ಓಟದ ಸ್ಪರ್ಧೆ ಮತ್ತು ಮೂರು ಚಿನ್ನದ ಸೇಬುಗಳು

ಓಟದ ಸ್ಪರ್ಧೆ ಮತ್ತು ಮೂರು ಚಿನ್ನದ ಸೇಬುಗಳು

ನೂರಾರು ವರುಷಗಳ ಹಿಂದೆ ಅಟ್ಲಾಂಟ ಎಂಬ ರೂಪವತಿ ರಾಜಕುಮಾರಿ ಇದ್ದಳು. ಇತರ ರಾಜಕುಮಾರಿಯರು ಕಸೂತಿ ಕೆಲಸ ಮಾಡುತ್ತ, ಉದ್ಯಾನದಲ್ಲಿ ಸುತ್ತಾಡುತ್ತ ಕಾಲಕಳೆಯುತ್ತಿದ್ದರೆ, ಅಟ್ಲಾಂಟ ಬೇಟೆಯಾಡಲು ಹೋಗುತ್ತಿದ್ದಳು.

ಅವಳು ಎಷ್ಟು ಸಮರ್ಥ ಬೇಟೆಗಾರಳೆಂದರೆ ದೇಶದ ಉದ್ದಗಲದಲ್ಲಿ ಹೆಸರುವಾಸಿಯಾಗಿದ್ದಳು. ಅವಳ ಬಿಲ್ಲು ಯೋಧರ ಬಿಲ್ಲಿನಷ್ಟೇ ದೊಡ್ಡದಾಗಿತ್ತು ಮತ್ತು ಅವಳು ಯೋಧರಷ್ಟೇ ನೇರವಾಗಿ ಬಾಣ ಬಿಡುತ್ತಿದ್ದಳು. ಜೊತೆಗೆ ಅವಳು ಎಂತಹ ವೇಗದ ಓಟಗಾತಿಯೆಂದರೆ, ಯಾರೇ ವೇಗದ ಬೇಟೆಗಾರನೊಂದಿಗೆ ಜೊತೆಜೊತೆಯಾಗಿ ಓಡುತ್ತಿದ್ದಳು.

ಒಂದು ದಿನ ಅವಳ ತಂದೆ ಅವಳನ್ನು ಕರೆದು ಹೇಳಿದ, “ನನ್ನ ಪ್ರೀತಿಯ ಅಟ್ಲಾಂಟ, ನೀನು ಇನ್ನಾದರೂ ಒಬ್ಬ ಪತಿಯನ್ನು ಹುಡುಕಿಕೊಳ್ಳಬೇಕು. ರೂಪವತಿಯಾದ ನಿನ್ನನ್ನು ಮದುವೆಯಾಗಲು ಹಲವಾರು ಯುವಕರು ಸಾಲುಗಟ್ಟಿ ನಿಂತಿದ್ದಾರೆ.” “ಅಪ್ಪಾ, ಓಟದ ಸ್ಪರ್ಧೆಯಲ್ಲಿ ಯಾರು ನನಗಿಂತ ವೇಗವಾಗಿ ಓಡುತ್ತಾನೋ ಅವನನ್ನು ನಾನು ಮದುವೆಯಾಗುತ್ತೇನೆ. ಆದರೆ ಸ್ಪರ್ಧೆಯಲ್ಲಿ ಸೋತವನ ತಲೆಕಡಿಯಬೇಕು” ಎಂದಳು.

ಡಂಗುರ ಹೊಡೆಯುವವರನ್ನು ರಾಜ್ಯದ ನಾಲ್ಕು ದಿಕ್ಕುಗಳಿಗೂ ಕಳಿಸಿ ರಾಜಕುಮಾರಿಯ ಓಟದ ಸ್ಪರ್ಧೆಯ ಬಗ್ಗೆ ಪ್ರಚಾರ ಮಾಡಲಾಯಿತು. ಸೋತರೆ ತಮ್ಮ ತಲೆದಂಡ ಎಂದು ತಿಳಿದಿದ್ದರೂ ಓಟದ ಸ್ಪರ್ಧೆಯ ದಿನ ಹಲವಾರು ರಾಜಕುಮಾರರು ಸ್ಪರ್ಧೆಗೆ ಆಗಮಿಸಿದ್ದರು.

