ಕಡಿದ ಕಾಡಿನ ಮರುಹುಟ್ಟು

ಕಡಿದ ಕಾಡಿನ ಮರುಹುಟ್ಟು

ಉತ್ತರಪ್ರದೇಶದ ಒಂದು ಹಳ್ಳಿ ನಾಗ್ವಾ. 1980ರ ಆರಂಭದಲ್ಲಿ, ಅಲ್ಲಿನ ಹಳ್ಳಿಗರು ಅಲ್ಲಿದ್ದ ಕಾಡಿನ ಬಹುಪಾಲು ಮರಗಳನ್ನು ಕಡಿದು ಹಾಕಿದರು.

ಯಾಕೆ? ಅರಣ್ಯ ಇಲಾಖೆಯ ಅಧಿಕಾರಿಗಳು ಭಾರತೀಯ ಅರಣ್ಯ ಕಾಯಿದೆ, 1927ರ ಅನುಸಾರ ನಾಗ್ವಾ ಹಳ್ಳಿಯನ್ನು ಮೀಸಲು ಅರಣ್ಯ ಪ್ರದೇಶವೆದು ಘೋಷಿಸಿ, ಅಲ್ಲಿ ವಾಸವಿದ್ದವರೆಲ್ಲ ಹಳ್ಳಿ ಬಿಟ್ಟು ಹೋಗಬೇಕೆಂದು ಆದೇಶಿಸಿದರು. ಅದೇ ಹಳ್ಳಿಯಲ್ಲಿ ಉಳಿಯಲು ಆ ಹಳ್ಳಿಗರಿಗೆ ಇದ್ದದ್ದು ಒಂದೇ ದಾರಿ: ಕಾಡಿನ ಮರಗಳನ್ನು ಕಡಿದು ಹಾಕೆ, “ಎಲ್ಲಿದೆ ಕಾಡು?" ಎಂದು ಪ್ರಶ್ನಿಸುವುದು. ಈ ಉಪಾಯ ಫಲಿಸಿತು. ಹತ್ತಿರದ ಕೆಲವು ಹಳ್ಳಿಗಳಿಂದ ಆ ರೀತಿ ಹಳ್ಳಿಗರನ್ನು ಹೊರಗಟ್ಟಿ, ಅನಂತರ ಖಾಸಗಿ ವ್ಯಕ್ತಿಗಳಿಗೆ ಕಾಡಿನ ಮರಗಳನ್ನು ಮಾರಿದ ಅರಣ್ಯ ಇಲಾಖೆಯ ಅಧಿಕಾರಿಗಳ ಹುನ್ನಾರ ನಾಗ್ವಾದಲ್ಲಿ ನಡೆಯಲಿಲ್ಲ.

ತಮ್ಮ ಉಳಿವಿಗಾಗಿ ಕಾಡಿನ ಮರಗಳನ್ನು ಕಡಿದದ್ದಾಯಿತು. ಇನ್ನು ಕಾಡಿಗೆ ಮರುಹುಟ್ಟು ನೀಡುವುದು ಹೇಗೆ? ಎಂಬ ಚಿಂತೆ ಕಾಡಿತು ನಾಗ್ವಾದ ಹಳ್ಳಿಗರನ್ನು. ಆಗ ಈ ಕಾಯಕದ ಮುಂದಾಳುತನ ವಹಿಸಿದವರು ಕಮಲೇಶ್ವರ ನಾಥ್. ಈ ಹಿರಿಯರನ್ನು ಹಳ್ಳಿಗರು ಕರೆಯುವುದು ಬಾಬಾ ಎಂದು. ಇವರ ಮೂಲಿಕಾ ಮಿಶ್ರಣ 1,90,000ಕ್ಕಿಂತ ಅಧಿಕ ಮರಗಳಿಗೆ ಮರುಹುಟ್ಟು ನೀಡಿದೆ.

ಅದು ಮರಗಳು ಒಣಗುವುದನ್ನು ತಡೆದು, ಅವನ್ನು ಬದುಕಿಸುವ ಮಿಶ್ರಣ. ಅದರ ತಯಾರಿ ಹೀಗೆ: ಮುಲ್ತಾನಿ ಮಣ್ಣು, ಬಾಬುಲ್ (ಅಕೇಸಿಯಾ) ಮತ್ತು ಮಾವು ಇಂತಹ ಮರಗಳ ತೊಗಟೆ, ಕಹಿಬೇವಿನ ಮರದ ಎಲೆಗಳು, ಹಡ್-ಜೊರ್ (ಸಿಸ್ಸೂ
ಕ್ವಾಡ್ರಂಗುಲಾರಿಸ್) ಮೂಲಿಕೆ - ಇವನ್ನೆಲ್ಲ ದನದ ಸೆಗಣಿ ಮತ್ತು ಮೂತ್ರದ ಜೊತೆ ಸೇರಿಸಿ, ಮಿಶ್ರಣ ತಯಾರಿಸುವುದು. ಅಲ್ಲಿನ ಕಾಡಿನಲ್ಲಿರುವ ಬಹುಪಾಲು ಮರಗಳು ಜಾಮೂನ್, ಸಿದ್ಧ ಮತ್ತು ಖೈರ್. ಆ ಮರಗಳಿಗೆ ಅನೇಕ ಕಾಂಡಗಳು. ಅವೆಲ್ಲ 1980ರ ಹೊತ್ತಿಗೆ ಕಡಿದು ಹಾಕಿದ ಮರಗಳ ಬುಡಗಳಿಂದ ಬೆಳೆದ ಕಾಂಡಗಳು. ಸಾಯುತ್ತಿದ್ದ ಆ ಕಾಂಡಗಳಿಗೆ ಮರುಹುಟ್ಟು ನೀಡಿದ್ದು ಈ ಮೂಲಿಕಾ ಮಿಶ್ರಣ.

