ಕಗ್ಗ ದರ್ಶನ – 32 (1)

ಕಗ್ಗ ದರ್ಶನ – 32 (1)

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ
ದೂರವಾದೊಡದೇನು? ಕಾಲು ಕುಂಟಿರಲೇನು?
ಊರ ನೆನಪೇ ಬಲವೋ - ಮಂಕುತಿಮ್ಮ
ಈ ಭೂಮಿಯಲ್ಲಿ ನಮ್ಮ ಬದುಕಿನುದ್ದಕ್ಕೂ ಅತ್ಯುನ್ನತ ಗುರಿ (ಮೇರು) ತಲಪುವ ಹೆಬ್ಬಯಕೆ ನಮಗಿರಬೇಕು. ಅಂತಹ ಗುರಿಯನ್ನು ಮರೆತು ಬಿಟ್ಟಾಗ, ಅದುವೇ ನರಕಕ್ಕೆ ದಾರಿಯಾದೀತು. ಸಣ್ಣತನ, ನೀಚತನ, ದುಷ್ಟತನಗಳು ನಮ್ಮನ್ನು ಮತ್ತೆಮತ್ತೆ ನರಕದಂತಹ ಬದುಕಿಗೆ ಎಳೆಯುತ್ತವೆ. ನಮ್ಮ ಗುರಿ ಬಹಳ ದೂರವಿದ್ದೀತು ಅಥವಾ ನಡಿಗೆಯಲ್ಲಿ ಕಾಲು ಕುಂಟಿದಂತೆ ಎಡರುತೊಡರುಗಳು ಗುರಿ ತಲಪುವುದಕ್ಕೆ ಅಡ್ಡಿಯಾದಾವು. ಆದರೂ ನಮ್ಮೂರಿನ ನೆನಪಿನ ಸೆಳೆತದಂತೆ  ಮೇರುಗುರಿ ನಾವು ಮುನ್ನುಗ್ಗಲು ಪ್ರೇರಣೆ ಎಂಬುದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರ ಸಂದೇಶ.
ಬ್ರೆಜಿಲಿನ ರಿಯೋ ಡಿ ಜೆನೈರೋದಲ್ಲಿ ಆಗಸ್ಟ್ ೫ರಿಂದ ೨೧ರ ವರೆಗೆ (೨೦೧೬) ಜರಗಿದ ಒಲಿಪಿಂಕ್ಸ್ ಸ್ಪರ್ಧೆಗಳ ವರ್ಣರಂಜಿತ ಆಗುಹೋಗುಗಳು ಡಿ.ವಿ.ಜಿ.ಯವರ ಸಂದೇಶವನ್ನು ಸಮರ್ಥಿಸುತ್ತವೆ. ಅಬ್ಬ, ಎಂತಹ ಬೃಹತ್ ವಿದ್ಯಮಾನ ಅದು! ಅಲ್ಲಿ ೧೦,೫೦೦ ಸ್ಪರ್ಧಿಗಳು, ೩೦೬ ಸ್ಪರ್ಧೆಗಳು, ೨೮ ಕ್ರೀಡೆಗಳು ಹಾಗೂ ಭಾಗವಹಿಸಿದ ದೇಶಗಳು ೨೦೬. ಅವರೆಲ್ಲರ ಗುರಿ ಒಂದೇ: ಇನ್ನಷ್ಟು ವೇಗ, ಇನ್ನಷ್ಟು ತಾಕತ್ತು, ಇನ್ನಷ್ಟು ಎತ್ತರ.
