ಓಝೋನ್ ಪದರದ ಸಂರಕ್ಷಣೆಯ ಅಗತ್ಯ

ಓಝೋನ್ ಪದರದ ಸಂರಕ್ಷಣೆಯ ಅಗತ್ಯ

ಓಝೋನ್ (Ozone) ಪದರದ ರಕ್ಷಣೆಯ ಬಗ್ಗೆ ನಾವು ಆಗಾಗ ವಾರ್ತಾಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿಯನ್ನು ಗಮನಿಸುತ್ತಾ ಇರುತ್ತೇವೆ. ಈ ಪದರ ಇಲ್ಲಿದೆ? ಇದರ ರಕ್ಷಣೆ ಏಕೆ ಇಂದಿನ ಅಗತ್ಯವಾಗಿದೆ? ಓಝೋನ್ ಪದರಕ್ಕೆ ಹಾನಿಯಾಗುತ್ತಿದೆ ಎಂದರೆ ಭೂಮಿಯಲ್ಲಿರುವ ಜೀವಸಂಕುಲಕ್ಕೆ ಆಗುವ ತೊಂದರೆಯೇನು? ಈ ಬಗ್ಗೆ ನಾವಿಂದು ತಿಳಿದುಕೊಳ್ಳಲೇ ಬೇಕಾಗಿದೆ. 

ಓಝೋನ್ ಎಂಬುವುದು ಒಂದು ಗ್ರೀಕ್ ಪದವಾದ ಓಝೇನ್ (ವಾಸನೆ) ನಿಂದ ರೂಪುಗೊಂಡಿದೆ. ಓಝೋನ್ ಪದರ ರೂಪುಗೊಂಡಿರುವುದು ಆಮ್ಲಜನಕದಿಂದಲೇ. ಎರಡು ಆಮ್ಲಜನಕದ ಪರಮಾಣುಗಳು ಸೇರಿಕೊಂಡು ಒಂದು ಆಮ್ಲಜನಕದ ಅಣುವು (O2) ತಯಾರಾಗುತ್ತದೆ. ಈ ಅಣುವಿನ ಜೊತೆ ಇನ್ನೊಂದು ಆಮ್ಲಜನಕದ ಪರಮಾಣು ಸೇರಿಕೊಂಡು ಓಝೋನ್ (O3) ಎಂಬ ಅಣು ತಯಾರಾಗುತ್ತದೆ.  ಈ ಪದರವು ಭೂಮಿಯ ಮೇಲ್ಭಾಗದಲ್ಲಿ ಅಂದರೆ ಸುಮಾರು ೧೦ ರಿಂದ ೪೦ ಕಿ.ಮೀ. ವರೆಗೆ ಎತ್ತರದಲ್ಲಿ ಹರಡಲ್ಪಟ್ಟಿದೆ. ಇದು ಒಂದು ರೀತಿಯಲ್ಲಿ ಭೂಮಿಯ ಸುರಕ್ಷಾ ಕವಚದಂತೆ ಕೆಲಸ ಮಾಡುತ್ತದೆ. ಸೂರ್ಯನಿಂದ ಭೂಮಿಗೆ ಬರುವ ಬೆಳಕಿನಲ್ಲಿರುವ ಅತಿನೇರಳೆ ಕಿರಣ (Ultraviolet) ಗಳನ್ನು ತಡೆದು ಭೂಮಿಯಲ್ಲಿರುವ ಜೀವ ರಾಶಿಗೆ ಹಾನಿಯಾಗದಂತೆ ಮಾಡುತ್ತದೆ. ಈ ಅತಿನೇರಳೆ ಕಿರಣಗಳು ನಮ್ಮ ದೇಹವನ್ನು ನಿರಂತರವಾಗಿ ಪ್ರವೇಶಿಸಿ ನಮ್ಮ ಜೀವಕ್ಕೆ ಹಾನಿ ಮಾಡುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ‘ಓಝೋನ್ ರಕ್ಷಿಸಿ' ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. 