ಮಳೆಗಾಲ ಆರಂಭವಾಗುವ ಮುನ್ನ ಖರ್-ವಾರ್ ಬುಡಕಟ್ಟಿನ ಬಾಬಾ ಮತ್ತು ಜೊತೆಗಾರರು ಕಾಡಿಗೆ ಹೋಗುತ್ತಾರೆ. ಮುರಿದ ಹಾಗೂ ರೋಗ ತಗಲಿದ ಮರಗಳನ್ನು ಹುಡುಕಿ, ಆ ಭಾಗಕ್ಕೆ ಮೂಲಿಕಾ ಮಿಶ್ರಣ ಮೆತ್ತುತ್ತಾರೆ. ಅನಂತರ, ಗೋಣಿಚೀಲದ ತುಂಡಿಗೆ ಇನ್ನಷ್ಟು ಮೂಲಿಕಾ ಮಿಶ್ರಣ ಲೇಪಿಸಿ, ಅದನ್ನು ಮರದ ಆ ಭಾಗಕ್ಕೆ ಬಿಗಿದು ಕಟ್ಟುತ್ತಾರೆ. ಈ ಮಿಶ್ರಣವು ಮರಕ್ಕೆ ತೇವಾಂಶ ಮತ್ತು ಪೋಷಕಾಂಶ ಒದಗಿಸುವ ಕಾರಣ, ನಿಧಾನವಾಗಿ ಅಲ್ಲಿ ಮರ ಚಿಗುರೊಡೆಯುತ್ತದೆ. ಕೆಲವು ಮರಗಳು ಚಿಗುರಲು ಎಂಟರಿಂದ ಹತ್ತು ವರುಷ ಬೇಕಾದೀತು. ಹೀಗೆ ಮರಗಳನ್ನು ಬದುಕಿಸುವುದು ಖರ್-ವಾರ್ ಬುಡಕಟ್ಟಿನವರ ಪಾರಂಪರಿಕ ಜ್ನಾನ.

"ಈ ಮೂಲಿಕಾ ಮಿಶ್ರಣ ಚಿಕಿತ್ಸೆ ನೀಡಿದ ಶೇಕಡಾ 70 ಮರಗಳು ಮರುಜೀವ ಪಡೆದಿವೆ” ಎನ್ನುತ್ತಾರೆ ಹರಿಕಿಷನ್ ಖರ್-ವಾರ್, ಜನತಾ ಜಂಗಲ್ ಸಮಿತಿಯ ಅಧ್ಯಕ್ಷರು. ಕಡಿದ ಕಾಡಿಗೆ ಮರುಹುಟ್ಟು ನೀಡಲಿಕ್ಕಾಗಿ 1985ರಲ್ಲಿ ಈ ಸಮಿತಿಯ ಸ್ಥಾಪನೆ.

ಅಲ್ಲಿನ 26 ಹೆಕ್ಟೇರ್ ಅರಣ್ಯವನ್ನು ಇಂತಹ ನಾಲ್ಕು ಜನತಾ ಜಂಗಲ್ ಸಮಿತಿಗಳು ರಕ್ಷಿಸುತ್ತಿವೆ. ಅರಣ್ಯ ಹಕ್ಕು ಕಾಯಿದೆ, 2006 ಅನುಸಾರ ನಾಗ್ವಾ ಕಾಡಿನ ಮೇಲಿನ ತಮ್ಮ ಹಕ್ಕು ಸಾಧನೆಗಾಗಿ ಆ ಹಳ್ಳಿಯ ಸಮುದಾಯ ಅರ್ಜಿ ಸಲ್ಲಿಸಿದೆ. ಆ ಕಾಡಿನ ಮೇಲಿನ ಹಕ್ಕು, ಕಡಿದ ಕಾಡನ್ನು ಮತ್ತೆ ಬೆಳೆಸಿದ ನಾಗ್ವಾ ಹಳ್ಳಿಯ ಸಮುದಾಯದ್ದು ಎಂಬುದರಲ್ಲಿ ಅನುಮಾನವೇ ಇಲ್ಲ.

ಫೋಟೋ: ಕಾಡಿನ ಮರುಹುಟ್ಟು …. ಕೃಪೆ: ಔಟ್ಲುಕ್-ಇಂಡಿಯಾ.ಕೋಮ್