ಕಟ್ಟಡ ಸ್ಫೋಟಿಸಿದರೆ ಸಿದ್ಧಾಂತ ನಾಶವಾಗದು

ಕಟ್ಟಡ ಸ್ಫೋಟಿಸಿದರೆ ಸಿದ್ಧಾಂತ ನಾಶವಾಗದು

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿಂದೆ ಬಿದ್ದ ದೇಶದ ಪ್ರಮುಖ ತನಿಖಾ ದಳಗಳು ಈಗ ಬೆಂಗಳೂರು ಮಹಾನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯಕ್ಕೆ ಮುಟ್ಟಿವೆ. ಜನಸಂಘದ ಪ್ರಥಮ ಅಧ್ಯಕ್ಷ ಶ್ಯಾಮ ಪ್ರಸಾದ್ ಮುಖರ್ಜಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ದೇಶದಲ್ಲಿ ಎರಡು ನಿಶಾನೆ, ಎರಡು ಸಂವಿಧಾನ ಮತ್ತು ಎರಡು ಪ್ರಧಾನ ಮಂತ್ರಿಗಳು ಇರಬಾರದೆಂದು ಪಾದಯಾತ್ರೆಯನ್ನು ಮಾಡಿ ಜಮ್ಮು ಮತ್ತು ಕಾಶ್ಮೀರವನ್ನು ಮುಟ್ಟಿದ್ದರು. ಆದರೆ ಅಂದಿನ ದೆಹಲಿ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಮುಖ್ಯಸ್ಥರು ಶ್ಯಾಮ ಪ್ರಸಾದ ಮುಖರ್ಜಿಯವರನ್ನು ಬಂಧಿಸಿ ನಿಗೂಢವಾಗಿ ಜೈಲಿನಲ್ಲೇ ಕೊಲೆ ಮಾಡಿಸಿತ್ತು.

ಅದರ ನಂತರ ಜನಸಂಘದ ಸಂಘಟನಾ ಕಾರ್ಯದರ್ಶಿಯೂ, ನಂತರ ಅಧ್ಯಕ್ಷರೂ ಆದಂಥ ಪಂಡಿತ ದೀನದಯಾಳ ಉಪಾಧ್ಯಾಯರನ್ನು ರೈಲಿನಲ್ಲಿ ನಿಗೂಢವಾಗಿ ಕೊಲೆ ಮಾಡಿಸಲಾಗಿತ್ತು. ಇವತ್ತಿಗೂ ಆ ಕೊಲೆ ನಿಗೂಢವಾಗಿಯೇ ಉಳಿದಿದೆ. ಅದರ ಬಗ್ಗೆ ಅನೇಕ ವದಂತಿಗಳು ಹಬ್ಬಿದರೂ ಯಾವ ಸರ್ಕಾರಗಳೂ ಅದರ ಬಗ್ಗೆ ತನಿಖೆ ಮಾಡಿಲ್ಲ. ರಷ್ಯಾದ ಗುಪ್ತಚರ ಇಲಾಖೆ ದೀನದಯಾಳ ಉಪಾಧ್ಯಾಯರ ಕೊಲೆ ಮಾಡಿಸಿದೆ ಎಂಬ ಗುಮಾನಿ ಇದ್ದರೂ ಅದರ ಬಗ್ಗೆ ತನಿಖೆ ಆಗಿಲ್ಲ. ಜೊತೆಗೆ ಕಾಂಗ್ರೆಸ್ ಸರಕಾರದ ಕೈಕೆಳಗೆ ಅವರ ಕಾರ್ಯಕರ್ತರು ಅವರ ಕೊಲೆಯನ್ನು ಮಾಡಿದ್ದರು ಎಂಬ ಬಗ್ಗೆ ಬಿಜೆಪಿ ಕಾರ್ಯಕರ್ತರು ಆರೋಪಗಳನ್ನು ಮಾಡಿದ್ದರೂ ಅದರ ಬಗ್ಗೆ ಇದುವರೆಗಿನ ಸರ್ಕಾರಗಳು ಅವರ ಬಗ್ಗೆ ತನಿಖೆಗೆ ಆದೇಶ ಹೊರಡಿಸಿಲ್ಲ. ಅದರ ಜೊತೆಗೆ ಜನಸಂಘದ ಕಾಲಾನಂತರ ಭಾರತೀಯ ಜನತಾ ಪಾರ್ಟಿಯ ಅವಧಿಯಲ್ಲೂ ಬಿಜೆಪಿ ರಾಮಜನ್ಮಭೂಮಿ ಆಂದೋಲನದಲ್ಲಿ ರಥಯಾತ್ರೆ ಮತ್ತು ಜ್ಯೋತಿ ಯಾತ್ರೆಯನ್ನು ಕೈಗೊಂಡರೂ ಅದರ ಬಗ್ಗೆ ಕಾಂಗ್ರೆಸ್ ಸರ್ಕಾರ ಭದ್ರತೆಯ ಗ್ಯಾರಂಟಿಯನ್ನು ನೀಡಲಿಲ್ಲ. ಅದರಲ್ಲೂ ಲಾಲಕೃಷ್ಣ ಅಧ್ವಾಣಿಯವರಿಗೆ ಭಯೋತ್ಪಾದಕರ ಬೆದರಿಕೆ ಇದ್ದರೂ ಅವರಿಗೆ ಕಾಂಗ್ರೆಸ್ ಸರ್ಕಾರಗಳು ಭದ್ರತೆಯನ್ನು ಒದಗಿಸಿಲ್ಲ.

