ಕಂಪನಿ ಮುಳುಗ್ತೈತಲ್ಲೋ!
YDRoy ಶತಪಥ ತಿರುಗುತ್ತಿದ್ದಾನೆ. ವರ್ಷಾಂತ್ಯಕ್ಕೆ ಮಹಾ ಸಮಸ್ಯೆ ಉದ್ಭವಿಸಲಿದೆ ಎಂಬ ದಟ್ಟ ವದಂತಿ ಇವನನ್ನು ಚಿಂತೆಗೆ ಈಡುಮಾಡಿದೆ. ಈತನ Client ಯಾವುದನ್ನೂ ನಿಚ್ಚಳವಾಗಿ ನುಡಿದಿಲ್ಲ. ಆದರೆ ಈಚೆಗೆ ನೆಡೆಯುತ್ತಿರುವ ವಿದ್ಯಮಾನಗಳು ರಾಯ್’ನ ಅನುಮಾನವನ್ನು ದಟ್ಟವಾಗಿಸಿದೆ.
ಇಷ್ಟಕ್ಕೂ ಈ YDRoy ಯಾರು?
YDRoy’ದು ಒಂದು ವಿಶಿಷ್ಟ ಕಂಪನಿಯ ಒಡೆಯ. ಈತನ ಕಂಪನಿ ಒಂದು ರೀತಿ ’ಮೂರ್ತಿ ಅಂಡ್ ಮೂರ್ತಿ’ ಕಂಪನಿಯ sister concern ಅಂದ್ರೂ ತಪ್ಪಿಲ್ಲ. ಮುಖ್ಯವಾಗಿ ಈತ ಮತ್ತು ಈತನ ಸೀನಿಯರ್ ಮೇನೇಜರ್ ಆದ CT Gupta, Admin ಕಡೆ ಇದ್ದರೆ ಮಿಕ್ಕ ಹಲವಾರು ಮಂದಿ field’ನಲ್ಲಿ ಇರ್ತಾರೆ, ಮತ್ತೂ ಹಲವರು Correction Unit’ನಲ್ಲಿ ಕೆಲಸ ಮಾಡುತ್ತಾರೆ.
ಮೂರ್ತಿಗಳ ಕಂಪನಿಯಿಂದ, ತನ್ನಲ್ಲಿಗೆ ಬರುವ ಪ್ರತಿ ಕಡತವನ್ನು ಕೂಲಂಕುಶವಾಗಿ ಪರಿಶೀಲಿಸಿ, ಆತ/ಆಕೆಯ Start Date ನಿಂದ ಹಿಡಿದು End Date ವರೆಗೂ ನೆಡೆದ ವಿದ್ಯಮಾನಗಳನ್ನು Analyze ಮಾಡಿ, ಸೂಕ್ತ ಕ್ರಮ ಕೈಗೊಳ್ಳುತ್ತಾನೆ. ಸೂಕ್ತವಾದ ಟ್ರೈನಿಂಗ್ ಸೂಚಿಸಿ, correction unit ಕಡೆ ಕಳಿಸುತ್ತಾನೆ. ಅಲ್ಲಿ ತಪ್ಪು ಒಪ್ಪುಗಳ ಶುದ್ದೀಕರಣಗೊಳಿಸಿದ ನಂತರ, ಒಂದು Summary Report ಅನ್ನು ಕಡತಕ್ಕೆ ಲಗತ್ತಿಸಿ, ಆ ಕಡತವನ್ನು, CMB Dev’ನ ಕಂಪನಿಗೆ ಕಳಿಸುತ್ತಾನೆ.
ಈ CMB Dev ಯಾರು?
ದೇವ್, ’ಮೂರ್ತಿ ಅಂಡ್ ಮೂರ್ತಿ’ ಕಂಪನಿಯ ಒಡೆಯರಲ್ಲಿ ಒಬ್ಬರಾದ ಅಚ್ಚ್ಯುತ ಮೂರ್ತಿಗಳ ಮಗ. ಈತ ಮೂರ್ತಿಗಳ ಕಂಪನಿಯ Resourcing ನೋಡಿಕೊಳ್ಳುತ್ತಾನೆ.
