ಕಗ್ಗ ದರ್ಶನ – 50 (1)

ಕಗ್ಗ ದರ್ಶನ – 50 (1)

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ
ಬ್ರಹ್ಮಾನುಭವಿಯಾಗುವ ದಾರಿಯನ್ನು ಅತ್ಯಂತ ಸರಳವಾಗಿ ನಮಗೆ ಈ ಮುಕ್ತಕದಲ್ಲಿ ತೋರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಒಮ್ಮೆ ಹೂದೋಟದಲ್ಲಿ, ಒಮ್ಮೆ ಗೆಳೆಯರ ಕೂಟದಲ್ಲಿ, ಒಮ್ಮೆ ಸಂಗೀತದ ಸ್ವಾದದಲ್ಲಿ, ಇನ್ನೊಮ್ಮೆ ಶಾಸ್ತ್ರಗಳ ಅಧ್ಯಯನದಲ್ಲಿ, ಮತ್ತೊಮ್ಮೆ ಸಂಸಾರದ ಅನುಭವಗಳಲ್ಲಿ, ಮಗದೊಮ್ಮೆ ಮೌನದ ಆಳದಲ್ಲಿ ಆ ಪರಬ್ರಹ್ಮನ ಇರುವಿಕೆಯನ್ನು ಪೂರ್ಣವಾಗಿ ಅನುಭವಿಸು ಎನ್ನುತ್ತಾರೆ. ಬದುಕಿನ ಎಲ್ಲ ಅನುಭವಗಳಿಗೂ ತೆರೆದುಕೊಳ್ಳಬೇಕು; ಪ್ರತಿಯೊಂದು ಅನುಭವದಲ್ಲಿಯೂ ಪರಬ್ರಹ್ಮನ ಇರುವಿಕೆಯನ್ನು ಗುರುತಿಸುತ್ತಾ ಪೂರ್ಣತ್ವದೆಡೆಗೆ ಸಾಗಬೇಕು ಎಂಬುದು ಡಿ.ವಿ.ಜಿ.ಯವರ ಸಂದೇಶ.
ಹೂದೋಟದಲ್ಲಿ ಬಿತ್ತಿದ ಬೀಜವೊಂದು ಮೊಳಕೆಯೊಡೆದು ಸಸಿಯಾಗಿ ಬೆಳೆಯುವುದು ಒಂದು ಅದ್ಭುತ. ನಿನ್ನೆಯ ಮೊಗ್ಗು ಇಂದು ಹೂವಾಗಿ ಅರಳುವುದು ಇನ್ನೊಂದು ಅದ್ಭುತ. ಈ ಎರಡು ಕ್ರಿಯೆಗಳು ಸೃಷ್ಟಿಯ ರಹಸ್ಯಗಳನ್ನೆಲ್ಲ ಒಳಗೊಂಡಿವೆ. ಪ್ರತಿಯೊಂದು ಹೂವಿನ ರೂಪ, ಆಕಾರ, ಗಾತ್ರ, ದಳಗಳ ಸಂಯೋಜನೆ, ಬಣ್ಣ ಭಿನ್ನಭಿನ್ನ. ಹಾಗೆಯೇ ನಮ್ಮ ಮಿತ್ರಕೂಟದ ಪ್ರತಿಯೊಬ್ಬ ಸ್ನೇಹಿತನೂ ವಿಭಿನ್ನ. ಕ್ಷಣಕ್ಷಣವೂ ಅವರ ಮನದಾಳದ ಭಾವನೆಗಳು ಏನೆಂಬುದು ನಿಗೂಢ. ಕೆಲವರು ಸ್ನೇಹದ ಮುಖವಾಡ ತೊಟ್ಟು ನಮಗೆ ದ್ರೋಹ ಬಗೆಯುತ್ತಲೇ ಇರುತ್ತಾರೆ. ಇಂಥವರ ಮುಖವಾಡಗಳ ಹಿಂದಿರುವ ದುರುಳತನ, ನೀಚತನಗಳ ಪತ್ತೆ ಹೇಗೆ? ಎಂಬುದೇ ನಾವು ಎದುರಿಸುವ ದೊಡ್ಡ ಸವಾಲು.
ಸಂಗೀತ, ನಾಟ್ಯ, ಚಿತ್ರಕಲೆ, ಶಿಲ್ಪಕಲೆ, ಜಾನಪದ ಕಲೆ – ಇವೆಲ್ಲವೂ ನಮ್ಮ ಬದುಕು ಅರಳಲು ಮತ್ತು ನಮ್ಮ ಅರಿವು ವಿಸ್ತಾರವಾಗಲು ಅಗತ್ಯ. ಹಲವರು ಇದ್ಯಾವುದಕ್ಕೂ ತೆರೆದುಕೊಳ್ಳದೆ ತಮ್ಮ ಜೀವನವನ್ನೇ ಮುಗಿಸುತ್ತಾರೆ. ಎಂ.ಎಸ್. ಸುಬ್ಬುಲಕ್ಷ್ಮಿ, ಭೀಮಸೇನ ಜೋಷಿ ಇಂತಹ ಸಂಗೀತ ದಿಗ್ಗಜಗಳ ಗಾಯನ ನೀಡುವ ದಿವ್ಯ ಅನುಭವವನ್ನು ಶಬ್ದಗಳಲ್ಲಿ ವಿವರಿಸಲಾದೀತೇ? ಅದೇ ರೀತಿಯಲ್ಲಿ, ವಿವಿಧ ಶಾಸ್ತ್ರಗಳ ಅಧ್ಯಯನವು ನಮ್ಮ ಅರಿವಿನ ಲೋಕದ ದಿಗಂತವನ್ನು ವಿಸ್ತರಿಸುತ್ತದೆ, ಅಲ್ಲವೇ? ಭೌತಶಾಸ್ತ್ರದಿಂದ ತೊಡಗಿ, ಸಾಹಿತ್ಯ ಸಹಿತವಾಗಿ ಕಂಪ್ಯೂಟರ್ ವಿಜ್ನಾನದ ವರೆಗಿನ ಅಗಾಧ ಜ್ನಾನಲೋಕಕ್ಕೆ ತೆರೆದುಕೊಳ್ಳದಿದ್ದರೆ ಬಾಳು ಬರಡಾದೀತು. ಹಾಗೆಯೇ ಸಾಂಸಾರಿಕ ಬದುಕೆಂಬುದೊಂದು ಸಾಗರ. ಅದರ ಆಳ-ಅಗಲ ಈಸಿ ತಿಳಿಯಬೇಕು. ಮೌನದ ಲೋಕದಲ್ಲಂತೂ ಪ್ರತಿಕ್ಷಣದಲ್ಲಿ ಬದುಕಿನ ಮೂಲಭೂತ ಪ್ರಶ್ನೆಗಳಿಗೆ ನಮ್ಮ ಮುಖಾಮುಖಿ. ಇವೆಲ್ಲದಕ್ಕೆ ತೆರೆದುಕೊಳ್ಳುವುದೇ ಬ್ರಹ್ಮಾನುಭವಿಯಾಗುವ ಸಾಧನೆಯ ದಾರಿ.