ಕಗ್ಗ ದರ್ಶನ – 28 (2)
ತನುರುಜೆಯ ವಿಷ ಕರಗಿ ಬಣ್ಣ ಬಣ್ಣದಿ ಪರಿಯೆ
ಗುಣವಪ್ಪುದೌಷಧಕೆ ಕಾಲವನುವಾಗೆ
ಮನದ ರುಜಿನವುಮಂತು ಕರಗಿ ಹೊರಹರಿಯದಿರೆ
ತಣಿವೆಂತು ಜೀವಕ್ಕೆ – ಮರುಳ ಮುನಿಯ
ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಎತ್ತುವ ಸರಳ ಪ್ರಶ್ನೆ: “ನಮ್ಮ ಜೀವಕ್ಕೆ ತಣಿವೆಂತು?” ಈ ಪ್ರಶ್ನೆಯ ಹಿನ್ನೆಲೆ ಮಾರ್ಮಿಕವಾಗಿದೆ. ನಮ್ಮ ಶರೀರದ ಕಾಯಿಲೆ (ರುಜೆ) ವಾಸಿಯಾಗ ಬೇಕಾದರೆ ಏನಾಗಬೇಕು? ಎಂಬುದನ್ನು ಮೊದಲ ಎರಡು ಸಾಲುಗಳಲ್ಲಿ ವಿವರಿಸಿದ್ದಾರೆ. ಆ ರೋಗದ ವಿಷ ಕರಗಿ, ಬಣ್ಣಬಣ್ಣದ ಕಫ – ಮಲ – ಮೂತ್ರ – ಬೆವರಿನ ರೂಪದಲ್ಲಿ ದೇಹದಿಂದ ಹೊರಕ್ಕೆ ಹರಿಯಬೇಕು. ಜೊತೆಗೆ ಔಷಧ ಸೇವಿಸುತ್ತಿದ್ದರೆ, ಕಾಲ ಕೂಡಿ ಬಂದಾಗ (ಅಂದರೆ ಕೆಲವು ದಿನಗಳಲ್ಲಿ) ಕಾಯಿಲೆ ಗುಣವಾಗುತ್ತದೆ.
ಹಾಗೆಯೇ, ಮನಸ್ಸಿನ ಕಾಯಿಲೆ(ರುಜಿನ)ಯ ವಿಷವೂ ಕರಗಿ ಹೊರಕ್ಕೆ ಹರಿದು ಹೋಗಬೇಕು. ಅದು ಒಳಗೇ ಉಳಿದರೆ, ಮನವನ್ನೆಲ್ಲ ವ್ಯಾಪಿಸುವ ಹಾಲಾಹಲವಾಗುತ್ತದೆ. ಅದರಿಂದಾಗಿ ಯಾರಿಗೂ ಯಾವತ್ತೂ ನೆಮ್ಮದಿ ಸಿಗುವುದಿಲ್ಲ.
ಮನಸ್ಸಿನ ಕಾಯಿಲೆಗಳು ಯಾವುವು? ಅವನ್ನು ಗುಣ ಪಡಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ನಾವು ನಮ್ಮನ್ನೇ ಗಮನಿಸಬೇಕು. ನಮ್ಮ ಭಾವನೆ ಮತ್ತು ವರ್ತನೆಗಳನ್ನು ಗುರುತಿಸುತ್ತಾ, ನಮ್ಮ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ಯಾವುದೇ ಸನ್ನಿವೇಶದಲ್ಲಿ ನಾವು ಹೇಗೆ ವರ್ತಿಸುತ್ತೇವೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಅರಿತು ಕೊಂಡರೆ, ನಮ್ಮ ಮನಸ್ಸಿನ ಏರುಪೇರುಗಳನ್ನು ಸಂಭಾಳಿಸಲು ಸಾಧ್ಯ. ಉದಾಹರಣೆಗೆ, ದುಃಖ. ಆತ್ಮೀಯರ ಸಾವು, ಶಾಲಾ ಪರೀಕ್ಷೆಯಲ್ಲಿ ಫೈಲ್, ಪ್ರಯತ್ನಕ್ಕೆ ಸೋಲು, ಉದ್ಯೋಗ ಕಳೆದುಕೊಳ್ಳುವುದು, ವ್ಯವಹಾರದಲ್ಲಿ ನಷ್ಟ – ಇವೆಲ್ಲ ದುಃಖದ ಘಟನೆಗಳು. ಆದರೆ ಇಂತಹ ಬಹುಪಾಲು ಘಟನೆಗಳು ನಮ್ಮ ನಿಯಂತ್ರಣದಲ್ಲಿಲ್ಲ. ಹಾಗಾಗಿ, ದುಃಖಿಸಿ ಫಲವಿಲ್ಲ. ಆದಷ್ಟು ಬೇಗನೇ ದುಃಖದ ಮನಸ್ಥಿತಿಯಿಂದ ಹೊರಬರಬೇಕು. ಕೋಪದ ಬಗ್ಗೆಯೂ ನಾವು ತಿಳಿಯಬೇಕಾದ್ದು ಏನೆಂದರೆ, “ನನಗೆ ಕೋಪ ಬರುವುದಲ್ಲ”; ಬದಲಾಗಿ “ನಾನು ಕೋಪ ಮಾಡಿಕೊಳ್ಳುವುದು”. ಇದನ್ನು ಒಪ್ಪಿಕೊಂಡರೆ, ನಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯ. ಭಯ ಆದಾಗಲೂ ಅದರ ಕಾರಣದ ಪತ್ತೆ ಮಾಡಿದರೆ, ಭಯವನ್ನು ನಿಗ್ರಹಿಸಲು ಸಾಧ್ಯ. ತಪ್ಪು ತಿಳಿವಳಿಕೆ ಹಾಗೂ ಅನಿಶ್ಚಿತತೆಯಿಂದ ಹುಟ್ಟುವ ಭಯಕ್ಕೆ ಅರ್ಥವೇ ಇಲ್ಲ. ದ್ವೇಷ ಮತ್ತು ಮತ್ಸರ ಭಾವವಂತೂ ನಮ್ಮನ್ನೇ ಸುಟ್ಟು ಹಾಕುತ್ತದೆ. ಯಾರಿಗೋ ತೊಂದರೆ ನೀಡಿ, ಯಾರನ್ನೋ ನಾಶ ಮಾಡಿ ನಾವು ಸಾಧಿಸುವುದು ಏನೂ ಇಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಮ್ಮನ್ನು, ಪರರನ್ನು ಮತ್ತು ನಡೆಯುವ ಸಂಗತಿಗಳನ್ನು ಇದ್ದಂತೆಯೇ ಸ್ವೀಕರಿಸಬೇಕು. ಆಗ, ನಮ್ಮ ಜೀವಕ್ಕೆ ತಣಿವು, ಅಲ್ಲವೇ?