CMB Dev , ತನ್ನ ಬಳಿ ಬಂದ ಕಡತದ report ಪರಿಶೀಲಿಸಿ, ಯಾವ ವರ್ಗಕ್ಕೆ ಸೇರಿಸಬಹುದು ಎಂದು ತೀರ್ಮಾನಿಸಿ, ಅದಕ್ಕೊಂದು ಹೊಸ ಪ್ರೊಫೈಲ್’ಗೆ ತಯಾರಿಸಿ, ಹೊಸ ಕಾಂಟ್ರಾಕ್ಟ್’ನ ದಿನಗಳನ್ನು ನಿಗದಿಪಡಿಸಿ, contract ಮೇಲೆ ಬಿಡುತ್ತಾನೆ. ಕಾಂಟ್ರಾಕ್ಟ್ ಅವಧಿ ಮುಗಿದ ಮೇಲೆ ಆ ಕಡತ ಮತ್ತೆ YD Roy ಬಳಿ ಬರುತ್ತದೆ.
ಆರಂಭದಲ್ಲಿ ಎಲ್ಲ Contractors’ಗಳೂ ಚೆನ್ನಾಗೇ ನೆಡೆಸಿಕೊಂಡು ಹೋಗುತ್ತಿದ್ದರೂ, ಒಮ್ಮೆ ಕಂಪನಿಯಲ್ಲಿ ತಳ ಊರಿದ ಮೇಲೆ ಅವರ ಬಣ್ಣ ಬದಲಾಗುತ್ತದೆ. ಈತನಿಂದಲೇ ಆಗಿದ್ದು ಎಂದು ದೇವ್ ತಲೆ ಮೇಲೆ ಗೂಬೆ ಕೂರಿಸುತ್ತಾರೆ. ಇಂತಹ ಕಡತಗಳು ರಾಯ್ ತಲೆಗೆ ಭಾರೀ ತಲೆನೋವು. ಸತ್ಯ ಹೇಳಬೇಕೆಂದರೆ, ಈತನಿಗಿಂತ CT Guptaನಿಗೆ ತಲೆನೋವು.
ಒಂದು ಸ್ಥೂಲ ಚಿತ್ರಣ ಸಿಕ್ಕರಬೇಕಲ್ಲವೇ? ಈಗ ಇವೆಲ್ಲಕ್ಕೂ ಒಂದು ಕೊನೆಗಾಲ ಬರುವಂತಿದೆ !!
ಈಗಿನ ಸಮಸ್ಯೆ ಏನಪ್ಪ ಅಂದರೆ, ವರ್ಷಾಂತ್ಯಕ್ಕೆ ರಾಯ್’ನ ಕೆಲಸ ಒಮ್ಮೆಲೆ zero volume ಆಗಲಿದೆ !!!
ಕಾರಣ? "ಮೂರ್ತಿ ಅಂಡ್ ಮೂರ್ತಿ" ಕಂಪನಿಯು ಗಬ್ಬೆದ್ದು ನಾರುತ್ತಿದೆ. ಕಂಪನಿ ಅತೀವ ಸಮಸ್ಯೆಗಳಿಂದ ತೊಳಲಾಡುತ್ತಿದೆ. ವರ್ಷಾಂತ್ಯಕ್ಕೆ ಮುಚ್ಚಬಹುದು ಎಂಬ ಸೂಚನೆ ಇದೆ.
ಆದರೆ ಎಲ್ಲವೂ ಅಂತೆ, ಕಂತೆ, ಬಹುದುಗಳು ಅಷ್ಟೇ ... ಯಾರಿಗೂ ಏನೂ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಟ್ರಾಕ್ಟರ್ಸ್’ಗಳ ವಲಯದಲ್ಲಿ ಈ ಸುದ್ದಿ ಅತೀ ದಟ್ಟವಾಗಿ ಹರಡಿದೆ.
ಈಗಿರುವ ಸಮಸ್ಯೆಗಳು ಹಾಸಿಕೊಂಡು ಹೊದ್ದಿಕೊಳ್ಳುವಷ್ಟಿದೆ, ತನ್ನಿಂದ ಈ ಕಂಪನಿ ನೆಡೆಸಲಾಗದು ಎಂದು ಅಲವತ್ತುಕೊಂಡಿರುವ ಮಹಿಳಾ CEO ಹಲವಾರು ಬಾರಿ ಖುದ್ದಾಗಿ ಅಚ್ಚ್ಯುತ ಮೂರ್ತಿ ಅವರನ್ನು ಭೇಟಿ ಮಾಡಿದ್ದಾರೆ.
