ಒಳ್ಳೆಯತನ ಎಂಬುದು ಒಂದು ಘೋಷಣೆಯಲ್ಲ...!

ಒಳ್ಳೆಯತನ ಎಂಬುದು ಒಂದು ಘೋಷಣೆಯಲ್ಲ...!

ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ - ಅದು ಕೋಮು ದ್ವೇಷದ ಗಲಭೆಕೋರ ಮನಸ್ಥಿತಿ ಆಗದಿರಲಿ. ಇದು ಹಿಂದು - ಮುಸ್ಲಿಮ್ ಎಂದಾಗದೆ ಭಾರತೀಯ ಹಬ್ಬವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ...

ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಒಂದಷ್ಟು ಮುಕ್ತ ವಾತಾವರಣದಲ್ಲಿ ಗಣೇಶನ ಹಬ್ಬ ಆಚರಿಸಲು ಸಿದ್ಧತೆಗಳು ನಡೆದಿವೆ. ಜೊತೆಗೆ ರಾಜ್ಯದ ರಾಜಕೀಯದ ಚುನಾವಣಾ ವರ್ಷ ಸಹ ಮುಂದಿದೆ. ಸಾಮಾನ್ಯವಾಗಿ ಗಣೇಶ ಹಬ್ಬವು ವೈಯಕ್ತಿಕತೆಯ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಉತ್ಸವವಾಗಿ ಆಚರಿಸಲ್ಪಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ರಾಜಕೀಯ ಕಾರಣದಿಂದಾಗಿ ಒಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದೆ. ಎರಡು ಬಹುಮುಖ್ಯ ಕಾರಣಗಳಿಗಾಗಿ ಈ ಸಂದರ್ಭದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಗಣೇಶನನ್ನು ಪ್ರತಿಷ್ಠಾಪಿಸುವ ಜಾಗ ಮತ್ತು ಮೆರವಣಿಗೆಯ ಹಾದಿ ಇಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನ ಗೊಳಿಸುತ್ತದೆ. ಮುಖ್ಯವಾಗಿ ಹಿಂದೂ ಮುಸ್ಲಿಮರ ನಡುವೆ....

ವಿಶ್ವದ ಬೃಹತ್ ಭೌಗೋಳಿಕ ಪ್ರದೇಶ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಬಹುಶಃ ಏಳನೆಯ ಸ್ಥಾನ ಇರಬೇಕು. ಒಂದು ಸಣ್ಣ ಗಣೇಶ ಮೂರ್ತಿಯನ್ನು ಎಲ್ಲಿ ಬೇಕಾದರೂ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಕೆಲವು ದಿನಗಳಲ್ಲಿ ವಿಸರ್ಜಿಸಬಹುದು. ಆದರೆ ಕೆಲವು ಮೂಲಭೂತವಾದಿ ಮನಸ್ಥಿತಿಗಳು ಬೇಕಂತಲೇ ಉದ್ದೇಶಪೂರ್ವಕವಾಗಿ ಇಂತಹ ಸ್ಥಳದಲ್ಲಿಯೇ ಆಗಬೇಕು ಎಂದು ಹಠ ಮಾಡುತ್ತಾರೆ. ಅದರ ಹಿಂದೆ ರಾಜಕೀಯ ಮತ್ತು ಶ್ರೇಷ್ಠತೆಯ ವ್ಯಸನ ಇದ್ದೇ ಇರುತ್ತದೆ. ಅದನ್ನು ವಿರೋಧಿಸಲು ಇನ್ನೊಂದು ಅದೇ ರೀತಿಯ ಮನಸ್ಥಿತಿ ಸಿದ್ದವಾಗಿರುತ್ತದೆ. ಅಲ್ಲಿಗೆ ಘರ್ಷಣೆ ನಿಶ್ಚಿತ.

