ಕಣಿವೆ ಕೂಗು ; ಅನಾವರಣಗೊಂಡ ಕಾಶ್ಮೀರದ ಸತ್ಯ
ಜೂನ್ 1990. ಅದಾಗಲೇ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದನೆಯ ಅಟ್ಟಹಾಸ ಮೇರೆಮೀರಿತ್ತು. ಅಲ್ಲಿದ್ದರೆ ಜೀವ ಉಳಿಯಲಾರದೆಂಬ ಅಂಜಿಕೆಯಿಂದ, ಬಂಡಿಪೊರಾದ ಸರಕಾರಿ ಶಾಲೆಯೊಂದರ ಪ್ರಯೋಗಾಲಯದಲ್ಲಿ ಸಹಾಯಕಿಯಾಗಿದ್ದ ಶ್ರೀಮತಿ ಗಿರಿಜಾ ಟಿಕ್ಕೂ ಜಮ್ಮೂವಿಗೆ ಸ್ಥಳಾಂತರಗೊಂಡಿದ್ದರು.
“ಈಗ ಭಯೋತ್ಪಾದನೆ ತುಸು ಕಡಿಮೆಯಾಗಿದೆ, ನೀವು ನಿಮ್ಮ ತಿಂಗಳ ಸಂಬಳ ಪಡೆದುಕೊಳ್ಳಲು ಬನ್ನಿ’ ಎಂಬ ಸೂಚನೆಯ ಮೇರೆಗೆ ಆಕೆ ಬಂಡಿಪೊರಾಕ್ಕೆ ಬಂದು ಸಂಬಳ ಪಡೆದು ಬಸ್ಸಿನಲ್ಲಿ ಹಿಂದಿರುಗುತ್ತಿದ್ದರು. ಎಲ್ಲಿಂದಲೋ ನುಗ್ಗಿದ ಐವರು ನರರಾಕ್ಷಸರು ಬಸ್ಸನ್ನು ನಿಲ್ಲಿಸಿ, ಗಿರಿಜಾರನ್ನು ಕಾರೊಂದರಲ್ಲಿ ಹಾಕಿಕೊಂಡು ಹೊರಟರು. ಆ ಐವರ ಪೈಕಿ ಓರ್ವ ಗಿರಿಜಾರ ಸಹೋದ್ಯೋಗಿ. ಎಲ್ಲರೂ ಸೇರಿ ಆಕೆಯನ್ನು ಹಿಂಸಿಸಿ ಅತ್ಯಾಚಾರಕ್ಕೀಡುಮಾಡಿ, ಇನ್ನೆಲ್ಲಿ ತಮ್ಮ ಗುರುತು ಪತ್ತೆಯಾದೀತೋ ಎಂಬ ಭಯದಿಂದ ಆಕೆಯನ್ನು ಜೀವಂತವಿರುವಾಗಲೇ ಗರಗಸಕ್ಕೊಡ್ಡಿ ಸೀಳಿದರು. ಆಕೆಯ ದೇಹದ ಅವಶೇಷಗಳು ಪತ್ತೆಯಾದದ್ದು ಕೆಲದಿನಗಳ ಅನಂತರ.
ಇದು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಕೊಂಡು ನಡೆಸಿದ ಬರ್ಬರತೆಯ ಒಂದು ಉದಾಹರಣೆ ಮಾತ್ರ. 1990ರ ಜನವರಿ 19ರ ರಾತ್ರಿ ಲೌಡ್ ಸ್ಪೀಕರ್ಗಳಲ್ಲಿ “ಕಾಶ್ಮೀರೀ ಪಂಡಿತರೇ, ನಿಮ್ಮ ಹೆಂಡತಿಯರನ್ನು, ಹೆಣ್ಣುಮಕ್ಕಳನ್ನು ಬಿಟ್ಟು ನೀವೆಲ್ಲರೂ ಇಲ್ಲಿಂದ ಹೊರಡಿ’ ಎಂದು ಉಗ್ರಗಾಮಿಗಳು ಬೊಬ್ಬಿರಿದರು. ಬೆದರಿಕೆಗೆ ಮಣಿಯದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದರು. ಹೆಣ್ಣುಮಕ್ಕಳ ಶೀಲಹರಣ ನಡೆಸಿದರು. ಕಂಗಾಲಾದ ಹಿಂದೂಗಳು ರಾತೋರಾತ್ರಿ ತಮ್ಮ ಮನೆಗಳನ್ನು ಬಿಟ್ಟು ಹೊರಡಬೇಕಾಯಿತು. “ಕೆಲವೇ ದಿನ ಮಾತ್ರ. ಆದಷ್ಟು ಬೇಗ ಹಿಂದಿರುಗುತ್ತೇವೆ. ಎಲ್ಲವೂ ಸರಿಯಾಗುತ್ತೆ’ ಎಂಬ ಭರವಸೆಯನ್ನು, ಭಾರವಾದ ಹೃದಯಗಳನ್ನು ಹೊತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಹೊರಟಿದ್ದಷ್ಟೇ. ಆ ಭರವಸೆ ಈಡೇರಲಿಲ್ಲ. ಹಲವರು ಜಮ್ಮುವಿನ ಕ್ಯಾಂಪ್ ಗಳಲ್ಲಿ ಬಿಸಿಲ ಬೇಗೆಗೆ, ಹಾವು ಚೇಳುಗಳ ಕಡಿತಕ್ಕೆ ಸಿಲುಕಿ ಸಾವಿಗೀಡಾದರು. ಹೆಚ್ಚಿನವರು, ಅದರಲ್ಲೂ ವಯೋ ವೃದ್ಧರು ಮಾನಸಿಕವಾಗಿ ಜರ್ಝರಿತರಾದರು.
