"ಕಣಜ"ವನ್ನು ತುಂಬಿ
"ಕಣಜ"ವನ್ನು ತುಂಬಿ
ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾವು ಎರಡು ಕೋಟಿ ಅನುದಾನವನ್ನು ನೀಡಿದೆ.ಕನ್ನಡ ವಿಕಿಪೀಡಿಯಾದ ತಾಣವನ್ನು ಹೋಲದೆ,ಈ ತಾಣ ಪ್ರತ್ಯೇಕ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ.ಯುನಿಕೋಡಿನಲ್ಲಿ ಬರಹಗಳು ಲಭ್ಯವಿರುವುದು ಪ್ಲಸ್ ಪಾಯಿಂಟ್.ಅಂತರ್ಜಾಲ ಶೋಧ ಸಾಧ್ಯವಾಗಲು, ಈ ಅಂಶ ನೆರವಾಗಲಿದೆ.ಈ ಜ್ಞಾನಕೋಶವನ್ನು ಸಮೃದ್ಧಗೊಳಿಸಲು,ಕನ್ನಡಿಗರೆಲ್ಲಾ ಕೈಗೂಡಿಸಿಬೇಕಿದೆ.ತಮ್ಮ ಬರಹಗಳನ್ನು ಈ ವಿಶ್ವಕೋಶಕ್ಕೆ ಸೇರಿಸಿ,ಇದನ್ನು ಜ್ಞಾನದ ಕಣಜವಾಗಿಸುವುದು ಅವಶ್ಯಕ.ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಕೋಶಕ್ಕೆ ಬರಹವನ್ನು ಸೇರಿಸುವಂತಹ ಕೆಲಸಗಳನ್ನು ನೀಡಿ,ಆ ಮೂಲಕ ವಿದ್ಯಾರ್ಥಿ ಸಮುದಾಯದ ಸಹಭಾಗಿತ್ವವನ್ನು ಪಡೆಯಲು ಪ್ರಯತ್ನಿಸಬೇಕು.ಜ್ಞಾನ ಎಂಬುವುದು ಎಲ್ಲರಲ್ಲೂ ಇದೆ,ಮತ್ತು ಜ್ಞಾನ ಎಲ್ಲರಿಗಾಗಿ ಎನ್ನುವ ಧ್ಯೇಯ ವಾಕ್ಯವನ್ನು ಹೊಂದಿದ ಕಣಜ,ಸರಕಾರದ ಬೊಕ್ಕಸವನ್ನು ಮಾತ್ರಾ ಬರಿದಾಗಿಸದೆ,ಕನ್ನಡಿಗರ ಪ್ರಯೋಜನಕ್ಕೆ ಸಿಗಲಿ.
ಅತ್ತ ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾ ಮುಕ್ತ ವಿಶ್ವಕೋಶ,http://kn.wikipedia.org/wiki ಈಗಾಗಲೇ ಏಳೂವರೆ ಸಾವಿರ ಬರಹಗಳನ್ನು ಕಲೆ ಹಾಕಿ ದಾಪುಗಾಲು ಹಾಕುತ್ತಿದೆ.ವಿಕಿಪೀಡಿಯಾಕ್ಕೆ ಯಾರು ಬೇಕಾದರೂ ಬರಹಗಳನ್ನು ಸೇರಿಸಲು ಅವಕಾಶವಿದೆ.ಆನ್‌ಲೈನ್‌ನಲ್ಲಿ ಇರುವಾಗ ಈ ಬರಹಗಳನ್ನು ಸೇರಿಸಬಹುದು,ಇತರರ ಬರಹಗಳನ್ನು ತಿದ್ದಬಹುದು.ಸರ್ಕಾರಿ ವಿಶ್ವಕೋಶವಾದರೋ,ಜನರಲ್ಲಿ ಬರಹಗಳನ್ನು ಬರೆದು ಕಳುಹಿಸಿ ಎಂದು ವಿನಂತಿಸುತ್ತಿದೆ! ಆನ್‌ಲೈನಿನಲ್ಲಿದ್ದು ಬರಹ ಸೇರಿಸುವ ಅವಕಾಶವನ್ನು ಸದ್ಯಕ್ಕಂತೂ ಕೊಟ್ಟಿಲ್ಲ.
