ಕಂದು ಕಾಡುಗೂಬೆಯ ಕರಾಮತ್ತು !

ಸುಮಾರು ಐದು ವರ್ಷಗಳ ಹಿಂದಿನ ಮಾತು, ನಾನಾಗ ನನ್ನ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಗೆಳೆಯ ರಾಧಾಕೃಷ್ಣನ ಮನೆಗೆ ಹಾಲು ತರಲು ಪ್ರತಿದಿನವೂ ಹೋಗಿ ಬರುತ್ತಿದ್ದೆ. ಹಾಗೆ ಹೋಗುವಾಗ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಅವರ ಮನೆಗೆ ಹೋಗಿ ಬರುವುದು ನನಗೆ ಬಹಳ ಸಂತೋಷದ ಕೆಲಸವಾಗಿರುತ್ತಿತ್ತು. ಬೆಳಗ್ಗೆ ಅಥವಾ ಸಂಜೆ ಅವರ ಮನೆಯ ದಾರಿಯಲ್ಲಿ ಹೋಗುವಾಗಲೆಲ್ಲ ಹಲವಾರು ಬಗೆಯ ಹಕ್ಕಿಗಳನ್ನು ನೋಡಲು ಸಾಧ್ಯವಾಗುತ್ತಿತ್ತು. ಗೆಳೆಯ ರಾಧಾಕೃಷ್ಣನಿಗೂ ಹಕ್ಕಿಗಳ ಬಗ್ಗೆ ಆಸಕ್ತಿ. ನಾನು ಹೋದಾಗ ಅವನು ಮನೆಯಲ್ಲಿ ಇದ್ದರೆ ತಾನು ನೋಡಿದ ಹಕ್ಕಿಯ ಬಗ್ಗೆ ಏನಾದರೂ ವಿಷಯಗಳನ್ನು ಮಾತನಾಡುವುದು ಸಾಮಾನ್ಯವಾಗಿತ್ತು. ಅವನ ತಂದೆ ಮತ್ತು ತಾಯಂದಿರಿಗೂ ನನ್ನ ಹಕ್ಕಿಗಳ ಬಗೆಗಿನ ಆಸಕ್ತಿ ತಿಳಿದಿತ್ತು. ಅವರೂ ನಮ್ಮ ಮಾತಿನಲ್ಲಿ ಸೇರಿಕೊಂಡು ಹಲವಾರು ವಿಷಯಗಳು ವಿನಿಮಯ ಆಗುತ್ತಿದ್ದವು.
ಒಂದು ದಿನ ರಾತ್ರಿ ರಾಧಾಕೃಷ್ಣ ಕಾಲ್ ಮಾಡಿ ʼಅರವಿಂದಣ್ಣ ನಿಮ್ಮ ವಾಟ್ಸಾಪ್ ನಂಬರಿಗೆ ಒಂದು ಆಡಿಯೋ ಕಳಿಸಿದ್ದೇನೆ. ನಮ್ಮ ಮನೆಯ ಹಿಂದಿನ ಕಾಡಿನಿಂದ ಈ ಧ್ವನಿ ಕೇಳಿ ಬರ್ತಾ ಇದೆ ಈ ಹಕ್ಕಿ ಯಾವುದು ಹೇಳಬಹುದೇʼ ಅಂತ ಕೇಳಿದ. ಅವನು ಕಳುಹಿಸಿದ ಆಡಿಯೋ ಕೇಳಿದಾಗ ಅದು ಯಾವ ಹಕ್ಕಿ ಇರಬಹುದು ಎಂದು ನನಗೂ ತಿಳಿಯಲಿಲ್ಲ. ಒಂದಿಬ್ಬರು ಪಕ್ಷಿವೀಕ್ಷಕ ಮಿತ್ರರಿಗೆ ಅದನ್ನು ಕಳುಹಿಸಿ ಇದರ ಗುರುತು ಹೇಳಬಹದೇ ಎಂದು ಕೇಳಿದೆ. ಅವರು ಒಂದಿಷ್ಟು ಹೊತ್ತಿನ ನಂತರ ಆ ಹಕ್ಕಿಯ ಹೆಸರನ್ನು ಮತ್ತು ಅದರ ಕುರಿತು ಮಾಹಿತಿಯನ್ನೂ ಕಳುಹಿಸಿದರು. ಅದರ ಹೆಸರು Brown Wood Owl.ಕನ್ನಡದಲ್ಲಿ ಕಂದು ಕಾಡುಗೂಬೆ. ಅದರ ಹೆಸರು ತಿಳಿಯುತ್ತಿದ್ದಂತೆ ನನಗೂ ಅದನ್ನು ನೋಡುವ ಉತ್ಸಾಹ ಹೆಚ್ಚಿತು. ಅಷ್ಟರಲ್ಲೇ ಗೆಳೆಯನ ಕರೆಯೂ ಬಂತು. ಅರವಿಂದಣ್ಣ ನಮ್ಮ ಮನೆಯ ಹಿಂದಿನಿಂದ ಆ ಹಕ್ಕಿಯ ಕೂಗು ಕೇಳಿಸ್ತಾ ಇದೆ. ಈಗಲೇ ಬರ್ತೀರಾ ಹುಡುಕಿ ನೋಡಿಯೇ ಬಿಡೋಣ ಎಂದ. ಸರಿ ಎಂದು ತಕ್ಷಣ ನನ್ನ ಕ್ಯಾಮರಾ ಮತ್ತು ಟಾರ್ಚ್ ಹಿಡಿದುಕೊಂಡು ಅವರ ಮನೆಯ ಕಡೆಗೆ ಹೋದೆ.
