ಓಶೋ ಹೇಳಿದ ಎರಡು ಕಥೆಗಳು

ಆ ಹುಲಿ ಕೊನೆಗೂ ಗರ್ಜಿಸಿತು
ಆ ಹುಲಿಮರಿ ಬಹಳ ಬೇಗ ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಯ್ತು. ಒಂದು ಕಾಡು ಕುರಿಗಳ ಸಮೂಹ ಆ ಮರಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಂಡಿತು. ಹುಲಿ ಮರಿಯೂ ಕುರಿಗಳೊಂದಿಗೆ ಸೇರಿ ಕುರಿಗಳಂತೆಯೇ ಆಡಲಾರಂಭಿಸಿತು. ಆ ಹಿಂಡಿನ ಜೊತೆಗೆ ಸೇರಿ ಹುಲ್ಲು ತಿನ್ನುತ್ತಿತ್ತು. ಕುರಿಗಳಂತೇ ಕೂಗುತ್ತಿತ್ತು. ತಾನೂ ಒಂದು ಕುರಿಯೆಂದೇ ತಿಳಿದು ಕುರಿ ಏನು ಮಾಡುತ್ತೋ ಹಾಗೆಲ್ಲಾ ಇದೂ ಮಾಡುತ್ತಿತ್ತು.
ಒಮ್ಮೆ ಆ ಕಾಡಿನಲ್ಲಿದ್ದ ವಯಸ್ಸಾದ ಹುಲಿ ಬಯಲಲ್ಲಿ ಅಡ್ಡಾಡುತ್ತಾ ಕುರಿಯ ಮೇಲೆರಗಲು ಹೊಂಚು ಹಾಕುತ್ತಿತ್ತು. ಏನಾಶ್ಚರ್ಯ! ಈ ಮೊದಲೇ ಹುಲಿಯೊಂದು ಆ ಹಿಂಡಿನೊಂದಿಗೆ ಸೇರಿಕೊಂಡಿದೆ. ಆ ಹುಲಿ ಕುರಿಯೊಂದನ್ನು ಬಲಿ ಹಾಕುತ್ತೆ ಅಂತ ನೋಡಿದರೆ, ಊಂ ಇಲ್ಲ. ಇನ್ನೂ ಹತ್ತಿರ ಹೋಗಿ ನೋಡಿತು. ಅರೆ, ಹುಲಿ ಕುರಿಯಂತೆ ಬಯಲಲ್ಲಿ ಹುಲ್ಲು ಮೇಯುತ್ತಿದೆ. ಈಗ ಹುಲಿಗೆ ತಡೆದುಕೊಳ್ಳಲಾಗಲಿಲ್ಲ. ನೇರ ಆ ಹಿಂಡಿಗೆ ಹೋಗಿ ಆ ಹುಲಿಯನ್ನು ಅಡ್ಡ ಹಾಕಿತು. ಆ ಹುಲಿಯೋ ಕುರಿಯೊಂದು ಹುಲಿಯನ್ನು ಕಂಡು ಹೇಗೆ ಪ್ರತಿಕ್ರಿಯಿಸುತ್ತೋ ಆ ಥರ ಕಿರುಚಾಡತೊಡಗಿತು. ಕೊನೆಗೆ ಆ ಹುಲಿಯನ್ನು ವಯಸ್ಕ ಹುಲಿ ಒಂದು ಕೆರೆಯ ಬಳಿ ತಂದು ನಿಲ್ಲಿಸಿತು.