------------------------------------------------------------------------
ಕನ್ನಡದಲ್ಲಿ ಪಾಡ್‌ಕಾಸ್ಟು
ಬ್ರಾಡ್‌ಬ್ಯಾಂಡ್ ಸೌಲಭ್ಯ ಈಗ ದೇಶದ ಮೂಲೆ ಮೂಲೆಗೂ ಹಬ್ಬಿದ್ದು,ಧ್ವನಿ,ವಿಡಿಯೋ,ಚಿತ್ರಗಳನ್ನು ಅಂತರ್ಜಾಲ ತಾಣಗಳಲ್ಲಿ ಸಮರ್ಥವಾಗಿ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ.ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದು ತಿಳಿಸುವ ಬ್ಲಾಗ್ ಮಾಧ್ಯಮ ಬಹು ಜನಪ್ರಿಯ.ಜತೆಗೆ ಸಂಭಾಷಣೆ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನಗಳು ಇಂಗ್ಲೀಷಿನಲ್ಲಿ ಹೆಚ್ಚೆಚ್ಚು ನಡೆದಿವೆ.ಈಗ ಕನ್ನಡದಲ್ಲೂ ಅಂತಹ ಪಾಡ್‌ಕಾಸ್ಟ್ ಲಭ್ಯವಿದೆ.ಅನಿವಾಸಿ ಕನ್ನಡಿಗ ಸುದರ್ಶನ್ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಕನ್ನಡದ ಬರಹಗಾರ ಮತ್ತು ಸಿನೆಮಾ ನಿರ್ಮಾಪಕ.ಇವರು ವಾರವಾರ ಪಾಡ್‌ಕಾಸ್ಟನ್ನು ಅಂತರ್ಜಾಲ ತಾಣ http://paaducastu.wordpress.comದ ಮೂಲಕ ಲಭ್ಯವಾಗಿಸುವ ಹುರುಪಿನಲ್ಲಿದ್ದಾರೆ.ಮೊದಲ ಸಂಚಿಕೆಯಿದೀಗಲೇ ಲಭ್ಯವಿದೆ.ಚಿತ್ರಗೀತೆಗಳಿಂದ ತೊಡಗಿ,ಆಯೋಗದ ವರದಿಗಳ ಬಗೆಗಿನ ವಿವಿಧ ಸುದ್ದಿಗಳ ಬಗ್ಗೆ ಹರಟೆ ನಸುನಗೆ ಮೂಡಿಸಲು ಯಶಸ್ವಿಯಾಗಿದೆ.ಆಕಾಶವಾಣಿಯ ಕಾರ್ಯಕ್ರಮಗಳನ್ನು ನೆನಪಿಸುವ ಈ ಧ್ವನಿಕಡತವನ್ನು ಆಲಿಸಲು ಕಂಪ್ಯೂಟರಿನಲ್ಲಿರುವ ಮೀಡಿಯಾಪ್ಲೇಯರ್ ಅಂತಹ ತಂತ್ರಾಂಶ ಬೇಕಾಗುತ್ತದೆ.ಸುದರ್ಶನ ಅವರ ಬ್ಲಾಗ್ ಬರಹಗಳ ಕೊಂಡಿ http://anivaasi.wordpress.com/ನಲ್ಲಿ ಲಭ್ಯವಿದೆ.
-----------------------------------------------------------
2009ರಲ್ಲಿ ಜನರು ಹುಡುಕಾಟ ಪ್ರವೃತ್ತಿ
ಈ ವರ್ಷ ಜನರ ಅಂತರ್ಜಾಲ ಶೋಧ ಪ್ರವೃತ್ತಿ ಈಗ ಸ್ಪಷ್ಟವಾಗಿದೆ.ಮೈಕೆಲ್ ಜಾನ್ಸನ್,ಟ್ವಿಟರ್,ಫೇಸ್‌ಬುಕ್ ಬಗ್ಗೆ ಹೆಚ್ಚಿನ ಜನರು ಗೂಗಲ್,ಯಾಹೂ,ಬಿಂಗ್ ಮುಂತಾದ ಶೋಧ ಸೇವೆಗಳನ್ನು ಬಳಸಿ ಹುಡುಕಾಡಿದ್ದಾರೆ.ಆದರೆ ಭಾರತೀಯರನ್ನು ಮಾತ್ರಾ ಪರಿಗಣಿಸಿದರೆ,ಅವರು ತಲೆ ಕೆಡಿಸಿಕೊಂಡದ್ದು ಆರ್ಥಿಕ ವಿಷಯಗಳ ಬಗ್ಗೆಯೇ ಹೆಚ್ಚು ಎನ್ನುವುದು ಕುತೂಹಲಕಾರಿ ಅಂಶ.ಬಜೆಟ್ ಬಗ್ಗೆ,ಸತ್ಯಮ್ ಶೇರು ಬೆಲೆಯ ಬಗ್ಗೆಯೇ ಹೆಚ್ಚು ಜನರು ಅಂತರ್ಜಾಲದ ಗೂಗಲ್ ಸೇವೆ ಪಡೆದು ಹುಡುಕಾಡಿದ್ದಾರೆ.
