ಕಗ್ಗ ದರ್ಶನ – 2 (1)

ಕಗ್ಗ ದರ್ಶನ – 2 (1)

ನಗುವೊಂದು ರಸಪಾಕವಳುವೊಂದು ರಸಪಾಕ
ನಗುವಾತ್ಮ ಪರಿಮಳವ ಪಸರಿಸುವ ಕುಸುಮ
ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು
ಬಗೆದೆರಡನುಂ ಭುಜಿಸು – ಮಂಕುತಿಮ್ಮ

ಬದುಕಿನಲ್ಲಿ ಸಂತೋಷವೇ ತುಂಬಿರಬೇಕು ಎಂಬಾಶೆ ನಮ್ಮದು. ಅದರಿಂದಾಗಿ ನಾವು ದುಃಖದಲ್ಲಿ ಮುಳುಗುತ್ತೇವೆ. ಇದಕ್ಕೆ ಪರಿಹಾರ ಏನೆಂದರೆ ಜೀವನದಲ್ಲಿ ಸಮಭಾವ ಬೆಳೆಸಿಕೊಳ್ಳುವುದು ಎಂಬ ಸರಳ ತತ್ವವನ್ನು ಈ ಮುಕ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ ಮಾನ್ಯ ಡಿ. ವಿ. ಗುಂಡಪ್ಪನವರು.

ಸಮಭಾವ ರೂಢಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ನಮ್ಮ ಚಿಂತನಾಕ್ರಮವನ್ನೇ ಬದಲಾಯಿಸಿಕೊಳ್ಳಬೇಕು. ನಗುತ್ತಾ ಖುಷಿಯಿಂದ ಇರುವುದು ರಸಪಾಕ ಸವಿದಂತೆ. ಇದು ನಾವೇ ಬೆಳೆಸಿಕೊಂಡ ಭಾವ. ಅಳುತ್ತ ದುಃಖದಿಂದ ಇರುವುದೂ  ರಸಪಾಕ ಎಂದು ನಾವ್ಯಾಕೆ ಭಾವಿಸಬಾರದು?

ನಮಗೆ ಯಾರೋ ಮೋಸ ಮಾಡಿದಾಗ ದುಃಖ ಸಹಜ. ಪರಿಚಿತನೊಬ್ಬ ನಮ್ಮ ಬಗ್ಗೆ ಆಪಾದನೆ ಮಾಡಿದಾಗಲೂ ದುಃಖ ಸಹಜ. ಆಪ್ತರು ತೀರಿಕೊಂಡಾಗಲೂ ದುಃಖ ಸಹಜ. ಈ ಎಲ್ಲ ನೋವಿನ ಸಂಗತಿಗಳಲ್ಲಿ ಜೀವನಾನುಭವದ ರಸಗವಳವಿದೆ, ಅಲ್ಲವೇ? ಆ ಮೋಸದಿಂದಾಗಿ ಮನುಷ್ಯರನ್ನು ಸೂಕ್ಷ್ಮವಾಗಿ ಗಮನಿಸುವ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರುವ ಪ್ರವೃತ್ತಿ ನಮ್ಮಲ್ಲಿ ಬೆಳೆಯಲಿ. ಹಾಗೆಯೇ, ಅಪರಿಚಿತನ ಆಪಾದನೆಗಳನ್ನೆಲ್ಲ ತಿರಸ್ಕರಿಸೋಣ. ಅವನ ಆಪಾದನೆಗಳನ್ನು ಯಾರೂ ನಂಬದಂತೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಬದುಕೋಣ. ಅದೇ ರೀತಿಯಲ್ಲಿ, ನಾವು ಅತ್ತರೆ ಸತ್ತವರು ಎದ್ದು ಬರುವುದಿಲ್ಲ ಎಂಬ ಸತ್ಯ ಒಪ್ಪಿಕೊಂಡು, ನೋವು ನುಂಗಿ ಬದುಕೋಣ.

ಈ ಪ್ರಕಾರ ನಮ್ಮ ಚಿಂತನಾಕ್ರಮ ಬದಲಾಯಿಸಿಕೊಂಡಾಗ ನಮಗೆ ಅರ್ಥವಾಗುವ ಸತ್ಯ: ದುಗುಡ ಎಂಬುದು ನಮ್ಮ ಆತ್ಮವನ್ನೇ ಕಡೆದು ನಮ್ಮ ಸತ್ವವನ್ನು ಬೆಳಕಿಗೆ ತರುವ ಮಂತು. ಮೊಸರು ಕಡೆದಾಗ ಬೆಣ್ಣೆ ತೇಲಿ ಬರುವಂತೆ, ಸಂಕಟ ಎದುರಾದಾಗ ನಮ್ಮ ಅಂತಃಸತ್ವ ಹೊರಬರುತ್ತದೆ. ಕಬ್ಬಿಣ ಉಕ್ಕಾಗಬೇಕಾದರೆ ಅದು ಕೆಂಪಾಗಿ ಕಾಯಲೇಬೇಕು.

ಪ್ರಕೃತಿಯಿಂದ ಸತ್ಯಗಳನ್ನು ಕಲಿಯೋಣ. ಕತ್ತಲಿದ್ದರೆ ತಾನೇ ಬೆಳಕಿನ ಅನುಭವ? ಕಹಿ ಇದ್ದರೆ ತಾನೇ ಸಿಹಿಯ ಅನುಭವ? ದುಃಖವಿದ್ದರೆ ತಾನೇ ಸಂತೋಷದ ಅನುಭವ? ಬದುಕಿನಲ್ಲಿ ಮಾಗಬೇಕಾದರೆ ಈ ಎರಡೂ ಅನುಭವಗಳು ಅತ್ಯಗತ್ಯ. ಕೇವಲ ಸುಖ ಅನುಭವಿಸಿದವನಿಗೆ ಅದರ ಬೆಲೆ ತಿಳಿಯುವುದಕ್ಕಿಂತ ಚೆನ್ನಾಗಿ ದುಃಖ ಅನುಭವಿಸಿದವನಿಗೆ  ಸುಖದ ಬೆಲೆ ತಿಳಿಯುತ್ತದೆ.
ಆದ್ದರಿಂದ, ಎರಡನ್ನೂ ಸಮಭಾವದಿಂದ ಸ್ವೀಕರಿಸೋಣ. ನಗುವಿನಿಂದಲೂ ಕಲಿಯೋಣ, ಅಳುವಿನಿಂದಲೂ ಕಲಿಯೋಣ. ಹಾಗೆ ಕಲಿಯುತ್ತ ಬಾಳೋಣ, ಬೆಳೆಯೋಣ.