ಕೆರೆ ನೀರಲ್ಲಿ ಈ ಹುಲಿ ಮರಿ ಮುಖ ನೋಡಿದ್ರೆ ಥೇಟ್ ಹುಲಿಯದೇ ಮುಖ. ಅರೆ ಇದೇನಿದು, ಮ್ಯಾಜಿಕ್, ಕುರಿಯಾದ ತಾನು ಕೊಳದ ಬಳಿ ಬಂದ ಕೂಡಲೇ ಹುಲಿ ಹೇಗಾದೆ? ಅಂತಲೇ ಅದರ ಯೋಚನೆ ಸಾಗುತ್ತಿತ್ತು. ಕೊನೆಗೆ ಆ ವಯಸ್ಕ ಹುಲಿ ಈ ಯುವ ಹುಲಿಯನ್ನು ತನ್ನ ಗುಹೆಗೆ ಕರೆದುಕೊಂಡು ಹೋಯಿತು. ಆಗ ಈ ಹುಲಿಗೆ ಕೊಂಚ ಧೈರ್ಯ ಬಂದಿತ್ತು. ಗುಹೆಯಲ್ಲಿದ್ದ ಮಾಂಸವನ್ನು ಇದರ ಮುಂದಿಟ್ಟಿತು. ಆರಂಭದಲ್ಲಿ ಅನುಮಾನಿಸಿದ ಹುಲಿ ಮಾಂಸವನ್ನು ಅಘ್ರಾಣಿಸಿತು. ನಿಧಾನಕ್ಕೆ ಮಾಂಸದ ವಾಸನೆ ರುಚಿ ಮೂಗಿಗೆ ಹತ್ತಿತು. ಅಷ್ಟೊತ್ತಿಗೆ ಗಂಟಲಿಂದ ಅಚಾನಕ್ ಆಗಿ ಘರ್ಜನೆಯೊಂದು ಹೊರಹೊಮ್ಮಿತು. ಕುರಿಗಳೊಂದಿಗೆ ಎಂದೂ ಯಾವತ್ತೂ ಹಾಗೆ ಘರ್ಜಿಸದ ಹುಲಿ ಈಗ ಮಾಂಸದ ವಾಸನೆ ಹತ್ತಿದ ಕೂಡಲೇ ಘರ್ಜಿಸಿದ್ದು ಆ ದೊಡ್ಡ ಹುಲಿಯಲ್ಲಿ ಕೊಂಚವೂ ಅಚ್ಚರಿ ತರಿಸಲಿಲ್ಲ.
ಇಷ್ಟುಹೇಳಿ ಓಶೋ ಕತೆ ಮುಗಿಸುತ್ತಾರೆ. ಈಗ ನಾವು ಯೋಚನೆ ಮಾಡಬೇಕಿರುವುದು- ನಾವು ಕುರಿಯೊಂದಿಗಿರುವ ಹುಲಿ ಹೌದೋ, ಅಲ್ಲವೋ ಅನ್ನೋದನ್ನು.
(ಇದು ರಾಮಕೃಷ್ಣ ಪರಮಹಂಸರಿಂದ ಓಶೋ ಅವರಿಗೆ ತಿಳಿದ ಕಥೆ)
***
ಕೊಳಲು ನುಡಿಸುವ ಕಳ್ಳ
ಒಂದು ಸಂಗತಿಯನ್ನು ಗಮನಿಸಿದಾಗ, ಯಾವ ಪೂರ್ಣ ತಿಳುವಳಿಕೆಯೂ ಇಲ್ಲದೆ ನೀವು ನಿಮ್ಮ ನ್ಯಾಯ ನಿರ್ಣಯ ಹೇಳುತ್ತೀರಿ. ನೀವು ಹೂವೊಂದನ್ನ ನೋಡಿದ ತಕ್ಷಣ ಉದ್ಗಾರ ಮಾಡುತ್ತೀರಿ, “ಎಷ್ಟು ಸುಂದರ” ಅಥವಾ “ ಎಷ್ಟು ಕಳಪೆ”. ನಿಮ್ಮ ತರಬೇತಿಗೆ ತಕ್ಕಂತೆ ನಿಮ್ಮ ಗ್ರಹಿಕೆ, ನಿಮ್ಮ ಗ್ರಹಿಕೆಗೆ ತಕ್ಕಂತೆ ನಿಮ್ಮ ನಿರ್ಣಯ. ಯಾವತ್ತೂ ನೀವು ಯಾವುದನ್ನೂ ಪಕ್ಷಪಾತವಿಲ್ಲದೇ ನೋಡುವುದು ಸಾಧ್ಯವಾಗುವುದೇ ಇಲ್ಲ.