------------------------------------------------------------------------
2010ರಲ್ಲಿ ಅಂತರ್ಜಾಲ ಟ್ರೆಂಡ್ ಹೇಗಿರಬಹುದು?
ಜನರು ಮೊಬೈಲ್ ಸಾಧನಗಳ ಮೂಲಕ ಅಂತರ್ಜಾಲವನ್ನು ಜಾಲಾಡುವುದು ಹೆಚ್ಚಾಗುತ್ತಿದೆ.ಹೀಗಾಗಿ,ಘಟನೆಗಳು ನಡೆದೊಡನೆಯೇ ಅದು ಅಂತರ್ಜಾಲದಲ್ಲಿ ದಾಖಲಾಗುವ ಪ್ರವೃತ್ತಿ ಹೆಚ್ಚಿದೆ.ಟ್ವಿಟರ್,ಫೇಸ್‌ಬುಕ್‌ಗಳಲ್ಲಿ ಜನರು ತಾವು ನೋಡಿದ್ದನ್ನು ದಾಖಲಿಸಲು ಮೊಬೈಲ್ ಮೂಲಕವೇ ಸಾಧ್ಯವಾಗಿದೆ.ಹೀಗೆ ಬಿಸಿ,ಬಿಸಿ ಸುದ್ದಿಗಳು ಅಂತರ್ಜಾಲ ಮೂಲಕ ಸಿಕ್ಕುವಷ್ಟು ಬೇರೆಲ್ಲೂ ಸಿಗದು.ಹೋಟೆಲ್‌ನಲ್ಲಿ ಸಿಗುವ ತಿಂಡಿ ತೀರ್ಥಗಳ ಬಗ್ಗೆ ಜನರ ಪ್ರತಿಕ್ರಿಯೆಯಿಂದ ಹಿಡಿದು,ಚಲನಚಿತ್ರ ವಿಮರ್ಶೆ ವರೆಗೆ ಎಲ್ಲವೂ ಕ್ಷಣಮಾತ್ರದಲ್ಲಿ ಸಿಗಲು ಅಂತರ್ಜಾಲ ನೆರವಾಗಿದೆ.
ಜನರು ಸದ್ಯ ಎಲ್ಲಿದ್ದಾರೆ ಎನ್ನುವುದು ಅಂತರ್ಜಾಲದಲ್ಲಿ ಗೊತ್ತು ಮಾಡಿಕೊಳ್ಳಲು ಜಿಪಿಎಸ್ ತಂತ್ರಜ್ಞಾನ ನೆರವಾಗುವುದು ಖಂಡಿತ.ಫೋರ್‌ಸ್ಕ್ವೇರ್ ಅಂತಹ ಜಾಲತಾಣಗಳು,ಜನರು ಯಾವ ಸ್ಥಳದಲ್ಲಿದ್ದಾರೆ ಎನ್ನುವುದನ್ನು ಸತತವಾಗಿ ತಿಳಿಸುವ ಸೇವೆ ನೀಡಲು ಸನ್ನದ್ಧವಾಗಿವೆ.ವ್ಯಕ್ತಿಯ ಸ್ಥಾನವನ್ನವಲಂಬಿಸಿ,ಆತನಿಗೆ ಅಗತ್ಯವಿರಬಹುದಾದ ಮಾಹಿತಿಯನ್ನು ಪೂರೈಸುವ ಸೇವೆಗಳೂ ಗರಿಗೆದರುವ ಪ್ರವೃತ್ತಿ ಕಾಣಬರುತ್ತಿದೆ.ವ್ಯಕ್ತಿಯಿರುವ ಸ್ಥಳದ ಸಮೀಪ ಇರುವ ಹೋಟೆಲ್,ವಾಣಿಜ್ಯಸಂಕೀರ್ಣಗಳಲ್ಲಿ ದರ ಕಡಿತದ ಮಾಹಿತಿ,ಪ್ರವಾಸಸ್ಥಳಗಳ ಬಗೆಗಿನ ಮಾಹಿತಿಯನ್ನು ಮೊಬೈಲ್ ಸಾಧನದ ಮೂಲಕ ತಿಳಿಸುವುದು ಹೊಸ ಟ್ರೆಂಡ್.