ಓಝೋನ್ ಪದರ ಹಾಳಾಗಲು ಕಾರಣ ನಾವೇ. ಮಾನವ ನಿರ್ಮಿತ ಸಾಧನಗಳು ಬಹುಮುಖ್ಯವಾಗಿ ಏರ್ ಕಂಡೀಷನರ್ ಗಳು, ರೆಫ್ರಿಜರೇಟರ್ ಗಳಲ್ಲಿ ಬಳಸುವ ಕ್ಲೋರೋಫ್ಲೋರೋ ಕಾರ್ಬನ್ (ಸಿಎಫ್ ಸಿ) ಎಂಬ ಅನಿಲವು ಓಝೋನ್ ಪದರವನ್ನು ಹಾಳುಗೆಡವುತ್ತಿದೆ. ಇದರ ಜೊತೆಗೆ ವಾಹನಗಳು ಹೊರಸೂಸುವ ಹೊಗೆ, ಕೈಗಾರಿಕೆಗಳಿಂದ ಹೊರಹೊಮ್ಮುವ ವಿಷಕಾರಿ, ರಾಸಾಯನಿಕ ಮಿಶ್ರಿತ ಅನಿಲಗಳು, ಬ್ರೋಮಿನ್, ಹೈಡ್ರೋಫ್ಲೋರೋ ಕಾರ್ಬನ್ ಅನಿಲಗಳು ಇವೆಲ್ಲಾ ಓಝೋನ್ ಪದರವನ್ನು ನಿಧಾನವಾಗಿ ಹಾಳು ಮಾಡುತ್ತಿವೆ. ಇದರ ಜೊತೆಗೆ ಪರಿಸರ ವೈಪರೀತ್ಯಗಳು, ನಗರೀಕರಣದ ನೆಪದಲ್ಲಿ ನಡೆಯುತ್ತಿರುವ ನಿರಂತರ ಗಿಡ ಮರಗಳ ಕಡಿತ ಇವುಗಳೂ ಈ ಪದರದ ನಾಶಕ್ಕೆ ಕಾರಣವಾಗುತ್ತಿದೆ. 

ಓಝೋನ್ ಎಂಬುವುದು ನಮ್ಮೆಲ್ಲರ ಜೀವ ರಕ್ಷಕ ಪದರ ಎಂಬುವುದನ್ನು ನಾವು ಮೊದಲು ಮನಗಾಣಬೇಕು. ಇದು ನಮ್ಮ ಸುರಕ್ಷತೆಗಾಗಿ ಪ್ರಕೃತಿಯೇ ನೀಡಿದ ಕೊಡುಗೆ ಎಂಬುವುದನ್ನು ತಿಳಿದುಕೊಳ್ಳಬೇಕು. ಮೇಲೆ ಕಾಣಿಸಿದ ಹಲವಾರು ಕಾರಣಗಳಿಂದಾಗಿ ಇಂದು ಓಝೋನ್ ಪದರಕ್ಕೆ ರಂಧ್ರವಾಗಿದೆ. ಇದರಿಂದಾಗಿ ಸೂರ್ಯನ ಅತಿನೇರಳೆ ಕಿರಣಗಳು ಭೂಮಿಯನ್ನು ಸಂಪರ್ಕಿಸಲು ಪ್ರಾರಂಭಿಸಿವೆ. ಈ ರಂಧ್ರ ಹೀಗೆಯೇ ದೊಡ್ಡದಾಗುತ್ತಾ ಹೋದರೆ ಮಾನವ ಜೀವ ಸಂಕುಲಕ್ಕೆ ಅಪಾಯ ಕಾದಿದೆ. 

ಓಝೋನ್ ಪದರಕ್ಕೆ ಹಾನಿಯಾದರೆ ಮಾನವನ ಮೇಲೆ ಅತ್ಯಂತ ಅಧಿಕ ಪರಿಣಾಮ ಉಂಟಾಗಲಿದೆ. ಚರ್ಮ ಸಂಬಂಧೀ ಕಾಯಿಲೆಗಳು ಹೆಚ್ಚಾಗಲಿವೆ. ಸೂರ್ಯನ ಅತಿನೇರಳೆ ಕಿರಣದ ಪರಿಣಾಮ ಭೂಮಿಯ ಮೇಲೆ ವಾಸಿಸುವ ಪುಟ್ಟ ಜೀವಿಗಳು ಶಾಶ್ವತವಾಗಿ ನಿರ್ನಾಮವಾಗುವ ಸಾಧ್ಯತೆ ಇದೆ. ನಿರಂತರ ಓಝೋನ್ ಹಾನಿಯಿಂದ ನೀರಿನ ಕೊರತೆಯುಂಟಾಗಿ ಭೂಮಿ ಬರಡಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಪರಿಸರದ ಅಸಮತೋಲನದಿಂದ ಮಳೆಯಾಗದೇ ಬರ ಅಥವಾ ಅಧಿಕ ಮಳೆಯಿಂದ ನೆರೆ ಬರುವ ಸಾಧ್ಯತೆಯೂ ಇದೆ.  

