ಕಂಪ್ಯೂಟರುಗಳು ಬೋಟ್ನೆಟ್ಗಳ ಹಿಡಿತದಲ್ಲಿ
ಬರಹ
ಕಂಪ್ಯೂಟರುಗಳು ಬೋಟ್ನೆಟ್ಗಳ ಹಿಡಿತದಲ್ಲಿ
ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಲಕ್ಷ ಕಂಪ್ಯೂಟರುಗಳು ಬೋಟ್ನೆಟ್ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ.ಕೆಲವು ಅಂತರ್ಜಾಲತಾಣಗಳ ಪುಟಗಳನ್ನು ತೆರೆದಾಗ,ಆ ಪುಟದಲ್ಲಿರುವ ಸಣ್ಣ ತಂತ್ರಾಂಶಗಳು ನಮ್ಮ ಕಂಪ್ಯೂಟರುಗಳನ್ನು ವಶಕ್ಕೆ ತೆಗೆದುಕೊಂಡು ಹ್ಯಾಕರನ ಹಿಡಿತಕ್ಕೆ ಒಳಪಡಿಸುವುದಿದೆ.ಈ ಕಂಪ್ಯೂಟರುಗಳನ್ನು ಬಳಸಿ,ಜನಬಯಸದ ಮಿಂಚಂಚೆಗಳ ಸರಣಿಯನ್ನು ಕಳುಹಿಸುವುದು,ಮಾಹಿತಿ ಕದಿಯುವುದು ಮುಂತಾದ ಅನೀತಿಯುತ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದಿದೆ.ಕದ್ದ ಮಾಹಿತಿಗಳನ್ನು ಕೆಲವು ಅಂತರ್ಜಾಲತಾಣಗಳಲ್ಲಿ ಹರಾಜೂ ಹಾಕಲಾಗುತ್ತದೆ!ಮಾಹಿತಿ ಕೊಂಡವರು ಅವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.ಅಂತರ್ಜಾಲ ತಾಣಗಳ ಸೇವೆಗಳನ್ನು ನಿರಾಕರಿಸಲು ಕೆಲವೊಮ್ಮೆ ದಾಳಿಗಳನ್ನು ಸಂಘಟಿಸಲೂ,ಬೋಟ್ನೆಟ್ ಹಿಡಿತದಲ್ಲಿರುವ ಕಂಪ್ಯೂಟರುಗಳನ್ನು ಬಳಸಿಕೊಳ್ಳುತ್ತಾರೆ.ಎಪ್ರಿಲ್ ಮತ್ತು ಜೂನ್ ನಡುವಿನ ಮೂರು ತಿಂಗಳುಗಳಲ್ಲಿ ಮೈಕ್ರೋಸಾಫ್ಟ್ ಸುಮಾರು ಆರೂವರೆ ಲಕ್ಷ ಸೋಂಕಿರುವ ಕಂಪ್ಯೂಟರುಗಳನ್ನು ಶುದ್ಧಗೊಳಿಸಿದೆ.ಈ ಮಾಹಿತಿಗಳು ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ನೋಂದಾಯಿತ ಅರುವತ್ತು ಕೋಟಿ ಕಂಪ್ಯೂಟರುಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಸಿದ್ಧವಾದ ಅಂಶಗಳಾಗಿವೆ.ಬ್ರೆಜಿಲಿನಲ್ಲಿ ಐದೂವರೆ ಲಕ್ಷ ಕಂಪ್ಯೂಟರುಗಳು ಇದೇ ರೀತಿ ಬಾಧಿತವಾಗಿದ್ದುವು.ಕೊರಿಯಾದಲ್ಲಿ ಪ್ರತಿ ಸಾವಿರದಲ್ಲಿ ಹದಿನಾಲ್ಕು ಕಂಪ್ಯೂಟರುಗಳು ಬೋಟ್ನೆಟ್ ಬಾಧೆಗೆ ಒಳಪಟ್ಟಿದ್ದ ಅಂಶ ವ್ಯಕ್ತವಾಯಿತು.
