ಓಶೋ ಹೇಳಿದ ಎರಡು ಕಥೆಗಳು
ತಂಗುದಾಣ
ಆ ರಾಜನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹಗಲು ತನ್ನ ಕೋಣೆಯ ಸುತ್ತಲೂ ಯಾರೋ ನಗುತ್ತಿರುವ ಸದ್ದು ಕೇಳಿ ಬರುತ್ತಿತ್ತು. ರಾಜ, ನಗುತ್ತಿರುವುದು ಯಾರೆಂದು ತಿಳಿದುಕೊಳ್ಳಲು ಸೈನಿಕರಿಗೆ ಆಜ್ಞೆ ನೀಡಿದ. ಸೈನಿಕರು ಎಲ್ಲೆಡೆ ಹುಡುಕಾಡಿ ಒಬ್ಬ ಮನುಷ್ಯನನ್ನು ತಂದು ಎದುರು ನಿಲ್ಲಿಸಿದರು.
ಹರಿದ ಬಟ್ಟೆ ಹಾಕಿಕೊಂಡಿದ್ದರೂ ಆ ಮನುಷ್ಯನ ಮುಖದಲ್ಲಿ ತೇಜಸ್ವಿ ಛಾಯೆ ! ರಾಜನಿಗೆ ಅಚ್ಚರಿಯಾಯಿತು. ರಾಜ ಕೇಳುವ ಮೊದಲೇ ಆತ ಕೇಳಿದ.
‘ನೀನು ಯಾರು? ನನಗೆ ಈ ತಂಗುದಾಣದಲ್ಲಿ ಸ್ವಲ್ಪ ದಿನ ಉಳಿದುಕೊಳ್ಳಲಿಕ್ಕಿದೆ.’
ರಾಜನಿಗೆ ಪಿತ್ತ ನೆತ್ತಿಗೇರಿತು.
‘ಇದು ತಂಗುದಾಣವಲ್ಲ, ನನ್ನ ಅರಮನೆ.’
‘ಇಲ್ಲ ಇದು ತಂಗುದಾಣ. ನಾನು ಒಂದೆರಡು ದಿನ ಇದ್ದು ಹೋಗುವನಷ್ಟೆ.’
‘ನಿನಗೆ ಅರ್ಥವಾಗುತ್ತಿಲ್ಲವೇ? ಇದು ನನ್ನ ಅರಮನೆ. ರಾಜ ನೆಲೆಸುವಂಥ ಅರಮನೆ. ಇಲ್ಲಿ ನಿನ್ನಂಥವರಿಗೆ ಜಾಗವಿಲ್ಲ.’
‘ಇಲ್ಲ. ಇದು ಪ್ರಯಾಣಿಕರ ತಂಗುದಾಣ. ನಾನು ಇಂದೊಮ್ಮೆ ಇಲ್ಲಿಗೆ ಬಂದಾಗ ಇಲ್ಲಿ ಒಬ್ಬ ಕೂತಿದ್ದ.’
‘ಹೌದು, ಅದು ನನ್ನ ತಂದೆ. ಅವರು ಆಗ ರಾಜರಾಗಿದ್ದರು.’
‘ಅದಕ್ಕೂ ಮೊದಲು ಇನ್ನೊಮ್ಮೆ ಬಂದಿದ್ದೆ. ಆಗ ಇನ್ನೊಬ್ಬನಿದ್ದ.’
‘ಹೌದು, ಅದು ನನ್ನ ತಾತ. ಅವರೂ ಒಂದು ಕಾಲದಲ್ಲಿ ರಾಜರಾಗಿದ್ದರು.’ ಆ ಮನುಷ್ಯ ನಕ್ಕು ನುಡಿದ.
‘ಇಷ್ಟು ತಿಳಿದಿದ್ದರೂ ಇದು ನಿನ್ನ ಅರಮನೆ ಎನ್ನುತ್ತಿದ್ದೀಯಲ್ಲಾ. ಆ ಕುಚಿಯಲ್ಲಿ ಕೂರುವ ಮನುಷ್ಯರು ಬದಲಾಗುತ್ತಲೇ ಇದ್ದಾರೆ. ನಾಳೆ ನಾನು ಬಂದರೆ ಇಲ್ಲಿ ನೀನು ಇರುವುದಿಲ್ಲ. ಇನ್ನೊಬ್ಬ ಇರುತ್ತಾನೆ. ಇಂತಹ ಜಾಗ ತಂಗುದಾಣವಲ್ಲದೇ ಮತ್ತಿನ್ನೇನು?’