ಒಂದು ದಿನ ಯಾರೋ ಒಬ್ಬ ಜುವಾಂಗ್ ತ್ಸು ನ ಹತ್ತಿರ ಬಂದು ಶಹರದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ವ್ಯಕ್ತಿಯ ಬಗ್ಗೆ ವಿಷಯ ತಿಳಿಸಿ ಅವನನ್ನು ಹಲವಾರು ಬಗೆಯಲ್ಲಿ ನಿಂದಿಸಿದ,
“ಅವನೊಬ್ಬ ಪಾಪಿ, ಬಹಳ ಕೆಟ್ಟ ಮನುಷ್ಯ, ದೊಡ್ಡ ಕಳ್ಳ”
ಎಲ್ಲವನ್ನು ಕೇಳಿಸಿಕೊಂಡ ಮೇಲೆ ಜುವಾಂಗ್ ತ್ಸು ಉತ್ತರಿಸಿದ, “ಅವ ಅದ್ಭುತವಾಗಿ ಕೊಳಲು ನುಡಿಸುತ್ತಾನೆ”
ಅಷ್ಟರಲ್ಲೇ ಇನ್ನೊಬ್ಬ ಮನುಷ್ಯ ಹೇಳಿದ, “ ಅವನು ಹಾಡು ಕೂಡ ಅದ್ಭುತವಾಗಿ ಹಾಡುತ್ತಾನೆ”
ಜುವಾಂಗ್ ತ್ಸು ತಕ್ಷಣ ಉತ್ತರಿಸಿದ, “ ಆದರೆ ಆ ಮನುಷ್ಯ ದರೋಡೆಕೋರ;
ಜುವಾಂಗ್ ತ್ಸು ನ ಪ್ರತಿಕ್ರಿಯೆ ಕೇಳಿ ಆ ಇಬ್ಬರೂ ಆಶ್ಚರ್ಯಚಕಿತರಾಗಿ ಕೇಳಿದರು “ ನೀನು ಏನನ್ನ ಹೇಳಲು ಬಯಸುತ್ತಿದ್ದೀಯ?”
“ನಾವು ಕೇವಲ ಸಮತೋಲನ ಸಾಧಿಸುವ ಪ್ರಯತ್ನ ಮಾಡುತ್ತಿದ್ದೇನೆ – ಅವನ ಬಗ್ಗೆ ತೀರ್ಮಾನ ಹೇಳಲು ನಾನು ಯಾರು? ಅವನು ಕಳ್ಳನೂ ಹೌದು, ಅದ್ಭುತ ಕೊಳಲುವಾದಕನೂ ಹೌದು. ನನಗೆ ಅವನು ಸ್ವೀಕಾರಾರ್ಹನೂ ಅಲ್ಲ ನಿರಾಕರಿಸಲು ಯೋಗ್ಯನೂ ಅಲ್ಲ. ಅವನ ಬಗ್ಗೆ ನನಗೆ ಆಯ್ಕೆಗಳಿಲ್ಲ. ಅವನ ಬಗ್ಗೆ ವಿಪರೀತದ ತೀರ್ಮಾನಗಳನ್ನು ಹೇಳುವುದು ನನಗೆ ಅಸಾಧ್ಯ. ನನಗೆ ಅವನು ಒಳ್ಳೆಯವನೂ ಅಲ್ಲ, ಕೆಟ್ಚವನೂ ಅಲ್ಲ. ಅವನು, ಅವನ ಹಾಗಿದ್ದಾನೆ ಮತ್ತು ಅದು ಅವನ ವ್ಯವಹಾರ. ನೀವು ಕೇಳಿದಾಗ ನಾನು ಏನೋ ಹೇಳಬೇಕಿತ್ತು ಹಾಗಾಗಿ ನಾನು ಸಮತೋಲನ ಸಾಧಿಸುವ ಪ್ರಯತ್ನ ಮಾಡಿದೆ” ಜುವಾಂಗ್ ತ್ಸು ತನ್ನ ಪ್ರತಿಕ್ರಿಯೆಗೆ ಸಮಜಾಯಿಶಿ ನೀಡಿದ.