ಮೊದಲನೇ ಸ್ಪರ್ಧಿಯೊಂದಿಗೆ ಓಟದ ಸ್ಪರ್ಧೆ ಶುರುವಾಯಿತು. ಅವನೂ ಅಟ್ಲಾಂಟಳೂ ಸ್ಪರ್ಧೆಯ ಮುಕ್ತಾಯದ ಗೆರೆಯತ್ತ ವೇಗವಾಗಿ ಓಡಿದರು. ಆದರೆ ಆತ ಅಟ್ಲಾಂಟಳಿಗೆ ಯಾವ ರೀತಿಯಲ್ಲಿಯೂ ಸರಿಸಾಟಿಯಾಗಿರಲಿಲ್ಲ. ಅಟ್ಲಾಂಟ ಅವನಿಗಿಂತ ಹತ್ತಾರು ಅಡಿ ಮುಂದಕ್ಕೆ ಓಡಿ ಸುಲಭವಾಗಿ ಸ್ಪರ್ಧೆ ಗೆದ್ದಳು. ಅವನನ್ನು ಅರಮನೆಯ ಯೋಧರು ತಲೆಕಡಿಯಲಿಕ್ಕಾಗಿ ಹೊರಕ್ಕೆ ಒಯ್ದರು. ಇನ್ನೂ ನಾಲ್ವರು ಸ್ಪರ್ಧಿಗಳನ್ನು ಓಟದ ಸ್ಪರ್ಧೆಯಲ್ಲಿ ಸೋಲಿಸಿದಳು ಅಟ್ಲಾಂಟ.

ಇನ್ಯಾರೂ ಅಟ್ಲಾಂಟಳ ಜೊತೆ ಸ್ಪರ್ಧೆಗೆ ಬರಲಿಲ್ಲ. ಅವಳು ಮಹಾರಾಜನ ಬಳಿ ಹೋಗಿ ಕೇಳಿದಳು, “ಅಪ್ಪಾ, ಓಟದಲ್ಲಿ ನನ್ನನ್ನು ಸೋಲಿಸುವವರು ಯಾರೂ ಇಲ್ಲ. ನಾನಿನ್ನು ಬೇಟೆಗೆ ಹೋಗಲೇ?” ಮಹಾರಾಜ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ.

ಅದೊಂದು ದಿನ ಯುವರಾಜನೊಬ್ಬ ಅರಮನೆಗೆ ಬಂದ. ಅವನು ಅಟ್ಲಾಂಟಳ ಸಾಮರ್ಥ್ಯ ಮತ್ತು ಸಾಹಸಗಳ ಬಗ್ಗೆ ಕೇಳಿದ್ದ. ಮದುವೆಯಾಗಲು ಅವಳ ಷರತ್ತನ್ನೂ ತಿಳಿದಿದ್ದ. ಅವನ ಹೆಸರು ಮೆಲಾನಿಯಾನ್. ಅವನು ಅವನ ರಾಜ್ಯದಲ್ಲಿ ಅತ್ಯಂತ ವೇಗದ ಓಟಗಾರ. ತಾನು ಅಟ್ಲಾಂಟಳ ಜೊತೆ ಓಟದ ಸ್ಪರ್ಧೆಗಾಗಿ ಬಂದಿರುವುದಾಗಿ ತಿಳಿಸಿದ.

ಮಹಾರಾಜನ ಮಂತ್ರಿಗಳು ಅವನ ಬಳಿ ಹೋಗಿ ಹೇಳಿದರು, “ರಾಜಕುಮಾರಿಯನ್ನು ಓಟದ ಸ್ಪರ್ಧೆಯಲ್ಲಿ ಸೋಲಿಸುತ್ತೇನೆಂದು ನೀನು ಯೋಚಿಸುವುದು ಮೂರ್ಖತನ. ನಿನ್ನಂತಹ ಸುಂದರಾಂಗ ಹಾಗೂ ಸಮರ್ಥ ಯುವಕ ಓಟದ ಸ್ಪರ್ಧೆಯಲ್ಲಿ ಸೋತು ತಲೆದಂಡ ಕೊಡುವುದು ಸರಿಯಲ್ಲ.” ಆದರೆ ಮೆಲಾನಿಯಾನ್ ತಾನು ಓಟದ ಸ್ಪರ್ಧೆಗಾಗಿಯೇ ಬಂದಿರುವುದಾಗಿ ದೃಢವಾಗಿ ಹೇಳಿದ. ಅನಂತರ ಮಹಾರಾಜನ ಬಳಿಗೆ ಕರೆದೊಯ್ದರು. ಆಗಲೂ ಮೆಲಾನಿಯಾನ್ ತನ್ನ ದೃಢ ನಿರ್ಧಾರವನ್ನು ತಿಳಿಸಿದ.

