ಓಶೋ ಹೇಳಿದ ಎರಡು ಕಥೆಗಳು
ದೇವರ ಮಾತು
ಒಂದು ಅರಣ್ಯದಲ್ಲಿ ಒಬ್ಬ ದೇವರನ್ನು ಕುರಿತು ಹೀಗೆ ಮಾತನಾಡುತ್ತಿದ್ದ. ‘ದೇವರೇ ನೀನು ಏಕಾಂಗಿಯಲ್ಲ. ನಿನ್ನೊಂದಿಗೆ ನಾನಿದ್ದೇನೆ. ನಾನು ನೀನಿರುವಲ್ಲಿಗೆ ಬಂದು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ. ನಾನು ನಿನಗೆ ಸ್ನಾನ ಮಾಡಿಸುವೆ, ನಿನ್ನ ತಲೆಕೂದಲು ಬಾಚುವೆ, ನಿನ್ನಿಷ್ಟದ ಅಡುಗೆ ಮಾಡಿ ಕೊಡುವೆ, ನಿನಗೆ ಹಾಸಿಗೆ ಹಾಸಿ ಕೊಡುವೆ, ನಿನಗೆ ಮೈ ಸರಿಯಿಲ್ಲದಾಗ ನಿನ್ನ ಶುಶ್ರೂಷೆ ಮಾಡುವೆ, ನಿನಗೆ ತಾಯಿಯಾಗಿ, ಪತ್ನಿಯಾಗಿ, ಕೆಲಸದಾಳುವಾಗಿ ನಿನ್ನೊಂದಿಗೆ ಇರಬಲ್ಲೆ ಹೇಳು ನಾನು ಬರಲೇ?’
ಇದನ್ನು ಕೇಳಿಸಿಕೊಂಡ ಪಾದ್ರಿಗೆ ಆತನಿಗೆ ಬುದ್ಧಿ ಹೇಳಬೇಕೆನಿಸಿತು. ಆತನನ್ನು ಕರೆದು ದೇವರಿಗೆ ಪ್ರಾರ್ಥನೆ ಮಾಡುವ ವಿಧಾನ ಇದಲ್ಲ ಎಂದು ಪ್ರಾರ್ಥಿಸುವ ವಿಧಾನವನ್ನು ಕಲಿಸಿದ. ಆತನೋ ಪಾದ್ರಿ ಹೇಳಿದ್ದೆಲ್ಲವನ್ನೂ ಶ್ರದ್ಧೆಯಿಂದ ಕೇಳಿಸಿಕೊಂಡು ಇದೇ ತೆರನಾಗಿ ಪ್ರಾರ್ಥಿಸುವೆ ಎಂದು ಹೇಳಿ ಪಾದ್ರಿಯ ಕ್ಷಮೆಯಾಚಿಸಿದ.
ಪಾದ್ರಿ ತುಸು ಮುಂದೆ ತೆರಳುವಾಗ ಒಂದು ಅಶರೀರವಾಣಿ ಕೇಳಿಸಿತು.
“ತಪ್ಪು ಮಾಡಿದೆ ನೀನು. ನಾನು ನಿಮ್ಮಂತವರನ್ನು ಸೃಷ್ಟಿಸಿದ್ದು ನನ್ನ ಮತ್ತು ಮಾನವರ ನಡುವೆ ಒಂದು ಕೊಂಡಿಯಂತೆ ಕೆಲಸ ಮಾಡಲು. ಆ ವ್ಯಕ್ತಿ ಒಂದು ಅದ್ಭುತವಾಗಿದ್ದ. ಅವನೇನನ್ನು ನುಡಿಯುತ್ತಿದ್ದನೋ ಅದರಲ್ಲಿ ವಿಪರೀತ ಪ್ರೀತಿಯಿತ್ತು. ಕಪಟದ ಲವಲೇಶವೂ ಇರಲಿಲ್ಲ. ಇಷ್ಟು ದಿನ ಆತ ಹೃದಯದಿಂದ ಪ್ರಾರ್ಥಿಸುತ್ತಿದ್ದ. ಈಗ ನೀನು ಹೇಳಿಕೊಟ್ಟದ್ದನ್ನು ಇನ್ನು ಮುಂದೆ ನಾಲಿಗೆಯಲ್ಲಿ ನುಡಿಯುತ್ತಾನಷ್ಟೇ."
