ಓದಿನ ಸಂಸ್ಕೃತಿಗೆ ಅಡ್ಡಿ ಬೇಡ

ಓದಿನ ಸಂಸ್ಕೃತಿಗೆ ಅಡ್ಡಿ ಬೇಡ

ಅಂಚೆ ಇಲಾಖೆಯು ಪುಸ್ತಕ, ಪತ್ರಿಕೆ ಸಾಗಣೆ ವೆಚ್ಚ ಪರಿಷ್ಕರಣೆ ಮಾಡಿದೆ. ಚಿನ್ನದಂತೆ ಗ್ರಾಂ ಲೆಕ್ಕದಲ್ಲಿ ತೂಗಿ ದರ ನಿಗದಿ ಪಡಿಸುವ ಹೊಸ ಪದ್ಧತಿಯ ಜತೆಗೆ ಜಿ ಎಸ್ ಟಿ ವಿಧಿಸುತ್ತಿರುವುದರಿಂದ ಪುಸ್ತಕ ರವಾನೆ ವೆಚ್ಚ ಸಹಜವಾಗಿಯೇ ಹೆಚ್ಚಳವಾಗಿದೆ. ಇದರಿಂದ ಪುಸ್ತಕ ಓದುವ ಸಂಸ್ಕೃತಿಗೆ ದೊಡ್ಡ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಪತ್ರಗಳು ಸಹ ೫೦೦ ಗ್ರಾಂಗಿಂತ ಹೆಚ್ಚುತೂಗಿದರೆ ಅಂಥವುಗಳ ಅಂಚೆ ವೆಚ್ಚ ಹೆಚ್ಚಲಿದೆ. ಪ್ರಮುಖವಾಗಿ ಪುಸ್ತಕ, ನಿಯತಕಾಲಿಕೆಗಳ ಸಾಗಾಟ ದರ ಹೆಚ್ಚಿಸಿರುವುದು ಓದುಗರು ಮತ್ತು ಪ್ರಕಾಶಕರುಗಳಿಗೆ ತಲೆನೋವು ಉಂಟು ಮಾಡಲಿದೆ. ಈಗ ಪುಸ್ತಕ ಆಗಲಿ, ನಿಯತಕಾಲಿಕೆಗಳನ್ನಾಗಲಿ ಓದುವವರ ಸಂಖ್ಯೆಯೇ ಕ್ಷೀಣಿಸುತ್ತಿರುವ ಹೊತ್ತಲ್ಲಿ ದರ ಏರಿಕೆ ಹೊರೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ.

ಈ ಮೊದಲು ೨ ರೂ. ಅಂಚೆ ಚೀಟಿ ಹಚ್ಚಿ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ಕಳುಹಿಸಿಕೊಡಬಹುದಿತ್ತು. ಕೊರೊನಾ ನಂತರ ಪುಸ್ತಕ ಸಾಗಣೆ ವೆಚ್ಚ ೨೨ ರೂಗೆ ಏರಿಕೆಯಾಯಿತು. ಕಳೆದ ಆರು ತಿಂಗಳ ಹಿಂದೆ ಪುಸ್ತಕ ಸಾಗಾಟಕ್ಕೂ ೧೦ ರೂ. ಜಿ ಎಸ್ ಟಿ ವಿಧಿಸಿದ್ದರಿಂದ ಬೆಲೆ ಇನ್ನಷ್ಟು ಏರಿಕೆ ಆಗಿ ಸಮಸ್ಯೆಯಾಗಿತ್ತು. ಆದರೆ ಈಗ ಅಂಚೆ ಇಲಾಖೆ ಕೆಲ ಸೇವೆಗಳನ್ನು ವಿಲೀನಗೊಳಿಸಿ, ಅಂಚೆ ಸೇವೆಯ ದರ ಪರಿಷ್ಕರಿಸಿದೆ.