ಮರುದಿನವೇ ಓಟದ ಸ್ಪರ್ಧೆ ಎಂದು ಮಹಾರಾಜ ಘೋಷಿಸಿದ. ದೂರದೂರದ ಊರುಗಳಿಂದಲೂ ಜನರು ಓಟದ ಸ್ಪರ್ಧೆ ನೋಡಲು ಜಮಾಯಿಸಿದರು. ಅದು ಮೂರು ಮೈಲಿನ ಓಟದ ಸ್ಪರ್ಧೆ. ಮಹಾರಾಜ ಸ್ಪರ್ಧೆಯ ಮುಕ್ತಾಯದ ಗೆರೆಯ ಎದುರು ಆಸೀನನಾದ. ಅಟ್ಲಾಂಟ ಮತ್ತು ಮೆಲಾನಿಯಾನ್ ಸ್ಪರ್ಧೆಯ ಆರಂಭದ ಗೆರೆಯಲ್ಲಿ ನಿಂತರು. ಮಂತ್ರಿಯೊಬ್ಬರು ಘೋಷಿಸಿದೊಡನೆ ಸ್ಪರ್ಧೆ ಆರಂಭವಾಯಿತು.

ಮೆಲಾನಿಯಾನ್ ಓಟದಲ್ಲಿ ಮುಂದೆ ಸಾಗಿದ. ಆದರೆ ಅಟ್ಲಾಂಟ ಬೇಕೆಂದೇ ಮೆಲಾನಿಯಾನಿಗೆ ಮುಂದೆ ಓಡಲು ಅವಕಾಶ ನೀಡಿದ್ದಳು. ಸ್ಪರ್ಧೆಯ ಮುಕ್ತಾಯ ಗೆರೆ ಹತ್ತಿರವಾದಾಗ ತಾನು ಆತನನ್ನು ಸುಲಭವಾಗಿ ಹಿಂದಿಕ್ಕಬಲ್ಲೆ ಎಂಬುದು ಅವಳ ವಿಶ್ವಾಸ. ಆದರೆ ಮೆಲಾನಿಯಾನ್ ಬುದ್ಧಿವಂತ. ಆತ ಮೂರು ಚಿನ್ನದ ಸೇಬುಗಳನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ. ಅಟ್ಲಾಂಟ ತನ್ನ ಬೆನ್ನಿಗೇ ಇದ್ದಾಳೆಂದು ಮೆಲಾನಿಯಾನಿಗೆ ತಿಳಿದಿತ್ತು. ಅವಳ ನೆರಳು ತನ್ನ ಪಕ್ಕದಲ್ಲಿ ಕಾಣಿಸಿದರೆ ಅದು ಅವಳು ತನ್ನನ್ನು ಹಿಂದಿಕ್ಕಲು ಬರುತ್ತಿದ್ದಾಳೆ ಎಂಬುದರ ಸೂಚನೆ ಎಂದವನಿಗೆ ಗೊತ್ತಿತ್ತು.

ಒಂದು ಮೈಲು ದೂರ ಓಡಿದಾಗ ತನ್ನ ಪಕ್ಕದಲ್ಲಿ ಅಟ್ಲಾಂಟಳ ನೆರಳು ಕಾಣಿಸಿಕೊಂಡದ್ದನ್ನು ಮೆಲಾನಿಯಾನ್ ಗಮನಿಸಿದ. ತಕ್ಷಣವೇ ಅವನು ಒಂದು ಚಿನ್ನದ ಸೇಬನ್ನು ತನ್ನ ಜೇಬಿನಿಂದ ತೆಗೆದು ನೆಲಕ್ಕೆ ಹಾಕಿದ. ಅದನ್ನು ಕಂಡ ಅಟ್ಲಾಂಟ, “ಓ, ಎಷ್ಟು ಚಂದದ ಚಿನ್ನದ ಸೇಬು. ಇದು ನನಗೆ ಬೇಕು” ಎನ್ನುತ್ತಾ ಬಾಗಿ ಅದನ್ನು ಎತ್ತಿಕೊಂಡಳು. ಅಷ್ಟರಲ್ಲಿ ಮೆಲಾನಿಯಾನ್ ಮುಂದಕ್ಕೆ ಓಡಿದ್ದ. ಆತನನ್ನು ಸುಲಭವಾಗಿ ಹಿಂದಿಕ್ಕಬಲ್ಲೆ ಎಂದು ಯೋಚಿಸುತ್ತಾ ಅಟ್ಲಾಂಟ ಬಹಳ ವೇಗವಾಗಿ ಓಡಿದಳು.

ಎರಡನೆಯ ಮೈಲು ದಾಟಿದಾಗ ತನ್ನ ಪಕ್ಕದಲ್ಲಿ ಪುನಃ ಅಟ್ಲಾಂಟಳ ನೆರಳು ಕಾಣಿಸಿಕೊಂಡದ್ದನ್ನು ಮೆಲಾನಿಯಾನ್ ನೋಡಿದ. ಒಡನೆಯೇ ಅವನು ಎರಡನೆಯ ಚಿನ್ನದ ಸೇಬನ್ನು ಕೆಳಕ್ಕೆ ಹಾಕಿದ. ಅದನ್ನು ಕಂಡ ಅಟ್ಲಾಂಟ ಅಚ್ಚರಿಯಿಂದ, “ಓ, ಇನ್ನೊಂದು ಚಿನ್ನದ ಸೇಬು. ನನ್ನ ಅದೃಷ್ಟ” ಎನ್ನುತ್ತಾ ಬಾಗಿ ಅದನ್ನೂ ಎತ್ತಿಕೊಂಡು ಮುಂದಕ್ಕೆ ಓಡಿದಳು..