ನಿರೀಕ್ಷೆಯಂತೆ ಯುಎಸ್ಎ ದೇಶದ ಸ್ಪರ್ಧಾಳುಗಳು ಅತ್ಯಧಿಕ ಪದಕ ಗೆದ್ದರು: ೪೩ ಚಿನ್ನ, ೩೭ ಬೆಳ್ಳಿ ಮತ್ತು ೩೮ ಕಂಚು (ಒಟ್ಟು ೧೧೮) ಪದಕಗಳು. ದೊಡ್ಡ ಸುದ್ದಿ ಮಾಡಿದ್ದು ಜಮೈಕಾದ ಓಟಗಾರ ಉಸೈನ್ ಬೋಲ್ಟ್. ಚೀನಾದ ಬೀಜಿಂಗಿನಲ್ಲಿ ೨೦೦೮ರಲ್ಲಿ, ಲಂಡನಿನಲ್ಲಿ ೨೦೧೨ರಲ್ಲಿ, ಈಗ ರಿಯೋದಲ್ಲಿ - ಸತತವಾಗಿ ಈ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ತಲಾ ಮೂರು ಚಿನ್ನ ಪದಕಗಳನ್ನು (೧೦೦ ಮೀ., ೨೦೦ ಮೀ. ಮತ್ತು ೪*೧೦೦ ಮೀ. ರಿಲೇ ಓಟಗಳಲ್ಲಿ) ಗೆದ್ದು ಚರಿತ್ರೆಯಲ್ಲೇ ಅಪ್ರತಿಮ ಓಟಗಾರನೆಂದು ಹೆಸರು ದಾಖಲಿಸಿದ.
ಅದೆಲ್ಲ ಸರಿ. ಆದರೆ ವಿವಿಧ ದೇಶಗಳು ಮತ್ತು ಕ್ರೀಡಾಪಟುಗಳು ಒಲಿಂಪಿಕ್ಸ್ ಎಂಬ ಮಹಾ ಸ್ಪರ್ಧೆಯಲ್ಲಿ ಮೇರುಗುರಿ ತಲಪುವ ಮಹತ್ವಾಕಾಂಕ್ಷೆಯ ಬೆಂಬತ್ತಿದ ಕಾರಣ ಈಗ ಏನಾಗಿದೆ? ಅದೀಗ ಹಣದ ಹೊಳೆ ಹರಿಸುವ ಉದ್ಯಮವಾಗಿದೆ. ಯುಎಸ್ಎ ದೇಶದ ಟೆಲಿವಿಷನ್ ಕಂಪೆನಿ ಎನ್ಬಿಸಿ ೨೦೧೪ರಿಂದ ೨೦೨೦ರ ವರೆಗಿನ ಒಲಿಂಪಿಕ್ಸ್-ಗಳ ಪ್ರಸಾರಕ್ಕಾಗಿ ೪.೩೮ ಬಿಲಿಯನ್ ಡಾಲರ್ ಪಾವತಿಸಲಿದೆ. ಎಲ್ಲ ವಿಜೇತರೂ ಯಾವ್ಯಾವುದೋ ಕಂಪೆನಿಗಳ ಜಾಹೀರಾತುಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ – ಕೋಟಿಕೋಟಿ ರೂಪಾಯಿ ಹಣಕ್ಕಾಗಿ. ಜೊತೆಗೆ ಒಲಿಂಪಿಕ್ಸಿನ ಕರಾಳ ಮುಖವನ್ನೂ ಗಮನಿಸಿ: ಅಂದು ಪೂರ್ವ ಜರ್ಮನಿಯಲ್ಲಿ ಸಣ್ಣ ಮಕ್ಕಳಿಗೆ ಉತ್ತೇಜಕ ಚುಚ್ಚುಮದ್ದು ನೀಡಿ ಬೆಳೆಸಿ ಪದಕಗಳನ್ನು ಬಾಚಿ ಕೊಂಡದ್ದು; ಇಂದು ರಷ್ಯಾದ ಸ್ಪರ್ಧಿಗಳು ಉತ್ತೇಜಕ ಬಳಸಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾದದ್ದು. ಗುರಿ ತಲಪಲಿಕ್ಕಾಗಿ ಅಡ್ಡದಾರಿಯಲ್ಲಿ ಸಾಗುವುದು ಪತನದ ಉದಾಹರಣೆ. ಗುರಿ ಸಾಧನೆಯಂತೆ ಸಾಧನೆಯ ದಾರಿಯೂ ಮುಖ್ಯ, ಅಲ್ಲವೇ?