ಅದರ ನಂತರ ನರೇಂದ್ರ ಮೋದಿಯವರು ಗೋಧ್ರಾ ಪ್ರಕರಣದ ಸುಳ್ಳುಗಳು ವಿಶ್ವದಾದ್ಯಂತ ವಿಜೃಂಭಿಸಿದ ಮೇಲೂ ಕೂಡ ಅವರ ಭದ್ರತೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿತ್ತು ! ಓರ್ವ ಮುಖ್ಯಮಂತ್ರಿಯವರಿಗೇ ಹೀಗಾದ ಮೇಲೆ ಇನ್ನು ಉಳಿದ ರಾಷ್ಟ್ರೀಯವಾದಿಗಳ ಪಾಡೇನು? ಒಂದು ಕಾಲದಲ್ಲಿ ಅಮಿತ್ ಶಾ ಅವರನ್ನು ಗುಜರಾತಿನಿಂದ ಗಡಿಪಾರು ಮಾಡಿದ ಮಾನಸಿಕತೆಯೇ ಇಂದು ಅವರನ್ನು ಹಣಿಯಲು ಪ್ರಯತ್ನಿಸುತ್ತಿದೆ ಎನ್ನುವುದು ಯಾವತ್ತಿದ್ದರೂ ರಕ್ಕಸರು ಬಲಶಾಲಿಗಳು ಎಂಬುದನ್ನು ಬಹಿರಂಗಪಡಿಸುತ್ತಿದೆ.

ಇದೀಗ ರಾಜ್ಯವೊಂದರ ಪಕ್ಷದ ಕಾರ್ಯಾಲಯವನ್ನು ಸ್ಫೋಟಗೊಳಿಸುವ ಹುನ್ನಾರ ಬಯಲಾಗಿದೆ. ಹತ್ತು ವರ್ಷಗಳ ಹಿಂದೆ ಕೂಡ ರಾಜ್ಯ ಕಾರ್ಯಾಲಯದ ಸ್ಫೋಟ ನಡೆದಿತ್ತು. ಆದರೆ ಬಿಜೆಪಿ ಅದರಿಂದ ಪುಟಿದು ನಿಂತಿತ್ತು. ಇದೀಗ ಮತ್ತೆ ಅದನ್ನು ಸ್ಫೋಟಿಸುವ ಹುನ್ನಾರದ ಮೂಲಕ ದುಷ್ಟ ಶಕ್ತಿಗಳು ರಾಷ್ಟ್ರವಾದಿ ಶಕ್ತಿಗಳನ್ನು ಅಡಗಿಸುವ, ಶಕ್ತಿ ಕುಂದಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆದರೆ ಬೆಜೆಪಿ ಕಾರ್ಯಕರ್ತರ ಪಕ್ಷ. ದೇಶಕ್ಕಾಗಿ ಪ್ರಾಣ ಕೊಡುವ ಕಾರ್ಯಕರ್ತರು ಅಲ್ಲಿದ್ದಾರೆ. ಎನ್ನುವುದನ್ನು ಕೆಲವರು ತಿಳಿದಿಲ್ಲ. ಕಟ್ಟಡ ಸ್ಫೋಟಿಸಿದರೆ ವ್ಯಕ್ತಿತ್ವ ನಾಶವಾಗದು ಎಂಬುದನ್ನು ಅವರು ಅರಿತಿಲ್ಲ. 

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೧-೦೯-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