ಅಚ್ಯುತ ಮೂರ್ತಿಗಳು ಶಾಂತ ರೀತಿಯ ಮನುಷ್ಯ. ಪ್ರತಿ ಬಾರಿ ಈಕೆಯ ಅಹವಾಲಿಗೆ ಸೂಕ್ತವಾದ ಪರಿಹಾರ ನೀಡುತ್ತಾರೆ. ಈತನಿರುವುದರಿಂದಲೇ, ಈಕೆ ಎಷ್ಟೇ ಕಷ್ಟವಾದರೂ ಸಹಿಸಿಕೊಂಡು ಕಂಪನಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾಳೆ. ಬೇರೆ ಯಾರಾದರೂ ಆಗಿದ್ದರೆ, ನೀನೂ ಬೇಡ ನಿನ್ ಕೆಲಸವೂ ಬೇಡ ಅಂತ ಓಡಿ ಹೋಗಿರುತ್ತಿದ್ದರು.
ಆದರೆ ಓಡಿ ಎಲ್ಲಿಗೆ ಹೋಗಿಯಾರು? ಮೂರ್ತಿಗಳ ಹಿಡಿತ ಅಂಥದ್ದು !! ಇರಲಿ ....
ಅಚ್ಚ್ಯುತ ಮೂರ್ತಿಗಳು ಎಷ್ಟೋ ಬಾರಿ ಖುದ್ದಾಗಿ ಕಂಪನಿಗೆ ವಿಸಿಟ್ ಮಾಡಿ, ಅಲ್ಲಿಯೇ ಉಳಿದು, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ. ಹಾಗೆಂದುಕೊಂಡು ಸದಾ ಇದೇ ಕೆಲಸ ಮಾಡಲಾಗುತ್ತದೆಯೇ? ಹಾಗಾಗಿ, ಇದೇ ಮಾತನ್ನು ಒಂದೆರಡು ಬಾರಿ performance evaluation ಸಮಯದಲ್ಲಿ ಎತ್ತಿ ತೋರಿರುವುದರಿಂದ, ಈಕೆ ಈ ನಡುವೆ ಏಕ್ದಂ ಮೂರ್ತಿಗಳ ಬಳಿ ಹೋಗದೆ, ತನ್ನ ಲೆವಲ್’ನಲ್ಲೇ ಮೇನೇಜ್ ಮಾಡುವುದನ್ನು ಕಲಿತಿದ್ದಾಳೆ.
ಇತ್ತೀಚೆಗೆ ಸಮಸ್ಯೆಗಳು ಉಲ್ಬಣಗೊಂಡು, ಹತೋಟಿ ತಪ್ಪುತ್ತಿದೆ ಎನಿಸಿದೆ. ಕಾಂಟ್ರಾಕ್ಟ್’ನಲ್ಲಿ ಇರೋ ಜನ, ತಾವೇ ಯಜಮಾನರಂತೆ ವರ್ತಿಸುತ್ತ ಪ್ರಬಲವಾಗಿದ್ದಾರೆ. CEO ಮತ್ತು Contractors ನಡುವೆ ಜಟಾಪಟಿ ಹೆಚ್ಚಿದೆ. ತಮ್ಮ ಅತೀ ಬುದ್ದಿವಂತಿಕೆಯಿಂದ CEO ವಿರುದ್ದವೇ ಮುನ್ನುಗ್ಗುತ್ತಿದ್ದಾರೆ. ಒಮ್ಮೆ ಇವರು ಕೈ ಮೇಲಾದರೆ ಮತ್ತೊಮ್ಮೆ ಆಕೆಯ ಕೈ ಮೇಲಾಗುತ್ತದೆ.