***
ಸಾವು ಮತು ಬದುಕು
ಒಬ್ಬ ಬಡ ವ್ಯಕ್ತಿಯೊಬ್ಬನ ಹೆಂಡತಿ ಹಾಸಿಗೆ ಹಿಡಿದಿದ್ದಳು. ಕೊನೆಯುಸಿರು ಎಳೆಯುವುದರಲ್ಲಿದ್ದಳು. ಆತ ಪಕ್ಕದ ವೈದ್ಯರನ್ನು ಮನೆಗೆ ಕರೆಸಿ ಹೇಳಿದ.
‘ದಯವಿಟ್ಟು ನನ್ನ ಹೆಂಡತಿಯನ್ನು ಉಳಿಸಿ ವೈದ್ಯರೇ, ನಿಮಗೆ ಏನು ಬೇಕಾದರೂ ಕೊಡಬಲ್ಲೆ'
‘ಒಂದು ವೇಳೆ ನನ್ನ ಕೈಲಿ ಆಕೆಯನ್ನು ಉಳಿಸಲಾಗದಿದ್ದರೆ?’
ಆಕೆ ಬದುಕುಳಿಯಲಿ ಅಥವಾ ಸಾಯಲಿ, ನಾನು ನಿಮಗೆ ನಿಮ್ಮ ಮೊತ್ತವನ್ನು ಖಂಡಿತಾ ಕೊಡುತ್ತೇನೆ.’
ವೈದ್ಯರು ಭರವಸೆಯಿಂದ ಪ್ರತಿದಿನ ಆಕೆಯ ಶುಶ್ರೂಷೆ ಮಾಡಿದರು. ಆದರೆ ಒಂದು ವಾರದಲ್ಲೇ ಆಕೆ ತೀರಿಕೊಂಡಳು. ಇನ್ನೇನು ಬಡವನ ಮನೆಗೆ ವೈದ್ಯರ ಉದ್ದನೆಯ ಬಿಲ್ಲು ಬಂತು. ಬಡವ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸುಮ್ಮನಾದ. ಒಂದೆರಡು ಬಾರಿ ಕೇಳಿದ ಮೇಲೆಯೂ ಕೊಡದಿದ್ದಾಗ ವೈದ್ಯ ಊರ ಮುಖಂಡನ ಬಳಿ ಬಡವನ ವಿರುದ್ಧ ದಾವೆ ಹೂಡಿದ. ಇಬ್ಬರೂ ಪಂಚಾಯತಿಗೆ ಬಂದರು.
ವೈದ್ಯ ನುಡಿದ. ‘ಈ ವ್ಯಕ್ತಿ ಆತನ ಹೆಂಡತಿ ಸಾಯಲಿ ಅಥವಾ ಬದುಕುಳಿಯಲಿ, ಮೊತ್ತ ಭರಿಸುತ್ತೇನೆ ಎಂದಿದ್ದ.
ಮುಖಂಡ ಒಮ್ಮೆ ಉಸಿರುಬಿಟ್ಟು ಕೇಳಿದ ‘ನೀನು ಆಕೆಯನ್ನು ಬದುಕುಳಿಸಿದೆಯಾ?’
‘ಇಲ್ಲ.’
‘ಸರಿ, ಹಾಗಾದರೆ ಆಕೆಯನ್ನು ಕೊಂದೆಯಾ?’
ಅಯ್ಯೋ, ಇಲ್ಲವೇ ಇಲ್ಲ.’
‘ಹಾಗಿದ್ದರೆ ನಿನಗೆ ಆತನ ಬಳಿ ಮೊತ್ತ ಕೇಳುವ ಯಾವ ಅಧಿಕಾರವೂ ಇಲ್ಲ' ಎಂದು ಮೇಲಕ್ಕೆದ್ದ ಮುಖಂಡ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