ಓಡುತಿದೆ ಸಮಯ

ಓಡುತಿದೆ ಸಮಯ

ಕವನ

 ****ಓಡುತಿದೆ ಸಮಯ****

 
ಓಡುತಿದೆನೋಡೋಡುತಿದೆ ಸಮಯ
ದಿಗ್ದಿಗಂತಗಳೆಲ್ಲೆ ಮೀರಿ
ಹಂಗುಗಳಿಲ್ಲದೆ ಎಲ್ಲು ನಿಲ್ಲದೆ
ಸ್ವಚ್ಛಂದವಾಗಿ ಜಾರಿ
ದೇಶ,ಭಾಷೆ, ವರ್ಗಗಳಾತಿತವಾಗಿ
ಹಾರುತಿದೆ ತನಗಿಲ್ಲದೆ ಗುರಿ
 
ಖಗ,ಮಿಗ,ಮರಗಳಾತ್ಮದಾಳದಲಿ ಹಾದು,
ಮಣ್ಣಧೂಳ ಕಣಕಣದೊಳಗೆ ಕಲೆದು,
ನಭ, ನಕ್ಷತ್ರ, ನೀರೊಳಗೆ ಮಿಂದು,
ಆದಿ ಅಂತ್ಯಗಳರಿವಿಲ್ಲದೋಡುತಿದೆ ಏರುತ ಕ್ಷಣಗಳಂಬಾರಿ
 
ಕಥೆ,ಕಾವ್ಯ,ಕಾದಂಬರಿಗಳಲಿ ಮೆರೆದು,
ವರ್ಣಚಿತ್ರ,ಶಿಲ್ಪಕಲೆಗಳಲಿ ಮೊರೆದು,
ಗಾನ,ಧ್ಯಾನ,ತಪಸ್ಸಿನೊಳಗೆ ಕಲೆದು
ಜಗದ ಸತ್ಯವನಾಚರಿಸುತಿದೆ ಸಾರಿ ಸಾರಿ
 
ನೆನಹುಗಳ ಬಿಂಬಕಿಡಿಯುವುದು ಕನ್ನಡಿ,
ವಾಂಛೆಗಳ ಧಮನಪಧಮನಿಗಳಿಗಿದುವೆ ನಾಡಿ,
ಅನಾಗತ ಕಾಲ ಕಾವ್ಯಸಿರಿಗಿದು ಮುನ್ನುಡಿ,
ಓಡುತಿಹ ಸಮಯವಿದು ಸೂತ್ರವಿಲ್ಲದ ಪಾತ್ರಧಾರಿ
 
ಹರಿಹರಬ್ರಹ್ಮರೊಡೆತನದಲ್ಲಿದುವಿಲ್ಲ,
ಯುಗಯುಗಾಂತರಗಳ ಲೆಕ್ಕವಿದುಕಿಲ್ಲ,
ಬ್ರಂಹ್ಮಾಂಡ ಪರಿಧಿಯೊಳಗಿದಕೆ ಭವವಿಲ್ಲ,
ಜಗದಣುರೇಣುತೃಣಕಾಷ್ಟಗಳಲಿ ಭೊರ್ಗರೆದರಿಸುತಿದೆ ಕ್ಷಣದ ಝರಿ
 
ಚರಾಚರವಸ್ತುಗಳಲಿದರ ರಿಂಗಣ
ಗತ,ವಾಸ್ತವ,ಭವಿಷ್ಯದ್ರೂಪಗಳ ಸಮ್ಮೇಳಣ
ನೋಡುತಿಹುದೀಸಮಯ ತ್ರಿಕಾಲಗಳ ತೆರೆದು ಬಿಚ್ಚುಗಣ್ಣ
ಜಗದುಟ್ಟುಗಳಿಗಾದಿ, ಮೃತ್ಯುಗಂತ್ಯವನು ಬರೆದು ಸಾಗಿಹುದಿಡಿದು ತನ್ನ ದಾರಿ
 
ಅರಮನೆಯಲಿ,ಜೋಪಡಿಯಲಿ,ಸೆರೆಮನೆಯಲಿ,
ರಣರಂಗದಲಿ,ಪುಷ್ಪವನದಲಿ,ಮರುಭೂಮಿಯಲಿ,
ತ್ರಿಗುಣದಲಿ,ಭಕ್ತಿಯಲಿ,ಬಾವದಲಿ,
ತತ್ವದಲಿ,ತರ್ಕದಲಿ,ಕಲೆಗಳಲಿ,
ಸಕಲ ಸೃಷ್ಟಿಸಂಕಲ್ಪದಲಿ ಚಲಿಸುತಿದೆ ಸಮಯ ವಿರಾಡ್ರೂಪವ ತೋರಿ
 
 
- ಚಂದ್ರಹಾಸ

Comments