ಯಾರಾದರೊಬ್ಬರು ಹಠ ಮಾಡದೆ ಇದು ನಮ್ಮ ‌ದೇಶ ಇಲ್ಲಿರುವವರು ನಮ್ಮ ಜನ ಆದ್ದರಿಂದ ಯಾವುದೇ ವಿವಾದವಿಲ್ಲದ ಒಂದು ಖಾಲಿ ಇರುವ ಪ್ರದೇಶದಲ್ಲಿ ಮಾಡೋಣ ಏಕೆಂದರೆ ದೇಶದ ಪ್ರಗತಿಗೆ ಶಾಂತಿ ಬಹಳ ಮುಖ್ಯ ಎಂಬ ಹೊಂದಾಣಿಕೆ ಮನೋಭಾವ ಪ್ರದರ್ಶಿಸಿದರೆ ಜಾಗದ ವಿಷಯದಲ್ಲಿ ವಿವಾದವೇ ಇರುವುದಿಲ್ಲ. ಆದರೆ ವಿಧ್ವಂಸಕ ಮತ್ತು ವಿಭಜನಾತ್ಮಕ ಮನಸ್ಸುಗಳಿಗೆ ಇದು ಬೇಡವಾಗಿದೆ. ಇಲ್ಲಿಯೇ ಮಾಡಬೇಕು ಎಂದು ಒಬ್ಬರು, ಇಲ್ಲ ಇಲ್ಲಿ ಮಾಡಲು ಬಿಡುವುದಿಲ್ಲ ಎಂದು ಇನ್ನೊಬ್ಬರು. ಅದಕ್ಕಾಗಿ ಪೋಲಿಸು ನ್ಯಾಯಾಲಯ ಹೊಡೆದಾಟ  ಬಂದ್ ಎಲ್ಲಾ ‌ಆಗಬೇಕು. ಹೊಸ ಹೊಸ ಪುಡಾರಿಗಳು ಸೃಷ್ಟಿಯಾಗಬೇಕು. ಮಾಧ್ಯಮಗಳಲ್ಲಿ ದಿನಗಟ್ಟಲೆ ಚರ್ಚೆ ಆಗಬೇಕು. ಒಟ್ಟಿನಲ್ಲಿ ದೇವರು ಧರ್ಮದ ಹೆಸರಿನಲ್ಲಿ ಒಂದಷ್ಟು ಜನ ಸಾಯಬೇಕು. ಆಗ ಕೆಲವರಿಗೆ ಸಮಾಧಾನ.  ಇವರುಗಳಿಗೆ ದೇಶ ‌ಹಾಳಾದರೂ ಚಿಂತೆ ಇಲ್ಲ. ಅವರು ಗೆಲ್ಲಬೇಕಷ್ಟೆ.

ಗಲಭೆಗಳ ಇನ್ನೊಂದು ಕಾರಣ ಮೆರವಣಿಗೆಯ ಹಾದಿ. ಮುಸ್ಲಿಮರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿಯೇ ಮೆರವಣಿಗೆ ಮಾಡಬೇಕು. ಅದು ನಮ್ಮ ಭೂಮಿ ನಮಗೆ ಅಷ್ಟೂ ಸ್ವಾತಂತ್ರ್ಯವಿಲ್ಲವೇ ಎಂದು ಹಿಂದುಗಳೂ, ಅಯ್ಯೋ ಮೆರವಣಿಗೆ ಮಾಡಲು ಇನ್ನೂ ಸಾಕಷ್ಟು ಇತರೆ ಮಾರ್ಗಗಳು ಇರುವಾಗ ಇವರೇಕೆ ಉದ್ದೇಶಪೂರ್ವಕವಾಗಿ ನಮ್ಮನ್ನು ಅಣಕಿಸಲು ಇದೇ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಮುಸ್ಲಿಮರೂ ಘರ್ಷಣೆಗೆ ಇಳಿಯುತ್ತಾರೆ. ಆಗ ಇನ್ಯಾರೋ ಎರಡೂ ಗುಂಪಿನ ಕಿಡಿಗೇಡಿಗಳು ಕಲ್ಲು ತೂರುತ್ತಾರೆ. ಅದು ಇನ್ನಷ್ಟು ಹಿಂಸೆಗೆ ತಿರುಗಿ ಒಂದೆರಡು ಹೆಣ ಬೀಳುತ್ತದೆ. ಅದಕ್ಕೆ ಒಂದಷ್ಟು ತನಿಖೆ, ಬಂದ್, ವ್ಯಾಪಾರ ನಷ್ಟ, ಶಾಲೆಗೆ ರಜಾ, ಪರಿಹಾರ ಘೋಷಣೆ. ರಾಜ್ಯದ ಬೊಕ್ಕಸಕ್ಕೆ ಹೊರೆ. ನೋಡಿ ಹೇಗೆ ಒಂದು ಸಂಭ್ರಮದ ಹಬ್ಬ ಸೂತಕವಾಗಿ ಬದಲಾಗುತ್ತದೆ.