***
ನಂಬಲಸಾಧ್ಯ
ಒಂದೂರಿನಲ್ಲಿ ಒಬ್ಬನಿದ್ದ. ಆತನ ಹೆಸರು Unbelievable (ನಂಬಲಸಾಧ್ಯ). ಆತನ ಹೆಂಡತಿ ಬಹಳ ಒಳ್ಳೆಯವಳು. ಅವರಿಬ್ಬರದ್ದು ಅನುರೂಪ ಜೋಡಿ. ಅವರ ದಾಂಪತ್ಯದಲ್ಲಿ ಅಸಮಧಾನ, ಬೇಸರ ಎಂಬುದೇ ಇರಲಿಲ್ಲ. ಒಂದು ದಿನ Unbelievable ಕಾಯಿಲೆ ಬಿದ್ದ. ಆತನಿಗೆ ಬದುಕಿ ಉಳಿಯುವುದಿಲ್ಲ ಎಂಬುದು ಖಾತ್ರಿಯಾಯಿತು. ಆತ ಹೆಂಡತಿಯನ್ನು ಕರೆದು ‘ಡಾರ್ಲಿಂಗ್, ನಾನು ಬದುಕುವುದು ಅನುಮಾನ. ನಾನು ಸತ್ತ ನಂತರ ನನ್ನ ಸಮಾಧಿಯ ಮೇಲೆ ಯಾವ ಕಾರಣಕ್ಕೂ ನನ್ನ ಹೆಸರನ್ನು ಬರೆಸಬೇಡ. ಕಾರಣ ಜೀವಮಾನವಿಡೀ ಈ ವಿಚಿತ್ರ ಅಸಹ್ಯವಾದ ಹೆಸರನ್ನು ಕರೆಯಿಸಿಕೊಂಡು ಸಾಕಾಗಿ ಹೋಗಿದೆ. Unbelievable ಎಂಬುದು ಒಂದು ಹೆಸರಾ? ಛೀ ಬೇಡ.. ಬೇಡ. ನೀನು ನನ್ನ ಸಮಾಧಿ ಮೇಲೆ ಯಾವುದಾದರೂ ಉತ್ತಮ ವಾಕ್ಯವನ್ನು ಬರೆಯಿಸು. ಆದರೆ ನನ್ನ ಹೆಸರು ಮಾತ್ರ ಬಿಲ್ ಕುಲ್ ಬೇಡ. ಸತ್ತ ನಂತರವೂ Unbelievable ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವುದು ನನಗೆ ಬೇಡ. ಗಂಡನ ಅಂತಿಮ ಕೋರಿಕೆಗೆ ಹೆಂಡತಿ ಸಮ್ಮತಿಸಿದಳು.
ಕೆಲ ದಿನಗಳ ಬಳಿಕ Unbelievable ನಿಧನನಾದ. ಅವನ ಸಮಾಧಿ ಮೇಲೆ ಹೆಂಡತಿ ಬರೆಯಿಸಿದಳು - “ಸಮಾಧಿಯಲ್ಲಿ ಚಿರನಿದ್ರೆಯಲ್ಲಿರುವ ವ್ಯಕ್ತಿ ತನ್ನ ಹೆಂಡತಿಗೆ ಜೀವನದುದ್ದಕ್ಕೂ ನಿಷ್ಟನಾಗಿದ್ದ. ಒಮ್ಮೆಯೂ ಆತ ಹೆಂಡತಿಗೆ ಮೋಸ ಮಾಡಿದವನಲ್ಲ. ಇಂಥ ವಿಧೇಯ ಗಂಡ ಸಿಗುವುದು ಅಪರೂಪ".
ಆ ಸಮಾಧಿಯ ಮೇಲಿನ ಈ ವಾಕ್ಯವನ್ನು ಓದಿದವರೆಲ್ಲ ಉದ್ಗಾರ ತೆಗೆಯುತ್ತಿದ್ದರು. - ಇಟ್ಸ್ Unbelievable.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