ರಾತ್ರೆಯ ಒಂಭತ್ತು ಗಂಟೆ ಆಗಿತ್ತು. ಹಕ್ಕಿಯ ಕೂಗು ಆಗಲೂ ಕೇಳಿಸುತ್ತುತ್ತು. ಕೂಗಿನ ಜಾಡನ್ನೇ ಹಿಡಿದು ಗುಡ್ಡದ ಕಡೆಗೆ ಹೋದೆವು. ನಮ್ಮ ಪಕ್ಕದ ಮರದ ಮೇಲೆಯೇ ಹಕ್ಕಿ ಕೂಗುವ ಶಬ್ದ ಕೇಳುತ್ತಿತ್ತು. ಟಾರ್ಚ್ ಹಾಕಿದಾಗ ಹಕ್ಕಿಯ ಕೂಗು ನಿಂತಿತು. ಆದರೆ ಹಕ್ಕಿ ಮಾತ್ರ ಎಷ್ಟು ಹುಡುಕಿದರೂ ಕಾಣಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೇ ಕುಳಿತುಕೊಳ್ಳಲು ತೀರ್ಮಾನ ಮಾಡಿದೆವು. ಅಷ್ಟರಲ್ಲಿ ನಾವು ಹುಡುಕುತ್ತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಮರದ ಮೇಲಿನಿಂದ ಹೂಬೆಯ ಕೂಗಲು ಪ್ರಾರಂಭ ಮಾಡಿತು. ನಾವಷ್ಟು ಹುಡುಕುವಾಗ ಸದ್ದಿಲ್ಲದೇ ಗೂಬೆ ಬೇರೆ ಕಡೆಗೆ ಹಾರಿ ಹೋಗಿ ಕುಳಿತಿತ್ತು. ನಮ್ಮ ಸೂಕ್ಷ್ಮ ಕಿವಿಗೂ ಅದು ಹಾರಿದ ಸದ್ದು ಕೇಳಿಸಲೇ ಇಲ್ಲ. ಮತ್ತೆ ಅದು ಕೂಗುತ್ತಿದ್ದ ಮರದ ಕಡೆಗೆ ಹೋಗಿ ಟಾರ್ಚ್ ಹಾಕಿ ಹುಡುಕಿದರೆ ಮತ್ತೆ ಗೂಬೆ ಮೌನ. ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಬೇರೆಯದೇ ದಿಕ್ಕಿನಿಂದ ಮತ್ತೆ ಕೂ... ಕು ಕು ಕು ಕೂ.. ಎಂಬ ಸದ್ದು ರಾತ್ರೆಯ ನೀರವ ಮೌನವನ್ನು ಸೀಳಿಕೊಂಡು ಬಂದು ನಮ್ಮನ್ನು ದಂಗಾಗಿಸುತ್ತಿತ್ತು..