ಇಬ್ಬರೂ ಮುಂದಕ್ಕೆ ಓಡುತ್ತಿದ್ದರು. ದೂರದಲ್ಲಿ ಮುಕ್ತಾಯದ ಗೆರೆ ಕಾಣಿಸಿದಾಗ, ಮೆಲಾನಿಯಾನನ್ನು ಈಗ ಹಿಂದಿಕ್ಕಲೇ ಬೇಕೆಂದು ನಿರ್ಧರಿಸಿದ ಅಟ್ಲಾಂಟ ಹಲ್ಲುಕಚ್ಚಿ ವೇಗವಾಗಿ ಓಡಿದಳು. ಅವಳು ಪಕ್ಕಕ್ಕೆ ಬರುತ್ತಿದ್ದಂತೆ ಮೆಲಾನಿಯಾನ್ ಮೂರನೆಯ ಚಿನ್ನದ ಸೇಬನ್ನೂ ನೆಲಕ್ಕೆ ಹಾಕಿದ. ಅದನ್ನು ಕಂಡ ಅಟ್ಲಾಂಟಳಿಗೆ ಆಸೆ ತಡೆಯಲಾಗಲಿಲ್ಲ. ಚಕ್ಕನೆ ಬಾಗಿ ಅದನ್ನೂ ಎತ್ತಿಕೊಂಡು ಅವಳು ಇನ್ನಷ್ಟು ವೇಗವಾಗಿ ಮುಂದೋಡಿದಳು - ಅವನನ್ನು ಹಿಂದಿಕ್ಕಬಲ್ಲೆ ಎಂಬ ವಿಶ್ವಾಸದಿಂದ.

ಹೆಚ್ಚೆಚ್ಚು ವೇಗವಾಗಿ ಓಡುತ್ತಾ ಮೆಲಾನಿಯಾನ್ ಪಕ್ಕಕ್ಕೆ ಬರತೊಡಗಿದಳು ಅಟ್ಲಾಂಟ. ಸ್ಪರ್ಧೆಯ ಮುಕ್ತಾಯ ಗೆರೆ ಹತ್ತಿರ ಬಂದಾಗ ಅಟ್ಲಾಂಟ ಅವನ ಪಕ್ಕಕ್ಕೆ ಬಂದಿದ್ದಳು. ಆದರೆ ಮೆಲಾನಿಯಾನ್ ಮುನ್ನುಗ್ಗಿ ಮುಕ್ತಾಯ ಗೆರ ದಾಟಿ ಸ್ಪರ್ಧೆ ಗೆದ್ದ. ಅಲ್ಲಿ ನೆರೆದಿದ್ದ ಜನರೆಲ್ಲ ಜಯಘೋಷ ಹಾಕಿದರು. ಮಹಾರಾಜ ಸಂತೋಷದಿಂದ ನಗುತ್ತಾ ಮೆಲಾನಿಯಾನ್ ಸ್ಪರ್ಧೆಯಲ್ಲಿ ವಿಜಯಿ ಎಂದು ಘೋಷಿಸಿದ.

ಅಟ್ಲಾಂಟ ಅಲ್ಲೇ ನಿಂತು ದೀರ್ಘವಾಗಿ ಉಸಿರೆಳೆದುಕೊಂಡಳು. ತಾನು ಓಟದ ಸ್ಪರ್ಧೆಯಲ್ಲಿ ಸೋತಿದ್ದೇನೆ ಎಂದು ಒಪ್ಪಿಕೊಂಡ ಅಟ್ಲಾಂಟ ಇನ್ನೆಂದೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದಳು. ಮೆಲಾನಿಯಾನನ್ನು ಮೊದಲ ನೋಟದಲ್ಲೇ ತಾನು ಮೆಚ್ಚಿಕೊಂಡಿದ್ದೆ ಎಂಬುದನ್ನೂ ತನ್ನ ತಂದೆಗೆ ನಾಚಿಕೆಯಿಂದ ತಿಳಿಸಿದಳು.

ಅವತ್ತೇ ಮಹಾರಾಜ ಅಟ್ಲಾಂಟ ಮತ್ತು ಮೆಲಾನಿಯಾನರ ಮದುವೆ ನೆರವೆರಿಸಿದ. ಅನಂತರ ಅವರು ಅರಮನೆಯ ಪಕ್ಕದ ಬಂಗಲೆಯಲ್ಲಿ ಬಹುಕಾಲ ಸುಖಸಂತೋಷದಿಂದ ಬಾಳಿದರು.