-----------------------------------------
ಅತಿ ದೊಡ್ಡ ಮೈಕ್ರೋಸಾಫ್ಟ್ ಅಪ್ಡೇಟ್
ಮೈಕ್ರೋಸಾಫ್ಟ್ ಕಂಪೆನಿಯು ತನ್ನ ವಿವಿಧ ತಂತ್ರಾಂಶಗಳಾದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶಗಳು,ಬ್ರೌಸರ್,ಆಫೀಸ್ ಮುಂತಾದ ತಂತ್ರಾಂಶಗಳ ಕೋರತೆಗಳನ್ನು ನಿವಾರಿಸಲು ಮತ್ತು ಭದ್ರತಾಕೊರತೆಯನ್ನು ಹೋಗಲಾಡಿಸಲು ತಂತ್ರಾಂಶಗಳ ಆಧುನಿಕ ಆವೃತ್ತಿಯನ್ನು ಪ್ರಕಟಿಸುವುದಿದೆ.ಅದರಂತೆ ಈ ಸಲ ತನ್ನ ವಿವಿಧ ತಂತ್ರಾಂಶಗಳ ನಲುವತ್ತೊಂಭತ್ತು ವಿವಿಧ ಕೊರತೆಗಳನ್ನು ಸರಿಪಡಿಸುವ ತಿದ್ದುಪಡಿಗಳನ್ನು ಪ್ರಕಟಿಸಿದೆ.ಇದು ಈವರೆಗಿನ ಅತಿದೊಡ್ಡ ತಿದ್ದುಪಡಿಯಾಗಿದೆ.ಈ ತಿದ್ದುಪಡಿಗಳಿಗೆ MS10-071 ಎಂದು ಹೆಸರಿಸಲಾಗಿದ್ದು,ಅಂತರ್ಜಾಲದಲ್ಲಿದು ಉಚಿತವಾಗಿ ಲಭ್ಯವಿದೆ.ಇವುಗಳ ಪೈಕಿ ಸುಮಾರು ಹತ್ತು ತಿದ್ದುಪಡಿಗಳು ಇಂಟರ್ನೆಟ್ ಎಕ್ಸ್ಪ್ಲೋರರ್ ತಂತ್ರಾಂಶಕ್ಕೆ ಸಂಬಂಧಿಸಿದೆ.ಒಟ್ಟು ನಲುವತ್ತೊಂಭತ್ತಿ ತಿದ್ದುಪಡಿಗಳ ಪೈಕಿ,ತಿದ್ದುಪಡಿಗಳನ್ನು ಹದಿನಾರು ಗುಂಪುಗಳಾಗಿ ವಿಂಗಡಿಸಲಾಗಿದೆ.ಸಾಮಾನ್ಯವಾಗಿ ವಿಂಡೋಸ್ ಬಳಕೆದಾರರು ತಮ್ಮ ಕಂಪ್ಯೂಟರುಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸಿದಾಗ,ಈ ತಿದ್ದುಪಡಿಗಳನ್ನು ತನ್ನಷ್ಟಕ್ಕೆ ಇಳಿಸಿಕೊಂಡು ಅನುಸ್ಥಾಪಿಸುವಂತೆ ಏರ್ಪಡಿಸಲಾಗಿರುತ್ತದೆ.ಕೆಲವು ತಿದ್ದುಪಡಿಗಳನ್ನು ಅನುಸ್ಥಾಪಿಸುವುದು ಕಂಪ್ಯೂಟರಿನ ಭದ್ರತಾ ಕೊರತೆಗಳನ್ನು ನಿವಾರಿಸಲು ಅತ್ಯಗತ್ಯ.ವಿಂಡೋಸ್ ಮೀಡಿಯಾ ಪ್ಲೇಯರ್ ವಿಡಿಯೋ,ಆಡಿಯೋ ಕಡತಗಳನ್ನು ನುಡಿಸಲು ಉಪಯುಕ್ತವಾದ ತಂತ್ರಾಂಶವಾಗಿದ್ದು,ಇದರ ತಿದ್ದುಪಡಿಗಳೂ ಈ ಅರ್ಧಶತಕದ ತಿದ್ದುಪಡಿಗಳಲ್ಲಿ ಸೇರಿವೆ.
----------------------------------------
ಟ್ವಿಟರ್ ಚಿಲಿಪಿಲಿ
*ಚಿಲಿಯಲ್ಲಿ ಗಣಿಯಲ್ಲಿ ಸಿಲುಕಿ ಹಾಕಿದವರನ್ನು ರಕ್ಷಿಸಿದ ತೆರದಲ್ಲಿ,ಭಾರತವನ್ನು ಭ್ರಷ್ಟಾಚಾರದಿಂದ ರಕ್ಷಿಸಿ ಕಾಪಾಡಿರಿ.
*ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಭಾಷೆ ತಮಿಳು?ಹಿಂದಿ? ಯಾವುದೂ ಅಲ್ಲ..ಸಿ,ಸಿ++,ಜಾವಾ!
