ಕಗ್ಗ ದರ್ಶನ – 11 (2)

ಕಗ್ಗ ದರ್ಶನ – 11 (2)

ಅಣುವ ಸೀಳಲು ಬಹುದು ಕಣವಣಿಸಲು ಬಹುದು
ತಣುಬಿಸಿಗಳೊತ್ತಡವ ಪಿಡಿದಳೆಯಬಹುದು
ಗಣಿಸಲಳವೇ ಪ್ರೇಮ ಸುಖ ದುಃಖ ಮಹಿಮೆಗಳ
ಮನದ ಮೂಲವತರ್ಕ್ಯ – ಮರುಳ ಮುನಿಯ
ಈ ಮುಕ್ತಕದಲ್ಲಿ ಮನಸ್ಸಿನ ಭಾವಗಳ ನರ್ತನಾ ವಿಲಾಸವನ್ನು ಎತ್ತಿ ತೋರಿಸುತ್ತಿದಾರೆ, ಮಾನ್ಯ ಡಿ. ವಿ. ಗುಂಡಪ್ಪನವರು. ಅಣುವನ್ನೇ ಸೀಳಬಹುದು. ಆ ಮೂಲಕ ಅದರೊಳಗಿನ ಶಕ್ತಿಯನ್ನು ಬಿಡುಗಡೆಗೊಳಿಸಿ ಬಳಸಬಹುದು. ಪರಮಾಣು ವಿದ್ಯುತ್ ಸ್ಥಾವರಗಳ ಮೂಲಕ (ಕೈಗಾದಲ್ಲಿಯೂ ಇದೆ) ನಾವು ಮಾಡುತ್ತಿರುವುದು ಇದನ್ನೇ. ಆ ಸೂಕ್ಷ್ಮಕಣದ ಒಳಗಿನ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನಾವು ಎಣಿಸಬಹುದು; ಅಂದರೆ, ಒಂದು ಪರಮಾಣುವಿನ ಒಳಗೆ ಎಷ್ಟೆಷ್ಟು ಪ್ರೊಟಾನುಗಳು, ನ್ಯೂಟ್ರಾನುಗಳು ಮತ್ತು ಇಲೆಕ್ಟ್ರಾನುಗಳು ಇವೆ ಎಂಬುದನ್ನು. ಹಾಗೆಯೇ ಕಣ್ಣಿಗೆ ಕಾಣದ ಮಣ್ಣಿನ ಕಣಗಳನ್ನೂ, ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾ, ವೈರಸ್, ಬೂಸ್ಟುಗಳನ್ನೂ ಲೆಕ್ಕ ಮಾಡಬಹುದು. ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ಅತ್ಯಂತ ಸಣ್ಣ ಪರಾಗಕಣಗಳನ್ನೂ ಗಾಳಿಯಲ್ಲಿರುವ ಧೂಳಿನ ಹಾಗೂ ಅನಿಲಗಳ ಕಣಗಳನ್ನೂ ಎಣಿಸಬಹುದು. ತಂಪು ಮತ್ತು ಬಿಸಿಗಳ ಒತ್ತಡವನ್ನೂ ಅಳೆಯಬಹುದು.
ಆದರೆ, ಮನುಷ್ಯನ ಮನಸ್ಸಿನ ಭಾವನೆಗಳನ್ನು ಅಳೆಯಲು ಸಾಧ್ಯವೇ? (ಗಣಿಸಲು ಅಳವೇ?) ಪ್ರೀತಿ, ಸಂತೋಷ, ದುಃಖದುಮ್ಮಾನಗಳ ಏರುಪೇರು ಎಣಿಸಲು ಸಾಧ್ಯವೇ? ಈ ಭಾವದಲೆಗಳ ಪ್ರಭಾವ ಅಂದಾಜು ಮಾಡಲಾದೀತೇ?
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು, ಆಯಾ ಕ್ರೀಡೆಯಲ್ಲಿ ಜಗತ್ತಿನಲ್ಲೇ ಶ್ರೇಷ್ಠರೆಂದು ಸಾಧಿಸಿ ತೋರಿಸಿದವರ ಸಂಭ್ರಮವನ್ನು ನೆನೆಯೋಣ. ಒಂದೇ ಒಲಿಂಪಿಕ್ಸ್ನಲ್ಲಿ ನಾಲ್ಕು ಚಿನ್ನದ ಪದಕ ಬಾಚಿಕೊಂಡ ಕಾರ್ಲ್ ಲೂಯಿಸನ ಆನಂದಕ್ಕೆ ಎಣೆಯುಂಟೇ? ೨೦೧೪ರಲ್ಲಿ ಹುಡ್ಹುಡ್ ಚಂಡಮಾರುತದಿಂದ, ಜಮ್ಮು- ಶ್ರೀನಗರದ ಭಾರೀ ಭೂಕಂಪದಿಂದ, ಕೇದಾರನಾಥದ ಭಯಂಕರ ನೆರೆಯಿಂದ ತಮ್ಮ ಸರ್ವಸ್ವವನ್ನೂ ಕಳೆದುಕೊಂಡವರ ದುಃಖ ಲೆಕ್ಕಕ್ಕೆ ಸಿಕ್ಕೀತೇ? ಖಂಡಿತವಾಗಿ ಇಲ್ಲ.
ಆದ್ದರಿಂದಲೇ ನಮ್ಮ ಮನಸ್ಸಿನಿಂದ ಚಿಮ್ಮುವ ಭಾವನೆಗಳು ತರ್ಕಕ್ಕೆ ಸಿಗಲಾರವು (ಅತರ್ಕ್ಯ). ಅವು ತರ್ಕ, ಮಿತಿ, ಗಡಿ, ಪರಿಧಿಗಳನ್ನು ಮೀರಿದ ಚೈತನ್ಯದ ಅಲೆಗಳು.