ಆಯ್ಕೆ ಮಾಡುವುದರಿಂದ ದೂರ ಉಳಿಯುವುದು ಕಷ್ಚ ನಿಜ, ಆದರೆ ಪ್ರಯತ್ನ ಮಾಡಿ ಪ್ರತಿಯೊಂದರಲ್ಲೂ – ನಿಮ್ಮೊಳಗೆ ದ್ವೇಷದ ಭಾವನೆ ಹುಟ್ಟಿದಾಗ ದೂರ ಸರಿದು ಮಧ್ಯಕ್ಕೆ ಬನ್ನಿ, ನಿಮ್ಮಲ್ಲಿ ಪ್ರೀತಿ ಹುಟ್ಟಿದಾಗ ಮತ್ತೆ ದೂರ ಸರಿದು ಮಧ್ಯಕ್ಕೆ ಬನ್ನಿ. ನಿಮ್ಮೊಳಗೆ ಯಾವ ಭಾವನೆ ಇದ್ದರೂ ಮಧ್ಯ ಬಿಟ್ಟು ಕದಲ ಬೇಡಿ. ಆಗ ನಿಮಗೇ ಆಶ್ಚರ್ಯವಾಗುವಂತೆ ಎರಡು ವಿಪರೀತಗಳ ನಡುವಿನ ಒಂದು ಬಿಂದುವಿನಲ್ಲಿ ಎರಡೂ ಭಾವಗಳು ನಾಶವಾದಂತೆ ಒಂದಾಗುತ್ತವೆ ಆಗ ನೀವು ದ್ವೇಷಿಸುವುದೂ ಇಲ್ಲ ಪ್ರೀತಿಸುವುದೂ ಇಲ್ಲ. ಇದನ್ನೇ ಬುದ್ಧ ‘ಉಪೇಕ್ಷಾ’ ಎಂದು ಗುರುತಿಸುತ್ತಾನೆ. ಇದೇ ಬೌದ್ಧರ ಅನಾಸಕ್ತಿ.
ಉಪೇಕ್ಷಾ ಎಂದರೆ ಮಧ್ಯಮ ಮಾರ್ಗ, ಅಲ್ಲಿ ನೀವು ಎರಡೂ ‘ಅತೀ’ ಗಳಿಂದ ಸಮಾನ ದೂರದಲ್ಲಿರುವವರು. ಆಗ ನೀವು “ನಾನು ಪ್ರೀತಿಸುತ್ತೇನೆ” ಅಥವಾ “ನಾನು ದ್ವೇಷಿಸುತ್ತೇನೆ” ಎಂದು ಹೇಳುವುದಿಲ್ಲ. ಸುಮ್ಮನೇ ನೀವು ಮಧ್ಯಮ ಬಿಂದುವಿನಲ್ಲಿ ಸ್ಥಿರವಾಗಿರುವಿರಿ. ಯಾವುದರ ಜೊತೆಗೂ ನೀವು ಗುರುತಿಸಿಕೊಳ್ಳುವುದಿಲ್ಲ. ಆಗ ಒಂದು “ ಮೀರುವಿಕೆ” ನಿಮಗೆ ಸಾಧ್ಯವಾಗುವುದು, ಈ ಮೀರುವಿಕೆ ಒಂದು ಅರಳುವಿಕೆ. ಈ ಪ್ರಬದ್ಧತೆಯನ್ನೇ ನಾವು ಸಾಧಿಸಬೇಕಾಗಿರುವುದು.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