*ಉಬುಂಟು10.10 ಕಂಪ್ಯೂಟರ್ ಬರೇ ಹತ್ತು ಸೆಕೆಂಡಿನಲ್ಲಿ ಬೂಟ್ ಆಗುತ್ತದೆ
-----------------------------------------------------------------
ಸ್ಪರ್ಧಾಪರೀಕ್ಷೆಗಳಿಗೆ ಸ್ಪರ್ಧಾರ್ಥಿ
http://spardharthi.blogspot.com ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಸಹಾಯ ಮಾಡುವ ಮೊದಲ ಇ-ಪತ್ರಿಕೆಯಂತೆ.ರವಿ,ಪರಶುರಾಮ್,ಲಾವಣ್ಯ,ನಿಹಾರಿಕಾ,ಗೌರಿ,ಪವನ್,ಸ್ಪಂದನಾ ಇವರೆಲ್ಲಾ ಈ ಬ್ಲಾಗಿಗೆ ವಿಷಯ ಒದಗಿಸಿದ್ದಾರೆ.ಪ್ರಚಲಿತ ವಿದ್ಯಮಾನಗಳ ಒಳನೋಟವೂ ಇಲ್ಲಿ ಲಭ್ಯ..ವಿವಿಧ ಸ್ಥಾನಮಾನಗಳನ್ನು ಹೊಂದಿದವರ ವಿವರಗಳೂ ಇಲ್ಲಿವೆ.ಇಲ್ಲಿಯ ಬರಹಗಳನ್ನು ಫೇಸ್ಬುಕ್ ಮೂಲಕ ಪಡೆಯುವ ಸವಲತ್ತೂ ಕೂಡಾ ಇದೆ.ಸುಮಾರು ಎಂಟುನೂರು ಜನ ಫೇಸ್ಬುಕ್ ಮೂಲಕ ಸ್ಪರ್ಧಾರ್ಥಿಯನ್ನು ಪಡೆಯುತ್ತಾರೆ.ಈ ಬ್ಲಾಗಿಗೆ ನೂರು ಜನಕ್ಕಿಂತ ಹೆಚ್ಚು ಜನ ಹಿಂಬಾಲಕರಿದ್ದಾರೆ.
----------------------------------------------------
ಮೊಬೈಲ್ ಬಳಕೆ:ಮಿತಿ ಮೀರುತ್ತಿದೆಯೇ?
ಒಂದು ತಿಂಗಳಲ್ಲಿ ಅಮೆರಿಕಾದ ಯುವಕರು ಮೂರೂವರೆಸಾವಿರದಷ್ಟು ಕಿರು ಸಂದೇಶಗಳನ್ನು ರವಾನಿಸುತ್ತಾರೆ.ಸಂದೇಶಗಳ ಉದ್ದ ಸರಾಸರಿ ನೂರಾರುವತ್ತು ಅಕ್ಷರಗಳಿಗೆ ಸೀಮಿತವಾಗಿದೆ.ಹಾಗೆ ನೋಡಿದರೆ ಕಿರುಸಂದೇಶ ಕಳುಹಿಸುವುದೇ ಯುವಕರಿಗೆ ಹೆಚ್ಚು ಸುಲಭ,ಗಮ್ಮತ್ತು ಮತ್ತು ಹಿಡಿಸಿದೆ.ಅವರು ಮಾತಿನಲ್ಲಿ ಕಳೆಯುವ ಸಮಯ ಸುಮಾರು ಆರುನೂರು ನಿಮಿಷಗಳು.ಇದು ಕಳೆದವರ್ಷದ ಆಧಾರದಲ್ಲಿ ಕಡಿಮೆಯಾಗಿದೆ.ದತ್ತಾಂಶಗಳ ಬಳಕೆ ಬಹಳ ಹೆಚ್ಚಿದ್ದು,ಅರುವತ್ತೆರಡು ಎಂಬಿಗಳಷ್ಟು ದತ್ತಾಂಶವನ್ನು ಬಳಸುತ್ತಾರೆನ್ನುವುದು ಅಧ್ಯಯನದಿಂದ ವ್ಯಕ್ತವಾಗಿದೆ.ಮಾತಿಗಾಗಿ ಮೊಬೈಲ್ ಬಳಸುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದು ಐವತ್ತು ವರ್ಷ ದಾಟಿದವರ ಪೈಕಿ ಮಾತ್ರಾ.ಚಿತ್ರ,ಎಮೆಮೆಸ್ ಸಂದೇಶಗಳೂ ಕಿರಿಯರ ಪೈಕಿ ಹೆಚ್ಚು ಜನಪ್ರಿಯವಾದ ಸೇವೆಗಳಾಗಿವೆ.ದತ್ತಾಂಶ ಸೇವೆ ಬಳಸುವವರು ಟಿವಿ ವೀಕ್ಷಿಸುವುದೇ ಹೆಚ್ಚು.