ಅವತ್ತು ರಾತ್ರೆ ಹನ್ನೊಂದು ಗಂಟೆಯವರೆಗೆ ಹುಡುಕಿದರೂ ಕಾಡುಗೂಬೆ ನಮಗೆ ದರುಷನ ಕೊಡಲೇ ಇಲ್ಲ. ಮರುದಿನ ಗೆಳೆಯನ ತಂದೆ ಒಂದು ವಿಷಯ ಹೇಳಿದರು. ನೀವು ನಿನ್ನೆ ರಾತ್ರೆ ಹುಡುಕಿದ ಹಕ್ಕಿಯನ್ನು ತುಳು ಭಾಷೆಯಲ್ಲಿ ಕುಕ್ಕು ಸೂಡು ಎಂದು ಕರೆಯುತ್ತಾರೆ. ಈ ಹಕ್ಕಿಯ ಕೂಗು ಕೇಳಿದರೆ ಸಾವು ಸಂಭವಿಸುತ್ತದೆ. ಆಗ ಹೆಣ ಸುಡಲು ಕುಕ್ಕು ಅಂದರೆ ಮಾವಿನ ಮರವನ್ನು ಕಡಿಯುತ್ತಾರೆ. ಈ ಎಲ್ಲ ಮೂಢನಂಬಿಗಳೂ ಸೇರಿ ಹಕ್ಕಿಯ ಹೆಸರು ಕುಕ್ಕುಸೂಡು ಎಂಬುದಾಗಿ ಆಗಿರಬಹುದು ಎಂದು ಹೇಳಿದರು. ಹಿಂದಿನ ದಿನ ರಾತ್ರಿ ಹಕ್ಕಿ ಕೂಗಿದ್ದನ್ನು ನೆನಪಿಸಿಕೊಂಡಾಗ ಹಕ್ಕಿ ತುಳು ಭಾಷೆಯಲ್ಲಿ “ಹೋ.. ಕುಕ್ಕು ಸೂಡು” ಎಂದು ಕೂಗಿ ಕರೆದಂತೆ ಹೇಳುತ್ತಿದ್ದುದು ನೆನಪಾಗಿ ಜನ ಹಾಗೊಂದು ಕಥೆ ಕಟ್ಟಿದ್ದರೆ ತಪ್ಪೇನಿಲ್ಲ ಎಂದೇ ಅನಿಸಿತು.
ಇಷ್ಟೆಲ್ಲಾ ಹುಡುಕಿದರೂ ಕಣ್ಣಿಗೆ ಕಾಣದೆ ಕಣ್ಣಾಮುಚ್ಚಾಲೆ ಆಡಿದ ಕಾಡುಗೂಬೆ ಒಂದು ದಿನ ಸಂಜೆ ಹಾಲು ತರಲು ಹೋಗುವಾಗ ಅದೇ ಕಾಡಿನ ಬದಿಯಲ್ಲಿ ಥಟ್ಟನೇ ಹಾರಿ ಬಂದು ನನ್ನ ಮುಂದೆ ಕಾಣುತ್ತಿದ್ದ ಮರದ ಮೇಲೆಯೇ ಕುಳಿತಿತು. ನಾನೂ ಅದನ್ನು ನೋಡಿ ಹಾಗೆಯೇ ಅಲುಗಾಡದೇ ನಿಂತುಬಿಟ್ಟೆ. ಕೈಯಲ್ಲಿ ಕ್ಯಾಮರಾ ಇರುತ್ತಿದ್ದರೆ ಹಕ್ಕಿಯ ಚಂದದ ಫೋಟೋ ತೆಗೆಯಬಹುದಿತ್ತು. ರಾತ್ರೆಯೆಲ್ಲ ಹುಡುಕಿದರೂ ಸಿಗದ ಹಕ್ಕಿಯನ್ನು ಕಣ್ಣಿನಿಂದ ನೋಡುವ ಭಾಗ್ಯವಾದರೂ ಸಿಕ್ಕಿತಲ್ಲ ಎಂದು ಸಂತೋಷ ಪಟ್ಟುಕೊಂಡೆ.
ನೀವೂ ಹಳ್ಳಿವಾಸಿಯಾಗಿದ್ದರೆ ಅಥವಾ ರಜೆ ಕಳೆಯಲು ಹಳ್ಳಿಯ ಅಜ್ಜಿಮನೆಗೆ ಹೋಗಿದ್ದರೆ ಈ ಗೂಬೆ ನೋಡಲು ಸಿಗುತ್ತದೆಯೇ ಎಂದು ಹುಡುಕಿ. ಕನಿಷ್ಟ ರಾತ್ರಿಯ ನೀರವ ಮೌನದಲ್ಲಿ ಕೂಗುವ ಗೂಬೆಯ ಧ್ವನಿಯನ್ನು ಕಿವಿಕೊಟ್ಟು ಕೇಳಲು ಪ್ರಯತ್ನಿಸಿ..
ಕನ್ನಡ ಹೆಸರು: ಕಂದು ಕಾಡುಗೂಬೆ
ತುಳು ಹೆಸರು: ಕುಕ್ಕುಸೂಡು
ಇಂಗ್ಲೀಷ್ ಹೆಸರು: Brown Wood-Owl
ವೈಜ್ಞಾನಿಕ ಹೆಸರು: Strix leptogrammica Temminck
ಚಿತ್ರ ಕೃಪೆ ಅಂತರ್ಜಾಲ
ಬರಹ: ಅರವಿಂದ ಕುಡ್ಲ, ಬಂಟ್ವಾಳ