ಯಾವಗಲೋ ಒಮ್ಮೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸೋ ಅಚ್ಚ್ಯುತ ಮೂರ್ತಿಗಳಿಗಿಂತ ಸ್ವಲ್ಪ ಹೆಚ್ಚು ಸ್ಟ್ರಿಕ್ಟ್ ಎನ್ನಬಹುದಾದ ರುದ್ರಮೂರ್ತಿ’ಯವರನ್ನು ಕಾಣುವುದೇ ವಾಸಿ ಎಂದುಕೊಂಡಿದ್ದಾಳೆ. ಈತನಿಗೋ ಮೂಗು ತುದಿಯಲ್ಲೇ ಕೋಪ. ಒಮ್ಮೆ ಈತನ ಕೈಗೆ ದೂರು ಹೋದರೆ ಪರಿಸ್ಥಿತಿ ಯಾವ ಹಂತಕ್ಕೂ ಹೋಗಬಹುದು. ಇದೊಂದು ಕಾರಣದಿಂದಲೇ ರುದ್ರಮೂರ್ತಿಯವರ ಬಳಿ ದೂರು ತೆಗೆದುಕೊಂಡು ಹೋಗಲು ಹಿಂದೂ ಮುಂದೂ ನೋಡುತ್ತಿರುವುದು.
ಹಾಗೆಂದುಕೊಂಡು ರುದ್ರಮೂರ್ತಿಗಳು ಕೆಟ್ಟವರಲ್ಲ. ಕೆಲವೊಮ್ಮೆ ಅತೀ ಕಾಳಜಿ ತೋರುತ್ತಾರೆ. ಈ ಹಿಂದೆ ಇವರ ಒಳ್ಳೆಯತನವನ್ನು ಅರಿತು ಪ್ರಬಲ ಕಾಂಟ್ರಾಕ್ಟರುಗಳು ಯತ್ನಿಸಿದ್ದಾರೆ. ಆ ಸಮಯದಲ್ಲಿ ಈತನಿತ್ತ ಆಶ್ವಾಸನೆಗಳಿಗೆ ಪರಿಹಾರ ಕಂಡು ಹಿಡಿಯುವುದೇ ಅಚ್ಚ್ಯುತ ಮೂರ್ತಿಗಳ ಕೆಲಸವಾಗುತ್ತದೆ. ಎಷ್ಟೇ ಆಗಲಿ ಒಬ್ಬರನ್ನೊಬ್ಬರು ಬಿಟ್ಟುಗೊಡುವುದಿಲ್ಲ. ಒಟ್ಟಿನಲ್ಲಿ ಇವರಿಬ್ಬರ ಜಂಟಿ ಕಾರ್ಯಾಚರಣೆಯಿಂದ ಕಂಪನಿ ನೆಡೆಯುತ್ತಿದೆ. ಇವರೇ ಹುಟ್ಟುಹಾಕಿದ ಕಂಪನಿ ಬಹಳ ಪುರಾತನ ಮತ್ತು ಹೆಸರುವಾಸಿ.
ಅಂತಹ ಕಂಪನಿ ಇಂದು ಮುಳುಗುವ ಹಂತದಲ್ಲಿದೆ !!
ಕಂಪನಿ ಮುಳುಗಿದರೆ ಕಾಂಟ್ರಾಕ್ಟ್ ಮೇಲೆ ಬಂದಿರೋ ಜನರೆಲ್ಲ ಮುಳುಗಿದ ಹಾಗೆ. ರಾಯ್’ಗೆ ಕೆಲಸವಿಲ್ಲದಂತಾಗುತ್ತದೆ. ಅಳಿದುಳಿದ ಕಡತಗಳನ್ನು ದೇವ್ ಕೆಲಸ ಮಾಡಿದರೂ ಅವರನ್ನು ಯಾವ ಕಂಪನಿಗೆ ಕಾಂಟ್ರಾಕ್ಟ್ ಮೇಲೆ ಕಳಿಸುತ್ತಾರೆ?