----------------------------------------------
ಓದುಗರ ಪ್ರತಿಕ್ರಿಯೆಗಳು
*ಟ್ವಿಟರ್ ಚಿಲಿಪಿಲಿಯಲ್ಲಿ"ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಹತ್ತು ವರ್ಷ ಪೂರೈಸಿದರು..ಯೆಡ್ಡಿ?"ಎಂದಿತ್ತು..ಯೆಡ್ಡಿ ಹತ್ತು ಗಂಡಾಂತರಗಳಿಂದ ಪಾರಾಗಿದ್ದಾರೆ!:ಆಸು ಹೆಗ್ಡೆ,ಬೆಂಗಳೂರು.
*ತುಂಬಾ ಚೆನ್ನಾಗಿದೆ:ನಮನ,ಬಜಗೋಳಿ.
--------------------------------------
ಅಂತರ್ಜಾಲ ಟಿವಿ
ಐದು ಬಿಲಿಯನ್ ಟಿವಿ ಸೆಟ್ಗಳು ಪ್ರಪಂಚದ ಮೂಲೆಮೂಲೆಯಲ್ಲಿದ್ದು,ಮೊಬೈಲ್ ಸೆಟ್ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.ಕಂಪ್ಯೂಟರ್ ಮತ್ತು ಅಂತರ್ಜಾಲಗಳನ್ನು ಬೆಸೆದರೆ ಹಲವು ಲಾಭಗಳಿವೆ.ಮೊದಲನೆಯದಾಗಿ,ನಮಗೆ ಬೇಕಾದ ಕಾರ್ಯಕ್ರಮಗಳನ್ನು ಶೋಧಿಸುವುದು ಸುಲಭವಾಗಲಿದೆ.ಜತೆಗೆ ಟಿವಿ ವೀಕ್ಷಣೆಯಲ್ಲಿ ನಾವೀನ್ಯತೆ ತರುವ ತಂತ್ರಾಂಶಗಳ ಬಳಕೆ ಸಾಧ್ಯವಾಗಲಿದೆ.ಟಿವಿ ಸೆಟ್ಟಾಪ್ ಬಾಕ್ಸ್ ಮಾರಾಟ ಜನಪ್ರಿಯವಾದರೆ,ಐದು ಬಿಲಿಯನ್ ಅಷ್ಟು ಸೆಟ್ಗಳಿಗೆ ಅವಕಾಶ ಇದೆ ಎನ್ನುವುದು ತಯಾರಕರಿಗೆ ಖುಷಿ ಕೊಡುವ ಅಂಶ.ಕಳೆದವಾರ ಲಾಜಿಟೆಕ್ ಕಂಪೆನಿಯ ಗೂಗಲ್ ಸೆಟ್ಟಾಪ್ ಬಾಕ್ಸ್ ರೆವ್ಯುವನ್ನು ಮಾರುಕಟ್ಟೆಗೆ ತಂದುದನ್ನು ಓದಿದಿರಿ.ಮರುದಿನವೇ ಆಪಲ್ ಕಂಪೆನಿಯ ಸೆಟ್ಟಾಪ್ ಬಾಕ್ಸ್ ಕೂಡಾ ಮಾರುಕಟ್ಟೆಗೆ ಬಂದಿದೆ.ಇದರ ಮೂಲಕ ಕೆಲವು ಟಿವಿ ಸೀರಿಯಲ್ ನಿರ್ಮಾಪಕರ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಾತ್ರಾ ಸಾಧ್ಯ.ಅಂತರ್ಜಾಲ ಮೂಲಕ ಟಿವಿಯನ್ನು ನೀಡಿ,ಅಧಿಕ ವೀಕ್ಷಕರ ಮೂಲಕ ತನ್ನ ಅಂತರ್ಜಾಲ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಗೂಗಲ್ ಯೋಜನೆ.ಸ್ಯಾಮ್ಸಂಗ್,ಎಲ್ಜಿ ಕಂಪೆನಿಗಳೂ ಅಂತರ್ಜಾಲ ಟಿವಿಯತ್ತ ಕಣ್ಣುಹಾಕಿವೆ.ಆದರೆ ಯಾವ ಕಂಪೆನಿಗೂ ನಿರೀಕ್ಷಿತ ಜನಪ್ರಿಯತೆ ಲಭ್ಯವಾಗಿಲ್ಲ.