ಪುಸ್ತಕ ಸಾಗಣೆ ಸಂಬಂಧ ಪ್ರತಿ ೫೦ ಗ್ರಾಂಗೆ ೩ ರೂ. ದರ ಅಂಚೆ ಇಲಾಖೆ ನಿಗದಿ ಪಡಿಸಿದೆ. ಇದರ ಜತೆ ರಿಜಿಸ್ಟ್ರೇಷನ್ ಶುಲ್ಕ ೧೭ ರೂ. ಇದೆ. ಇದರ ಮೇಲೆ ಇನ್ನೂ ೧೦ ರೂ. ಜಿ ಎಸ್ ಟಿ ಹೇರಲಾಗುತ್ತದೆ. ಅಲ್ಲಿಗೆ ೫೦೦ ಗ್ರಾಂ ಇರುವ ಒಂದು ಪುಸ್ತಕ ಸಾಗಾಟ ಮಾಡಲು ೫೭ ರೂ ನಿಂದ ೬೦ ರೂ. ವೆಚ್ಚ ಭರಿಸಬೇಕಾಗುತ್ತದೆ. ಡಿಜಿಟಲ್ ಅಬ್ಬರದ ನಡುವೆ ಸಿಲುಕಿ ಸೊರಗುತ್ತಿರುವ ಪುಸ್ತಕೋದ್ಯಮಕ್ಕೆ ಇದು ಗಾಯದ ಮೇಲೆ ಬರೆ ಎಳೆದಿದೆ. 

ಅಂಚೆ ಸೇವೆ ಬಗ್ಗೆ ಜನರಿಗೆ ಈಗಲೂ ನಂಬಿಕೆ ಮುಕ್ಕಾಗಿಲ್ಲ. ಕೊರಿಯರ್ ವೇಗವಾಗಿ ಬೆಳೆದಿದ್ದರೂ ಜನ, ಮುಖ್ಯವಾದ ವಸ್ತುಗಳ ಸಾಗಾಟ ಮಾಡಲು ಅಂಚೆ ಇಲಾಖೆ ಮೊರೆ ಹೋಗುತ್ತಾರೆ. ಅಂಚೆ ಎಂದರೆ ನಮ್ಮದು, ಅದಕ್ಕೊಂದು ಉತ್ತರದಾಯಿತ್ವ ಇದೆ ಎನ್ನುವ ಕಾರಣಕ್ಕೆ ಪುಸ್ತಕ ಸಾಗಾಟಕ್ಕೆ ಅಂಚೆ ಬಳಕೆ ಆಗುತ್ತಿದೆ. ದರ ಹೆಚ್ಚಳದಿಂದ ಈ ಎಲ್ಲ ನಂಬಿಕೆಯ ತಂತುಗಳನ್ನು ಛಿದ್ರಗೊಳಿಸಿದಂತಾಗಿದೆ.

ಕೇಂದ್ರ ಸರಕಾರ ಈ ಬಗ್ಗೆ ತಾಳ್ಮೆಯಿಂದ ಯೋಚಿಸಬೇಕು. ಈ ಸಮಾಜ ಸರ್ವದಿಕ್ಕುಗಳಲ್ಲೂ ಶ್ರೇಷ್ಟತೆಯ ಮಜಲು ಕ್ರಮಿಸಿ ಬಂದಿರುವುದರಿಂದ ಹಿಂದೆ ಪುಸ್ತಕ ಓದಿನ ಕಾಣಿಕೆ ಇದೆ. ಓದು, ಹೆಚ್ಚು ‘ನಾಗರಿಕ’ಗೊಳಿಸುವ ಸಾಧನ. ಅದನ್ನು ಕದಲಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಪರ್ಯಾಯವಾಗಿ ಡಿಜಿಟಲ್ ಓದು ಅಭಿವೃದ್ಧಿಗೊಂಡಿದೆ ಎಂದು ಹೇಳಬಹುದಾದರೂ ಅದು ಪರಿಪೂರ್ಣತೆಯ ಘಟ್ಟ ಮುಟ್ಟದ ಅರೆ ಮಾಧ್ಯಮ. ಸದ್ಯಕ್ಕೆ ಇದರಿಂದ ಅನುಕೂಲದಷ್ಟೇ ಅಪಾಯಗಳೂ ಇವೆ. ಇಂತಹ ಸ್ಥಿತಿಯಲ್ಲಿ ಪುಸ್ತಕದ ಓದನ್ನು ಹಾಳುಗೆಡವಬಾರದು. ಪುಸ್ತಕ ಸಾಗಣೆಯ ಅಂಚೆ ವೆಚ್ಚ ಹೆಚ್ಚಿಸುವ ದುಸ್ಸಾಹಸದಿಂದ ಸರಕಾರ ತಕ್ಷಣ ಹಿಂದೆ ಸರಿಯಬೇಕು.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೪-೧೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