ದಿನದಿಂದ ದಿನಕ್ಕೆ ಈ ಓಝೋನ್ ಪದರಕ್ಕೆ ಆಗುತ್ತಿರುವ ಹಾನಿಯನ್ನು ಮನಗಂಡು ವಿಶ್ವ ಸಂಸ್ಥೆಯು ೧೯೮೭ರ ಸೆಪ್ಟೆಂಬರ್ ೧೬ರಂದು ವಿಯನ್ನಾದಲ್ಲಿ ಓಝೋನ್ ಪದರದ ಸಂರಕ್ಷಣೆಯ ಕುರಿತಾಗಿ ಮೊದಲ ಅಂತರಾಷ್ಟೀಯ ಸಮಾವೇಶ ನಡೆಸಿತು. ಸುಮಾರು ೪೫ ದೇಶಗಳು ಈ ರಕ್ಷಣಾ ಒಡಂಬಡಿಕೆಗೆ (ಮ್ಯಾಂಟ್ರಿಯಲ್ ಪ್ರೊಟೋಕಾಲ್) ಸಹಿ ಹಾಕಿದವು. ನಂತರ ೧೯೯೪ರ ಡಿಸೆಂಬರ್ ೧೯ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರ ಸಂರಕ್ಷಣೆಗಾಗಿ ಮೊದಲ ಸಮಾವೇಶ ನಡೆದ ದಿನಾಂಕವಾದ ಸೆಪ್ಟೆಂಬರ್ ೧೬ನ್ನು ಪ್ರತೀ ವರ್ಷ 'ವಿಶ್ವ ಓಝೋನ್ ದಿನ' ಎಂದು ಆಚರಿಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು. ಈ ನಿರ್ಣಯವನ್ನು ವಿಶ್ವದ ೧೯೭ ದೇಶಗಳು ಆಚರಣೆಗೆ ತಂದಿವೆ. ಈ ದಿನದಂದು ಓಝೋನ್ ಪದರದ ಸಂರಕ್ಷಣೆಗೆ ನಾವು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ. 

ಓಝೋನ್ ಪದರಕ್ಕೆ ಹಾನಿ ಮಾಡುವ ವಸ್ತುಗಳು ಹಾಗೂ ಕೆಲವು ಅನಿಲಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಗ್ರಹಿಸುವುದು ಈ ದಿನದ ಉದ್ದೇಶವಾಗಿದೆ. ವಿಜ್ಞಾನಿಗಳೂ ಕ್ಲೋರೋಫ್ಲೋರೋ ಹಾಗೂ ಇಂಗಾಲದಂತಹ ರಾಸಾಯನಿಕಗಳ ಬಳಕೆಯಿಂದ ಓಝೋನ್ ಪದರ ತೆಳುವಾಗುತ್ತಿದೆ ಎನ್ನುತ್ತಾರೆ. ನಾವು ನಮ್ಮ ನಿತ್ಯ ಬಳಕೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪರಿಸರಕ್ಕೆ ಯೋಗ್ಯವಾದ ವಸ್ತುಗಳನ್ನು ಬಳಸಬೇಕು. ಸರಕಾರವೂ ಅಂತಹ ವಸ್ತುಗಳ ಬಳಕೆ ಹಾಗೂ ಉತ್ಪಾದನೆಗೆ ಉತ್ತೇಜನ ನೀಡಬೇಕಾಗಿದೆ. ಮರುಬಳಕೆಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು, ಹಾಗೆಯೇ ಪರಿಸರ ಸಂರಕ್ಷಣೆಯನ್ನು ಮಾಡಬೇಕು. 

ಈಗಾಗಲೇ ನಾವು ವಾತಾವರಣದಲ್ಲಿ ಬಿಸಿಯ ಪ್ರಮಾಣದ ಏರಿಕೆಯನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣ ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಅನಿಲದ ಹೆಚ್ಚಾಗುವಿಕೆ. ಇದರಿಂದಾಗಿಯೇ ಸಮುದ್ರದ ಮಟ್ಟ ಏರುತ್ತಿದೆ. ವಾತಾವರಣದಲ್ಲಿ ಏರುಪೇರಾಗುತ್ತಿದೆ. ಓಝೋನ್ ಪದರಕ್ಕೆ ಆಗುತ್ತಿರುವ ಹಾನಿ ಅಧಿಕಗೊಂಡರೆ ಮುಂದೊಂದು ದಿನ ಭೂಮಿಯ ನಾಶವೇ ಆಗಿ ಹೋದೀತು. ವಿಶ್ವ ಓಝೋನ್ ದಿನವಾದ ಇಂದು ನಾವು ಈ ಪದರವನ್ನು ಸಂರಕ್ಷಿಸುವ ವಿಧಾನಗಳನ್ನು ಅನುಸರಿಸುವ ಪ್ರತಿಜ್ಞೆಯನ್ನು ಮಾಡಲೇ ಬೇಕಾಗಿದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