ಇವರಿಬ್ಬರ ಕಂಪನಿಗಳಿಗೆ ’ಮೂರ್ತಿ ಅಂಡ್ ಮೂರ್ತಿ’ಗಳ ಕಂಪನಿ ಬಿಟ್ಟರೆ ಬೇರೆ ಗೊತ್ತಿಲ್ಲ ! ಕೆಲವು ವರ್ಷಗಳ ಹಿಂದೆ ’ಮೂರ್ತಿ’ಗಳದ್ದೇ ಮತ್ತೊಂದು ಕಂಪನಿಯನ್ನು ಡೀ-ಲಿಸ್ಟ್ ಮಾಡಲಾಯಿತು. ಇನ್ನೂ ಮುಚ್ಚಿಲ್ಲ. ಅದರಿಂದೇನೂ ಪರಿಸ್ಥಿತಿ ಕೆಟ್ಟಿರಲಿಲ್ಲ. ರಿಸೆಷನ್ ಬಂದಾಗ ಇವೆಲ್ಲ ಸಹಜ. ಈಗ ನೋಡಿದರೆ ಇನ್ನೊಂದು ಅದೇ ಹಾದಿ ಹಿಡಿದಿದೆ. ಇದು ಮುಳುಗಿದರೆ ಭಾರೀ ಹೊಡೆತ ಬೀಳುತ್ತದೆ. ಮೂರ್ತಿಗಳ ಆಡಳಿತದ ಇನ್ನೂ ಹಲವಾರು ಯೋಜನೆಗಳಿವೆ. ಆದರೆ ಅವೆಲ್ಲವೂ ಇನ್ನೂ ಬಾಲ್ಯಾವಸ್ತೆಯಲ್ಲೇ ಇದೆ.
ಬರೀ ಸಮಸ್ಯೆಗಳನ್ನು ಹೇಳಿದ್ದೇ ಆಯ್ತು. ಪರಿಹಾರವೇನು?
ಕಾಂಟ್ರಾಕ್ಟರುಗಳು ಒಂದಾಗಬೇಕು ಮತ್ತು ....
ಇದು ಸಾಧ್ಯವೇ? ಇವರುಗಳು ಒಂದಾಗುವುದೇ? ಇವರ ನಡುವೆಯೇ ಎಷ್ಟರ ಮಟ್ಟಿಗೆ ಹಗೆತನವಿದೆ ಎಂದರೆ, ಊಹಿಸಲೂ ಅಸಾಧ್ಯ.
ಮತ್ತೇನು?
ನಿರ್ಧಾರ ’ಮೂರ್ತಿ ಅಂಡ್ ಮೂರ್ತಿ’ಗಳಿಗೆ ಬಿಟ್ಟಿದ್ದು.
ಕಂಪನಿ CEO ಈಗ ಅಚ್ಚ್ಯುತ ಮೂರ್ತಿ ಹಾಗೂ ರುದ್ರಮೂರ್ತಿಗಳ ಮುಂದೆ ನಿಂತಿದ್ದಾಳೆ. ಸಮಸ್ಯೆಗಳ ದಾಖಲೆಗಳು ರುದ್ರಮೂರ್ತಿಗಳ ಮುಂದೆ ಇದೆ. ಈ ಸಾರಿ ನಾನು ಅಲ್ಲಿಗೆ ಬರಲಾರೆ ಎಂದು ಅಚ್ಚ್ಯುತ ಮೂರ್ತಿಗಳು ನಿರ್ಧರಿಸಿ ಆಗಿದೆ. ಈ ವಿಷಯದ ಸಂಪೂರ್ಣ ಮಾಹಿತಿ ರುದ್ರಮೂರ್ತಿಗಳಿಗೆ ಅರಿವಿದ್ದೂ ಮತ್ತೊಮ್ಮೆ ರಿಪೋರ್ಟ್’ಅನ್ನು ಓದಿದ.
ಮುಖವು ರಕ್ತವರ್ಣವಾಗಿತ್ತು ! ಹೀಗಾಗುವುದೆಂದು CEO’ಗೆ ಅರಿವಿತ್ತು !! ರಾಯ್’ನನ್ನು ಅಲ್ಲಿಗೆ ಕರೆಸಿದ್ದರೂ, ರುದ್ರಮೂರ್ತಿಗಳ ಮುಂದೆ ನಿಂದೆ ಮಾತನಾಡುವಷ್ಟು ಧೈರ್ಯ ಆತನಿಗಿರಲಿಲ್ಲ ! ಹಿಂದೊಮ್ಮೆ ಆತನ ವಿರುದ್ದ ಹೋಗಿ ಮುಖ ಕೆಡಿಸಿಕೊಂಡಿದ್ದಾಗಿದೆ.
