂ ಇದ್ದಾರೆ. ಹಾಸಿಗೆಗಿಂತ ಹೊರಗೆ ಕಾಲು ಚಾಚಬಾರದೆಂಬ ಹಿರಿಯರ ಮಾತಿನಂತೆ ಆದಾಯ ಮೀರಿ ಖರ್ಚು ಮಾಡದೇ ಇರುತ್ತಿದ್ದರೆ ತನಗೆ ಈ ಕಷ್ಟ ಬರುತ್ತಿರಲಿಲ್ಲ ಎಂಬ ಅರಿವಾಗುವಾಗ ಆತ ಮುಳುಗಿ ಹೋಗಿರುತ್ತಾನೆ. ಲಂಚ ಪಡೆದು ಸಿಕ್ಕಿಬಿದ್ದು ಒತ್ತಡಕ್ಕೆ ಒಳಗಾಗುವ ಅಧಿಕಾರಿಗಳು, ಸಚಿವರುಗಳೂ ಇದ್ದಾರೆ. ನಮ್ಮ ಎಲ್ಲ ಕಾರ್ಯಗಳತ್ತ ಹೆಜ್ಜೆಯಿಡುವಾಗ ಎಚ್ಚರ ತಪ್ಪುವುದರಿಂದ ಒತ್ತಡಗಳು ನೋವಿನ ಹೊರಲಾಗದ ಗಂಟಾಗಿ ಬೆನ್ನಿಗೆ ನೇತಾಡುತ್ತಲೇ ಇರುತ್ತದೆ. ಮುಂದೊಂದು ದಿನ ಬೆನ್ನಿಗೆ ಭಾರವಾಗಿ ಕುಸಿದೇ ಬೀಳುತ್ತೇವೆ.
ಮನೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಸಂಘಟಿಸುವಾಗಲೂ ಒತ್ತಡಗಳಿಗೊಳಗಾಗುವವರನ್ನು ನೋಡುತ್ತೇವೆ. ಪೂರ್ವ ತಯಾರಿಯ ಕೊರತೆ, ನಾಳೆ ಮಾಡಿದರಾಯಿತೆಂಬ ಮನೋಭಾವ, ಇತರರ ನೆರವನ್ನು ಬಯಸದ ವ್ಯಕ್ತಿತ್ವ ಹೀಗೆ ಹಲವಾರು ಸಂಗತಿಗಳು ಒತ್ತಡವನ್ನುಂಟು ಮಾಡಲು ಕಾರಣವಾಗುತ್ತವೆ. ಮನೆಯೊಳಗೆ ತಾಳ ತಪ್ಪಿದ ಸಂಬಂಧಗಳೂ ಒತ್ತಡಕ್ಕೆ ಕಾರಣವಾಗುವುದಿದೆ. ಜೀವನ ಸಾಗಿಸಬೇಕು, ಅನಾರೋಗ್ಯಕ್ಕೆ ಔಷಧ ತರಬೇಕು, ಮನೆಯವರಿಗೆ ಉಡುಪು ತರಬೇಕು, ಹಬ್ಬ ಹರಿದಿನ ಆಚರಿಸಬೇಕು, ಮಕ್ಕಳಿಗೆ ಕಲಿಸಬೇಕು, ಮಕ್ಕಳ ಮದುವೆ ಮಾಡಬೇಕು, ಹೊಸಮನೆ ಕಟ್ಟಬೇಕು…… ಈ ಎಲ್ಲ ಬೇಕುಗಳಿಗೆ ಹಣ ಬೇಕು. ಹಣವಿಲ್ಲದೆ ಇದ್ದಾಗಲೂ ಮನಸ್ಸಿಗೆ ಒತ್ತಡವಾಗ ತೊಡಗುತ್ತದೆ. ಆದರೂ ಸಾಲ ಸೋಲ ಮಾಡಿ ಎಲ್ಲವನ್ನೂ ನಿಭಾಯಿಸಿ ಸಾಲದ ಅಸಲು ಮತ್ತು ಬಡ್ಡಿ ಪಾವತಿಸಲಾಗದೆ ಒತ್ತಡಕ್ಕೊಳಗಾಗುವುದು ಹೆಚ್ಚಿನವರ ಜಾಯಮಾನ. “ಹಾಸಿಗೆಯಿದ್ದಷ್ಟೇ ಕಾಲು ಚಾಚು” ಎಂಬ ಹಿರಿಯರ ಅನುಭವದ ಮಾತು ಅಪಥ್ಯವಾಗುವುದರಿಂದ ಆರ್ಥಿಕ ಒತ್ತಡಗಳುಂಟಾಗುತ್ತವೆ. ಆರೋಗ್ಯವಂತ ಚಿಕ್ಕ ಕುಟುಂಬದ ವೆಚ್ಚ ನಿರ್ವಹಣೆಗೆ ಮನೆಯ ಒಬ್ಬನ ಆದಾಯ ಧಾರಾಳ ಸಾಕಾಗುತ್ತದೆ. ಒಂದು ದಿನ ಗಳಿಸಿ, ಮೂರು ದಿನ ವಿಶ್ರಾಂತಿ ಮಾಡಿದರೆ ಒತ್ತಡಕ್ಕೆ ಕಾರಣವಾಗುತ್ತದೆ. ಗರಿಷ್ಟ ದಿನಗಳ ದುಡಿಮೆ ಮಾಡಿ ಕನಿಷ್ಟ ವೆಚ್ಚ ಮಾಡಿ ಉಳಿತಾಯ ಮಾಡುವವನಿಗೆ ಆರ್ಥಿಕ ಒತ್ತಡವೇ ಬಾರದು. ಜೀವನ ಶೈಲಿಯನ್ನು ಪಕ್ವತೆಯಿಂದ ರೂಪಿಸುವವರಿಗೆ ಒತ್ತಡಗಳುಂಟಾಗಲಾರವು. ಒತ್ತಡವು ನಮ್ಮ ಸೃಷ್ಟಿಯೇ ಹೊರತು, ಪ್ರಾರಬ್ಧವಲ್ಲ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