ಇವೆಲ್ಲ ಶಿಲಾಯುಗದಲ್ಲೋ ಅಥವಾ ಯಾವುದೋ ಕಾಡಿನ ಕೊಂಪೆಯಲ್ಲೋ ನಡೆದ ಘಟನೆಗಳಲ್ಲ. ನಮ್ಮ ದೇಶದ ರಾಜಧಾನಿ ದಿಲ್ಲಿಯಿಂದ ಸುಮಾರು ಎಂಟುನೂರು ಕಿಲೋಮೀಟರುಗಳ ದೂರದಲ್ಲಿ ನಡೆದದ್ದು. ಅಂದು ಉಟ್ಟಬಟ್ಟೆಯಲ್ಲಿ ಹೊರಟ ಕಾಶ್ಮೀರಿ ಹಿಂದೂಗಳು ಕಂಡ ಕಂಡ ರಾಜಕಾರಣಿಗಳ ಕೈಕಾಲು ಹಿಡಿಯುತ್ತಾ ನ್ಯಾಯಕೊಡಿಸಿ ಎಂದು ಅಲವತ್ತು ಕೊಂಡರು. ತಾವು ಒಪ್ಪತ್ತು ಉಂಡು ಮಕ್ಕಳ ವಿದ್ಯಾಭ್ಯಾಸ ಮುಂದುವರೆಯುವಂತೆ ನೋಡಿಕೊಂಡರು. ಅವರ ನೋವು, ಕಣ್ಣೀರುಗಳಿಗೆ ಸ್ಪಂದನೆಯೇ ದೊರಕದಿದ್ದರೂ ರಾಜಕಾರಣಿಗಳ ಮನೆಯ ಬಾಗಿಲು ಬಡಿಯುವುದನ್ನು ನಿಲ್ಲಿಸಲಿಲ್ಲ. ಆದರೆ ಒಂದೇ ಒಂದು ಕುಟುಂಬದ ಒಬ್ಬನೇ ಒಬ್ಬ ಮಗನೂ ಕತ್ತಿ ಹಿಡಿಯಲಿಲ್ಲ. ತಾವು ಶೋಷಿತರು ಎಂದು ಭಯೋತ್ಪಾದಕ ಸಂಘಟನೆಯನ್ನು ಆರಂಭಿಸಲಿಲ್ಲ. ಕಡೆಯಪಕ್ಷ ಮೀಸಲಾತಿ ಬೇಕೆಂಬ ಹಠವನ್ನೂ ಹಿಡಿ ಯಲಿಲ್ಲ. ಇಂದಲ್ಲ ನಾಳೆ ತಮಗೆ ನ್ಯಾಯ ದೊರಕುತ್ತದೆ ಎಂಬ ಆಶೆಯಿಂದಲೇ ಕಾಯತೊಡಗಿದರು. 32 ವರ್ಷಗಳು ಸಂದವು.
ಸಂವೇದನೆಗಳಿರದ ನಮ್ಮ ಸರಕಾರಕ್ಕೆ ಕಿವುಡು ಸೇರಿದಂತೆ ಇತರ ಅಂಗವೈಕಲ್ಯಗಳೂ, ಮಾಂದ್ಯತೆಗಳೂ, ಎಲ್ಲಕ್ಕಿಂತ ಹೆಚ್ಚಾಗಿ ಆದ್ಯತೆಗಳೂ ಇದ್ದದ್ದರಿಂದ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ದೊರಕಲಿಲ್ಲ. 2019ರಲ್ಲಿ ಕೇಂದ್ರ ಸರಕಾರ ಅನುಚ್ಛೇದ 370ಅನ್ನು ರದ್ದುಗೊಳಿಸಿ ಭರವಸೆ ಮೂಡಿಸಿತಾದರೂ ಆಗಲೂ ಸಾಮಾನ್ಯ ಭಾರತೀಯರಿಗೆ ಕಾಶ್ಮೀರದ ಸಮಸ್ಯೆಯ ಅರಿವಿರಲಿಲ್ಲ. ಅಲ್ಲಿಯ ಹಿಂದೂಗಳ ನೋವಿನ ತೀವ್ರತೆ, ಹಿನ್ನೆಲೆಗಳ ಪರಿಚಯವೇ ಇರಲಿಲ್ಲ. ಎಲ್ಲರಲ್ಲೂ ಒಂದು ರೀತಿಯ ತಾಟಸ್ಥ್ಯವಿತ್ತು.
ಈಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ”ದ ಕಾಶ್ಮೀರ್ ಫೈಲ್ಸ್’ ಎಂಬ ಚಿತ್ರದ ಮೂಲಕ ಎಲ್ಲ ಸತ್ಯಗಳನ್ನೂ ಅನಾವರಣಗೊಳಿಸಿದ್ದಾರೆ. ಅತ್ಯಂತ ಪ್ರಭಾವಶಾಲಿಯಾದ ದೃಶ್ಯಮಾಧ್ಯಮದಲ್ಲಿ ಕೊಲೆ, ರಕ್ತದೋಕುಳಿಯನ್ನು ನೋಡಿರುವ ಜನ ಬೆಚ್ಚಿದ್ದಾರೆ. ಎಚ್ಚೆತ್ತಿದ್ದಾರೆ. “ಅರೆ ಇಷ್ಟೆಲ್ಲ ನಡೆಯಿತೇ? ನಮಗೆ ತಿಳಿಯಲೇ ಇಲ್ಲವಲ್ಲ. ನಮಗೆ ನಾಚಿಕೆಯಾಗಬೇಕು’ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಕ್ಷಮೆ ಯಾಚಿಸುತ್ತಿದ್ದಾರೆ. ಈ ಅರಿವು ಸರಕಾರಕ್ಕೆ ನೈತಿಕ ಬಲವನ್ನು ನೀಡುವುದು ದಿಟ. ಸೂಕ್ತವಾದ ಕಾನೂನುಗಳನ್ನು ರೂಪಿಸಿ ಕಾಶ್ಮೀರೀ ಹಿಂದೂಗಳನ್ನು ತಮ್ಮ ಮೂಲನೆಲೆಗೆ ತಲುಪಿಸುವಲ್ಲಿ ಇದು ಸಹಕಾರಿಯಾಗಬಲ್ಲದು. ರಾಜಕೀಯ ಓಲೈಕೆ, ಸಾಂಸ್ಕೃತಿಕ ವೈರುಧ್ಯ ಹೀಗೆ ಹಲವಾರು ಸಮಸ್ಯೆಗಳ ಸುಳಿ ಕಾಶ್ಮೀರ. ಎಲ್ಲರೂ ಸೇರಿ ಈ ಜಟಿಲವಾದ ಗಂಟನ್ನು ಬಿಡಿಸುವ ಸಮಯ ಈಗ ಒದಗಿದೆ ಎನಿಸುತ್ತದೆ.
ವಿವೇಕ್ ಅಗ್ನಿಹೋತ್ರಿ ಚಿತ್ರದಲ್ಲಿ ತೋರಿಸಿರುವ ಕ್ರೌರ್ಯ ಕಡಿಮೆಯೇ ಎನ್ನಬೇಕು. “ಕಶೀರ’ ಕಾದಂಬರಿಗೆ ಸಿದ್ಧತೆ ಮಾಡಿಕೊಳ್ಳುವ ಹಂತದಲ್ಲಿ ನಾನು ಕಾಶ್ಮೀರಕ್ಕೆ ಭೇಟಿ ನೀಡಿ, ಪೂರಕ ಅಧ್ಯಯನವನ್ನು ಕೈಗೊಂಡಾಗ ಆ ಕ್ರೌರ್ಯದ ಸ್ವರೂಪದ ಸಂಪೂರ್ಣ ಪರಿಚಯವಾಗಿ ಅತೀವ ವೇದನೆಯಾಗಿತ್ತು. ಹಾಗಾಗಿ ನನಗೆ ಚಿತ್ರದಿಂದ ವಿಶೇಷವಾಗಿ ಘಾಸಿಯಾಗಲಿಲ್ಲ. ಆದರೆ ವಿಷಯದ ಅರಿವೇ ಇಲ್ಲದ ಭಾರತೀಯ ಮನಸ್ಸುಗಳು ಮೊದಲ ಬಾರಿ ಎಲ್ಲವನ್ನೂ ಕಂಡಾಗ ಹತಾಶೆ, ನೋವುಗಳಿಂದ ಕುಗ್ಗಿದೆ.
ಹಿಟ್ಲರ್ ಲಕ್ಷಾಂತರ ಯಹೂದ್ಯರನ್ನು ಕೊಂದದ್ದಕ್ಕೆ ಜರ್ಮನಿ ಇಂದಿಗೂ ಕ್ಷಮೆಯಾಚಿಸುತ್ತದೆ. ಪಾಕಿಸ್ಥಾನ ಕ್ಷಮೆಯಾಚಿಸಬಹುದೆಂದು ನಿರೀಕ್ಷಿಸುವ ಮೂರ್ಖರು ನಾವಲ್ಲ, ಓಲೈಕೆಗಾಗಿ ರಾಜಕಾರಣ ಮಾಡುವವರಿಂದ ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ.
– ಸಹನಾ ವಿಜಯಕುಮಾರ್
(ಲೇಖಕರು: ಕಾಶ್ಮೀರಿ ಪಂಡಿತರ ಕಥೆಯುಳ್ಳ “ಕಶೀರ’ ಕಾದಂಬರಿಯ ಕತೃ)
ಕೃಪೆ: ಉದಯವಾಣಿ ದೈನಿಕ