ಈಗ ಉಳಿದಿರುವುದು ದೇವ್ ಮಾತ್ರ. ಆತನಿನ್ನೂ ಬಂದಿರಲಿಲ್ಲ. ಪ್ರತಿ ಘಳಿಗೆಯೂ ಘಂಟೆಗಳಂತೆ ತೋರುತ್ತಿತ್ತು. ಅಂತೂ ದೇವ್’ನ ಆಗಮನವಾಗಿತ್ತು !!!
ಆತನ ಕೈಯಲ್ಲಿ ನವಮಾಸ ತುಂಬಿರುವ ಹಸುಗೂಸಿತ್ತು ! ನೇರವಾಗಿ ಎಲ್ಲರೆದುರು ನೆಡೆದು ಆ ಕೂಸನ್ನು ಅಲ್ಲಿರಿಸಿದ !
ಕೂಸಿನ ನಗು ಮುಖ ನೋಡುತ್ತಲೇ ಅಲ್ಲಿನ ವಾತಾವರಣ ಸ್ವಲ್ಪ ತಿಳಿಯಾಯಿತು. ಮಲ್ಲಿಗೆಯ ನಗು ಮತ್ತೊಮ್ಮೆ ಅಲ್ಲಿ ಹರದಿತ್ತು. ರುದ್ರಮೂರ್ತಿಗಳ ಮುಖದಲ್ಲೂ ಮಂದಹಾಸ ಮೂಡಿತು.
CEO ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡಳು. ಮೂರ್ತಿಗಳ ಸಮ್ಮತಿಯೂ ಸಿಕ್ಕಿತು. ಆಕೆ ಅಲ್ಲಿಂದ ಹೊರಟಳು. ರಾಯ್ ದೊಡ್ಡ ನಿಟ್ಟುಸಿರು ಬಿಟ್ಟು ಮಂದಹಾಸದಿಂದ ಅಲ್ಲಿಂದ ಹೊರಟ.
ಎಂತಹ ವಿಕೋಪದ ಪರಿಸ್ಥಿತಿಯನ್ನೂ ಒಂದು ನಗುವಿನ ಗೆಲ್ಲಬಹುದಲ್ಲವೇ?
ಈ ಪರಿಹಾರ ಸೂಚಿಸಿದ್ದು ತ್ರಿಲೋಕಸಂಚಾರಿ ನಾರದರು. ಅವರ ಪರಿಹಾರಕ್ಕೆ ಕೈ ಜೋಡಿಸಿದ್ದು CMB Dev ಆಲಿಯಾಸ್ ಚತುರ್ ಮುಖ ಬ್ರಹ್ಮ ದೇವ !!!
ವರ್ಷಾಂತ್ಯಕ್ಕೆ ಆಗಬಹುದಾಗಿದ್ದ ಪ್ರಳಯವನ್ನು ತಡೆಗಟ್ಟಿದ್ದು ಒಂದು ಕೂಸಿನ ಮಂದಹಾಸದ ನಗು ! ಭರವಸೆಯ ನಗು !! ಭವಿಷ್ಯದ ನಗು !!!
Comments
ಉ: ಕಂಪನಿ ಮುಳುಗ್ತೈತಲ್ಲೋ!
In reply to ಉ: ಕಂಪನಿ ಮುಳುಗ್ತೈತಲ್ಲೋ! by venkatb83
ಉ: ಕಂಪನಿ ಮುಳುಗ್ತೈತಲ್ಲೋ!
ಉ: ಕಂಪನಿ ಮುಳುಗ್ತೈತಲ್ಲೋ!
In reply to ಉ: ಕಂಪನಿ ಮುಳುಗ್ತೈತಲ್ಲೋ! by partha1059
ಉ: ಕಂಪನಿ ಮುಳುಗ್ತೈತಲ್ಲೋ!
ಉ: ಕಂಪನಿ ಮುಳುಗ್ತೈತಲ್ಲೋ!
In reply to ಉ: ಕಂಪನಿ ಮುಳುಗ್ತೈತಲ್ಲೋ! by makara
ಉ: ಕಂಪನಿ ಮುಳುಗ್ತೈತಲ್ಲೋ!