ಅಂತರ್ಜಾಲದಲ್ಲಿ ಲಭ್ಯವಾಗುತ್ತಿರುವ ಮಾಹಿತಿಯ ಮಹಾಪೂರದಲ್ಲಿ ವ್ಯಕ್ತಿಗೆ ಆಸಕ್ತಿಯಿರುವ ಮಾಹಿತಿ ಏನಿರಬಹುದು ಎಂದು ನಿರ್ಧರಿಸಿ,ಆತನಿಗೆ ಬೇಕಾದ್ದನ್ನು ಒದಗಿಸಲು ಗೂಗಲ್ ಶೋಧದಂತಹ ಸೇವೆಗಳು ಪ್ರಯತ್ನಿಸುತ್ತಿವೆ.ಇದು ಬರುವ ವರ್ಷಗಳಲ್ಲಿ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಅಂತರ್ಜಾಲದಿಂದಲೇ ಬೇಕಾದ ತಂತ್ರಾಂಶಗಳನ್ನು ಪಡೆದು ಬಳಸುವುದು,ಸ್ಮರಣಕೋಶಗಳನ್ನು ಅಂತರ್ಜಾಲದಲ್ಲೇ ಕಾಯ್ದಿಟ್ಟು,ಯಾವಾಗ ಬೇಕಾದರೂ-ಎಲ್ಲಿಂದಲಾದರೂ ತಮ್ಮ ಕಡತಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವ ಕ್ಲೌಡ್‌ಕಂಪ್ಯೂಟಿಂಗ್ ತಂತ್ರಜ್ಞಾನಕ್ಕೆ ಗೂಗಲ್ ಕ್ರೋಮ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಹೆಚ್ಚಿನ ಒತ್ತು ನೀಡಲಿದೆ.ಮೊಬೈಲ್ ಸಾಧನಗಳ ಮೂಲಕ ಖರೀದಿಗೆ ಹಣ ಪಾವತಿ ಮಾಡುವ ಅಭ್ಯಾಸ ಜನರಲ್ಲಿ ಬೇರು ಬಿಡುವುದಕ್ಕೆ ಮುಂದಿನ ವರ್ಷ ಸಾಕ್ಷಿಯಾಗಲಿದೆ.ಅಂತರ್ಜಾಲದಲ್ಲಿ ಚಲನಚಿತ್ರ,ಟಿವಿಯ ವೀಕ್ಷಣೆ ಹೆಚ್ಚಲು ಶರವೇಗದ ಅಂತರ್ಜಾಲ ಸೇವೆಯ ಲಭ್ಯತೆ ಹೇತುವಾಗಬಹುದು.ಕೈಯಲ್ಲಿ ಹಿಡಿಯುವ ಕಿರುಸಾಧನಗಳ ಮೂಲಕ ಸೆಲ್‌ಪೋನ್ ಕರೆ ಮಾಡುವುದು,ಅಂತರ್ಜಾಲ ಜಾಲಾಟ ನಡೆಸುವುದು,ಚಿತ್ರ-ವೀಡಿಯೋಗಳನ್ನು ಸೆರೆ ಹಿಡಿಯುವುದು,ಹಾಡನ್ನಾಲಿಸುವುದು,ಟಿವಿ-ರೇಡಿಯೋ ವಿಕ್ಷಣೆ-ಆಲಿಸುವುದು ಇವೆಲ್ಲವೂ ಹೆಚ್ಚುವುದು ಖಾತರಿ.
-------------------------------------
ಬಿಂಗ್‌ನಲ್ಲಿ ನಕ್ಷೆ
ಭೌಗೋಳಿಕ ಮಾಹಿತಿಯನ್ನು ಬಿಂಗ್ ಶೋಧ ಸೇವೆಯೂ ಈಗ ನೀಡಹತ್ತಿದೆ.ವಿವಿಧ ನಗರ ಪಟ್ಟಣಗಳ ನಕ್ಷೆಗಳನ್ನು ಬಿಂಗ್ ಶೋಧ ಸೇವೆಯ ಮೂಲಕವೂ ಪಡೆಯಬಹುದು.ಅಂದ ಹಾಗೆ ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆ.ನಗರಗಳ ರಸ್ತೆಗಳ ಕ್ಲೋಸಪ್ ದೃಶ್ಯಗಳೂ ಇಲ್ಲಿ ಲಭ್ಯ.ಆದರೆ ಗೂಗಲ್ ಹೆಚ್ಚು ವಿವರ ಮತ್ತು ಸ್ಪಷ್ಟ ನಕ್ಷೆಗಳನ್ನು ನೀಡಿ ಈಗಾಗಲೇ ಜನರ ಮಾನ್ಯತೆಯನ್ನು ಗಳಿಸಿರುವುದರಿಂದ ಬಿಂಗ್ ಸೇವೆ ಜನಪ್ರಿಯವಾಗಲು ಹೆಚ್ಚಿನ ಸಮಯ ಬೇಕಾಗಬಹುದು.http://www.bing.com/maps ವಿಳಾಸದಲ್ಲಿ ನಕ್ಷೆಗಳು ಲಭ್ಯವಿವೆ.
*ಅಶೋಕ್‌ಕುಮಾರ್ ಎ