ಹಾಗಾದರೆ ಈ ದೇಶ ಯಾರದು ? ಇದನ್ನು ಯಾರು ರಕ್ಷಿಸಬೇಕು ? ಯಾರು ನಿಜವಾದ ಭಾರತೀಯರು ? ಯಾರು ದೇಶದ ಶಾಂತಿ ಮತ್ತು ಆ ಮೂಲಕ ಅಭಿವೃದ್ಧಿಗಾಗಿ ಸೋಲುತ್ತಾರೋ, ಸಹಿಸುತ್ತಾರೋ, ಹೊಂದಾಣಿಕೆ ಮಾಡಿಕೊಳ್ಳುತ್ತಾರೋ, ಸಮನ್ವಯ ಸಾಧಿಸುತ್ತಾರೋ, ತ್ಯಾಗ ಮಾಡುತ್ತಾರೋ, ಕರುಣೆ ತೋರುತ್ತಾರೋ ಯಾರು ಕ್ಷಮಿಸುತ್ತಾರೋ ಅವರೇ ನಿಜವಾದ ದೇಶ ಭಕ್ತರು, ಧರ್ಮ ಪರಿಪಾಲಕರು, ಯಾರು ಅನಾವಶ್ಯಕವಾಗಿ ಘರ್ಷಣೆಗೆ ಇಳಿಯುತ್ತಾರೋ, ಯಾರು ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಕಂಟಕವಾಗುತ್ತಾರೋ ಅವರು ದೇಶದ್ರೋಹಿಗಳು.

ಇದರಲ್ಲಿ ಹಿಂದೂ ಮುಸ್ಲಿಂ ಇರುವುದಿಲ್ಲ. ಕೇವಲ ‌ದೇಶ ಪ್ರೇಮಿಗಳು ಮತ್ತು ‌ದೇಶ ವಿರೋಧಿಗಳು ಮಾತ್ರ ಇರುತ್ತಾರೆ. ಮುಸ್ಲಿಮರೇ ದಯವಿಟ್ಟು ಯಾವುದೇ ವಿವಾದಗಳಿಗೆ ಆಸ್ಪದ ಕೊಡದೆ ಈ ಹಬ್ಬದಲ್ಲಿ ನೀವು ಸಹ ಭಾಗವಹಿಸಿ. ಇದು ನಿಮ್ಮ ದೇಶ. ಕೆಲವೇ ಕೆಲವು ಹಿಂದೂ ಮೂಲಭೂತವಾದಿಗಳ ಪ್ರಚೋದನೆಗೆ ಒಳಗಾಗಬೇಡಿ. ಹಿಂದೂಗಳೇ ದಯವಿಟ್ಟು ಮುಸ್ಲಿಮರಿಗೆ ಅನಾವಶ್ಯಕವಾಗಿ ಪ್ರಚೋದಿಸದೇ ಅವರನ್ನು ಸಹ ಪ್ರೀತಿಯಿಂದ ಈ ಹಬ್ಬದಲ್ಲಿ ಭಾಗವಹಿಸುವಂತೆ ಆಹ್ವಾನಿಸಿ. ಇದು ನಿಮ್ಮ ದೇಶ. ಒಳ್ಳೆಯತನ ಎಂಬುದು ಒಂದು ಘೋಷಣೆಯಲ್ಲ ಅಥವಾ ಪದವಲ್ಲ. ಅದು ನಮ್ಮ ನಡವಳಿಕೆ. ಅದೇ ದೇಶ ಪ್ರೇಮ - ಅದೇ ಮಾನವೀಯ ಧರ್ಮ. ಉಳಿದದ್ದು ನಿಮ್ಮ ವಿವೇಚನೆಗೆ‌ ಸೇರಿದ್ದು...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